Job - Chapter 20
Holy Bible

1 : ಬಳಿಕ ನಾಮಾಥ್ಯನಾದ ಚೋಫರನು ಹೀಗೆಂದನು:
2 : “ನಿನಗೆ ಉತ್ತರ ಕೊಡಲು ನಾನು ತವಕಪಡುತ್ತಿರುವೆ ನನ್ನ ನೊಂದ ಮನ ನನಗೆ ಪ್ರತ್ಯುತ್ತರ ಹೇಳಿಕೊಡುತ್ತದೆ:
3 : ನನಗೆ ಅವಮಾನ ತರುವ ನಿನ್ನ ಖಂಡನೆಯನು ಕೇಳಿದ್ದೇನೆ ನನ್ನ ಮನ ತನ್ನ ವಿವೇಚನೆ ಕಲಿಸಿದ ಉತ್ತರವನು ತಿಳಿಸುತ್ತಿದೆ.
4 : ಆದಿಯಿಂದಲೆ, ನರನನ್ನು ಧರೆಯಮೇಲೆ ಇರಿಸಿದಂದಿನಿಂದಲೆ, ನಡೆದು ಬರುತ್ತಿರುವ ಈ ವಿಷಯ ನಿನಗೆ ತಿಳಿಯದೆ?
5 : ದುಷ್ಟನ ಜಯಘೋಷ ಅಲ್ಪಕಾಲದ್ದು ಭ್ರಷ್ಟನ ಉಲ್ಲಾಸ ಕ್ಷಣಿಕವಾದದ್ದು.
6 : ಅವನ ಪ್ರತಿಷ್ಠೆ ಆಕಾಶಕ್ಕೆ ಏರಿದರೂ ಅವನ ತಲೆ ಮೋಡಗಳನು ಮುಟ್ಟಿದರೂ,
7 : ತನ್ನ ಮಲದ ಹಾಗೆ ನಿತ್ಯಕ್ಕು ಅವನು ನಶಿಸಿಹೋಗುವನು ಅವನನು ಅರಿತವರೆಲ್ಲರೂ “ಅವನೆಲ್ಲಿಯೋ!” ಎಂದು ಹೇಳುವರು.
8 : ಸ್ವಪ್ನದಂತೆ ಅವನು ಸಿಗದೆ ಹಾರಿಹೋಗುವನು ರಾತ್ರಿಯ ಕನಸಿನಂತೆ ಓಡಿಹೋಗುವನು.
9 : ಕಂಡವನ ಕಣ್ಣಿಗೆ ಅವನು ಮತ್ತೆ ಕಾಣಿಸನು ಅವನ ನಿವಾಸ ಮತ್ತೆ ಅವನನು ನೋಡದು.
10 : ಅವನ ಮಕ್ಕಳು ಬಡವರಿಗೆ ಪರಿಹಾರವನು ತೆರುವರು ಅವನ ಕೈಗಳೆ ಅವನಾಸ್ತಿಯನು ಹಿಂತಿರುಗಿಸಬೇಕಾಗುವುದು.
11 : ಯೌವನ ಅವನ ದೇಹದಲ್ಲಿ ತುಂಬಿತ್ತು ಅದು ಕೂಡ ಅವನ ಸಮೇತ ಧೂಳಿನಲಿ ಮಲಗುವುದು.
12 : ಕೆಡಕುತನ ಸಿಹಿಯಾಗಿತ್ತು ಅವನ ಬಾಯಿಗೆ ಬಚ್ಚಿಟ್ಟುಕೊಂಡಿದ್ದನು ಅದನ್ನು ನಾಲಿಗೆ ಕೆಳಗೆ.
13 : ಅದನ್ನು ಬಿಟ್ಟುಕೊಡಲು ಅವನಿಗೆ ಇಷ್ಟವಿಲ್ಲ ಬಾಯಲ್ಲೇ ಇಟ್ಟುಕೊಳ್ಳುತ್ತಾನೆ ಚಪ್ಪರಿಸುತ್ತಾ.
14 : ಆದರೆ ಆ ತಿಂಡಿ ತಿಂದ ಮೇಲೆ ಮಾರ್ಪಡುವುದು ಅವನ ಕರುಳೊಳಗೆ ನಾಗರವಿಷವಾಗುವುದು.
15 : ನುಂಗಿದ ಗಂಟನು ಅವನು ಹೊರಗೆ ಕಕ್ಕುವನು ಹೊಟ್ಟೆಯಿಂದ ದೇವರು ಅದನು ಹೊರಡಿಸುವನು.
16 : ಅವನು ಹೀರುವುದು ನಾಗರವಿಷವನು ಸರ್ಪದ ನಾಲಿಗೆ ಕೊಲ್ಲುವುದು ಅವನನು.
17 : ಅವನು ನೋಡನು ಎಣ್ಣೆ ಹರಿವ ಕಾಲುವೆಗಳನು ಜೇನು ಹಾಲು ತುಂಬಿ ಹರಿವ ನದಿಗಳನು.
18 : ತಾನು ದುಡಿದು ಗಳಿಸಿದ್ದನ್ನು ತಿಂದು ಅನುಭವಿಸಲಾರನು ಅದು ಪರರ ಪಾಲಾಗುವುದು ವ್ಯಾಪಾರದಿಂದ ಬಂದ ವರಮಾನ ಅವನಿಗೆ ಆನಂದ ತರದು.
19 : ಏಕೆಂದರೆ ಬಡವರನು ತುಳಿದು ತೊರೆದುಬಿಟ್ಟ ತಾನು ಕಟ್ಟದ ಮನೆಯನು ಕಿತ್ತುಕೊಂಡುಬಿಟ್ಟ.
20 : ಅವನ ಆಕಾಂಕ್ಷೆಗೆ ತೃಪ್ತಿಯೇ ಇಲ್ಲ ಅವನ ಸಂತಾನಕ್ಕೆ ಉಳಿಗಾಲವಿಲ್ಲ.
21 : ಸಮೃದ್ಧಿಯಿಂದಿರುವಾಗಲೇ ಕೊರತೆ ಅವನನ್ನು ಕಾಡುವುದು ಶ್ರಮಜೀವಿಗಳೆಲ್ಲರ ಕೈ ಅವನ ಮೇಲೆ ಎರಗುವುದು.
22 : ಸಮೃದ್ಧಿಯಿಂದಿರುವಾಗಲೇ ಕೊರತೆ ಅವನನ್ನು ಕಾಡುವುದು ಶ್ರಮಜೀವಿಗಳೆಲ್ಲರ ಕೈ ಅವನ ಮೇಲೆ ಎರಗುವುದು.
23 : ಅವನು ಹೊಟ್ಟೆಯನು ತುಂಬಿಸಿಕೊಳ್ಳುವಾಗಲೇ ದೇವರು ಸುರಿಸುವರು ಕೋಪಾಗ್ನಿಯನು ಆಹಾರದಂತೆ.
24 : ಕಬ್ಬಿಣದ ಆಯುಧಕ್ಕೆ ಹೆದರಿ ಓಡಿದ ಆದರೆ ಅವನನು ಇರಿಯಿತು ಕಂಚಿನ ಬಾಣ
25 : ಆ ಬಾಣವನು ಕೀಳಲು ಅದು ಹೊರಬಂತು ಅವನ ಬೆನ್ನಿನಿಂದ ಅದರ ಮಿಂಚುಮೊನೆ ಆಚೆಬಂತು ಅವನ ಪಿತ್ತಕೋಶದಿಂದ ಅವನನು ಆವರಿಸಿಕೊಂಡಿತು ಭಯಭ್ರಾಂತ.
26 : ಅವನ ನಿಧಿನಿಕ್ಷೇಪಕ್ಕಾಗಿ ಕಾರಿರುಳು ಕಾದಿದೆ ಯಾರೂ ಹೊತ್ತಿಸದ ಬೆಂಕಿ ಅವನನು ಕಬಳಿಸಲಿದೆ ಅವನ ಗುಡಾರದಲಿ ಉಳಿದದ್ದೆಲ್ಲ ನಾಶವಾಗಲಿದೆ.
27 : ಆಕಾಶವೇ ಅವನ ದೋಷವನು ಪ್ರಕಟಿಸುವುದು ಭೂಲೋಕವೇ ಅವನ ವಿರುದ್ಧ ಸಾಕ್ಷಿ ನಿಲ್ಲುವುದು.
28 : ಅವನ ಮನೆಯ ಧನಧಾನ್ಯ ಹಾಳಾಗುವುದು ದೇವರ ಸಿಟ್ಟಿನಾದಿನ ನೀರುಪಾಲಾಗುವುದು.
29 : ಇದುವೆ ದುರುಳನಿಗೆ ದೇವರು ವಿಧಿಸುವ ಭಾಗ್ಯ ದೇವರಿಂದ ಅವನಿಗೆ ನೇಮಿಸಲಾಗಿರುವ ಸ್ವಾಸ್ತ್ಯ.”

Holydivine