Job - Chapter 13
Holy Bible

1 : “ಇವೆಲ್ಲವನ್ನು ನನ್ನ ಕಣ್ಣುಗಳು ಕಂಡಿವೆ. ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.
2 : ನೀವು ತಿಳಿದಿರುವುದನ್ನು ನಾನೂ ತಿಳಿದವ ನಿಮಗಿಂತ ನಾನು ಕೀಳೇನೂ ಅಲ್ಲ.
3 : ಸರ್ವಶಕ್ತನೊಡನೆ ಮಾತಾಡಲು ನನಗಿದೆ ಆಸೆ ದೇವರೊಂದಿಗೆ ವಾದಿಸಲು ನನಗಿದೆ ಅಪೇಕ್ಷೆ.
4 : ನೀವು ಸುಳ್ಳಿಗೆ ಸುಣ್ಣ ಬಳಿಯುವವರು ನೀವೆಲ್ಲರು ಏತಕ್ಕೂ ಬಾರದ ವೈದ್ಯರು.
5 : ನೀವು ಸುಮ್ಮನಿದ್ದರೆ ಚೆನ್ನ ಮೌನವೇ ನಿಮಗೆ ಉತ್ತಮ.
6 : ಈಗ ಕೇಳಿ ನನ್ನ ವಾದವನ್ನು ಆಲಿಸಿರೀಗ ನನ್ನ ತರ್ಕವನ್ನು.
7 : ದೇವರ ಪಕ್ಷವಹಿಸಿ ನೀವು ಅನ್ಯಾಯ ನುಡಿಯುವಿರೋ? ಅವರಿಗೋಸ್ಕರ ಕಪಟ ಮಾತಾಡುವಿರೋ?
8 ಅವರಿಗೆ ಮುಖದಾಕ್ಷಿಣ್ಯ ತೋರುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
9 : ದೇವರು ನಿಮ್ಮನ್ನು ಪರಿಶೋಧಿಸಿದರೆ ನಿಮಗೆ ಒಳಿತೆ? ಮನುಷ್ಯರಂತೆ ಆತನನ್ನು ಮೋಸಗೊಳಿಸಲಾದೀತೆ?
10 : ನೀವು ಗುಟ್ಟಾಗಿ ಪಕ್ಷಪಾತಮಾಡಿದರೂ ಆತ ನಿಮ್ಮನ್ನು ಖಂಡಿಸದೆ ಬಿಡನು.
11 : ಆತನ ಪ್ರತಿಭೆ ನಿಮ್ಮನ್ನು ಹೆದರಿಸದೋ? ದೈವಭಯವು ನಿಮ್ಮನ್ನು ಆವರಿಸದೋ?
12 : ನಿಮ್ಮ ಸ್ಮøತಿಗಳು ಬೂದಿಯ ಸಾಮತಿಗಳು ನಿಮ್ಮ ವಾದಗಳು ಮಣ್ಣಿನ ಗೋಡೆಗಳು.
13 : ಸುಮ್ಮನಿರಿ, ನನ್ನನ್ನು ಮಾತಾಡಲು ಬಿಡಿ ನನ್ನ ಮೇಲೆ ಏನು ಬೇಕಾದರೂ ಬರಲಿ.
14 : ಪ್ರಾಣವನ್ನು ನಾನು ಕಚ್ಚಿಕೊಂಡಿದ್ದೇನೆ ಬಾಯಲಿ ಜೀವವನ್ನು ನಾನು ಹಿಡಿದುಕೊಂಡಿದ್ದೇನೆ ಕೈಯಲಿ.
15 : ಇಗೋ, ದೇವರು ಕೊಲ್ಲುವನೆನ್ನನು ಅದಕ್ಕಾಗಿ ನಾನು ಕಾದಿರುವೆನು. ಆದರೂ ನನ್ನ ನಡತೆ ಸರಿಯೆಂಬುದನು ಆತನ ಮುಂದೆಯೆ ರುಜುವಾತುಪಡಿಸುವೆನು.
16 : ಭಕ್ತಿಹೀನನು ಆತನ ಮುಂದೆ ಬರಲಾರ ನಾನು ಉದ್ದಾರವಾಗುವೆನೆಂಬುದಕ್ಕೆ ಇದೇ ಆಧಾರ.
17 : ಕೇಳಿ, ನನ್ನ ಮಾತನ್ನು ಲಕ್ಷ್ಯವಿಟ್ಟು ನನ್ನ ಅರಿಕೆಯನ್ನು ಕಿವಿಗೊಟ್ಟು.
18 : ಇಗೋ ನನ್ನ ಮೊಕದ್ದಮೆಯನ್ನು ಸಿದ್ಧಗೊಳಿಸಲಾಗಿದೆ ನಾನು ನಿರ್ದೋಷಿಯೆಂಬ ನಿರ್ಣಯ ನನಗೆ ಗೊತ್ತೇ ಇದೆ.
19 : ದೇವಾ, ನನ್ನ ಮೇಲೆ ಆಪಾದನೆ ಹೊರಿಸಲು ಬರುವೆಯಾ? ಹಾಗಾದರೆ ಮೌನತಾಳಿ ನಾ ಮಾಡುವೆ ಪ್ರಾಣತ್ಯಾಗ.
20 : ನನ್ನೆರಡು ಕೋರಿಕೆಗಳನ್ನು ಈಡೇರಿಸಯ್ಯಾ ಆಗ ನಿನ್ನ ದೃಷ್ಟಿಗೆ ನಾನು ಮರೆಮಾಡಿಕೊಳ್ಳಲಾರೆನಯ್ಯಾ.
21 : ಹಿಂತೆಗೆದುಕೊ ನನ್ನ ಮೇಲೆತ್ತಿರುವ ನಿನ್ನ ಕೈಗಳನು ಅಂಜಿಕೆಗೀಡು ಮಾಡದಿರಲಿ ನಿನ್ನ ದಿಗಿಲು ನನ್ನನು.
22 : ಆ ಬಳಿಕ ನೀನು ಕರೆದರೆ ನಾನು ಉತ್ತರ ಕೊಡುವೆ ಇಲ್ಲವೆ, ನಾನು ಮಾತಾಡಿದರೆ ನೀನೆ ಉತ್ತರಿಸುವೆ.
23 : ನನ್ನ ಅಕ್ರಮಗಳೆಷ್ಟು? ಪಾಪಗಳೆಷ್ಟು? ನನ್ನ ಪಾಪದೋಷಗಳನ್ನು ತಿಳಿಯಪಡಿಸು.
24 : ನೀನೇಕೆ ನನಗೆ ವಿಮುಖನಾಗಿರುವೆ? ನನ್ನನ್ನೇಕೆ ಶತ್ರು ಎಂದೆಣಿಸುವೆ?
25 : ಗಾಳಿಗೆ ತೂರುವ ತರಗೆಲೆಯನ್ನು ಬೆದರಿಸುವೆಯಾ? ಒಣಗಿದ ಹೊಟ್ಟನ್ನು ಬೆನ್ನಟ್ಟಿ ಹೋಗುವೆಯಾ?
26 : ನನ್ನ ವಿಷಯವಾಗಿ ಕಹಿಯಾದ ತೀರ್ಪನು ಬರೆದಿರುವೆ ಯೌವನದ ಪಾಪಪರಿಹಾಮಗಳನು ನನ್ನ ಮೇಲೆ ಹೊರಿಸಿರುವೆ.
27 : ನನ್ನ ಕಾಲುಗಳಿಗೆ ನೀ ಕೋಳವನ್ನು ತೊಡಿಸಿರುವೆ ನನ್ನ ನಡತೆಯನು ದಿಟ್ಟಿಸಿ ನೋಡುತ್ತಿರುವೆ ನನ್ನ ಹೆಜ್ಜೆಹೆಜ್ಜೆಯನು ಲೆಕ್ಕಿಸುತ್ತಿರುವೆ.
28 : ಕೊಳೆತ ಪದಾರ್ಥದಂತೆ, ನುಸಿಹಿಡಿದ ಬಟ್ಟೆಯಂತೆ ನಾನು ಕ್ಷಯಿಸಿ ಹೋಗುತ್ತಿರುವೆ.”

Holydivine