Job - Chapter 18
Holy Bible

1 : ಆಗ ಶೂಹ್ಯನಾದ ಬಿಲ್ದದನು ಹೀಗೆಂದು ಉತ್ತರಿಸಿದ:
2 : “ಯೋಬನೇ, ಇನ್ನೆಷ್ಟರವರೆಗೆ ಮಾತುಗಳಿಗಾಗಿ ಹೊಂಚುಹಾಕುತ್ತಿರುವೆ? ಮೊದಲು ಆಲೋಚಿಸಿನೋಡು, ಆಮೇಲೆ ಬಾ ಮಾತುಕತೆಗೆ.
3 : ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲಿ ನಾವೇನು ಅಷ್ಟು ದಡ್ಡರೆ?
4 : ಸಿಟ್ಟಿನಿಂದ ನಿನ್ನನ್ನೆ ಸೀಳಿಕೊಳ್ಳುತ್ತಿರುವವನೇ, ನಿನ್ನ ನಿಮಿತ್ತ ಇಡೀ ಲೋಕ ಬಿಕೋ ಎನ್ನಬೇಕೆ? ಬೆಟ್ಟಗುಡ್ಡಗಳು ಸ್ಥಳಬಿಟ್ಟು ಜರುಗಬೇಕೆ?
5 : ಹೌದು, ದುರುಳನ ದೀಪ ಆರಿಹೋಗುವುದು ಅವನ ಒಲೆಯು ಉರಿಯದೆ ಹೋಗುವುದು.
6 : ಅವನ ಗುಡಾರದ ಬೆಳಕು ಕತ್ತಲಾಗುವುದು ಅವನ ಮೇಲಣ ಸೊಡರು ನಂದಿಹೋಗುವುದು.
7 : ಅವನ ಬಿರುಸಾದ ಹೆಜ್ಜೆಗಳು ಜಡವಾಗುವುವು ಅವನು ಹಾಕಿದ ಯೋಜನೆಗಳು ಅವನನ್ನೆ ಕೆಡವಿ ಹಾಗುವುವು.
8 : ಅವನನ್ನು ಅವನ ಕಾಲುಗಳೆ ಬಲೆಗೆ ಬೀಳಿಸುವುವು ಅವನನ್ನು ಪಾಳುಗುಂಡಿಯ ಮೇಲೆ ನಡೆಸುವುವು.
9 : ಕತ್ತರಿಬೋನು ಅವನ ಹಿವ್ಮ್ಮಡಿಯನ್ನು ಕಚ್ಚುವುದು ಆ ಕಳ್ಳಉರುಲು ಅವನನ್ನು ಸಿಕ್ಕಿಸಿಕೊಳ್ಳುವುದು.
10 : ಅವನಿಗಾಗಿ ಜಾಲವನ್ನು ಅವಿತಿಡಲಾಗಿದೆ ದಾರಿಯಲಿ ಅವನಿಗಾಗಿ ಪಾಶವನ್ನು ಹೂತಿಡಲಾಗಿದೆ ನೆಲದಲಿ.
11 ಸುತ್ತಲಿನ ಅಪಾಯಗಳು ಅವನನ್ನು ಹೆದರಿಸುತ್ತವೆ ಅವನ ಹಿಮ್ಮಡಿ ತುಳಿಯುತ್ತಾ ಅವು ಬೆನ್ನು ಹತ್ತುತ್ತವೆ.
12 : ಕುಂದಿ ಹೋಗುವುದು ಅವನ ಕಿಮ್ಮತ್ತು ಅವನು ಬೀಳುವುದನ್ನೇ ಕಾದಿದೆ ಆಪತ್ತು.
13 : ರೋಗರುಜಿನಗಳು ಅವನ ಚರ್ಮವನು ಚೂರುಚೂರಾಗಿ ತಿಂದುಬಿಡುವುವು ಅಂಗಾಂಗವಾಗಿ ಮೃತ್ಯುಕಾರಕ ರೋಗವು ಅವನನ್ನು ನುಂಗಿಬಿಡುವುದು.
14 : ನೆಮ್ಮದಿಯ ಗುಡಾರದಿಂದ ಅವನನ್ನು ಎಳೆದು ಹಾಕುವುದು ಹೊರಗೆ ಸಾಗಿಸಿಕೊಂಡು ಹೋಗುವುದವನನ್ನು ಅತಿಭಯಂಕರ ರಾಜನೆಡೆಗೆ.
15 : ಅನ್ಯಜನರು ವಾಸಮಾಡುವರು ಅವನ ಗುಡಾರದೊಳಗೆ ಗಂಧಕವನ್ನು ಸುರಿಸಲಾಗುವುದು ಅವನ ಮನೆಯ ಮೇಲೆ.
16 : ಒಣಗುವುದು ಅವನ ಬುಡ ಕೆಳಗಡೆ ಬಾಡುವುದು ಅವನ ರೆಂಬೆ ಮೇಲ್ಗಡೆ.
17 : ಅವನ ಸ್ಮರಣೆ ಅಳಿದು ಹೋಗುವುದು ಜಗದಲಿ ಇಲ್ಲವಾಗುವುದು ಅವನ ಹೆಸರು ನಾಡಿನಲಿ.
18 : ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ ಅಟ್ಟಿಬಿಡುವರು ಅವನನ್ನು ಲೋಕದಿಂದಲೆ.
19 : ಅವನ ಮಗ, ಮೊಮ್ಮಗರಾರೂ ಇರರು ಸ್ವಜನರಲಿ ಯಾರೂ ಉಳಿಯರು ಅವನು ವಾಸಿಸಿದ ಸ್ಥಳದಲಿ.
20 : ಅವನ ಗತಿಯನು ಕೇಳಿ ಚಕಿತಗೊಳ್ವರು ಪಡುವಣದವರು ಅಂತೆಯೇ ಭಯಭ್ರಾಂತರಾಗುವರು ಮೂಡಣದವರು.
21 : ಕೇಡಿಗರ ನಿವಾಸಗಳ ಗತಿ ಹೀಗೆಯೇ ದೇವರನು ಅಲಕ್ಷಿಸುವವನ ಸ್ಥಿತಿ ಇದುವೇ.”

Holydivine