Job - Chapter 39
Holy Bible

1 : “ಕಾಡುಮೇಕೆ ಈಯುವ ವೇಳೆಯನು ತಿಳಿದಿರುವೆಯಾ? ಹುಲ್ಲೆಗಳ ಹೆರಿಗೆಯನು ಗ್ರಹಿಸಿರುವೆಯಾ?
2 : ಎಣಿಸಿರುವೆಯಾ ಅವು ಗರ್ಭ ಹೊರುವ ತಿಂಗಳನು? ಗೊತ್ತುಹಚ್ಚಿರುವೆಯಾ ಅವು ಈಯುವ ವೇಳೆಯನು?
3 : ಅವು ಬಗ್ಗಿ ಮರಿಹಾಕುತ್ತವೆ ಒಡನೆಯೆ ವೇದನೆಯನು ಮರೆತುಬಿಡುತ್ತವೆ.
4 : ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆಯುತ್ತವೆ ತಾಯಿಯನ್ನು ಅಗಲಿದ ಬಳಿಕ ಅವು ಮರಳಿ ಬರುವುದಿಲ್ಲ.
5 : ಕಾಡುಕತ್ತೆಗೆ ಸ್ವಾತಂತ್ರ್ಯವನು ಕೊಟ್ಟವರಾರು? ಅದರ ಕಟ್ಟನು ಬಿಚ್ಚಿದವರಾರು?
6 : ಅದಕ್ಕೆ ಅಡವಿಯನೆ ಮನೆಯನ್ನಾಗಿಸಿದವನು ನಾನು ಸವಳುಬಯಲನೇ ಅದರ ನಿವಾಸವಾಗಿಸಿದವನು ನಾನು.
7 : ಅದು ಧಿಕ್ಕರಿಸುತ್ತದೆ ಊರಗದ್ದಲವನು ಅದು ಕೇಳಿದ್ದಿಲ್ಲ ಓಡಿಸುವವನ ಕೂಗನು.
8 : ಎತ್ತರವಾದ ಬೆಟ್ಟಗಳೇ ಅದರ ಕಾವಲು ಹಸಿರೆಲ್ಲಿದ್ದರೂ ಅದುವೆ ಅದರಸುವ ಮೇವು.
9 : ಕಾಡುಕೋಣ ಒಪ್ಪಿದೆಯೇ ನಿನಗೆ ಸೇವೆಮಾಡಲು? ನಿನ್ನ ಗೋದಲಿಯ ಹತ್ತಿರವೇ ತಂಗಿರಲು?
10 : ಕಟ್ಟಬಲ್ಲೆಯಾ ಅದನು ಹಗ್ಗದಿಂದ ನೇಗಿಲ ಸಾಲಿಗೆ ಕುಂಟೆ ಎಳೆಯಲು ಅದು ನಿನ್ನ ಹಿಂದೆ?
11 : ಬಲವಿದೆಯೆಂದು ಅದರಲಿ ನಂಬಿಕೆಯಿಡುವೆಯಾ? ಬಲಿಷ್ಠಕಾರ್ಯಗಳನು ಅದಕ್ಕೆ ಒಪ್ಪಿಸಿಬಿಡುವೆಯಾ?
12 : ಬೆಳೆಯನು ಅದು ನಿನಗೆ ಹೊತ್ತು ತರುವುದೆಂದು ನಂಬುವೆಯಾ? ಕಣದಲಿ ನಿನಗೆ ಕಾಳನು ಕೂಡಿಸುವುದೆಂಬ ನಂಬಿಕೆ ನಿನvದೆಯಾ?
13 : ಉಷ್ಟ್ರಪಕ್ಷಿ ಲವಲವಿಕೆಯಿಂದ ರೆಕ್ಕೆ ಬಡಿಯುತ್ತದೆ. ಆದರೆ ಪ್ರೀತಿವ್ಯಾಮೋಹವಿದೆಯೆ ಅದರ ರೆಕ್ಕೆ ಗರಿಗಳಿಗೆ?
14 : ಮೊಟ್ಟೆಗಳನು ಭೂಮಿಯಮೇಲೆ ಬಿಟ್ಟುಬಿಡುವಾ ಪಕ್ಷಿ, ಕೇವಲ ದೂಳಿನಿಂದ ಅವಕ್ಕೆ ಕಾವು ಕೊಡುತ್ತದೆ, ಅಲ್ಲವೆ?
15 : ಆ ಮೊಟ್ಟೆಗಳನು ಜನರು ಕಾಲಿನಿಂದ ಮೆಟ್ಟಿಯಾರು ಕಾಡುಮೃಗ ಅವುಗಳನು ತುಳಿದೀತು ಎಂಬ ಯೋಚನೆ ಅದನು ಕಾಡದು.
16 : ತನ್ನ ಮರಿ ತನ್ನದೇ ಅಲ್ಲ ಎಂಬಷ್ಟು ಕ್ರೂರತೆ ಅದರದು ತನ್ನ ಹೆರಿಗೆ ನಿಷ್ಫಲವಾಯಿತೆಂಬ ಸಂಕಟ ಅದಕ್ಕಿರದು.
17 : ಅದಕ್ಕೆ ನಾನು ಕೊಡಲಿಲ್ಲ ಜ್ಞಾನವನು ದಯಪಾಲಿಸಲಿಲ್ಲ ಗ್ರಹಿಕೆಯನು.
18 : ಆದರೂ ಅದು ರೆಕ್ಕೆ ಬಡಿದು ದೌಡಾಯಿಸುವಾಗಲಂತು ಕುದುರೆ ರಾಹುತರನೂ ಅಣಕಿಸಬಲ್ಲದು.
19 : ಕುದುರೆಗೆ ಶಕ್ತಿಕೊಟ್ಟವನು ನೀನೋ? ಅದರ ಕೊರಳಿಗೆ ಜುಟ್ಟುಗುಡುಗನ್ನು ಕಟ್ಟಿದವನು ನೀನೋ?
20 : ಮಿಡತೆಯ ಹಾಗೆ ಅದು ಜಿಗಿಯಮಾಡಿದವನು ನೀನೋ? ಅದರ ಕೆನೆತದ ಪ್ರಭಾವ ಭೀತಿಯನು ತರುತ್ತದೆ, ನೋಡು!
21 : ನೆಲವನು ಕೆರೆಯುತ್ತಾ, ತನ್ನ ಶಕ್ತಿಗಾಗಿ ಹಿಗ್ಗುತ್ತಾ ಸನ್ನದ್ಧ ಸೈನ್ಯವನು ಇದಿರಿಸುತ್ತಾ ನುಗ್ಗುತ್ತದೆ ನೋಡು!
22 : ಖಡ್ಗಕ್ಕೆ ಹಿಂದೆಗೆಯದೆ, ಕಳವಳಗೊಳ್ಳದೆ ಭಯಭೀತಿಗೆ ಹೆದರದೆ ನಗುತ್ತದೆ!
23 : ಅದರ ಮೇಲಿನ ಬತ್ತಳಿಕೆ ಜಣಜಣಿಸುತ್ತದೆ ಈಟಿ ಭರ್ಜಿಗಳು ಥಳಥಳಿಸುತ್ತವೆ.
24 : ಕಹಳೆಯ ನಾದಕೇಳಿ ನಿಲ್ಲದದು ಸುಮ್ಮನೆ ಉದ್ರೇಕಗೊಂಡು ದೌಡಾಯಿಸುತ್ತದೆ ವೇಗವನೇ ನುಂಗುವಂತೆ.
25 : ರಣಕಹಳೆ ಮೊಳಗಿದಾಗಲೆ ಕೆನೆಯುತ್ತದೆ ಕಾಳಗ, ಆರ್ಭಟ, ದಳಪತಿಗಳ ಗರ್ಜನೆ ಇವುಗಳನ್ನೆಲ್ಲಾ ದೂರದಿಂದಲೆ ಮೂಸುತ್ತದೆ.
26 : ಗಿಡುಗವು ರೆಕ್ಕೆ ಹರಡುವುದನು ದಕ್ಷಿಣದಿಕ್ಕಿಗೆ ಹಾರಿ ವಸಲೆ ಹೋಗುವುದನು ನಿನ್ನಿಂದ ಕಲಿತದೆಂತು?
27 : ರಣಹದ್ದಿಗೆ ನಿನ್ನಪ್ಪಣೆ ಬೇಕೋ ಮೇಲೆ ಹಾರುವುದಕೆ? ನಿನ್ನ ಸಮ್ಮತಿ ಬೇಕೋ ಉನ್ನತ ಸ್ಥಳದಲ್ಲಿ ಗೂಡು ಕಟ್ಟುವುದಕೆ?
28 : ಅದು ವಾಸಮಾಡುತ್ತದೆ ಕಲ್ಲು ಬಂಡೆಮೇಲೆ ಅದು ತಂಗುತ್ತದೆ ಶಿಲಾಶಿಖರದ ದುರ್ಗ ದೊಳಗೆ.
29 : ಬೇಟೆಯನು ನೋಡುತ್ತದೆ ಅಲ್ಲಿಂದಲೆ ಅದನ್ನು ಕಂಡು ಹಿಡಿಯುತ್ತದೆ ದೂರದಿಂದಲೆ.
30 : ಹಣ ಬಿದ್ದಲ್ಲಿ ರಣಹದ್ದು ಅದರ ಮರಿಗಳೂ ಹೀರುತ್ತವೆ ರಕ್ತವನು.”

Holydivine