Job - Chapter 14
Holy Bible

1 : “ಹೆಣ್ಣಿನಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನು, ದುಃಖಭರಿತನು.
2 : ಅರಳಿ ಬಾಡುವನು ಹೂವಿನಂತೆ ನಿಲ್ಲದೆ ಓಡುವನು ನೆರಳಿನಂತೆ.
3 : ಇಂಥವನಾದ ನನ್ನ ಮೇಲೆ ಕಣ್ಣಿಟ್ಟು ಬರಮಾಡುವೆಯಾ ನನ್ನನು ನಿನ್ನ ನ್ಯಾಯಸ್ಥಾನಕ್ಕೆ?
4 : ಅಶುದ್ಧತೆಯಿಂದ ಬಂದೀತೆ ಶುದ್ಧತೆ? ಇಲ್ಲ, ಎಂದಿಗೂ ಅದು ಅಸಾಧ್ಯವೆ.
5 : ಮಾನವನ ದಿನಗಳೆಷ್ಟೆಂದು ತೀರ್ಮಾನವಾಗಿದೆ ಅವನ ತಿಂಗಳುಗಳ ಲೆಕ್ಕ ನಿನಗೆ ಗೊತ್ತಿದೆ ನೀ ನೇಮಿಸಿರುವೆ ಅವನಿಗೆ ದಾಟಲಾಗದ ಗಡಿಗಳನೆ.
6 : ಇಂತಿರಲು ತಿರುಗಿಸಿಬಿಡು ಅವನಿಂದ ನಿನ್ನ ದೃಷ್ಟಿಯನು ಸವಿಯಲು ಬಿಡು ಕೂಲಿಯಾಳಂತೆ ದಿನಾಂತ್ಯದ ನಲಿವನು.
7 : ಮತ್ತೆ ಮೊಳೆಯುವೆನೆಂಬ, ಮರಳಿ ಚಿಗುರುವೆನೆಂಬ ನಂಬಿಕೆಯಿಂದಿದೆ ಅಲ್ಲವೆ ಕಡಿದ ವಟವೃಕ್ಷ?
8 : ಮರದ ಬೇರು ನೆಲದಲ್ಲಿ ಮುದಿಯಾಗಿದ್ದರೂ ಅದರ ಬುಡ ಮಣ್ಣಿನಲ್ಲಿ ಸತ್ತಿದ್ದರೂ
9 : ಮಳೆ ವಾಸನೆಯಿಂದಲೆ ಅದು ಮೊಳೆಯುವುದು ಗಿಡದ ಹಾಗೆ ಅದು ಕವಲೊಡೆದುಕೊಳ್ಳುವುದು.
10 : ಮನುಜನೋ ಬಿದ್ದಿರುತ್ತಾನೆ ಸತ್ತು ಕೊನೆಯುಸಿರೆಳೆದಾಗ ಎಲ್ಲವು ಮುಗಿಯಿತು.
11 : ಸರೋವರದ ನೀರು ಆರಿಹೋಗುವಂತೆ ನದಿಗಳು ಬತ್ತಿಹೋಗುವಂತೆ
12 : ಸತ್ತು ಮಲಗಿದ ಮನುಜ ಏಳುವಂತಿಲ್ಲ. ಅಳಿದು ಹೋದರೂ ಆಕಾಶ ಮಂಡಲ ಅವನು ಎಚ್ಚರಗೊಳ್ಳುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ.
13 : ಆಹಾ ! ಬಚ್ಚಿಡಲಾರೆಯಾ ನನ್ನನ್ನು ಪಾತಾಳದೊಳಗೆ? ಅಲ್ಲಿ ಮರೆಮಾಚಿಡಲಾರೆಯಾ ನಿನ್ನ ಕೋಪ ಇಳಿಯುವುದಕೆ?
14 : ಸತ್ತಮೇಲೆ ಮನುಜ ಮರಳಿ ಬದುಕುತ್ತಾನೆಯೇ? ಬದುಕುವುದಾದರೆ ಮುಕ್ತಿ ಹೊಂದುವವರೆಗೆ ನನ್ನ ವಾಯಿದೆಯ ದಿನವೆಲ್ಲ ನಾ ಕಾದಿರುವೆ.
15 : ಆಗ ನೀನು ಕರೆದರೆ ನಾನು ಉತ್ತರ ಕೊಡುವೆ ನಿನ್ನ ಈ ಸೃಷ್ಟಿಯ ಮೇಲೆ ಹುಟ್ಟೀತು ನಿನಗೆ ಮಮತೆ !
16 : ಆಗ ನನ್ನ ಹೆಜ್ಜೆಹೆಜ್ಜೆಗಳನು ನೀ ಲೆಕ್ಕಿಸುವೆ ನನ್ನ ಪಾಪ ಹುಡುಕಲು ನೀ ಕಾವಲು ಇಡಲಾರೆ.
17 : ಆಗ ನನ್ನ ದ್ರೋಹವನ್ನೆಲ್ಲ ಮೂಟೆಕಟ್ಟಿ ಮೂಲೆಗೆ ಹಾಕುವೆ ನನ್ನ ದೋಷವನ್ನು ಮುಚ್ಚಿ, ನೀ ಮರೆಮಾಡುವೆ.
18 : ಆದರೆ ಬೆಟ್ಟ ಕದಡಿ ಕರಗುವಂತೆ ಬಂಡೆ ತನ್ನ ಸ್ಥಳದಿಂದ ಜಾರುವಂತೆ
19 : ಕಲ್ಲುಗಳನ್ನು ನೀರು ಸವೆಸುವಂತೆ ನೆಲದ ಮಣ್ಣನು ಪ್ರವಾಹ ಕೊಚ್ಚುವಂತೆ ಭಂಗವಾಗುವುದು ಮಾನವನ ನಿರೀಕ್ಷೆ.
20 : ನೀನು ಅವನನ್ನು ಶಾಶ್ವತವಾಗಿ ಸೋಲಿಸಿಬಿಡುವೆ ಅವನು ಗತಿಸಿ ಹೋಗುವನು. ಅವನನ್ನು ವಿಕಾರಗೊಳಿಸಿ ತೊಲಗಿಸಿಬಿಡುವೆ.
21 : ಅವನ ಮಕ್ಕಳು ಪ್ರಗತಿ ಹೊಂದಿದರೂ ಅವನಿಗೆ ತಿಳಿಯದು ಅವರು ಅಧೋಗತಿಗೆ ಇಳಿದರೂ ಅವನಿಗೆ ಗೋಚರವಾಗದು.
22 : ಅವನು ಅನುಭವಿಸುವುದು ತನ್ನ ದೇಹದ ನೋವನ್ನೇ ಅವನು ಅತ್ತು ಪ್ರಲಾಪಿಸುವುದು ತನಗಾಗಿಯೇ.”

Holydivine