Job - Chapter 16
Holy Bible

1 : ಆಗ ಯೋಬನು ಕೊಟ್ಟ ಉತ್ತರ:
2 : “ಇಂಥ ಎಷ್ಟೋ ಮಾತುಗಳನ್ನು ಕೇಳಿದ್ದೇನೆ ನೀವೆಲ್ಲರು ಆದರಿಸುವವರಲ್ಲ, ಬಾಧಿಸುವವರೇ.
3 : ನಿಮ್ಮ ಗಾಳಿ ಮಾತುಗಳಿಗೆ ಇತಿಮಿತಿ ಬೇಡವೇನು? ಇಂಥ ಉತ್ತರ ಕೊಡಲು ನಿಮ್ಮನ್ನು ಒತ್ತಾಯಪಡಿಸಿದ್ದೇನೆ?
4 : ನನ್ನ ಸ್ಥಿತಿಯಲ್ಲಿ ನೀವಿದ್ದಿದ್ದರೆ ನಾನೂ ಮಾತಾಡಬಹುದಿತ್ತು ನಿಮ್ಮಂತೆ. ನಿಮಗೆ ವಿರುದ್ಧ ನಾನೂ ಮಾತು ಬೆಳೆಸಬಹುದಿತ್ತು ನಿಮ್ಮ ವಿಷಯದಲ್ಲಿ ನಾನೂ ತಲೆಯಾಡಿಸಬಹುದಿತ್ತು.
5 : ನಾನು ನಿಮಗೆ ಬಾಯಿಮಾತಿನಿಂದ ಧೈರ್ಯ ಹೇಳಬಹುದಿತ್ತು ತುಟಿಮಾತುಗಳಿಂದ ಆದರಿಸಿ ಸಾಂತ್ವನ ನೀಡಬಹುದಿತ್ತು.
6 : ನಾನು ಮಾತಾಡಿದರೆ ನನ್ನ ನೋವು ನಿವಾರಣೆಯಾಗದು ನಾನು ಸುಮ್ಮನಿದ್ದರೆ ನನ್ನ ಕಷ್ಟ ಪರಿಹಾರವಾಗದು.
7 : ದೇವರೇ, ದುಃಖದಿಂದ ನೀ ನನ್ನನ್ನು ಸವೆಸಿರುವೆ ನನ್ನ ಬಂಧುಬಳಗದವರನ್ನು ಸದೆಬಡಿದಿರುವೆ.
8 : ನನ್ನ ಮುಖವೆಲ್ಲ ಸುಕ್ಕು ಹಿಡಿದಿದೆ ನನ್ನ ಸಣಕಲುತನವೆ ನನಗೆ ವಿರುದ್ಧ ಸಾq್ಷಯಾಗಿದೆ.
9 : ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ.
10 : ಜನರು ಬಾಯಿಕಿಸಿದು ನನ್ನನು ಅಣಕಿಸುತ್ತಾರೆ ಛೀಮಾರಿ ಹಾಕಿ ನನ್ನ ದವಡೆಗೆ ಬಡಿದಿದ್ದಾರೆ ನನಗೆ ವಿರುದ್ಧವಾಗಿ ಗುಂಪುಕಟ್ಟಿದ್ದಾರೆ.
11 : ದೇವರು ನನ್ನನ್ನೊಪ್ಪಿಸಿಬಿಟ್ಟಿದ್ದಾನೆ ತುಂಟರಿಗೆ ನನ್ನನ್ನು ಎಸೆದು ಬಿಟ್ಟಿದ್ದಾನೆ ದುಷ್ಟರ ಕೈಗೆ.
12 : ನೆಮ್ಮದಿಯಾಗಿದ್ದ ನನ್ನನು ಒಡೆದು ಬಡಿದುಹಾಕಿದ್ದಾನೆ ಕುತ್ತಿಗೆ ಹಿಸುಕಿ ನನ್ನನು ತುಂಡಾಗಿಸಿದ್ದಾನೆ. ಬಾಣಬಿಡಲು ನನ್ನನು ಗುರಿಹಲಗೆಯಾಗಿಸಿಕೊಂಡಿದ್ದಾನೆ.
13 : ಮುತ್ತಿಕೊಂಡಿವೆ ನನ್ನನು ಆತನ ಬಾಣಗಳು ನಿರ್ದಯೆಯಿಂದ ಅಂತರಂಗವನ್ನು ಇರಿಯುತ್ತಿಹನು ನೆಲದ ಮೇಲೆ ನನ್ನ ಪಿತ್ತವನು ಸುರಿಸುತ್ತಿಹನು.
14 : ಪೆಟ್ಟಿನ ಮೇಲೆ ಪೆಟ್ಟು ಕೊಟ್ಟು ನನ್ನನು ಬಡಕಲಾಗಿಸಿಹನು ಯುದ್ಧಶೂರನಂತೆ ಓಡಿಬಂದು ಮೇಲೆ ಬೀಳುತ್ತಿಹನು.
15 : ಗೋಣಿತಟ್ಟನ್ನು ಹೊಲಿದು ಮೈಗೆ ಹಾಕಿಕೊಂಡಿರುವೆ ನನ್ನ ಕೊಂಬನ್ನು ಬೂದಿಯೊಳಗೆ ಬಾಗಿಸಿಟ್ಟಿರುವೆ.
16 : ಕಣ್ಣೀರು ಸುರಿಸಿ ನನ್ನ ಮುಖ ಕೆಂಪೇರಿದೆ ನನ್ನ ಕಣ್ಣುಗಳಿಗೆ ಕಾರಿರುಳು ಕವಿದಿದೆ.
17 : ಆದರೂ ನಾನು ಹಿಂಸಾಚಾರಕ್ಕೆ ಕೈಹಾಕಿಲ್ಲ ನಾನು ಮಾಡುವ ಪ್ರಾರ್ಥನೆ ನಿರ್ಮಲ.
18 : ಪೊಡವಿಯೇ, ನನ್ನ ನೆತ್ತರನ್ನು ನೀ ಮುಚ್ಚಬೇಡ ನಾನು ಮಾಡುತ್ತಿರುವ ಮೊರೆಯನ್ನು ನಿಲ್ಲಿಸಬೇಡ.
19 : ಇಗೋ, ನನ್ನ ಕಡೆಯ ಸಾಕ್ಷಿ ಸ್ವರ್ಗದಲ್ಲಿರುವನು ನನ್ನ ಪರವಾದಿ ಮೇಲಣ ಲೋಕದಲ್ಲಿರುವನು.
20 : ಗೆಳೆಯರು ನನ್ನನ್ನು ಹೀಗಳೆಯುತ್ತಿರುವರು ನಾನೋ ಸುರಿಸುತ್ತಿರುವೆ ದೇವರ ಮುಂದೆ ಕಣ್ಣೀರು.
21 : ಇದು ನನಗೆ ನ್ಯಾಯ ದೊರಕಿಸಲಿ, ದೇವರ ಮುಂದೆ ತನ್ನ ಮಿತ್ರನಿಗಾಗಿ ಒಬ್ಬನು ವಾದಿಸುವಂತೆ.
22 : ನನ್ನ ವರ್ಷಗಳು ಕಳೆದು ಹೋಗುತ್ತಿವೆ ಹಿಂತಿರುಗಲಾಗದ ಹಾದಿಯನು ನಾನು ಹಿಡಿಯಲಿರುವೆ.

Holydivine