Job - Chapter 32
Holy Bible

1 : ಯೋಬನು ತಾನು ಸತ್ಯವಂತನೆಂದು ಸಾಧಿಸಿದ್ದನು. ಇದನ್ನು ಕೇಳಿದ ಅವನ ಮೂವರು ಮಿತ್ರರು ವಾದಿಸುವುದನ್ನು ನಿಲ್ಲಿಸಿ ಬಿಟ್ಟರು.
2 : ಆಗ ಬೂಜ್‍ನವನಾದ ಬರಕೇಲನ ಮಗ ಎಲೀಹುವನಿಗೆ ಸಿಟ್ಟೇರಿತು. ಇವನು ರಾಮ್ ಗೋತ್ರಕ್ಕೆ ಸೇರಿದವನು. ಯೋಬನು ತಾನು ದೇವರಿಗಿಂತ ನ್ಯಾಯವಂತನೆಂದು ಎಣಿಸಿಕೊಂಡ ಕಾರಣ ಎಲೀಹುವನಿಗೆ ಸಿಟ್ಟು ಹತ್ತಿತ್ತು.
3 : ಯೋಬನ ಆ ಮೂವರು ಮಿತ್ರರ ಮೇಲೂ ಅವನು ಕೋಪಗೊಂಡನು. ಏಕೆಂದರೆ ಯೋಬನಿಗೆ ತಕ್ಕ ಉತ್ತರ ಕೊಡಲಾಗದೆ ದೇವರನ್ನೇ ತಪ್ಪಿತಸ್ಥರನ್ನಾಗಿಸಿದ್ದರು.
4 : ಆ ಮಿತ್ರರು ತನಗಿಂತ ಹಿರಿಯವರಾಗಿದ್ದುದರಿಂದ ಎಲೀಹುವನು ಮೊದಲೇ ಮಾತನಾಡದೆ ಈವರೆಗೂ ಕಾದುಕೊಂಡಿದ್ದನು.
5 : ಆ ಮೂವರ ಬಾಯಿಯಲ್ಲಿ ಉತ್ತರವೇ ಇಲ್ಲದುದನ್ನು ಕಂಡು ಕಿಡಿಕಿಡಿಯಾದನು.
6 : ಆಗ ಬೂಜಿನವನಾದ ಬರಕೇಲನ ಮಗ ಎಲೀಹುವನು ಕೊಟ್ಟ ಉತ್ತರ: “ನಾನು ಕಿರಿಯವನು, ನೀವು ಎಷ್ಟೋ ಹಿರಿಯವರು ಎಂದೇ ಸಂಕೋಚಪಟ್ಟೆನು ನನ್ನ ಅಭಿಪ್ರಾಯ ತಿಳಿಸಲು ಅಂಜಿದೆನು.
7 : ದೊಡ್ಡವರು ಮಾತಾಡಲಿ ಎಂದುಕೊಂಡೆನು ವಯೋವೃದ್ಧರು ಸುಜ್ಞಾನವನು ಬೋಧಿಸಲಿ ಎಂದೆನು.
8 : ಆದರೆ ಮಾನವರಿಗುಂಟು ಒಂದು ಆತ್ಮ ಸರ್ವಶಕ್ತ ಸ್ವಾಮಿಯ ಉಸಿರಿನ ಮೂಲಕ ಅವರಿಗೆ ದೊರಕುತ್ತದೆ ವಿವೇಕ.
9 : ವಯೋವೃದ್ಧರು ಮಾತ್ರ ಜ್ಞಾನಿಗಳಲ್ಲ ಮುದುಕರು ಮಾತ್ರ ನ್ಯಾಯಬಲ್ಲವರಲ್ಲ.
10 : ಆದ ಕಾರಣ ನನ್ನ ಕಡೆಗೂ ಕಿವಿಗೊಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ, ಕೇಳಿ:
11 : ನೀವು ಆಡುತ್ತಿದ್ದ ಮಾತುಗಳನು, ಮಾಡುತ್ತಿದ್ದ ಆಲೋಚನೆಗಳನು ಮುಂದಿಡುತ್ತಿದ್ದ ವಾದಗಳನು ನಾನು ಕಾದು ಕೇಳುತ್ತಿದ್ದೆನು.
12 : ಯೋಬನನು ಖಂಡಿಸಬಲ್ಲವನು, ಅವನಿಗೆ ತಕ್ಕ ಉತ್ತರಕೊಡಬಲ್ಲವನು ನಿಮ್ಮಲ್ಲಿ ಯಾರೂ ಇಲ್ಲದಿರುವುದನು ನಾನು ಗಮನಿಸಿದೆನು.
13 : ‘ನಿಮಗೆ ಬುದ್ದಿ ಬಂದಿದೆ’ ಎಂದುಕೊಳ್ಳಬೇಡಿ ‘ದೇವರೇ ಅವನನು ಖಂಡಿಸಲಿ, ನರನಿಂದಾಗದು,’ ಎನ್ನದಿರಿ.
14 : ಯೋಬನು ನನ್ನೊಡನೆ ವಾದಮಾಡಲಿಲ್ಲ ನಿಮ್ಮ ಹಾಗೆ ಅವನಿಗೆ ನಾನು ಉತ್ತರಿಸುವುದಿಲ್ಲ.
15 : “ಯೋಬನೇ, ಇವರು ಉತ್ತರಿಸದೆ ನಿಬ್ಬೆರಗಾಗಿರುವರು ಇವರ ಸೊಲ್ಲೇ ಅಡಗಿಹೋಗಿರುವುದು.
16 : ಉತ್ತರ ಕೊಡಲಾಗದೆ ಇವರು ಮೌನದಿಂದಿರಲು ನಾನಿನ್ನೂ ಸುಮ್ಮನೆ ಕಾದುಕೊಂಡಿರಲಾಗದು.
17 : ನಾನು ನನ್ನ ಪಾಲಿನ ಉತ್ತರವನು ಹೇಳುವೆನು ನಿನಗೆ ನನ್ನ ಅಭಿಪ್ರಾಯವನು ತಿಳಿಸುವೆನು.
18 : ಹೇಳಬೇಕಾದವು ನನ್ನಲ್ಲಿ ತುಂಬಿವೆ ಹೇಳಲು ನನ್ನ ಅಂತರಾತ್ಮ ಒತ್ತಾಯ ಪಡಿಸುತ್ತಿದೆ.
19 : ದ್ರಾಕ್ಷಾರಸ ತುಂಬಿ ಬಾಯಿಕಟ್ಟಿದ ಹೊಸಬುದ್ದಲಿಯಂತೆ ನನ್ನ ಅಂತರಂಗವು ಬಿರಿದು ಒಡೆದುಹೋಗುವ ಹಾಗಿದೆ.
20 : ತುಟಿತೆರೆದು ನಾನು ಉತ್ತರಿಸಲೇಬೇಕು ನೆಮ್ಮದಿಯಿಂದಿರಲು ನಾನು ಮಾತಾಡಲೇ ಬೇಕು.
21 : ನಾನಾರಿಗೂ ಮುಖದಾಕ್ಷಿಣ್ಯ ತೋರುವುದಿಲ್ಲ ಯಾವ ಮಾನವನಿಗೂ ಮುಖಸ್ತುತಿ ಸಲ್ಲಿಸುವುದಿಲ್ಲ.
22 : ಮುಖಸ್ತುತಿ ಮಾಡಲು ನನ್ನಿಂದಾಗುವುದಿಲ್ಲ ಮಾಡಿದರೆ ಸೃಷ್ಟಿಕರ್ತ ನನ್ನನು ಬೇಗ ನಿರ್ಮೂಲ ಮಾಡಬಲ್ಲ.”

Holydivine