Job - Chapter 23
Holy Bible

1 : ಆಗ ಯೋಬನು
2 : “ನನ್ನ ದುಃಖಪ್ರಲಾಪ ಈಗಲೂ ಕಟುವಾಗಿದೆ ನಾನು ನಿಟ್ಟುಸಿರಿಡುವಾಗಲೂ ದೇವರ ಹಸ್ತ ಭಾರವಾಗಿದೆ.
3 : ಆಹಾ! ಆತನ ದರ್ಶನ ನನಗೆ ದೊರಕುವುದೆಲ್ಲಿ? ನಾನು ಸೇರಬಹುದಿತ್ತಲ್ಲಾ ಆತನ ಸನ್ನಿಧಿಯಲ್ಲಿ !
4 : ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸಬಹುದಿತ್ತು ಬಾಯ್ತುಂಬಾ ಆತನೊಡನೆ ವಾದಿಸಬಹುದಿತ್ತು.
5 : ಆತನ ಹೇಳಿಕೆಗಳನ್ನು ವಿವೇಚಿಸಬಹುದಿತ್ತು ಆತನ ಪ್ರತ್ಯುತ್ತರಗಳನ್ನು ತಿಳಿದುಕೊಳ್ಳಬಹುದಾಗಿತ್ತು.
6 : ಆತ ನನ್ನೊಡನೆ ವ್ಯಾಜ್ಯವಾಡುವನೋ ಶಕ್ತಿಸಾಮಥ್ರ್ಯದಿಂದ? ಇಲ್ಲ, ಆಲಿಸುವನು ನನ್ನ ವಿಜ್ಞಾಪನೆಯನು ಗಮನದಿಂದ.
7 : ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ. ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ ನನಗೆ ಲಭ್ಯ.
8 : ಮುಂದೆ ಹೋದರೂ ದೇವರು ನನಗೆ ಕಾಣಸಿಗನಯ್ಯಾ ಹಿಂದೆ ಬಂದರೂ ಆತ ನನಗೆ ಕಾಣಸಿಗುವುದಿಲ್ಲವಯ್ಯಾ!
9 : ಎಡಗಡೆ ಹುಡುಕಿದರೂ ನೋಡಲಾಗದಯ್ಯಾ ಬಲಗಡೆ ತಿರುಗಿದರೂ ಗೋಚರವಾಗದಯ್ಯಾ!
10 : ಆತನಾದರೊ ಬಲ್ಲ ನಾನು ಹಿಡಿವ ದಾರಿಯನು ಆತ ನನ್ನನು ಶೋಧಿಸಿದರೆ ಚೊಕ್ಕ ಬಂಗಾರವಾಗುವೆನು.
11 : ಆತನ ಹೆಜ್ಜೆಯ ಜಾಡಿನಲ್ಲೇ ನಾನು ಕಾಲಿಟ್ಟೆ ಓರೆಯಾಗದೆ ಆತನ ದಾರಿಯನ್ನೇ ಹಿಡಿದೆ.
12 : ನಾ ಬಿಟ್ಟಗಲಲಿಲ್ಲ ಆತನ ತುಟಿಯಿಂದ ಹೊರಟ ಆಜ್ಞೆಗಳನು ನನ್ನೆದೆಯಲಿ ನಿಧಿಯಾಗಿಟ್ಟೆ ಆತನ ಬಾಯಿಂದ ಬಂದ ಮಾತುಗಳನ್ನು.
13 : ಆತನದು ಏಕಚಿತ್ತ; ಅದನು ಬದಲಾಯಿಸಲಸಾಧ್ಯ ಆತ ಬಯಸಿದ್ದೆ ಸಿದ್ದಿಯಾದಕಾರ್ಯ.
14 : ನನಗೆ ವಿಧಿತವಾದುವುಗಳನೆ ಕಾರ್ಯ ಗೊಳಿಸುತ್ತಾನೆ ಈ ಪರಿಯ ಹಲವಾರು ಯೋಜನೆಗಳು ಆತನಲ್ಲಿವೆ.
15 : ಈ ಕಾರಣ ಆತನ ಸನ್ನಿಧಿಯಲಿ ನಾನು ಅಂಜುಬುರುಕ ಇದನ್ನು ನೆನೆದು ಮನದಲಿ ನಾನು ಭಯಪೀಡಿತ.
16 : ದೇವರೇ ನನ್ನ ಶಕ್ತಿಯನು ಕುಂದಿಸಿಹನು ಸರ್ವಶಕ್ತ ನನ್ನನು ಆತಂಕಗೊಳಿಸಿಹನು.
17 : ನನ್ನ ವಿನಾಶಕ್ಕೆ ಈ ಅಂಧಕಾರವು ನಿಮಿತ್ತವಲ್ಲ ನನ್ನ ಮುಖಕ್ಕೆ ಕವಿದಿರುವ ಈ ಕಾರ್ಗತ್ತಲು ಕಾರಣವಲ್ಲ.

Holydivine