Job - Chapter 31
Holy Bible

1 : “ಕನ್ನೆಯನು (ಕಾಮದೃಷ್ಟಿಯಿಂದ) ನೋಡೆನೆಂದು ಮಾಡಿಕೊಂಡಿರುವೆ ನನ್ನ ಕಣ್ಣುಗಳೊಡನೆ ಒಪ್ಪಂದವನು.
2 : ಎಂಥ ಪಾಲನ್ನು ವಿಧಿಸಬಲ್ಲನು ದೇವರು ಮೇಲಣಲೋಕದಿಂದ? ಎಂಥ ಬಾಧ್ಯತೆಯನು ನೀಡಬಲ್ಲನು ಸರ್ವಶಕ್ತನು ಮಹೋನ್ನತದಿಂದ?
3 : ದುರ್ಜನರಿಗೆ ವಿಪತ್ತು ಬರಮಾಡುತ್ತಾನಲ್ಲವೆ? ಕೇಡಿಗರಿಗೆ ಉಪದ್ರವ ಕೊಡುತ್ತಾನಲ್ಲವೆ?
4 : ಆತ ನನ್ನ ನಡತೆಯನ್ನೂ ನೋಡುತ್ತಾನೆ; ನನ್ನ ಹೆಜ್ಜೆಗಳನ್ನೂ ಎಣಿಸುತ್ತಾನಲ್ಲವೆ?
5 : ನಾನು ಕಪಟ ಮಾರ್ಗದಲಿ ನಡೆದಿದ್ದರೆ ಮೋಸವನ್ನು ಹಿಂಬಾಲಿಸಿ ಓಡಿದ್ದರೆ.
6 : ತೂಗಿನೋಡಲಿ ನನ್ನನು ನ್ಯಾಯದ ತಕ್ಕಡಿಯಲಿ ಹೀಗೆ ನನ್ನ ಸತ್ಯತೆಯನು ದೇವರು ತಿಳಿದುಕೊಳ್ಳಲಿ.
7 : ದಾರಿತಪ್ಪಿ ನಾನು ನಡೆದಿದ್ದರೆ ನನ್ನ ಹೃದಯ, ಕಣ್ಗಳನ್ನು ಹಿಂಬಾಲಿಸಿದ್ದರೆ ಕಲ್ಮಷ ನನ್ನ ಕೈಗೆ ಅಂಟಿಕೊಂಡಿದ್ದರೆ,
8 : ನಾನು ಬಿತ್ತಿದ್ದನ್ನು ಮತ್ತೊಬ್ಬ ಉಣ್ಣಲಿ ನನ್ನ ಬೆಳೆಯು ಬುಡಮೇಲಾಗಲಿ.
9 : ನನ್ನ ಹೃದಯ ಪರಸ್ತ್ರೀಗೆ ಮಾರು ಹೋಗಿದ್ದರೆ ನೆರೆಯವಳ ಬಾಗಿಲ ಬಳಿ ನಾನು ಹೊಂಚು ಹಾಕಿದ್ದರೆ,
10 : ನನ್ನ ಸತಿ ಮತ್ತೊಬ್ಬನಿಗೆ ಧಾನ್ಯಬೀಸುವ ದಾಸಿಯಾಗಲಿ ಅಂಥ ನನ್ನ ಸತಿಯೊಡನೆ ಇತರರು ಸಂಗಮಿಸಲಿ.
11 : ಏಕೆಂದರೆ ಅಂಥ ನಡತೆ ಕಾಮುಕತನವಾಗುತ್ತಿತ್ತು ನ್ಯಾಯಾಧಿಪತಿಗಳ ದಂಡನೆಗೆ ತಕ್ಕ ಅಪರಾಧವಾಗುತ್ತಿತ್ತು.
12 : ನರಕ ಕೂಪದವರೆಗೆ ಬೆಂಕಿಯಾಗುತ್ತಿತ್ತು ನನ್ನ ಆದಾಯವನ್ನೆಲ್ಲ ನಿರ್ಮೂಲ ಮಾಡುತ್ತಿತ್ತು.
13 : ನನ್ನ ದಾಸದಾಸಿಯರು ನನ್ನ ಮೇಲೆ ತಪ್ಪುಹೊರಿಸಿದ್ದರೆ ನಾನು ಆ ತಪ್ಪನು ಅಸಡ್ಡೆ ಮಾಡಿದವನಾಗಿದ್ದರೆ,
14 : ದೇವರು ನ್ಯಾಯಸ್ಥಾಪನೆಗೆ ನಿಂತಾಗ ನಾನೇನು ಮಾಡುತ್ತಿದ್ದೆ? ಆತ ವಿಚಾರಣೆಗೆ ಬಂದಾಗ ನಾನೇನು ಉತ್ತರ ಕೊಡುತ್ತಿದ್ದೆ?
15 : ತಾಯಗರ್ಭದಲ್ಲಿ ನನ್ನ ನಿರ್ಮಿಸಿದಾತನೆ ಅವರನೂ ನಿರ್ಮಿಸಲಿಲ್ಲವೆ? ತಾಯಗರ್ಭದಲ್ಲಿ ನಮ್ಮನು ರೂಪಿಸಿದಾತ ಅದೇ ದೇವರಲ್ಲವೆ?
16 : ಬಡವರ ಬಯಕೆಗಳನು ನಾನು ಭಂಗಪಡಿಸಿದೆನೋ? ವಿಧವೆಯ ಕಣ್ಣುಗಳನು ನಾನು ಮಂಕಾಗಿಸಿದೆನೋ?
17 : ಅನಾಥರೊಂದಿಗೆ ಅನ್ನವನು ಹಂಚಿಕೊಳ್ಳದೆ ತುತ್ತನ್ನೆಲ್ಲಾ ನಾನೇ ಒಂಟಿಯಾಗಿ ಉಂಡೆನೆ?
18 : ಇಲ್ಲ, ಬಾಲ್ಯದಲ್ಲಿ ಅನಾಥನನು ತಂದೆಯೋಪಾದಿಯಲಿ ಸಾಕಿದೆ ಹುಟ್ಟಿದಂದಿನಿಂದ ಅನಾಥಳಿಗೆ ದಾರಿತೋರಿಸಿದೆ.
19 : ಬಟ್ಟೆಯಿಲ್ಲದ ಬಡವನನು ನೋಡಿದಾಗಲೆಲ್ಲ ಹೊದಿಕೆಯಿಲ್ಲದೆ ನಡುಗುವುದನು ಕಂಡಾಗಲೆಲ್ಲಾ.
20 : ಅವರನು ನಾನು ಬೆಚ್ಚಗಾಗಿಸದೆ ಹೋಗಿದ್ದರೆ ನನ್ನ ಕುರಿ ಉಣ್ಣೆಯಿಂದ, ಅವರು ನನ್ನನು ಹರಸದೇ ಹೋಗಿದ್ದರೆ ತಮ್ಮ ಅಂತರಾಳದಿಂದ,
21 : ‘ನ್ಯಾಯಸ್ಥಾನದಲ್ಲಿ ನನಗೆ ಬೆಂಬಲವಿದೆ’ ಎಂದು ತಬ್ಬಲಿಯರ ಮೇಲೆ ನಾನು ಕೈ ಮಾಡಿದ್ದರೆ.
22 : ನನ್ನ ಹೆಗಲಿನ ಕೀಲು ತಪ್ಪಿಹೋಗಲಿ ನನ್ನ ತೋಳು ಅದರ ಸಂದಿನಿಂದ ಕಳಚಿ ಬೀಳಲಿ.
23 : ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗಿದೆ ಭಯ ಆತನ ಪ್ರಭಾವದ ನಿಮಿತ್ತ ಇಂಥ ಕೃತ್ಯ ನನಗೆ ದುಸ್ಸಾಧ್ಯ.
24 : ಬಂಗಾರದಲಿ ನಾನು ಭರವಸೆಯಿಟ್ಟಿದ್ದರೆ ಅಪರಂಜಿಯನೇ ನಾನು ನೆಚ್ಚಿಕೊಂಡಿದ್ದರೆ,
25 : ನನ್ನ ಆಸ್ತಿ ಅಪಾರವೆಂದು ಕೊಚ್ಚಿಕೊಂಡಿದ್ದರೆ ನಾನೇ ಸಂಪಾದಿಸಿದ ಸಂಪತ್ತೆಂದು ಹೆಚ್ಚಳಪಟ್ಟಿದ್ದರೆ,
26 : ಪ್ರಕಾಶಮಯ ಸೂರ್ಯನನು ನೋಡಿ ಕ್ರಾಂತಿಯುತ ಚಂದ್ರನ ಚಲನೆಯನು ದಿಟ್ಟಿಸಿ,
27 : ನನ್ನ ಹೃದಯ ಅವಕ್ಕೆ ಮಾರುಹೋಗಿದ್ದರೆ ಬಾಯ್ಮೇಲೆ ಕೈಯಿಟ್ಟು ಅವನ್ನು ಆರಾಧಿಸಿದ್ದರೆ,
28 : ಇದು ಕೂಡ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು ಮೇಲಣ ಲೋಕದ ದೇವರಿಗೆ ದ್ರೋಹವೆಸಗಿದಂತಾಗುತ್ತಿತ್ತು.
29 : ನನ್ನ ವ್ಶೆರಿಗೆ ಕೇಡು ಬಂದಾಗ ನಾನು ಹಿಗ್ಗಿದೆನೋ? ಅವನ ವಿನಾಶಕ್ಕಾಗಿ ನಾನು ಸಂತೋಷ ಪಟ್ಟೆನೋ?
30 : ಇಲ್ಲ, ಅವನು ಸಾಯಲಿ ಎಂದು ನನ್ನ ಬಾಯಿ ಶಪಿಸಿಲ್ಲ ಅಂಥ ಪಾಪ ಕಟ್ಟಿಕೊಳ್ಳಲು ನನ್ನ ಮನ ಒಪ್ಪಲಿಲ್ಲ.
31 : ‘ಆತ ಬಡಿಸಿದ ಭೋಜನದಿಂದ ತೃಪ್ತರಾಗದವರು ಎಲ್ಲಾದರೂ ಉಂಟೆ?’ ಎಂದು ನನ್ನ ಗುಡಾರದ ಆಳುಗಳೇ ಹೇಳಿಕೊಳ್ಳುತ್ತಿದ್ದರಲ್ಲವೆ?
32 : ಪರದೇಶೀಯರು ಹೊರಬೀದಿಯಲ್ಲಿ ತಂಗಬೇಕಾಗಿರಲಿಲ್ಲ ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿತ್ತಲ್ಲಾ.
33 : ಜನ ಸಮುದಾಯಕ್ಕೆ ನಾನು ಹೆದರಿದ್ದರೆ ಕುಲೀನರ ತಿರಸ್ಕಾರಕ್ಕೆ ನಾನು ಬೆದರಿದ್ದರೆ,
34 : ಬಾಗಿಲನ್ನೂ ದಾಟದೆ ಒಳಗೇ ನಾನು ಮೌನವಿದ್ದಿದ್ದರೆ ಜನಸಾಮಾನ್ಯರಂತೆ ಪಾಪವನು ಮನದಲೆ ಬಚ್ಚಿಟ್ಟಿದ್ದರೆ,
35 : ನನ್ನ ಕರೆಗೆ ಕಿವಿಗೊಡುವನೊಬ್ಬನು ಈಗಿದ್ದರೆ ಲೇಸಾಗಿರುತ್ತಿತ್ತು (ಇಗೋ ನೋಡಿ, ನನ್ನ ಕೈರುಜು; ನನಗುತ್ತರ ಕೊಡಲಿ ಸರ್ವಶಕ್ತನು;) ಬರೆದುಕೊಡಲಿ ವಿರೋಧಿ ನನ್ನ ಆಪಾದನಾ ಪತ್ರವನು.
36 : ಆ ಲಿಖಿತವನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಿದ್ದೆ ಅದನ್ನು ಪೇಟವಾಗಿ ತಲೆಗೆ ಸುತ್ತಿಕೊಳ್ಳುತ್ತಿದ್ದೆ.
37 : ಅಧಿಪತಿಯಂತೆ ಆತನ ಸಾನಿಧ್ಯವನು ಸೇರುತ್ತಿದ್ದೆ ಒಂದೊಂದು ಹೆಜ್ಜೆಯ ಲೆಕ್ಕವನು ಒಪ್ಪಿಸುತ್ತಿದ್ದೆ.
38 : ನನ್ನ ಭೂಮಿ ನನಗೆ ವಿರುದ್ಧ ಪ್ರತಿಭಟಿಸಿದ್ದರೆ ನೇಗಿಲ ಗೆರೆಗಳೆಲ್ಲ ನನ್ನನು ದೂರಿ ರೋದಿಸಿದ್ದರೆ,
39 : ಕೂಲಿಕೊಡದೆ ಆ ಭೂಮಿಯ ಫಲವನು ನಾನು ಸವಿದಿದ್ದರೆ ಅದರ ದಣಿಗಳ ಪ್ರಾಣಹಾನಿಗೆ ನಾನು ಕಾರಣನಾಗಿದ್ದರೆ,
40 : ಅದು ಬೆಳೆಯಲಿ ಮುಳ್ಳುಗಳನ್ನು ಗೋದಿಗೆ ಬದಲಾಗಿ ಹಣಜಿಹುಲ್ಲನು ಜವೆಗೋದಿಗೆ ಪ್ರತಿಯಾಗಿ.” ಇತಿ, ಯೋಬನ ಮಾತುಗಳು ಮುಗಿದವು.

Holydivine