Job - Chapter 22
Holy Bible

1 : ಆಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು.
2 : “ನರಮಾನವನಿಂದ ದೇವರಿಗೇನು ಪ್ರಯೋಜನ? ಬುದ್ಧಿವಂತನಾಗಿ ನಡೆದುಕೊಂಡರೆ ಅದು ಅವನಿಗೇ ಪ್ರಯೋಜನ.
3 : ನೀನು ಸಜ್ಜನನಾಗಿದ್ದರೆ ಅದರಿಂದ ಸರ್ವಶಕ್ತನಿಗೆ ಸುಖವೇ? ನಿನ್ನ ನಿರ್ದೋಷ ನಡತೆಯಿಂದ ಆತನಿಗೆ ಲಾಭವೇ?
4 : ನಿನ್ನ ಭಯಭಕ್ತಿಗಾಗಿ ಆತ ನಿನ್ನನ್ನು ಶಿಕ್ಷಿಸುತ್ತಾನೆಯೇ? ಅದಕ್ಕಾಗಿ ನಿನ್ನನು ನ್ಯಾಯತೀರ್ಪಿಗೆ ಗುರಿಪಡಿಸುತ್ತಾನೆಯೆ?
5 : ಇಲ್ಲ, ಹಾಗೆಮಾಡುವುದು ನಿನ್ನ ಕೆಟ್ಟತನ ಹೆಚ್ಚಿದುದಕ್ಕಾಗಿ. ನಿನ್ನ ಪಾಪಗಳಿಗೆ ಮಿತಿಯಿಲ್ಲದುದಕ್ಕಾಗಿ.
6 : ನೀನು ನಿನ್ನ ಸೋದರನಿಂದ ಬಟ್ಟೆಯನು ಒತ್ತೆಯಾಗಿ ಪಡೆದೆ ಬಟ್ಟೆಕಿತ್ತುಕೊಂಡು ಅವನನ್ನು ಬೆತ್ತಲೆಯಾಗಿಸಿದೆ.
7 : ದಣಿದವನಿಗೆ ನೀ ಕೊಡಲಿಲ್ಲ ಪಾನ ಹಸಿದವನಿಗೆ ಬಡಿಸಲಿಲ್ಲ ಅನ್ನ.
8 : ನಿನ್ನನಿಸಿಕೆಯಂತೆ ಬಲಿಷ್ಠನಿಗೆ ನಾಡಿನೊಡೆತನ ಘನವಂತನಿಗೇ ಅಲ್ಲಿ ಮನೆತನ.
9 : ವಿಧವೆಯರನ್ನು ಬರಿಗೈಯಲ್ಲಿ ಕಳಿಸಿಬಿಟ್ಟೆ ತಬ್ಬಲಿಯ ಕೈಗಳನು ನೀನು ಮುರಿದುಬಿಟ್ಟೆ.
10 : ನಿನ್ನ ಸುತ್ತಲು ಊರುಲುಗಳು ಕಾದಿವೆ ಈ ಕಾರಣ ನಿನ್ನನು ತಲ್ಲಣಗೊಳಿಸಲಿದೆ ಭಯಭ್ರಾಂತಿ ತಟ್ಟನೆ.
11 : ನಿನಗೆ ದಾರಿಕಾಣದಿರಲು ಬೆಳಕೆ ಕತ್ತಲಾಗಿದೆ ನಿನ್ನನು ಮುಳುಗಿಸಲು ಜಲಪ್ರವಾಹವಿದೆ.
12 : ದೇವರು ಉನ್ನತ ಆಕಾಶದಲ್ಲಿ ಇದ್ದಾನಲ್ಲವೇ? ನಕ್ಷತ್ರಗಳನ್ನು ನೋಡು, ಎಷ್ಟು ಗಹನವಾಗಿವೆ!
13 : ಈ ನಿಮಿತ್ತ ನೀನು, ‘ದೇವರಿಗೇನು ಗೊತ್ತು? ನ್ಯಾಯ ತೀರಿಸಬಲ್ಲನೆ ಕಾರ್ಗತ್ತಲು ಅಡ್ಡವಿರಲು?
14 : ಆತ ನೋಡಲಾಗದಂತೆ ದಟ್ಟವಾದ ಮೋಡಗಳ ಪರದೆ ಇದೆ ಆತನ ನಡೆದಾಟವೆಲ್ಲ ಆಕಾಶದ ಮೇಲ್ಗಡೆಯಲ್ಲವೆ?’ ಎಂದೆ.
15 : ನೀನು ಹಿಡಿದಿರುವುದು ಪುರಾತನ ಹಾದಿಯನೇ ದುರ್ಜನರು ನಡೆದುಬಂದ ಆ ಬೀದಿಯನೇ.
16 : ಅವರನ್ನು ಅಕಾಲ ಮರಣ ಅಪಹರಿಸಿತು ಅವರಿಗಿದ್ದ ಅಡಿಪಾಯ ನೀರುಪಾಲಾಯಿತು.
17 : ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರೂ ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’ ಎಂದರು.
18 : ಅಲ್ಲದೆ, ‘ಸರ್ವಶಕ್ತ ನಮಗೇನು ಮಾಡಬಲ್ಲ?’ ಎಂದುಕೊಂಡರು ಅಕಟ, ನನ್ನಿಂದ ದೂರ ಇರಲಿ! ದುರುಳರ ಈ ಮಾತು.
19 : ದುರುಳರ ದುರ್ಗತಿಯನು ನೋಡಿ ಸಜ್ಜನರು ಹಿಗ್ಗುವರು ನಿರ್ದೋಷಿಗಳು ಅವರನು ಈ ಪರಿ ಅಣಕಿಸಿ ಹಾಸ್ಯಮಾಡುವರು:
20 : ‘ನೋಡಿ, ನಮ್ಮ ವೈರಿಗಳು ಹೇಗೆ ಹಾಳಾಗಿ ಹೋದರು! ಅವರು ಬಿಟ್ಟುಹೋದ ಆಸ್ತಿ ಬೆಂಕಿಯಿಂದ ಭಸ್ಮವಾಯಿತು!’
21 : ದೇವರ ಚಿತ್ತಕ್ಕೆ ಮಣಿದು ಸಮಾಧಾನದಿಂದಿರು ಇದರಿಂದ ನಿನಗೆ ಶುಭವಾಗುವುದು.
22 : ಆತನ ಬಾಯಿಂದ ಬುದ್ಧಿ ಕಲಿತುಕೊ ಆತನ ಮಾತನು ಹೃದಯದಲ್ಲಿಟ್ಟುಕೊ
23 : ಸರ್ವಶಕ್ತನ ಕಡೆಗೆ ಹಿಂದಿರುಗಿದೆಯಾದರೆ ನಿನ್ನ ಗುಡಾರಗಳಿಂದ ಅನ್ಯಾಯವನು ತೊರೆದೆಯಾದರೆ, ನೀನು ಉದ್ದಾರವಾಗುವೆ.
24 : ಎಸೆದುಬಿಡು ನಿನ್ನ ಬಂಗಾರವನು ಧೂಳಿಗೆ ಓಫೀರ್ ನಾಡಿನ ಅಪರಂಜಿಯನು ನದಿತೀರದ ಕಲ್ಲುಗಳಿಗೆ.
25 : ಸರ್ವಶಕ್ತನಾದ ಸ್ವಾಮಿಯೇ ನಿನಗೆ ಬಂಗಾರವಾಗಿರಲಿ ಆತನೇ ನಿನಗೆ ಬೆಳ್ಳಿಯ ರಾಶಿಯಾಗಿರಲಿ.
26 : ಆಗ ನೀನು ಸರ್ವಶಕ್ತನಲಿ ಆನಂದಿಸುವೆ ತಲೆಯೆತ್ತಿ ದೇವರಿಗೆ ಅಭಿಮುಖಿಯಾಗುವೆ.
27 : ಆತನನು ಪ್ರಾರ್ಥಿಸುವೆ, ಆತ ಆಲಿಸುವನು ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು.
28 : ನಿನ್ನ ಯೋಜನೆಗಳು ಸಫಲವಾಗುವುವು ನಿನ್ನ ಮಾರ್ಗಗಳು ಪ್ರಜ್ವಲಿಸುವುವು.
29 : ದೇವರು ಕೆಳಕ್ಕೆ ದಬ್ಬುತ್ತಾನೆ ಗರ್ವಿಗಳನು ಉದ್ಧರಿಸುತ್ತಾನೆ ದೀನ ಮನಸ್ಕರನು.
30 : ಆತ ವಿಮೋಚಿಸುತ್ತಾನೆ ನಿರ್ದೋಷಿಗಳನು ನಿನ್ನ ಕೈ ಶುದ್ಧವಿರಲಿ ವಿಮೋಚಿಸುವನು ನಿನ್ನನು.

Holydivine