Job - Chapter 8
Holy Bible

1 : ಆಗ ಶೂಹ್ಯನಾದ ಬಿಲ್ದದನು ಇಂತೆಂದನು:
2 : “ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವೆ? ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ?
3 : ಅನ್ಯಾಯವಾದ ತೀರ್ಪನು ಕೊಡುತ್ತಾನೆಯೆ ದೇವರು? ಸತ್ಯವನ್ನು ಡೊಂಕು ಮಾಡುತ್ತಾನೆಯೆ ಸರ್ವಶಕ್ತನು?
4 : ಬಹುಶಃ ನಿನ್ನ ಮಕ್ಕಳು ಆತನ ವಿರುದ್ಧ ಪಾಪ ಮಾಡಿರಬೇಕು ಎಂದೇ ಆತ ಅವರನು ಆ ದ್ರೋಹದ ನಿಮಿತ್ತ ದಂಡಿಸಿರಬೇಕು.
5 : ಶುದ್ಧನೂ ಸತ್ಯವಂತನೂ ನೀನಾಗಿದ್ದರೆ ದೇವರ ಪ್ರಸನ್ನತೆಯನು ಅರಸಿದೆಯಾದರೆ ಆ ಸರ್ವಶಕ್ತನನು ವಿಜ್ಞಾಪಿಸಿದೆಯಾದರೆ,
6 : ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು ಬರುವನು ಸತ್ಯವಂತನ ಮನೆಮಾರನು ಸಮೃದ್ಧಗೊಳಿಸುವನು.
7 : ಆಗ ನಿನ್ನ ಭವಿಷ್ಯ ಎಷ್ಟು ಉಜ್ವಲ ವಾಗಿರುತ್ತದೆಂದರೆ ನಿನ್ನ ಮೊದಲಿನ ಸ್ಥಿತಿ ಕೂಡ ಅತ್ಯಲ್ಪವಾಗಿ ಕಾಣುವುದು ನಿನಗೆ.
8 : ವಿಚಾರಿಸಿ ನೋಡು ಪುರಾತನ ಕಾಲವನು ಧ್ಯಾನಿಸಿ ನೋಡು ಪೂರ್ವಜರ ಅನುಭವವನು.
9 : ನಾವಾದರೋ ನಿನ್ನೆ ಹುಟ್ಟಿದವರು, ಏನೂ ಅರಿಯದವರು ಭೂಲೋಕದಲ್ಲಿನ ನಮ್ಮ ಬಾಳು ಕೇವಲ ನೆರಳು.
10 : ನಿನಗೆ ಬೋಧಿಸಿ ಬುದ್ಧಿಹೇಳುವರು ಪೂರ್ವಜರು ಅವರ ಅನುಭವದಿಂದ ಬಂದ ವಚನಗಳಿವು:
11 : ಕೆಸರಿಲ್ಲದೆ ಆಪುಹುಲ್ಲು ಬೆಳೆಯುವುದುಂಟೆ? ಆವುಗಿಲ್ಲದೆ ಜಂಬು ಹುಲ್ಲು ಮೊಳೆಯುವುದುಂಟೆ?
12 : ಆದರೂ ಮಿಕ್ಕ ಎಲ್ಲ ಸಸಿಗಳಿಗಿಂತ ಬಲು ಮುಂಚಿತವಾಗಿಯೆ ಒಣಗಿ ಹೋಗುತ್ತವೆ ಅವು ಯಾರೂ ಕೊಯ್ಯದೆಯೆ.
13 : ದೇವರನ್ನು ಮರೆಯುವವರೆಲ್ಲರ ಗತಿ ಇದುವೆ ಭಕ್ತಿಹೀನನ ನಿರೀಕ್ಷೆ ನಿರರ್ಥಕವೆ.
14 : ಅಂಥವನ ಭರವಸೆ ಭಂಗವಾಗುವುದು ಅವನ ನಿವಾಸ ಜೇಡರ ಗೂಡಿನಂತಾಗುವುದು.
15 : ಒರಗಿಕೊಂಡರೆ ಆ ಮನೆ ನಿಲ್ಲದು ಹಿಡಿದುಕೊಂಡರೆ ಅದು ಬಿಗಿಯಿರದು.
16 : ಅಂಥವನು ಬಿಸಿಲಿನಲ್ಲೂ ಹಸಿರಾಗಿರುವ ಬಳ್ಳಿಯಂತೆ ಹರಡಿಕೊಳ್ಳುವನು ತೋಟದೊಳಗೆ ಕವಲೊಡೆದು;
17 : ಕಲ್ಲುಕುಪ್ಪೆಯ ಮೇಲೂ ಬೇರುಗಳನ್ನು ಹೆಣೆದುಕೊಳ್ವನು ಕಲ್ಲಿನ ಸಂದಿಗೊಂದಿಗಳ ನಡುವೆ ನುಗ್ಗಬಲ್ಲನು ಅವನು;
18 : ಅಲ್ಲಿಂದ ಅವನನ್ನು ಕಿತ್ತುಹಾಕಿದ್ದೇ ಆದರೆ ಅವನನ್ನು ಕಂಡದ್ದೇ ಇಲ್ಲ ಎಂದು ಬೊಂಕುವುದು ಆ ಸ್ಥಳ.
19 : ಇದುವೇ ಅಂಥವನಿಗೆ ಗಿಟ್ಟುವ ಸುಖ ಬೇರೆಯವರು ಮೊಳೆವರು ಅವನಿದ್ದ ಆ ನೆಲದಿಂದ.
20 : ದೇವರು ನಿರ್ದೋಷಿಯನ್ನು ತ್ಯಜಿಸಿ ಬಿಡುವುದಿಲ್ಲ ಕೆಡುಕರಿಗೆ ನೆರವಾಗಲು ಆತ ಕೈ ನೀಡುವುದಿಲ್ಲ.
21 : ತುಂಬಿಸುವನಾತ ನಿನ್ನ ಬಾಯನು ನಗೆಯಿಂದ ನಿನ್ನ ತುಟಿಗಳನ್ನು ಉತ್ಸಾಹ ಧ್ವನಿಯಿಂದ.
22 : ಅವಮಾನ ಮುಸುಕುವುದು ನಿನ್ನ ಹಗೆಗಳನ್ನು ದುರುಳರಾ ನಿವಾಸವಾದರೋ ನಿರ್ಮೂಲವಾಗುವುದು.”

Holydivine