Job - Chapter 6
Holy Bible

1 : ಅದಕ್ಕೆ ಉತ್ತರವಾಗಿ ಯೋಬನು ಹೀಗೆಂದನು:
2 : “ನನ್ನ ವಿಪತ್ತನು ತೂಕ ಮಾಡಿ ನೋಡಿದರೆ ಒಳಿತು ನನ್ನ ದುಃಖಗಳನು ತಕ್ಕಡಿಗೆ ಹಾಕಿದರೆ ಲೇಸು.
3 : ಆಗ ತಿಳಿಯುವುದು ನನ್ನ ವಿಪತ್ತು ಕಡಲ ತೀರದ ಮರಳಿಗಿಂತ ಭಾರವೆಂದು. ಎಂತಲೇ ನಾನಾಡಿದ ಮಾತು ದುಡುಕಿನಿಂದ ಆಡಿದ ಮಾತುಗಳೆಂದು.
4 : ನನ್ನ ಮನದೊಳು ಸರ್ವಶಕ್ತನ ಬಾಣಗಳು ನಾಟಿವೆ ನನ್ನ ಅಂತರಂಗದೊಳು ಅವುಗಳ ವಿಷ ಹೀರಲಾಗುತ್ತಿದೆ ದೇವರಿಂದ ಬಂದ ಆತಂಕಗಳು ನನ್ನನು ಸುತ್ತುವರೆದಿವೆ.
5 : ಹುಲ್ಲಿರಲು ಕಾಡುಕತ್ತೆ ಅರಚೀತೆ? ಮೇವಿರಲು ಗೂಳಿ ಎತ್ತು ಗುಟುರೀತೆ?
6 : ಉಪ್ಪಿಲ್ಲದ ಸಪ್ಪೆಯನು ತಿನ್ನುತ್ತೇವೆಯೆ? ಮೊಟ್ಟೆಯೊಳಗಿನ ಲೋಳೆಯಲಿ ರುಚಿಯಿದೆಯೆ?
7 : ಮುಟ್ಟಲು ಕೂಡ ಅಸಹ್ಯವಾದುವು ಕಾಯಿಲೆಯಲ್ಲಿ ನನಗೆ ಆಹಾರವಾದವು.
8 : ಅಯ್ಯೋ, ನನ್ನ ವಿಜ್ಞಾಪನೆ ನೆರವೇರುವುದಿಲ್ಲವೇಕೆ? ದೇವರು ನನ್ನ ಕೋರಿಕೆಯನ್ನು ಈಡೇರಿಸುವುದಿಲ್ಲವೇಕೆ?
9 : ದೇವರು ನನ್ನನ್ನು ನಸುಕಿ ಬಿಡಬಾರದೆ? ತನ್ನ ಕೈಯನ್ನು ಚಾಚಿ ಸಂಹರಿಸಿ ಬಿಡಬಾರದೆ?
10 : ಆಗ ನಾನು ಸಾಂತ್ವನ ಪಡೆಯುತ್ತಿದ್ದೆ ಮಿತಿಯಿಲ್ಲದ ಯಾತನೆಯಲ್ಲೂ ಆದರ ಹೊಂದುತ್ತಿದ್ದೆ ಪರಮಪಾವನದ ಮಾತನು ಬಿಡದೆ ಅನುಸರಿಸಿದೆನಲ್ಲವೆ? ಆಗ ನಾನು ಸಾಂತ್ವನ ಪಡೆಯುತ್ತಿದ್ದೆ ಮಿತಿಯಿಲ್ಲದ ಯಾತನೆಯಲ್ಲೂ ಆದರ ಹೊಂದುತ್ತಿದ್ದೆ ಪರಮಪಾವನದ ಮಾತನು ಬಿಡದೆ ಅನುಸರಿಸಿದೆನಲ್ಲವೆ?
11 : ನಾನು ನಿರೀಕ್ಷೆಯಿಂದಿರಲು ನನಗಾಧಾರವೇನು? ನಾನು ತಾಳ್ಮೆಯಿಂದಿರಲು ನನ್ನ ಅಂತ್ಯ ಸ್ಥಿತಿಯೇನು?
12 : ನನ್ನ ಬಲವು ಕಲ್ಲಿನ ಬಲವೊ? ನನ್ನ ದೇಹ ಕಂಚಿನ ದೇಹವೊ?
13 : ನನಗೆ ಯಾವ ಸಹಾಯವೂ ಇಲ್ಲವಲ್ಲ! ನನ್ನ ಪ್ರಾಣ ತೊಲಗಿ ಹೋಗಿದೆಯಲ್ಲಾ!
14 : ಸಂಕಟದಲ್ಲಿ ಆಗದಾ ನೆಂಟನಿಗೆ ಸರ್ವಶಕ್ತನಲ್ಲಿ ಭಯಭಕ್ತಿ ಇರುವುದುಂಟೆ?
15 : ಹರಿದು ಓಡುವ ತೊರೆಯಂತೆ ಉಕ್ಕಿ ಹರಿಯುವ ಪ್ರವಾಹದಂತೆ ದ್ರೋಹವೆಸಗಿದ್ದಾರೆ ಸೋದರರು ನನಗೆ.
16 : ಕಪ್ಪಾಗಿದೆ ಆ ತೊರೆಗಳ ನೀರು ಮಂಜು ಗಡ್ಡೆಯಿಂದ ಕದಡಿಹೋಗಿವೆ ಹಿಮಗಡ್ಡೆಯಿಂದ.
17 : ಆ ತೊರೆಗಳು ಮಾಯವಾಗುತ್ತವೆ ಬೇಸಿಗೆ ಬಂದಾಗ ಬತ್ತಿಹೋಗುತ್ತವೆ ಸೆಕೆಯಾದಾಗ.
18 : ಪ್ರಯಾಣ ಮಾಡುವ ವರ್ತಕರು ಇಂಥ ತೊರೆಗಳ ಮಾರ್ಗವಾಗಿ ಮರಳುಗಾಡಿನಲ್ಲೆ ನಾಶವಾಗುವರು ಅಲೆದಲೆದು ನೀರಿಗಾಗಿ.
19 : ಅವುಗಳಿಗಾಗಿ ಹಂಬಲಿಸುತ್ತದೆ ಆ ತೇಮದ ಪ್ರಯಾಣಿಕರ ತಂಡ ಅವುಗಳಿಗಾಗಿ ಹಾತೊರೆಯುತ್ತದೆ ಶೆಬದ ವರ್ತಕರ ಪಂಗಡ.
20 : ಆಶಿಸಿದಷ್ಟೂ ಆಶಾಭಂಗ ಪಡುತ್ತಾರೆ ಆ ಪ್ರಯಾಣಿಕರು ನಂಬಿದಷ್ಟೂ ನಿರೀಕ್ಷೆಗೆಡುತ್ತಾರೆ ಆ ವರ್ತಕರು.
21 : ಅಂತೆಯೇ ನನ್ನ ವಿಷಯದಲ್ಲಿ ನೀವು ವರ್ತಿಸುತ್ತೀರಿ ನನ್ನ ಈ ವಿಪತ್ತನ್ನು ಕಂಡಕೂಡಲೇ ಹಿಂಜರಿಯುತ್ತೀರಿ.
22 : ದಾನ ನೀಡಿರೆಂದು ನಿಮ್ಮನು ಬಿನ್ನವಿಸಿದೆನೋ? ನಿಮ್ಮಾಸ್ತಿಯಿಂದ ಲಂಚವನು ಕೋರಿದೆನೋ?
23 : ವಿರೋಧಿಯ ಕೈಯಿಂದ ನನ್ನನು ಬಿಡಿಸಿರೆಂದು ಕೇಳಿಕೊಂಡೆನೋ? ಹಿಂಸಕರಿಂದ ನನ್ನನು ವಿಮೋಚಿಸಿರೆಂದು ಬೇಡಿಕೊಂಡೆನೋ?
24 : ನಾನು ಮಾಡಿದ ತಪ್ಪೇನೆಂಬುದನು ತಿಳಿಸಿರಿ ನನಗೆ ನಾನು ಮೌನದಿಂದಿರುವೆನು, ಉಪದೇಶ ಮಾಡಿರಿ ನನಗೆ.
25 : ನ್ಯಾಯವಾದ ಮಾತು ಎಷ್ಟೋ ಶಕ್ತಿಯುತ ನಿಮ್ಮ ತರ್ಕವಾದರೋ ನಿರರ್ಥಕ.
26 : ಕೇವಲ ಮಾತುಗಳಿಂದ ಖಂಡಿಸ ಬೇಕೆಂದಿರುವಿರೊ? ದೆಸೆಗೆಟ್ಟವನ ಮಾತು ಗಾಳಿಪಾಲಾಗತಕ್ಕದಲ್ಲವೊ?
27 : ಅನಾಥನನ್ನು ಕೊಂಡುಕೊಳ್ಳಲು ಚೀಟು ಹಾಕುತ್ತೀರಿ ಆಪ್ತನನ್ನು ಮಾರಿಬಿಡಲು ವ್ಯಾಪಾರ ಮಾಡುತ್ತೀರಿ
28 : ಈಗ ದಯವಿಟ್ಟು ನೋಡಿ ನನ್ನ ಕಡೆಗೆ ಸುಳ್ಳಾಡೆನು ನಿಮ್ಮ ಮುಖದೆದುರಿಗೆ.
29 : ದಯಮಾಡಿ ಮತ್ತೆ ಆಲೋಚಿಸಿರಿ ಅನ್ಯಾಯವಾಗದಂತೆ ಮರಳಿ ವಿಮರ್ಶಿಸಿರಿ ನನ್ನ ಸತ್ಯತೆ ತಿಳಿಯುವಂತೆ.
30 : ರುಚಿ ವಿಷಯದಲ್ಲಿ ನಾಲಿಗೆ ತಪ್ಪು ಮಾಡುತ್ತದೆಯೇ? ಸತ್ಯಾಸತ್ಯಗಳ ವಿವೇಚನೆ ನನಗಿಲ್ಲವೇ?”

Holydivine