Proverbs - Chapter 9
Holy Bible

1 : ಜ್ಞಾನವೆಂಬಾಕೆ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಅದಕ್ಕೆ ಏಳು ಸ್ತಂಭಗಳನ್ನು ಕೆತ್ತಿಸಿದ್ದಾಳೆ.
2 : ಪಶುಗಳನ್ನು ಕೊಯ್ಯಿಸಿ ದ್ರಾಕ್ಷಾರಸವನ್ನು ಬೆರೆಸಿ ಔತಣವನ್ನು ಆಕೆ ಸಿದ್ಧಪಡಿಸುತ್ತಿದ್ದಾಳೆ.
3 : ನಗರದ ರಾಜಬೀದಿಗಳಿಗೆ ತನ್ನ ದಾಸಿಯರನ್ನು ಕಳುಹಿಸುತ್ತಾಳೆ.
4 : “ಮುಗ್ಧ ಮನಸ್ಕರು ಯಾರಾದರೂ ಇದ್ದರೆ ಇತ್ತ ಬರಲಿ” ಎಂದು ಪ್ರಕಟಿಸುತ್ತಾಳೆ.
5 : “ಬನ್ನಿ, ನಾ ಬಡಿಸುವ ಆಹಾರವನ್ನು ಉಣಬನ್ನಿ; ನಾ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಬನ್ನಿ.
6 : ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ,” ಎಂದು ಪ್ರಬೋಧಿಸುತ್ತಾಳೆ.
7 : ಕುಚೋದ್ಯಗಾರರನ್ನು ಶಿಕ್ಷಿಸುವವನು ತನ್ನ್ನೆ ಅಪಮಾನಕ್ಕೆ ಗುರಿಮಾಡಿಕೊಳ್ಳುತ್ತಾನೆ. ದುಷ್ಟನನ್ನು ಗದರಿಸುವವನು ತನಗೇ ಕಳಂಕ ತಂದುಕೊಳ್ಳುತ್ತಾನೆ.
8 : ಕುಚೋದ್ಯಗಾರನನ್ನು ಗದರಿಸಬೇಡ, ಅವನು ನಿನ್ನನ್ನು ದ್ವೇಷಿಸುವನು. ಜ್ಞಾನವಂತನನ್ನು ಗದರಿಸು, ಅವನು ನಿನ್ನನ್ನು ಪ್ರೀತಿಸುವನು.
9 : ಜ್ಞಾನಿಗೆ ಉಪದೇಶಿಸಿದರೆ ಅವನು ಹೆಚ್ಚು ಜ್ಞಾನಿಯಾಗುತ್ತಾನೆ; ಸತ್ಪುರುಷನಿಗೆ ಬೋಧಿಸಿದರೆ ಅವನು ಹೆಚ್ಚು ತಿಳುವಳಿಕೆ ಪಡೆಯುತ್ತಾನೆ.
10 : ಸರ್ವೇಶ್ವರನಲ್ಲಿನ ಭಯಭಕ್ತಿ ಜ್ಞಾನಕ್ಕೆ ಮೂಲ; ಪರಮಪಾವನನನ್ನು ಅರಿಯುವುದು ವಿವೇಕ.
11 : ನನ್ನಿಂದ ನಿನಗೆ ಸಿಗುವುದು ದೀರ್ಘಾಯಸ್ಸು; ವೃದ್ಧಿಯಾಗುವುದು ನಿನ್ನ ಜೀವದ ಅವಧಿ.
12 : ನೀನು ಜ್ಞಾನವಂತನಾದರೆ ನಿನ್ನ ಜ್ಞಾನ ನಿನಗೇ ಲಾಭಕರ; ಕುಚೋದ್ಯಗಾರನು ಆದರೆ ಸವಿಯುವೆ ಅದರ ಪ್ರತೀಕಾರ.
13 : ಅಜ್ಞಾನವೆಂಬುವಳಾದರೊ ಕೂಗಾಟಗಾರ್ತಿ, ಏನೂ ತಿಳಿಯದ ಮೂಢ ಸ್ತ್ರೀ.
14 : ಅವಳು ತನ್ನ ಮನೆಯ ಬಾಗಿಲಲ್ಲಿ ಕುಳಿತು, ನಗರದ ಹೆದ್ದಾರಿಯ ದಿಣ್ಣೆಯ ಮೇಲೆ ನಿಂತು,
15 : ತಮ್ಮ ತಮ್ಮ ಹಾದಿಹಿಡಿದು ಹೋಗಿ ಬರುವವರನ್ನು ಕಂಡು,
16 : “ಮುಗ್ಧ ಜೀವಿಗಳು ಯಾರಾದರೂ ಇದ್ದರೆ ಬರಲಿ ಇತ್ತ” ಎಂದು ಕರೆವಳು
17 : “ಕದ್ದ ನೀರು ಸಿಹಿ, ಗುಟ್ಟಾಗಿ ತಿನ್ನುವ ರೊಟ್ಟಿ ರುಚಿ” ಎಂದು ಬುದ್ಧಿಹೀನನಿಗೆ ಹೇಳುವಳು.
18 : ಅವನಿಗೆ ತಿಳಿಯದು ಅವಳ ಮನೆ ಪ್ರೇತನಿವಾಸವೆಂದು, ಅವಳ ಅತಿಥಿಗಳು ಬಿದ್ದಿರುವುದು ಅಗಾಧ ಪಾತಾಳದಲ್ಲೆಂದು.

Holydivine