Job - Chapter 26
Holy Bible

1 : ಆಗ ಯೋಬನು ಹೀಗೆ ಉತ್ತರ ಕೊಟ್ಟನು:
2 : “ನಿಶ್ಯಕ್ತನಿಗೆ ನಿನ್ನಿಂದ ಮಹದುಪಕಾರವಾಯಿತು ದುರ್ಬಲವಾದ ಕೈಗಳಿಗೆ ಮಹಾ ನೆರವು ದೊರಕಿತು!
3 : ಮಂದಮತಿಯಾದವನಿಗೆ ಎಷ್ಟೋ ಬುದ್ಧಿಹೇಳಿರುವೆ ಸುಜ್ಞಾನವನ್ನು ಬಹಳವಾಗಿ ಬೋಧನೆ ಮಾಡಿರುವೆ!
4 : ಆ ಮಾತುಗಳನ್ನು ನಿನಗೆ ಕಲಿಸಿದವರಾರು? ಈ ನುಡಿಗಳಿಂದ ನಿನ್ನನು ಪ್ರೇರೇಪಿಸಿದ ಪುಣ್ಯಾತ್ಮನಾರು?
5 : ಬಿಲ್ದದನು: ಜಲಚರಗಳಿಂದ ತುಂಬಿದ ಸಾಗರದ ಕೆಳಗಿನ ಲೋಕದೊಳು (ದೇವರ ಭಯದಿಂದ) ಯಾತನೆಪಡುತ್ತಿವೆ ಪ್ರೇತಗಳು.
6 : ಪಾತಾಳ ತೆರೆದಿದೆ ದೇವರ ದೃಷ್ಟಿಗೆ ಅಧೋಲೋಕ ಮರೆಯಾಗಿಲ್ಲ ಆತನಿಗೆ.
7 : ಉತ್ತರದಿಕ್ಕನ್ನು ವಿಸ್ತರಿಸಿಹನು ಶೂನ್ಯದ ಮೇಲೆ ಭೂಮಂಡಲವನ್ನು ತೂಗುಹಾಕಿಹನು ಏನೂ ಇಲ್ಲದರ ಮೇಲೆ.
8 : ಮೇಘಗಳನ್ನು ನೀರಿನಿಂದ ತುಂಬಿಸಿಹನು ಮೋಡ ಅದರ ಭಾರದಿಂದ ಒಡೆದುಹೋಗದು.
9 : ಪೂರ್ಣಚಂದ್ರನನ್ನು ಮರೆಮಾಡುತ್ತಾನೆ ಅದರ ಮುಂದೆ ಮೋಡ ಕವಿಸುತ್ತಾನೆ.
10 : ಬೆಳಕು-ಕತ್ತಲು ಸಂಧಿಸುವ ಸ್ಥಾನದಲಿ ಮೇರೆಹಾಕಿದ್ದಾನೆ ಸಮುದ್ರದ ಸುತ್ತಲಲಿ.
11 : ಆಕಾಶಮಂಡಲದ ಸ್ತಂಭಗಳು ಕದಲುವುವು ಆತನ ಗದರಿಕೆಗೆ ಅವುಗಳು ಬೆರಗಾಗುವುವು.
12 : ಸಮುದ್ರವನು ಭೇದಿಸುತ್ತಾನೆ ಪರಾಕ್ರಮದಿಂದ ಘಟಸರ್ಪವನೂ ಹೊಡೆದು ಹಾಕುತ್ತಾನೆ ವಿವೇಕಶಕ್ತಿಯಿಂದ.
13 : ಆತನ ಶ್ವಾಸ ಶುಭ್ರವಾಗಿಸುತ್ತದೆ ಆಕಾಶಮಂಡಲವನು ಆತನ ಹಸ್ತ ಇರಿಯುತ್ತದೆ ಹರಿದೋಡುವ ಸರ್ಪವನು.
14 : ದೇವರ ಅದ್ಭುತಗಳಲ್ಲಿ ಇವು ಕೆಲವು ಮಾತ್ರ ಆತನ ಬಗ್ಗೆ ನಾವು ಕೇಳಿರುವುದು ಕಿಂಚಿತ್ತು ಮಾತ್ರ ಆತನ ಘನ ಗರ್ಜನೆಯ ಪ್ರಾಬಲ್ಯವನ್ನು ಗ್ರಹಿಸಲು ಯಾರಿಂದ ಸಾಧ್ಯ?”

Holydivine