Job - Chapter 40
Holy Bible

1 : ಯೋಬನಿಗೆ ಸರ್ವೇಶ್ವರ ಮತ್ತೆ ಇಂತೆಂದರು:
2 : “ಸರ್ವಶಕ್ತನೊಡನೆ ವ್ಯಾಜ್ಯವಾಡುವುದನು ಈಗಲಾದರು ನಿಲ್ಲಿಸುವೆಯಾ? ದೇವರೊಡನೆ ತರ್ಕಮಾಡುವಂಥ ನೀನು ಉತ್ತರ ಕೊಡುವೆಯಾ?”
3 : ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು:
4 : “ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.
5 : ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”
6 : ಸರ್ವೇಶ್ವರ ಬಿರುಗಾಳಿಯೊಳಗಿಂದ ಯೋಬನಿಗೆ ಕೊಟ್ಟ ಪ್ರತ್ಯುತ್ತರವಿದು:
7 : “ಶೂರನಂತೆ ನಡುಕಟ್ಟಿಕೊಂಡು ನನ್ನ ಪ್ರಶ್ನೆಗೆ ಉತ್ತರ ಕೊಡು:
8 : ಏನು, ನನ್ನ ನಿರ್ಣಯವನ್ನು ನೀನು ಖಂಡಿಸುತ್ತೀಯೋ? ನೀನು ನಿರ್ದೋಷಿಯೆನಿಸಿಕೊಳ್ಳಲು ನನ್ನನ್ನು ದೋಷಿಯನ್ನಾಗಿಸುತ್ತೀಯೋ?
9 : ದೇವರಾದ ನನಗಿರುವಂಥ ಭುಜಬಲ ನಿನಗಿದೆಯೋ? ನನ್ನ ಧ್ವನಿಗೆ ಸಮನಾಗಿ ನೀನು ಗುಡುಗಬಲ್ಲೆಯೋ?
10 : ಮಹಿಮೆ ಘನತೆಗಳಿಂದ ಅಲಂಕರಿಸಿಕೊ! ಗೌರವ ಪ್ರಭಾವಗಳನು ಧರಿಸಿಕೊ!
11 : ನಿನ್ನ ಕಡುಕೋಪವನು ಎಲ್ಲೆಡೆಯೂ ಹರಡಿಸು ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು.
12 : ಹೌದು, ಕಣ್ಣಿಟ್ಟು ಗರ್ವಿಷ್ಠರೆಲ್ಲರನು ಕುಗ್ಗಿಸು ದುಷ್ಟರನು ನಿಂತಲ್ಲೇ ತುಳಿದುಬಿಡು.
13 : ಅವರೆಲ್ಲರನು ದೂಳಿನಲ್ಲಿ ಒಟ್ಟಿಗೆ ಅಡಗಿಸಿಬಿಡು ಅವರ ಮುಖಕ್ಕೆ ಅಧೋಲೋಕದಲಿ ಮುಸುಕುಹಾಕು.
14 : ಆಗ ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.
15 : ಸೃಷ್ಟಿಮಾಡಿದೆನು ನೀರಾನೆಯನು ನಿನ್ನ ಹಾಗೆ ಅದು ಹುಲ್ಲನು ಮೇಯುತ್ತದೆ ಎತ್ತಿನ ಹಾಗೆ.
16 : ಅದರ ಬಲ ಇರುವುದು ಸೊಂಟದಲಿ ಅದರ ತ್ರಾಣ ಹೊಟ್ಟೆಯ ನರಗಳಲಿ.
17 : ಬಾಲವನ್ನು ಬಾಗಿಸುತ್ತದೆ ದೇವದಾರು ಮರದಂತೆ ಅದರ ನರಗಳೋ ಹೆಣೆದುಕೊಂಡಿವೆ.
18 : ಅದರ ಮೂಳೆಗಳಿವೆ ಕಂಚಿನ ನಳಿಕೆಗಳಂತೆ ಅದರ ಎಲುಬುಗಳಿವೆ ಕಬ್ಬಿಣದ ಹಾರೆಗಳಂತೆ.
19 : ದೈವ ಸೃಷ್ಟಿಗಳಲ್ಲಿ ಅದು ಮುಖ್ಯವಾದುದು ಸೃಷ್ಟಿಕರ್ತನು ಅದಕ್ಕೆ ಕೊಟ್ಟಿರುವನು ಕೋರೆಹಲ್ಲಿನ ಖಡ್ಗವನ್ನು.
20 : ಅದಕ್ಕೆ ಮೇವು ಕೊಡುತ್ತವೆ ಬೆಟ್ಟಗುಡ್ಡಗಳು ಅಲ್ಲಿ ಅಲೆದಾಡುತ್ತಿರುತ್ತವೆ ಕಾಡು ಮೃಗಗಳು.
21 : ಅದು ಮಲಗುತ್ತದೆ ತಾವರೆ ಗಿಡಗಳಡಿಯಲಿ ವಿಶ್ರಮಿಸುತ್ತದೆ ಆಪಿನ ಮರೆಯಲಿ, ಕೆಸರು ಭೂಮಿಯಲಿ.
22 : ಅದಕ್ಕೆ ನೆರಳನ್ನೀಯುತ್ತವೆ ತಾವರೆ ಎಲೆಗಳು ಅದರ ಸುತ್ತಲಿರುತ್ತವೆ ನದಿಯ ನೀರವಂಜಿಗಳು.
23 : ಹೊಳೆ ಉಕ್ಕಿ ಬಂದರೂ ಅದು ಹೆದರುವುದಿಲ್ಲ ನೋಡು ಜೋರ್ಡನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು!
24 : ಅದು ನೋಡುವಾಗ ಯಾವನಾದರು ಅದನು ಹಿಡಿಯಬಲ್ಲನೆ? ಗಾಳದಿಂದ ಯಾವನಾದರು ಅದರ ಮೂಗನು ಚುಚ್ಚಬಲ್ಲನೆ?”

Holydivine