Job - Chapter 12
Holy Bible

1 : ಅದಕ್ಕೆ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:
2 : “ಹೌದ್ಹೌದು ನೀವೇ ಮಹಾಜನ, ನಿಮ್ಮೊಡನೆಯೇ ಸಾಯುವುದು ಸುಜ್ಞಾನ!
3 : ನಿಮ್ಮ ಹಾಗೆ ನಾನೂ ಬಲ್ಲವ ನಿಮಗಿಂತ ನಾನೇನೂ ಕೀಳಲ್ಲ. ಇದು ಯಾರಿಗೆ ತಾನೆ ತಿಳಿದಿಲ್ಲ?
4 : ನೀತಿವಂತನೂ ನಿರ್ದೋಷಿಯೂ ಆದ ನಾನು ದೇವರನ್ನು ಪ್ರಾರ್ಥಿಸಿ ಪ್ರತ್ಯುತ್ತರಕ್ಕಾಗಿ ಕಾದಿರಲು ಗೆಳೆಯರ ಗೇಲಿಪರಿಹಾಸ್ಯಕ್ಕೆ ಗುರಿಯಾದೆನು.
5 : ದಲಿತರನ್ನು ಕಂಡರೆ ಸುಖಜೀವಿಗಳಿಗೆ ತಾತ್ಸಾರ ಜಾರಿ ಬೀಳಲಿರುವವರಿಗೆ ಕಾದಿದೆ ತಿರಸ್ಕಾರ.
6 : ಸಮೃದ್ಧಿಯಾಗಿವೆ ಕಳ್ಳಕಾಕರ ಗುಡಾರಗಳು ಸುರಕ್ಷಿತವಾಗಿರುವರು ದೇವರನ್ನೆ ಕೆರಳಿಸುವವರು ಅಂಗೈಯಲ್ಲಿರುವುದೇ ಅವರಿಗೆ ದೇವರು!
7 : ಮೃಗಗಳನ್ನು ಬೇಕಾದರೆ ಕೇಳು, ಅವು ಕಲಿಸುವುವು ಆಕಾಶದ ಪಕ್ಷಿಗಳನ್ನು ಕೇಳು, ಅವು ತಿಳಿಸುವುವು.
8 : ಕ್ರಿಮಿಕೀಟಗಳನ್ನು ಕೇಳು, ಅವು ನಿನಗೆ ಬೋಧಿಸುವುವು ಸಮುದ್ರದ ಮೀನುಗಳು ನಿನಗೆ ಉಪದೇಶ ಮಾಡುವುವು.
9 : ಇವುಗಳೆಲ್ಲವನ್ನು ಮಾಡಿದ್ದು ಸರ್ವೇಶ್ವರನ ಕೈಯೇ ಇದು ತಿಳಿಯದಿರುವುದು ಯಾರಿಗೆ ತಾನೆ?
10 : ಆತನ ಕೈಯಲ್ಲಿದೆ ಎಲ್ಲ ಜೀವಿಗಳ ಪ್ರಾಣ ಪ್ರತಿಯೊಬ್ಬ ನರಮಾನವನ ಶ್ವಾಸ.
11 : ನಾಲಿಗೆ ರುಚಿನೋಡುವಂತೆಯೆ ಕಿವಿ ನುಡಿಯನು ವಿವೇಚಿಸುತ್ತದೆ.
12 : ಜ್ಞಾನವಿದೆ ವಯೋವೃದ್ಧರಲ್ಲಿ ವಿವೇಕವಿದೆ ದೀರ್ಘಾಯುಷ್ಯರಲ್ಲಿ.
13 : ಆದರೆ ದೇವರಲ್ಲಿದೆ ಜ್ಞಾನದೊಡನೆ ಶಕ್ತಿಕೂಡ ಆತನಲ್ಲಿದೆ ವಿವೇಕ ಮತ್ತು ಸನ್ಮತಿ ಸಹ.
14 : ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.
15 : ಆತ ನೀರನ್ನು ತಡೆದರೆ, ಬತ್ತಿಹೋಗುತ್ತದೆ ಬೆಳೆಯೆಲ್ಲ ತೂಬೆತ್ತಿದರೆ ಮುಳುಗಿಹೋಗುತ್ತದೆ ಇಳೆಯೆಲ್ಲ.
16 : ಸಾಮಥ್ರ್ಯ ಹಾಗು ವಿಜಯ ಆತನ ಲಕ್ಷಣ ವಂಚಕ ಹಾಗು ವಂಚಿತ ಆತನಿಗೆ ಅಧೀನ.
17 : ಮಂತ್ರಿಗಳನು ಬರಿಬತ್ತಲೆಯಾಗಿ ನಡೆಸುತ್ತಾನೆ ನ್ಯಾಯಾಧಿಪತಿಗಳನು ಮೂರ್ಖರನ್ನಾಗಿಸುತ್ತಾನೆ.
18 : ಅರಸರು ಹಾಕಿದ ಬಂಧನವನ್ನು ಬಿಚ್ಚಿ ಬಿಗಿಯುತ್ತಾನೆ ಅವರ ಸೊಂಟಕ್ಕೆ ಚಿಂದಿ.
19 : ಯಾಜಕರನ್ನು ಬರಿಬತ್ತಲೆಯಾಗಿ ನಡೆಸುತ್ತಾನೆ ಅಚಲ ಶಕ್ತಿಶಾಲಿಗಳನ್ನು ಕೆಡವಿಬಿಡುತ್ತಾನೆ.
20 : ಮೂಕರನ್ನಾಗಿಸುತ್ತಾನೆ ವಾಕ್ ಚತುರರನ್ನು ಹಿರಿಯರ ಧೀಮಂತಿಕೆಯನ್ನು ತೆಗೆದು ಬಿಡುತ್ತಾನೆ.
21 : ಅಧಿಪತಿಗಳಿಗೆ ಉಂಟುಮಾಡುತ್ತಾನೆ ಅವಮಾನವನ್ನು ಬಿಚ್ಚಿಬಿಡುತ್ತಾನೆ ಬಲಾಢ್ಯರ ನಡುಕಟ್ಟನ್ನು.
22 : ಇರುಳಿನ ಆಳದಲ್ಲಿರುವವುಗಳನ್ನು ಬೆಳಗಿಸುತ್ತಾನೆ ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾನೆ.
23 : ರಾಷ್ಟ್ರಗಳನ್ನು ಬೆಳೆಸುತ್ತಾನೆ, ಅಳಿಸುತ್ತಾನೆ ಅವುಗಳನ್ನು ಹರಡುತ್ತಾನೆ, ಹೊರದೂಡುತ್ತಾನೆ.
24 : ಭೂಪತಿಗಳನ್ನು ಬುದ್ಧಿಹೀನರನ್ನಾಗಿಸುತ್ತಾನೆ ದಾರಿಕಾಣದ ಅರಣ್ಯದಲಿ ಅಲೆದಾಡಿಸುತ್ತಾನೆ.
25 : ಅಂಥವರು ಕತ್ತಲೊಳು ತಡಕಾಡುವರು ಬೆಳಕಿಲ್ಲದೆ ತಡವರಿಸುವರು ಕುಡಿದು ಅಮಲೇರಿದವರಂತೆ.”

Holydivine