Proverbs - Chapter 23
Holy Bible

1 : ಒಡೆಯನ ಸಂಗಡ ಊಟಕ್ಕೆ ಕುಳಿತುಕೊಂಡಾಗ ಯಾರ ಮುಂದಿರುವೆ ಎಂಬುದನ್ನು ಮರೆಯಬೇಡ.
2 : ತಡೆಯಲಾಗದ ಹಸಿವು ನಿನಗಿದ್ದರೂ ಕಂಠದಲ್ಲಿ ಕತ್ತಿಯಿರುವಂತೆ ಸಂಯಮದಿಂದಿರು.
3 : ಒಡೆಯನ ರುಚಿಪದಾರ್ಥಗಳನ್ನು ಬಯಸಬೇಡ, ಅವುಗಳಲ್ಲಿ ಮರೆಮೋಸ ಅಡಗಿರಲು ಸಾಧ್ಯ.
4 : ದುಡ್ಡಿನಾಸೆಗಾಗಿಯೆ ದುಡಿಯಬೇಡ; ಬುದ್ಧಿಯನ್ನೆಲ್ಲಾ ಅದಕ್ಕಾಗಿಯೇ ವ್ಯಯಮಾಡಬೇಡ.
5 : ನಿನ್ನ ದೃಷ್ಟಿ ಅದರ ಮೇಲೆ ಬೀಳುವಷ್ಟರಲ್ಲೆ ಅದು ಮಾಯಾ, ರೆಕ್ಕೆ ಕಟ್ಟಿಕೊಂಡ ಗರುಡನಂತೆ ಆಗಸದತ್ತ ಅದರ ಓಟ.
6 : ಜಿಪುಣ ದೃಷ್ಟಿಯವನು ಬಡಿಸುವ ಅನ್ನವನ್ನು ಉಣಬೇಡ; ಅವನ ರುಚಿಪದಾರ್ಥಗಳನ್ನು ಬಯಸಬೇಡ.
7 : ಅವನು ತನ್ನ ಮನದಲ್ಲೆ ಲೆಕ್ಕಿಸುತ್ತಿರುತ್ತಾನೆ “ಉಣ್ಣು, ಕುಡಿ” ಎಂದರೂ; ಅವನಿಗಿಲ್ಲ ನಿನ್ನ ಮೇಲೆ ಅಕ್ಕರೆ.
8 : ನೀನು ತಿಂದ ತುತ್ತನ್ನೆ ಕಕ್ಕಿ ಬಿಡುವೆ, ನೀನು ಆಡಿದ ಸವಿಮಾತೆಲ್ಲ ವ್ಯರ್ಥವೆ.
9 : ಮೂಢನ ಸಂಗಡ ಮಾತನಾಡಬೇಡ; ನಿನ್ನ ಬುದ್ಧಿಮಾತನ್ನು ಅವನು ಮಾನ್ಯಮಾಡ.
10 : ಪುರಾತನ ಎಲ್ಲೆ ಗುರುತನ್ನು ಒತ್ತರಿಸಬೇಡ; ಅನಾಥರ ಹೊಲಗದ್ದೆಯನ್ನು ಆಕ್ರಮಿಸಬೇಡ.
11 : ಅವರನ್ನು ಕಾಪಾಡುವ ಸರ್ವೇಶ್ವರ ಬಲಶಾಲಿ, ಆತ ನಿನ್ನೊಡನೆ ವಾದಿಸಬಲ್ಲ ಅವರ ಪರವಾಗಿ.
12 : ಉಪದೇಶವನ್ನು ಕೇಳುವುದರತ್ತ ಮನಸ್ಸಿಡು; ತಿಳುವಳಿಕೆಯ ಮಾತುಗಳಿಗೆ ಕಿವಿಗೊಡು.
13 : ಮಕ್ಕಳನ್ನು ದಂಡಿಸಿ ತಿದ್ದಲು ಹಿಂಜರಿಯಬೇಕಾಗಿಲ್ಲ; ಬೆತ್ತದ ಏಟಿಗೆ ಅವರು ಸತ್ತು ಹೋಗುವುದಿಲ್ಲ.
14 : ಬೆತ್ತದಿಂದ ಬೇಕಾದರೆ ಹೊಡೆ; ಮಗುವಿನ ಆತ್ಮ ಪಾತಾಳಕ್ಕೆ ಬೀಳದಂತೆ ತಡೆ.
15 : ಮಗನೇ, ನೀನು ಬುದ್ಧಿವಂತನಾದರೆ ಆನಂದವೇ ಆನಂದ ನನ್ನ ಮನಸ್ಸಿಗೆ.
16 : ನಿನ್ನ ಬಾಯಿಂದ ಹಿತೋಕ್ತಿಗಳು ಬಂದರೆ ಸಂತೋಷ ನನ್ನ ಅಂತರಾತ್ಮಕ್ಕೆ.
17 : ಪಾಪಿಗಳನ್ನು ನೋಡಿ ಅಸೂಯೆಪಡಬೇಡ; ಸರ್ವೇಶ್ವರನಲ್ಲಿರಲಿ ನಿರಂತರ ಭಯ ಭಕ್ತಿ.
18 : ಆಗ ನಿನ್ನ ಭವಿಸ್ಯ ಶುಭದಾಯಕವಾಗಿರುವುದು, ನಿನ್ನ ನಿರೀಕ್ಷೆ ಸಾರ್ಥಕವಾಗುವುದು.
19 : ಮಗನೇ ಕೇಳು, ಬುದ್ಧಿವಂತನಾಗಿರು, ನಿನ್ನ ಮನಸ್ಸನ್ನು ಸನ್ಮಾರ್ಗದತ್ತ ಹರಿಸು.
20 : ಕುಡುಕರೊಡನೆ, ಹೊಟ್ಟೆಬಾಕರೊಡನೆ ಸೇರಬೇಡ; ಮಿತಿ ಮೀರಿ ಮಾಂಸ ತಿನ್ನುವ ಜನರ ಜೊತೆ ನಿನಗೆ ಬೇಡ.
21 : ಕುಡುಕನಿಗೂ ಹೊಟ್ಟೆಬಾಕನಿಗೂ ಕಾದಿದೆ ದುರ್ಗತಿ; ಹರಕುಬಟ್ಟೆಗಳನ್ನು ಹೊದಿಸುವುದು ಅವರ ನಿದ್ರಾಸಕ್ತಿ.
22 : ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನ ತಾಯಿಯನ್ನು ಅಸಡ್ಡೆಮಾಡದಿರು.
23 : ಸತ್ಯವನ್ನು, ಅಂದರೆ ಜ್ಞಾನ, ಸುಶಿಕ್ಷೆ, ವಿವೇಕ ಇವನ್ನು ಬೆಲೆಕೊಟ್ಟಾದರೂ ಕೊಂಡುಕೊ, ಮಾರಿ ಬಿಡಬೇಡ!
24 : ನೀತಿವಂತನ ತಂದೆಗೆ ಅತಿ ಸಂತೋಷ; ಜ್ಞಾನಿಯನ್ನು ಹೆತ್ತವನಿಗೆ ಅತಿ ಉಲ್ಲಾಸ.
25 : ಹರ್ಷಗೊಳಿಸು ನಿನ್ನ ತಂದೆತಾಯಿಗಳನ್ನು; ಆನಂದಪಡಿಸು ನಿನ್ನ ಹೆತ್ತವಳನ್ನು.
26 : ಮಗನೇ, ನಾನು ಹೇಳುವುದು ನಾಟಲಿ ನಿನ್ನ ಮನಸ್ಸಿಗೆ; ನನ್ನ ನಡತೆ ಆದರ್ಶಕವಾಗಿರಲಿ ನಿನ್ನ ಕಣ್ಣುಗಳಿಗೆ.
27 : ವೇಶ್ಯೆ ಒಂದು ಆಳವಾದ ಬಾವಿ; ವ್ಯಭಿಚಾರಿಣಿ ಇಕ್ಕಟ್ಟಾದ ಗುಳಿ.
28 : ಆಕೆ ಕಳ್ಳನಂತೆ ಹೊಂಚುಹಾಕುತ್ತಾಳೆ; ಅನೇಕರನ್ನು ದ್ರೋಹಿಗಳನ್ನಾಗಿಸುತ್ತಾಳೆ.
29 : ಕಿರಿಚಾಟ, ಕೂಗಾಟ, ಕಿತ್ತಾಟ, ಗೋಳಾಟವು ನಿರ್ನಿಮಿತ್ತ ಹುಣ್ಣು, ಕೆಂಪೇರಿದ ಕಣ್ಣು; ಇವುಗಳನ್ನು ಅನುಭವಿಸುವವರು ಯಾರು?
30 : ಮಿಶ್ರಮದ್ಯಪಾನಗಳಲ್ಲಿ ಆಸಕ್ತನಾಗಿರುವವನೇ, ದ್ರಾಕ್ಷಾರಸ ಕುಡಿಯುತ್ತ ಕಾಲಹರಣ ಮಾಡುವವನೇ.
31 : ಪಾತ್ರೆಯಲ್ಲಿ ಕೆಂಪಗೆ ಥಳ ಥಳಿಸುವ, ಗಂಟಲಿನೊಳಗೆ, ಸುಲಭವಾಗಿ, ಇಳಿಯುವ, ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ.
32 : ಕುಡಿದಾದ ಮೇಲೆ ಅದು ಹಾವಿನಂತೆ ಕಚ್ಚುವುದು; ಹೌದು, ವಿಷಸರ್ಪದಂತೆ ಕಡಿಯುವುದು.
33 : ನಿನ್ನಾ ಕಣ್ಣು ಇಲ್ಲದ್ದನ್ನೇ ಕಾಣುವುದು; ಮನಸ್ಸು ವಕ್ರವಾದುವುಗಳನ್ನೇ ಹೊರ ಪಡಿಸುವುದು.
34 : ನೀನು ಸಮುದ್ರ ಮಧ್ಯದಲ್ಲಿ ಮಲಗಿ ಇರುವವನಂತೆ ಇರುವೆ, ಹಡಗಿನ ಕಂಬದ ತುದಿಯಲ್ಲಿ ನಿದ್ರಿಸುವವನಂತೆ ಇರುವೆ.
35 : “ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ; ಬಡಿದರೂ ನನಗೆ ತಿಳಿಯಲಿಲ್ಲ; ಎಚ್ಚರವಾಗುವುದು ಯಾವಾಗ? ಮತ್ತೆ ಒಂದು ಸಾರಿ ಕುಡಿಯುವೆನು” ಎಂದುಕೊಳ್ಳುವೆ.

Holydivine