Job - Chapter 41
Holy Bible

1 : “ ‘ಲಿವ್ಯತಾನ್’ ಮೊಸಳೆಯನು ಗಾಳದಿಂದ ಎಳೆಯಬಲ್ಲೆಯಾ? ಅದರ ನಾಲಿಗೆಯನು ಹಗ್ಗದಿಂದ ಬಿಗಿಯಬಲ್ಲೆಯಾ?
2 : ಅದರ ಮೂಗಿಗೆ ಆಪನು ಪೋಣಿಸಬಲ್ಲೆಯಾ? ಅದರ ದವಡೆಗೆ ಮುಳ್ಳನು ಚುಚ್ಚಬಲ್ಲೆಯಾ?
3 : ಅದು ನಿನ್ನ ಸಂಗಡ ಸವಿ ಮಾತಾಡೀತೆ? ನಿನಗೆ ವಿನಮ್ರ ವಿಜ್ಞಾಪನೆ ಮಾಡೀತೆ?
4 : ನೀನದನ್ನು ನಿನ್ನ ಚಿರದಾಸನನ್ನಾಗಿಸಿ ಕೊಳ್ಳುವಂತೆ ನಿನ್ನೊಡನೆ ಅದು ಒಪ್ಪಂದ ಮಾಡಿಕೊಂಡೀತೆ?
5 : ಅದನು ಹಕ್ಕಿಯಂತೆ ಆಡಿಸಬಲ್ಲೆಯಾ? ಆಟಕ್ಕೆಂದು ಹುಡುಗಿಯರಿಗೆ ಹಿಡಿದುಕೊಡಬಲ್ಲೆಯಾ?
6 : ಬೆಸ್ತರು ಅದನು ವ್ಯಾಪಾರಕ್ಕೆ ಇಡುವರೇ? ಪಾಲುಮಾಡಿಕೊಂಡು ಅದನು ವರ್ತಕರಿಗೆ ಮಾರುವರೆ?
7 : ಅದರ ಚರ್ಮವನು ಕೊಂಡಿಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನು ಮೀನು ಹಿಡಿಯುವ ಭರ್ಜಿಯಿಂದ ತಿವಿಯಬಲ್ಲೆಯಾ?
8 : ಅದರ ಮೇಲೆ ಒಮ್ಮೆ ಕೈಹಾಕಿ ನೋಡು! ಆಗ ನಡೆಯಬಹುದಾದ ಕದನವನು ನೆನೆಸಿಕೊಂಡರೆ ಸಾಕು! ನೀನು ಮತ್ತೆ ಮುಟ್ಟಹೋಗಲಾರೆ ಅದನು.
9 : ಅದನು ಹಿಡಿಯಬಹುದೆಂಬ ನಂಬಿಕೆ ವ್ಯರ್ಥ ಹಿಡಿಯಬಂದವನು ನೋಡಿದ್ದೇ ಬಿದ್ದುಹೋದ.
10 : ಅದನು ಕೆಣಕಲು ಧೈರ್ಯಗೊಂಡಾಗ ಅದು ಉಗ್ರವಾಗುತ್ತದೆ ‘ನನ್ನ ಮುಂದೆ ನಿಲ್ಲಬಲ್ಲವರಾರು?’ ಎನ್ನುತ್ತದೆ.
11 : ಅದನ್ನೆದುರಿಸಿ ಸುರಕ್ಷಿತವಾಗಿ ಇರಬಲ್ಲವನಾರು? ಗಗನದ ಕೆಳಗಿರುವ ಯಾರಿಂದಲೂ ಅದಾಗದು.
12 : ಅದರ ಅಂಗಗಳನು, ಶಕ್ತಿಯನು, ಸೊಬಗನು ನಾನು ವರ್ಣಿಸದೆ ಮುಚ್ಚಿಡಲಾಗದು.
13 : ಅದರ ಹೊರ ಕವಚವನು ಬಿಚ್ಚಬಲ್ಲವರಾರು? ಅದರ ಜೊಡುದವಡೆಗಳಲಿ ನುಗ್ಗಬಲ್ಲವರಾರು?
14 : ಅದರ ಮುಖದ ಕದಗಳನು ತೆರೆಯ ಬಲ್ಲವರಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
15 : ಬೆನ್ನಿನ ಅಡ್ಡಣಗಳು ಅದಕ್ಕೆ ಕೊಟ್ಟಿವೆ ಕೆಚ್ಚನು ಒತ್ತಿದ ಮುದ್ರೆಯಂತೆ ಬಿಗಿದಿವೆ ಅದನು.
16 : ಗಾಳಿ ಕೂಡ ನುಗ್ಗದಂತೆ ಆ ಅಡ್ಡಣಗಳು ಹೊಂದಿಕೊಂಡಿವೆ ಒಂದಕ್ಕೊಂದು.
17 : ಪ್ರತ್ಯೇಕಿಸಲಾಗದಂತೆ ಅಂಟಿಕೊಂಡಿವೆ ವಿಂಗಡಿಸಲಾಗದಂತೆ ಹಿಡಿದುಕೊಂಡಿವೆ.
18 : ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ ಅದರ ಕಣ್ಣುಗಳು ಅರುಣನೇತ್ರಕ್ಕೆ ಸಮಾನವಾಗಿವೆ.
19 : ಅದರ ಬಾಯಿಯೊಳಗಿಂದ ಕೊಳ್ಳಿಗಳು ಹೊರ ಬರುತ್ತವೆ ಅದರಿಂದ ಬೆಂಕಿಕಿಡಿಗಳು ಹಾರಿ ಬರುತ್ತವೆ.
20 : ಹುಲ್ಲುಹಾಕಿ ಕಾಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಅದರ ಮೂಗಿನ ಹೊಳ್ಳೆಗಳಿಂದ ಹೊಗೆ ಹಾಯುತ್ತದೆ.
21 : ಇದ್ದಿಲನು ಹೊತ್ತಿಸಲು ಅದರ ಉಸಿರೇ ಸಾಕು ಅದರ ಬಾಯಿಂದ ಹೊರಹೊಮ್ಮುವುದು ಜ್ವಾಲೆಯು.
22 : ಅದರ ಬಲ ನೆಲೆಗೊಂಡಿದೆ ಕುತ್ತಿಗೆಯಲಿ ಭಯವು ತಾಂಡವಾಡುತ್ತದೆ ಅದರ ಮುಂಗಡೆಯಲಿ.
23 : ಅಂಟಿಕೊಂಡಿದೆ ಅದರ ಮಾಂಸದ ಮಡಿಕೆಗಳು ಗಟ್ಟಿಯಾಗಿ ಅದರ ಮಾಂಸಖಂಡ ನಿಬಿಡವಾಗಿ.
24 : ಅದರ ಹೃದಯ ಬಂಡೆಯಂತೆ ಅದು ಗಟ್ಟಿ, ಬೀಸುವ ಕೆಳಗಲ್ಲಿನಂತೆ.
25 : ಬಲಿಷ್ಠರೂ ಭಯಪಡುತ್ತಾರೆ ಅದು ಎದ್ದರೆ ಭಯಭ್ರಾಂತರಾಗಿ ತತ್ತರಿಸುತ್ತಾರೆ ಅದು ಬಡಿದರೆ.
26 : ಕತ್ತಿಯಿಂದ ಹೊಡೆದರೆ ಅದಕ್ಕೇನೂ ಆಗದು ಭರ್ಜಿ, ಬಾಣ, ಈಟಿಗಳಿಂದ ಏನೂ ಆಗದು.
27 : ಬ್ಬಿಣ ಅದಕ್ಕೆ ಒಣ ಹುಲ್ಲಿನಂತೆ ಕಂಚು ಅದಕ್ಕೆ ಟೊಳ್ಳು ವ್ಮರದಂತೆ.
28 : ಅದನು ಬಿಲ್ಲು ಬಾಣಗಳಿಂದ ಓಡಿಸಲು ಅಸಾಧ್ಯ ಕಣಿವೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
29 : ದೊಣ್ಣೆಗಳು ಅದಕ್ಕೆ ಹುಲ್ಲುಕಡ್ಡಿಯ ಹಾಗೆ ಅದು ನಗುತ್ತದೆ ಸರ್ರನೆ ಬರುವ ಈಟಿಗೆ.
30 : ಅದರ ಹೊಟ್ಟೆಯ ಅಡಿಭಾಗವು ಬೋಕಿಬಿಲ್ಲೆಗಳಂತೆ ಚೂಪು ಹಲಿವೆಯ ಹಾಗೆ ಕೆಸರಿನ ಮೇಲೆ ಮೈ ಚಾಚಿಕೊಂಡಿರುವುದು.
31 : ಜಲನಿಧಿಯನು ಅದು ಕುದಿಸುತ್ತದೆ ಹಂಡೆಯ ನೀರಿನಂತೆ ಸಮುದ್ರವನು ಕಲಕಿಸುತ್ತದೆ ತೈಲದ ಕುಡಿಕೆಯಂತೆ.
32 : ಸಾಗರಕ್ಕೆ ನೆರೆಬಂತೋ ಎಂಬ ಹಾಗೆ ಶುಭ್ರಗೊಳಿಸುತ್ತದೆ ತಾನು ಬಂದ ಹಾದಿಯನ್ನೇ.
33 : ಜಗದಲ್ಲೆಲ್ಲೂ ಸಿಗದು ಇದಕ್ಕೆ ಸಾಟಿ ಭಯಭೀತಿಯಿಲ್ಲದ್ದು ಈ ಸೃಷ್ಟಿ
34 : ದಿಟ್ಟಿಸಿ ನೋಡುತ್ತದೆ ಘನಪ್ರಾಣಿಗಳನ್ನೆಲ್ಲಾ ರಾಜನಾಗಿರುತ್ತದೆ ಸೊಕ್ಕಿನ ಮೃಗಗಳಿಗೆಲ್ಲಾ!

Holydivine