Job - Chapter 29
Holy Bible

1 : ಯೋಬನು ಮತ್ತೆ ಪ್ರಸ್ತಾಪವೆತ್ತಿ ಇಂತೆಂದನು:
2 : “ಕಳೆದುಹೋದ ದಿನಗಳಲಿ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತಲ್ಲವೆ! ಆಗ ದೇವರು ನನ್ನನ್ನು ಕಪಾಡುತ್ತಿದ್ದನಲ್ಲವೆ?
3 : ಆಗ ಬೆಳಗುತ್ತಿತ್ತು ಆತನ ದೀಪ ತಲೆಯಮೇಲೆ ಇರುಳಲ್ಲೂ ಸಂಚರಿಸುತ್ತಿದ್ದೆ ಆತನ ಬೆಳಕಿನಲೇ.
4 : ಆ ದಿನಗಳು ನನ್ನ ಜೀವಮಾನದ ಸುಗ್ಗಿಕಾಲವಾಗಿತ್ತು ದೇವರ ಪ್ರೀತಿ ನನ್ನ ಗುಡಾರವನ್ನು ಆವರಿಸಿತ್ತು.
5 : ಸರ್ವಶಕ್ತನು ಆಗ ನನ್ನ ಸಂಗಡವಿದ್ದನು ನನ್ನ ಸುತ್ತಲೂ ನನ್ನ ಮಕ್ಕಳು ಇರುತ್ತಿದ್ದರು.
6 : ಹಾಲುತುಪ್ಪದಲ್ಲಿ ಪಾದ ತೊಳೆಯುತ್ತಿದ್ದೆ ಎಣ್ಣೆಯನು ನದಿಯಂತೆ ಹರಿಸುತ್ತಿತ್ತಾ ದಿಣ್ಣೆ.
7 : ನಾನು ಊರ ಮುಂದಿನ ಜಾವಡಿಗೆ ಹೋದಾಗ ಚೌಕದ ಪೀಠದಲ್ಲಿ ಕುಳಿತುಕೊಂಡಾಗ,
8 : ಯುವಕರು ಸರಿಯುತ್ತಿದ್ದರು ಪಕ್ಕಕ್ಕೆ ಮುದುಕರು ಎದ್ದು ನಿಲ್ಲುತ್ತಿದ್ದರು ತಟ್ಟನೆ;
9 : ಮಂತ್ರಿಗಳೂ ಕೈಯಿಟ್ಟು ಬಾಯ ಮೇಲೆ ಮೌನತಾಳುತ್ತಿದ್ದರು ಮಾತೆತ್ತದೆ;
10 : ಗಣ್ಯ ವ್ಯಕ್ತಿಗಳೂ ನಿಶ್ಯಬ್ದವಾಗುತ್ತಿದ್ದರು ಅವರ ನಾಲಿಗೆ ಅಂಗುಳಕ್ಕೆ ಅಂಟಿರುತ್ತಿತ್ತು.
11 : ಕೇಳಿದ ಕಿವಿ ನನ್ನನು ಧನ್ಯನೆನ್ನುತ್ತಿತ್ತು ನೋಡಿದ ಕಣ್ಣು ನನ್ನನು ಗೌರವಿಸುತ್ತಿತ್ತು.
12 : ಏಕೆಂದರೆ ಮೊರೆಯಿಡುತ್ತಿದ್ದ ಬಡವನನು ಗತಿಯಿಲ್ಲದ ಅನಾಥನನು ಆದರಿಸುತ್ತಿದ್ದೆ ನಾನು.
13 : ಸಾಯುತ್ತಿದ್ದವನು ಹರಸುತ್ತಿದ್ದುದು ನನ್ನನೇ ವಿಧವೆಯ ಹೃದಯ ನಲಿಯುವಂತೆ ಮಾಡುತ್ತಿದ್ದುದು ನಾನೇ.
14 : ಧರ್ಮವನ್ನು ನಾನು ಧರಿಸಿಕೊಂಡೆ; ಅದು ನನಗೆ ಅಂಬರವಾಗಿತ್ತು ನ್ಯಾಯನೀತಿ ನನಗೆ ನಿಲುವಂಗಿಯೂ ಪೇಟವೂ ಆಗಿತ್ತು.
15 : ಕುರುಡನಿಗೆ ನಾನು ಕಣ್ಣಾಗಿದ್ದೆ ಕುಂಟನಿಗೆ ನಾನು ಕಾಲಾಗಿದ್ದೆ.
16 : ದರಿದ್ರನಿಗೆ ತಂದೆಯಾಗಿದ್ದೆ ಅಪರಿಚಿತರ ವ್ಯಾಜ್ಯವನು ತೀರಿಸುತ್ತಿದ್ದೆ.
17 : ದುರ್ಜನರ ದವಡೆಯನು ಮುರಿಯುತ್ತಿದ್ದೆ. ಅವರ ಹಲ್ಲುಗಳಿಂದಲೂ ಬೇಟೆಯನು ಬಿಡಿಸುತ್ತಿದ್ದೆ.
18 : ಆಗ ನಾನಿಂತೆಂದೆ: ‘ನನ್ನ ಗೂಡಿನಲ್ಲೇ ಹಾಯಾಗಿ ಸಾಯುವೆ ನನ್ನ ದಿನಗಳು ಮರಳಿನಂತೆ ಅಸಂಖ್ಯಾತವಾಗಿರುತ್ತವೆ.’
19 : ‘ನನ್ನ ಬೇರುಗಳು ನೀರಿನವರೆಗೆ ವ್ಯಾಪಿಸಿಕೊಂಡಿವೆ ನನ್ನ ರೆಂಬೆಗಳ ಮೇಲೆ ರಾತ್ರಿಯೆಲ್ಲ ಇಬ್ಬನಿ ಬಿದ್ದಿರುತ್ತದೆ.
20 : ‘ನನ್ನ ಪ್ರತಿಷ್ಠತೆ ಹೊಸಹೊಸದಾಗಿ ಇರುತ್ತದೆ ನನ್ನ ಕೈಯಲ್ಲಿ ಬಿಲ್ಲು ಬಲಗೊಳ್ಳುತ್ತಾ ಇರುತ್ತದೆ’
21 : ಜನರು ನನ್ನ ಮಾತಿಗೆ ಕಿವಿಗೊಡಲು ಕಾದಿರುತ್ತಿದ್ದರು ನನ್ನಾಲೋಚನೆಯನು ಅರಿಯಲು ನಿಶ್ಯಬ್ದವಾಗಿರುತ್ತಿದ್ದರು.
22 : ನಾನು ಮಾತಾಡಿದ ಮೇಲೆ ಅವರು ಮಾತೆತ್ತುತ್ತಿರಲಿಲ್ಲ ನನ್ನ ಮಾತು ಹನಿಹನಿಯಾಗಿ ಅವರ ಕಿವಿಗೆ ಬೀಳುತ್ತಿತ್ತು.
23 : ನನ್ನನ್ನು ಮಳೆಯಂತೆ ಎದುರುನೋಡುತ್ತಿದ್ದರು ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು.
24 : ಅವರು ಎದೆಗೆಟ್ಟಾಗ ನಾನು ನಗೆಬೀರುತ್ತಿದ್ದೆ ನನ್ನ ಮುಖಕಾಂತಿಯಿಂದ ಹುರಿದುಂಬಿಸುತ್ತಿದ್ದೆ.
25 : ನಾನು ಅವರಿಗೆ ಮಾರ್ಗದರ್ಶಕನಾಗಿದ್ದೆ ಸೇನೆಗಳ ಮಧ್ಯೆ ರಾಜನಂತೆ ಮಂಡಿಸಿದ್ದೆ ದುಃಖಿತರನು ಸುಧಾರಕನಂತೆ ಸಂತೈಸುತ್ತಿದ್ದೆ.

Holydivine