Proverbs - Chapter 17
Holy Bible

1 : ಜಗಳ ತುಂಬಿದ ಮನೆಯಲ್ಲಿ ಹಬ್ಬದೂಟ ಮಾಡುವುದಕ್ಕಿಂತಲು ಶಾಂತಿ ಸಮಾಧಾನದಿಂದ ಕೂಡಿದ ಒಣ ತುತ್ತೇ ಲೇಸು
2 : ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು.
3 : ಪುಟಕುಲುಮೆಗಳು ಬೆಳ್ಳಿಬಂಗಾರಗಳನ್ನು ಶೋಧಿಸುತ್ತವೆ; ಸರ್ವೇಶ್ವರನು ಹೃದಯಗಳನ್ನು ಶೋಧಿಸುತ್ತಾನೆ.
4 : ಕೆಡುಕನು ಕೆಟ್ಟತುಟಿ ಆಡುವುದನ್ನು ಗಮನಿಸುತ್ತಾನೆ; ಸುಳ್ಳುಗಾರ ನಷ್ಟಮಾಡುವ ನಾಲಿಗೆಗೆ ಕಿವಿಗೊಡುತ್ತಾನೆ.
5 : ಬಡವರನ್ನು ಗೇಲಿಮಾಡುವವನು ತನ್ನ ಸೃಷ್ಟಿಕರ್ತನನ್ನೆ ಹೀನೈಸುತ್ತಾನೆ; ಪರರ ಕಷ್ಟ ದುಃಖಗಳನ್ನು ನೋಡಿ ಹಿಗ್ಗುವವನು ದಂಡನೆಗೆ ಗುರಿಯಾಗುತ್ತಾನೆ.
6 : ಮಕ್ಕಳ ಮಕ್ಕಳು ಮುದುಕರ ಮುಕುಟ; ಮಕ್ಕಳಿಗೆ ಹೆತ್ತವರೇ ಭೂಷಣ.
7 : ಉತ್ತಮವಾದ ಮಾತು ಮೂರ್ಖನಿಗೆ ಹಿಡಿಸದು; ಸುಳ್ಳುಮಾತು ಉತ್ತಮನಿಗೆ ಮತ್ತೂ ಹಿಡಿಸದು.
8 : ಕೊಡುವವನ ಕಣ್ಣಿಗೆ ಲಂಚವು ಚಿಂತಾಮಣಿಯಂತೆ; ಎತ್ತ ತಿರುಗಿದರತ್ತ ಅದರಿಂದ ಜಯವಂತೆ!
9 : ತಪ್ಪನ್ನು ಮನ್ನಿಸುವವನು ಪ್ರೀತಿಯನ್ನು ಅರಸುತ್ತಾನೆ; ತಪ್ಪನ್ನು ಎತ್ತಿ ಆಡುವವನು ಆಪ್ತನನ್ನೂ ಕಳೆದುಕೊಳ್ಳುತ್ತಾನೆ.
10 : ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು.
11 : ದುರಾತ್ಮನ ಕಣ್ಣೆಲ್ಲಾ ದಂಗೆ ಏಳುವುದರ ಮೇಲೆ; ಕ್ರೂರದೂತನು ಎರಗಿ ಬರುವನು ಅವನ ಮೇಲೆ.
12 : ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು.
13 : ಯಾರು ಉಪಕಾರಕ್ಕೆ ಅಪಕಾರ ಮಾಡುತ್ತಾರೊ ಅಂಥವರ ಮನೆಯಿಂದ ಕೇಡು ತೊಲಗದು.
14 : ವಾಗ್ವಾದವು ಏರಿಗೆ ಬಿರುಕು ಬಿದ್ದಂತೆ; ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ತೊರೆದು ಬಿಡು.
15 : ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.
16 : ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಇದನ್ನು ಕೊಳ್ಳಲು ಬೇಕಾದ ಬುದ್ಧಿಯೇ ಅವನಿಗಿಲ್ಲವಲ್ಲಾ !
17 : ಮಿತ್ರನ ಪ್ರೀತಿ ನಿರಂತರ; ಕಷ್ಟಕ್ಕಾದವನೆ ಹುಟ್ಟುನಂಟ.
18 : ಬೇರೆಯವನ ಸಾಲಕ್ಕಾಗಿ ಕೈ ಮೇಲೆ ಕೈ ಹಾಕಿ ಹ್ರೆಣೆಯಾಗಿ ನಿಂತವನು ಬುದ್ಧಿಹೀನನೆ ಸರಿ.
19 : ಕಲಹಪ್ರಿಯನು ಪಾಪಪ್ರಿಯನು; ಕದವನ್ನು ಎತ್ತರಿಸಿದವನು ಕೇಡನ್ನು ಬರಮಾಡಿಕೊಳ್ಳುವನು.
20 : ವಕ್ರಮನಸ್ಸುಳ್ಳುವನು ಒಳಿತನ್ನು ಕಾಣನು; ಕೆಟ್ಟ ನಾಲಿಗೆಯವನು ಸಂಕಟಕ್ಕೆ ಸಿಕ್ಕಿಕೊಳ್ಳುವನು.
21 : ಹೆಡ್ಡನನ್ನು ಹೆತ್ತವನಿಗೆ ವ್ಯಥೆ; ಮೂರ್ಖನ ತಂದೆಗೆ ಕಡುಚಿಂತೆ.
22 : ಹರ್ಷ ಹೃದಯ ಒಳ್ಳೆಯ ಔಷಧ; ಕುಗ್ಗಿದ ಮನದಿಂದ ಅಸ್ಥಿಪಂಜರ.
23 : ಲಂಚವನ್ನು ಗುಟ್ಟಾಗಿ ಪಡೆದ ದುಷ್ಟನು ಡೊಂಕಾಗಿಸುತ್ತಾನೆ ನ್ಯಾಯ ನಿರ್ಣಯವನ್ನು.
24 : ವಿವೇಕಿಗೆ ಜ್ಞಾನವೇ ಗುರಿಧ್ಯೇಯ; ಮೂಢನ ದೃಷ್ಟಿ ದಿಗಂತದಷ್ಟು ವಿಶಾಲ.
25 : ಬುದ್ಧಿಹೀನನಾದ ಮಗನು ತಂದೆಗೆ ಕಿರಿಕಿರಿ; ಹೆತ್ತತಾಯಿಗೆ ಅವನು ಕರಕರೆ.
26 : ನೀತಿವಂತನಿಗೆ ದಂಡ ಸರಿಯಲ್ಲ; ಸಜ್ಜನನಿಗೆ ಶಿಕ್ಷೆ ನ್ಯಾಯವಲ್ಲ.
27 : ಹಿಡಿದು ಮಾತಾಡುವವನು ಜ್ಞಾನಿ; ಶಾಂತ ಗುಣವುಳ್ಳವವನು ವಿವೇಕಿ.
28 : ಮೂಢನು ಕೂಡ ಮೌನತಾಳಿದರೆ ಜ್ಞಾನಿಯೆನಿಸಿಕೊಳ್ಳುವನು; ತುಟಿಗಳನ್ನು ಬಿಗಿ ಹಿಡಿದರೆ ವಿವೇಕಿ ಎನಿಸಿಕೊಳ್ಳುವನು.

Holydivine