Job - Chapter 38
Holy Bible

1 : ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು:
2 : “ಅಜ್ಞಾನದ ಮಾತುಗಳನ್ನಾಡಿ ಸತ್ಯಾಲೋಚನೆಯನು ಮಂಕುಮಾಡುವ ನೀನಾರು?
3 : ಶೂರನಂತೆ ನಡುಕಟ್ಟಿ ನಿಲ್ಲು ನಾನು ಹಾಕುವ ಪ್ರಶ್ನೆಗೆ ಉತ್ತರ ನೀಡು:
4 : ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನೆಲ್ಲಿದ್ದೆ? ಉತ್ತರ ಕೊಡು, ನೀನು ಅಷ್ಟು ಜ್ಞಾನಿಯಾಗಿದ್ದರೆ.
5 : ಅದರಳತೆಯನ್ನು ಗೊತ್ತುಮಾಡಿದವನಾರೆಂದು ನಿನಗೆ ತಿಳಿದಿದೆಯೆ? ಅದರ ಮೇಲೆ ನೂಲು ಹಿಡಿದವನಾರೆಂದು ನಿನಗೆ ಗೊತ್ತಿದೆಯೆ?
6 : ಉದಯ ನಕ್ಷತ್ರಗಳ ಜಯಕಾರದ ನಡುವೆ ದೇವದೂತರೆಲ್ಲರ ಆನಂದಘೋಷಣೆಯ ಮಧ್ಯೆ.
7 : ಭೂಮಿಗೆ ಮೂಲೆಗಲ್ಲನು ಹಾಕಿದವನಾರು? ಅದರ ಅಡಿಗಲ್ಲು ಯಾವುದರ ಮೇಲೆ ನಿಂತಿದೆ?”
8 : “ಭೂಗರ್ಭವನ್ನು ಭೇದಿಸಿಕೊಂಡು ಬಂದ ಸಮುದ್ರವನು ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು?
9 : ಅದಕ್ಕೆ ಮೋಡಗಳನು ತೊಡಿಸಿ, ಕಾರ್ಗತ್ತಲನು ಉಡಿಸಿದವನು ಯಾರು?
10 : ಅದಕ್ಕೆ ಸರಹದ್ದನು ನಿಯಮಿಸಿ ಕದಗಳನೂ ಅಗುಳಿಗಳನೂ ಇಟ್ಟವನಾರು?
11 : ‘ಇಲ್ಲಿಯತನಕ ಬರಬಹುದು, ಇದನು ಮೀರಿ ಬರಕೂಡದು’ ‘ಮೊರೆವ ನಿನ್ನ ತೆರೆಗೆ ಇಲ್ಲಿಗೇ ತಡೆ’ ಎಂದು ವಿಧಿಸಿದವನು ನಾನು.
12 : ನಿನ್ನ ಜೀವಮಾನದಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯಾ?
13 : ‘ಧರಣಿಯ ಅಂಚುಗಳನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು’ ಎಂದು ಅದಕ್ಕೆ ಅಪ್ಪಣೆಮಾಡಿದೆಯಾ?
14 : ಮುದ್ರೆಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪತಾಳುತ್ತದೆ ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ.
15 : ದುರುಳರಿಂದ ಬೆಳಕನು ಹಿಂತೆಗೆದುಕೊಳ್ಳಲಾಗುವುದು ಅವರು ಎತ್ತಿದ ಕೈಯನು ಮುರಿಯಲಾಗುವುದು.
16 : ನೀನೆಂದಾದರು ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
17 : ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ?
18 : ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ!
19 : ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
20 : ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ?
21 : ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ದಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು!
22 : ಹಿಮದ ಭಂಡಾರವನು ಹೊಕ್ಕಿರುವೆಯಾ? ಕಲ್ಮಳೆಯ ಬೊಕ್ಕಸವನು ನೋಡಿರುವೆಯಾ?
23 : ಇಕ್ಕಟ್ಟಿನ ಕಾಲಕ್ಕಾಗಿ ಅವುಗಳನು ನಾನು ಇಟ್ಟಿರುವೆನು ಯುದ್ಧಕದನಗಳ ದಿನಗಳಿಗಾಗಿ ಅವುಗಳನು ಕಾದಿಟ್ಟಿರುವೆನು.
24 : ಬೆಳಕು ಏರಿಬರುವ ಜಾಗವೆಲ್ಲಿ ಬಿಸಿಗಾಳಿ ಬೀಸಿಬರುವ ಮಾರ್ಗವೆಲ್ಲಿ?
25 : ಮನುಜರಿಲ್ಲದ ಕಾಡಿನಲ್ಲೂ ನಿರ್ಜನ ಪ್ರದೇಶದಲ್ಲೂ ಮಳೆಯನು ಹೊಯ್ದು,
26 : ಹಾಳುಬೀಳಾದ ಭೂಮಿಯನು ತೋಯಿಸಲೆಂದು ಪಚ್ಚೆಪಸಿರಾದ ಹುಲ್ಲನು ಬೆಳೆಯಿಸಲೆಂದು,
27 : ವೃಷ್ಟಿಯ ಪ್ರವಾಹಕ್ಕೆ ಕಾಲುವೆಯನು ಕಡಿದವರಾರು? ಗರ್ಜಿಸುವ ಸಿಡಿಲಿಗೆ ದಾರಿಯನು ಮಾಡಿದವರಾರು?
28 : ಮಳೆಗೆ ತಂದೆಯೊಬ್ಬನಿದ್ದಾನೆಯೆ? ಮಂಜಿನ ಹನಿಗೆ ಹೆತ್ತವಳಿದ್ದಾಳೆಯೆ?
29 : ಹಿಮಗಡ್ಡೆ ಹೊರಡುವುದು ಯಾರ ಗರ್ಭದಿಂದ? ಆಕಾಶದ ಇಬ್ಬನಿ ಜನಿಸುವುದು ಯಾವ ತಾಯಿಂದ?
30 : ಕಲ್ಲಿನಂತೆ ನೀರು ಗಟ್ಟಿಯಾಗುತ್ತದೆ ಸಾಗರದ ಮೇಲ್ಭಾಗ ಹೆಪ್ಪುಗಟ್ಟುತ್ತದೆ.
31 : ಕೃತ್ತಿಕೆಯ ಸರಪಣಿಯನು ನೀನು ಬಿಗಿಯ ಬಲ್ಲೆಯಾ? ಮೃಗಶಿರದ ಸಂಕೋಲೆಯನು ಬಿಚ್ಚಬಲ್ಲೆಯಾ?
32 : ಆಯಾಯ ಕಾಲಕ್ಕೆ ನಕ್ಷತ್ರರಾಶಿಗಳನು ಬರಮಾಡುವೆಯಾ? ಸಪ್ತರ್ಷಿತಾರೆಗಳನು ಪರಿವಾರದೊಡನೆ ನಡೆಸುವೆಯಾ?
33 : ಖಗೋಳದ ನಿಯಮಗಳನ್ನು ತಿಳಿದಿರುವೆಯಾ? ಅದರ ಆಳ್ವಿಕೆಯನು ಇಳೆಯೊಳು ಸ್ಥಾಪಿಸಿರುವೆಯಾ?
34 : ನಿನ್ನಾಜ್ಞೆ ಮೋಡ ಮುಟ್ಟಿದ ಮಾತ್ರಕೆ ಹೇರಳವಾದ ನೀರು ನಿನ್ನನು ಆವರಿಸುವುದೊ?
35 : ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು ‘ಇದೋ ಬಂದಿದ್ದೇವೆ’ ಎಂದು ನಿನಗೆ ಹೇಳುತ್ತವೆಯೊ?
36 : ಜ್ಞಾನವನು ದಯಪಾಲಿಸಿದವನಾರು ಇಬಿಸ್ ಪಕ್ಷಿಗೆ? ವಿವೇಕವನು ಅನುಗ್ರಹಿಸಿದವನಾರು ಕೋಳಿಹುಂಜಕ್ಕೆ
37 : ಯಾರಿಗಿದೆ ಮೋಡಗಳನು ಲೆಕ್ಕಿಸುವ ಶಕ್ತಿ? ಆಕಾಶದಲ್ಲಿನ ಬುದ್ದಲಿಗಳನು ಮೊಗಚಿಹಾಕುವ ಬುದ್ದಿಶಕ್ತಿ?
38 : ದೂಳುಮಣ್ಣನು ಒತ್ತಟ್ಟಿಗೆ ಸೇರಿಸಬಲ್ಲವನಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಬಲ್ಲವನಾರು?
39 : ಗುಹೆಯಲ್ಲಿ ಮಲಗಿರುವ ಸಿಂಹಕೆ ಬೇಟೆಯಾಡಿ ಊಟ ಒದಗಿಸಬಲ್ಲೆಯಾ ನೀನು?
40 : ಪೊದೆಯಲ್ಲಿ ಹೊಂಚುಕೂತಿರುವ ಯುವಸಿಂಹಕೆ ಹಸಿವನು ನೀಗಿಸಬಲ್ಲೆಯಾ ನೀನು?
41 : ಆಹಾರವನು ಒದಗಿಸುವವರಾರು ತಾಯಿ ಕಾಗೆಗೆ ಅದರ ಹಸಿದ ಮರಿಗಳು ಕೊಕ್ಕೆತ್ತಿ ದೇವರಿಗೆ ಮೊರೆಯಿಡುವಾಗ?

Holydivine