Job - Chapter 3
Holy Bible

1 : ಕೊನೆಗೆ ಯೋಬನೇ ಬಾಯ್ದೆರೆದು ತನ್ನ ಹುಟ್ಟು ದಿನವನ್ನು ಹೀಗೆಂದು ಶಪಿಸಿದ:
2 : “ಹಾಳಾಗಿ ಹೋಗಲಿ ನಾ ಹುಟ್ಟಿದಾ ದಿನವು
3 : ‘ಗಂಡು ಮಗುವನ್ನು ಗರ್ಭಧರಿಸಿದೆ’ ಎಂದಾ ಇರುಳು !
4 : ಆ ದಿನವು ಕಗ್ಗತ್ತಲಾಗಲಿ ಸೂರ್ಯನ ಬೆಳಕು ಅದರ ಮೇಲೆ ಬೀಳದಿರಲಿ ಉನ್ನತ ದೇವರು ಅದನ್ನು ಲೆಕ್ಕಿಸದಿರಲಿ.
5 : ಕಾರ್ಮೋಡಗಳು ಅದನ್ನು ಕವಿಯಲಿ ಇರುಳೂ ಮರಣದ ನೆರಳೂ ಅದನ್ನು ಆಕ್ರಮಿಸಲಿ ಹಗಲನ್ನೇ ಮುಬ್ಬಾಗಿಸುವ ಮುಸುಕು ಅದನ್ನು ಹೆದರಿಸಲಿ.
6 : ಕಾರ್ಗತ್ತಲು ಆ ರಾತ್ರಿಯನ್ನು ಮುತ್ತಲಿ ಆ ಇರುಳು ತಿಂಗಳ ಲೆಕ್ಕಕೆ ಸೇರದಿರಲಿ ಪಂಚಾಂಗದಲಿ ಅದು ಪರಿಗಣಿತವಾಗದಿರಲಿ.
7 : ಆ ಇರುಳು ಬರಡಾಗಲಿ ಸಂತಸದ ದನಿ ಅದರಲಿ ಕೇಳದಿರಲಿ.
8 : ಮಾಟಮಂತ್ರಗಾರರು ಅದಕ್ಕೆ ಶಾಪ ಹಾಕಲಿ ಘಟಸರ್ಪವೆಬ್ಬಿಸಬಲ್ಲ ಗಾರುಡಿಗರು ಅದನು ಧಿಕ್ಕರಿಸಲಿ!
9 : ಮುಂಜಾನೆಯ ತಾರೆಗಳು ಆ ದಿನದೊಳು ಮಿಣುಕದಿರಲಿ ಇದಿರುನೋಡಿದರೂ ಬೆಳಕನು ಕಾಣದಿರಲಿ ಅರುಣೋದಯ ಕಣ್ದೆರೆವುದನು ಅದು ನೋಡದಿರಲಿ!
10 : ಏಕೆಂದರೆ ಅದು ನನ್ನ ತಾಯಿಯ ಗರ್ಭಧ್ವಾರವನು ನನಗೆ ಮುಚ್ಚಲಿಲ್ಲ ನನ್ನ ಕಣ್ಗಳಿಂದ ದುಃಖದುಗುಡವನು ಮರೆಮಾಡಲಿಲ್ಲ.
11 : ಹುಟ್ಟುವಾಗಲೇ ನಾನೇಕೆ ಸಾಯಲಿಲ್ಲ? ಉದರದಿಂದ ಬಂದೊಡನೆ ನಾನೇಕೆ ಮಡಿಯಲಿಲ್ಲ?
12 : ತಾಯಿಯ ಮಡಿಲು ನನ್ನನು ಹೊತ್ತುದೇಕೆ? ಆ ತಾಯ್ಮೊಲೆಗಳು ನನಗೆ ಕುಡಿಯ ಕೊಟ್ಟುದೇಕೆ?
13 : ಆಗ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ ಕಣ್ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆ.
14 : ಪಾಳು ಪೊಡವಿಯಲ್ಲಿ ನೆಲಮಾಳಿಗೆಗಳನ್ನು ನಿರ್ಮಿಸಿಕೊಂಡಿದ್ದ ರಾಜ-ಮಂತ್ರಿಗಳೊಡನೆ ನಾನಿರುತ್ತಿದ್ದೆ.
15 : ಮನೆಗಳಲ್ಲಿ ತಮಗಾಗಿ ಬೆಳ್ಳಿಬಂಗಾರಗಳನ್ನು ತುಂಬಿಸಿಕೊಂಡಿದ್ದ ಅಧಿಪತಿಗಳೊಡನೆ ನಾನು ಶ್ರಮಿಸುತ್ತಿದ್ದೆ.
16 : ಗರ್ಭಸ್ರಾವವಾಗಿ ಬಿದ್ದು ಹೂಳಿಟ್ಟ ಪಿಂಡದಂತೆ ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಪ್ರಾಯಶಃ ಜನ್ಮವೇ ಇಲ್ಲದವನಾಗಿ ನಾನಿರುತ್ತಿದ್ದೆ.
17 : ದಣಿದವರಿಗೆ ದೊರಕುವುದು ಆ ಕೂಪದಲಿ ವಿಶ್ರಾಂತಿ ಅಣಗುವುದಲ್ಲಿ ದುರುಳರು ಕೊಡುವ ಹಾವಳಿ.
18 : ಸೆರೆಯಾಳುಗಳಿಗೆ ದಣಿಯ ಕರ್ಕಶದನಿ ಕೇಳಿಸದು ಅಲ್ಲಿ ಖೈದಿಗಳು ಸಾಮೂಹಿಕವಾಗಿ ವಿಶ್ರಮಿಸಿಕೊಳ್ಳುವರಲ್ಲಿ.
19 : ಚಿಕ್ಕವರು ದೊಡ್ಡವರು ಎಂಬ ತಾರತಮ್ಯ ಅಲ್ಲಿಲ್ಲ ಗುಲಾಮ ಯಜಮಾನನೆಂಬ ನಿಯಮವೂ ಇಲ್ಲ.
20 : ಕಷ್ಟದಲ್ಲಿರುವವನಿಗೆ ಏತಕ್ಕೆ ಬೆಳಕು? ದುಃಖ ಪೀಡಿತನಿಗೆ ಏತಕ್ಕೆ ಬದುಕು?
21 : ಎಷ್ಟು ಅಗೆದರೂ ದೊರಕದು ಅಂಥವರಿಗೆ ನಿಧಿನಿಕ್ಷೇಪ ಅದಕ್ಕಿಂತ ಮಿಗಿಲಾಗಿ ಬಯಸಿದರೂ ಬಾರದು ಮರಣ.
22 : ಅವರು ಸಮಾಧಿಗೆ ಸೇರುವಾಗ ಆಗುವುದು ಅವರಿಗೆ ಅಮಿತಾನಂದ.
23 : ಬೆಳಕು ಏತಕೆ ದಾರಿ ಮುಚ್ಚಿರುವವನಿಗೆ? ತನ್ನ ಸುತ್ತಲೂ ದೇವರೆ ಬೇಲಿ ಹಾಕಿರುವವನಿಗೆ?
24 : ನಿಟ್ಟುಸಿರೇ ನನ್ನ ಮುಂದಿರುವ ಊಟ ಜಲಧಾರೆಯಂತಿದೆ ನನ್ನ ನರಳಾಟ.
25 : ನನಗೆ ಭಯ ಹುಟ್ಟಿದೊಡನೆ ಆಪತ್ತು ಬಂದೊದಗುತ್ತದೆ ಯಾವುದಕ್ಕೆ ಅಂಜುತ್ತೇನೊ, ಅದೇ ತಪ್ಪದೆ ಸಂಭವಿಸುತ್ತದೆ.
26 : ನನಗಿಲ್ಲ ಶಾಂತಿ, ವಿಶ್ರಾಂತಿ, ಉಪಶಮನ ನನಗಿರುವುದೆಂದರೆ ನಿರಂತರ ಯಾತನ.”

Holydivine