Job - Chapter 4
Holy Bible

1 : ಆಗ ತೇಮಾನ್ಯವಾದ ಎಲೀಫಜನು ಹೀಗೆಂದನು :
2 : “ಯಾರಾದರೂ ನಿನ್ನೊಡನೆ ಮಾತನಾಡಿದರೆ ಬೇಸರವೇಕೆ ನಿನಗೆ? ಆದರೂ ಯಾರಿಂದಾದೀತು ಮಾತನಾಡದೆ ಸುಮ್ಮನಿರುವುದಕ್ಕೆ?
3 : ನೋಡು, ನೀನೇ ಅನೇಕರಿಗೆ ಶಿಕ್ಷಣವಿತ್ತೆ ಜೋಲು ಬಿದ್ದ ಕೈಗಳಿಗೆ ಶಕ್ತಿಯನ್ನಿತ್ತೆ.
4 : ನಿನ್ನ ನುಡಿ ಎಡವಿಬೀಳುವವರನ್ನು ನಿಲ್ಲಗೊಳಿಸಿತು ಕುಸಿದುಬೀಳುವ ಮೊಣಕಾಲುಗಳನ್ನು ಬಲಪಡಿಸಿತು
5 : ಈಗಲಾದರೂ ಆ ದುರಿತಗಳಿಂದ ನೀನೇ ಧೃತಿಗೆಟ್ಟಿರುವೆ ಅವು ನಿನಗೆ ತಗಲಿ ನೀನೇ ತಲ್ಲಣಗೊಂಡಿರುವೆ!
6 : ನಿನ್ನ ನಂಬಿಕೆಗೆ ಆಧಾರ ನಿನ್ನ ಭಯಭಕ್ತಿ ಯಲ್ಲವೆ? ನಿನ್ನ ನಿರೀಕ್ಷೆಗೆ ಅಸ್ತಿವಾರ ನಿನ್ನ ಆದರ್ಶವಲ್ಲವೆ?
7 : ಆಲೋಚಿಸಿ ನೋಡು, ನಿರಪರಾಧಿ ಎಂದಾದರೂ ನಾಶವಾದುದುಂಟೆ? ಸತ್ಯ-ಸಂಧರು ಎಲ್ಲಿಯಾದರೂ ನಿರ್ಮೂಲವಾದುದುಂಟೆ?
8 : ನನಗೆ ತಿಳಿದಮಟ್ಟಿಗೆ, ಕೆಟ್ಟದ್ದನು ನೆಡುವವರು, ದುಷ್ಟತನವನು ಬಿತ್ತುವವರು, ಅದನ್ನೆ ಕೊಯ್ಯುವರು.
9 : ಅಂಥವರು ದೇವರ ಉಸಿರಿನಿಂದಲೆ ನಾಶವಾಗುವರು ಆತನ ಸಿಟ್ಟಿನಿಂದಲೆ ಸತ್ತುಹೋಗುವರು.
10 : ಸಿಂಹಗರ್ಜನೆ ಭೀಕರ ಸಿಂಹದಾರ್ಭಟಗಳು ಅಡಗುವುವು ಯುವಸಿಂಹದ ಕೋರೆಗಳು ಮುರಿದು ಹೋಗುವವು.
11 : ಬೇಟೆಯಿಲ್ಲದೆ ಮೃಗರಾಜ ಸಾಯುವನು ಸಿಂಹದ ಮರಿಗಳು ಚದರಿ ಹೋಗುವವು.
12 : ನನಗೆ ವಿಷಯವೊಂದು ಗುಟ್ಟಾಗಿ ತಿಳಿದು ಬಂತು ಪಿಸುಪಿಸುಮಾತಾಗಿ ಅದು ನನ್ನ ಕಿವಿಗೆ ಬಿತ್ತು.
13 : ಜನರಿಗೆ ಗಾಢನಿದ್ರೆ ಹತ್ತುವ ಹೊತ್ತಿನಲಿ ರಾತ್ರಿಕಾಲದ ಸ್ವಪ್ನ ಯೋಚನೆಗಳ ಸುಳಿಯಲಿ
14 : ಭೀಕರ ದಿಗಿಲು ಉಂಟಾಯಿತು ನನ್ನೆಲುಬುಗಳೆಲ್ಲವನ್ನು ನಡುಗಿಸಿತು
15 : ಆಗ ಆತ್ಮವೊಂದು ಮುಖದ ಮುಂದೆ ಹಾದುಹೋಯಿತು ನನ್ನ ಮೈಯೆಲ್ಲ ನಿಲುಗೂದಲಾಯಿತು.
16 : ರೂಪವೊಂದು ನನ್ನ ಕಣ್ಮುಂದೆ ನಿಂತಿತ್ತು ಆದರೂ ಅದೇನೆಂಬುದು ನನಗೆ ತಿಳಿಯದೆ ಹೋಯಿತು ಸೂಕ್ಷ್ಮವಾಣಿಯೊಂದು ನನಗೆ ಕೇಳಿಬಂತು:
17 : “ದೇವರ ದೃಷ್ಟಿಯಲ್ಲಿ ಸತ್ಯವಂತನಾಗಿರಲು ಮಾನವನಿಗೆ ಸಾಧ್ಯವೆ? ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಲು ಅವನಿಂದ ಸಾಧ್ಯವೆ?”
18 : ತನ್ನ ಸೇವಕರಲ್ಲೂ ದೇವರು ನಂಬಿಕೆಯಿಡುವುದಿಲ್ಲವಲ್ಲಾ! ತನ್ನ ದೂತರ ಮೇಲೂ ಆತನು ತಪ್ಪು ಹೊರಿಸುತ್ತಾನಲ್ಲಾ!
19 : ಇಂತಿರಲು ದೂಳಿನಲ್ಲಿ ತಳವೂರಿ, ಮಣ್ಣಿನೊಡಲ ಹೊಕ್ಕು ಬಾಳಿ ಹುಳುವಿನಷ್ಟು ಸುಲಭವಾಗಿ ಅಳಿದು ಹೋಗುವವರಲ್ಲಿ ಮತ್ತೆಷ್ಟು ತಪ್ಪೆಣಿಸಲಾರನಾತ ಅಂಥ ನರಮಾನವರಲ್ಲಿ?
20 : ಅವರು ಉದಯಾಸ್ತಮಾನಗಳ ನಡುವೆ ಜಜ್ಜಿ ಹೋಗುವರು ಯಾರ ಲಕ್ಷ್ಯವೂ ಇಲ್ಲದೆ ನಿತ್ಯವಿನಾಶ ಹೊಂದುವರು.
21 : ಅವರ ಗುಡಾರದ ಗೂಟವನ್ನು ಕೀಳಲಾಗುವುದು ಬುದ್ಧಿಹೀನರಾಗಿಯೆ ಅವರು ಸತ್ತು ಹೋಗುವರು.

Holydivine