Proverbs - Chapter 21
Holy Bible

1 : ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.
2 : ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ.
3 : ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ.
4 : ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.
5 : ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ.
6 : ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು.
7 : ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ, ಅವರನ್ನೇ ಎಳೆದೊಯ್ಯುವುದು ಅವರ ಹಿಂಸಾಚಾರ.
8 : ದೋಷಿಯ ದಾರಿ ಸೊಟ್ಟಗೆ; ದೋಷರಹಿತನ ನಡತೆ ನೆಟ್ಟಗೆ.
9 : ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.
10 : ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ.
11 : ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಗೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ.
12 : ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ.
13 : ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ ನೀನೇ ಮೊರೆಯಿಡುವಾಗ ಉತ್ತರ ಕೊಡುವವರಾರು ನಿನಗೆ?
14 : ಗುಟ್ಟಾಗಿ ಬಹುಮಾನ ಕೊಟ್ಟು ಸಿಟ್ಟನ್ನು ಅಡಗಿಸುತ್ತಾರೆ; ಮಡಿಲಲ್ಲಿ ಲಂಚವನ್ನು ಮುಚ್ಚಿಟ್ಟು ಕೋಪವನ್ನು ಆರಿಸುತ್ತಾರೆ.
15 : ನ್ಯಾಯವಾದ ತೀರ್ಪಿನಿಂದ ಸಜ್ಜನರಿಗೆ ಸಂತಸ; ದುರ್ಜನರಿಗಾದರೊ ಅದು ತರುತ್ತದೆ ಸಂಕಟ.
16 : ಬುದ್ದಿಮಾರ್ಗ ಬಿಟ್ಟು ನಡೆದವನು ಪ್ರೇತಗಳ ನಡುವೆ ವಿಶ್ರಾಂತಿ ಪಡೆಯುವನು.
17 : ಭೋಗಾಸಕ್ತನು ಬಡವನಾಗುವನು, ಮಧ್ಯ ಸುಗಂಧಗಳನ್ನು ಬಯಸುವವನು ಧನವಂತನಾಗನು.
18 : ದುರ್ಜನರು ಸಜ್ಜನರಿಗೆ ದ್ರೋಹಿಗಳು; ನೀತಿವಂತರಿಗೆ ಮಾಡಲಾಶಿಸುವ ಕೇಡಿಗೆ ತಾವೇ ಈಡಾಗುವರು.
19 : ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲು ಕಾಡಿನಲ್ಲಿ ಒಂಟಿಯಾಗಿ ವಾಸಿಸುವುದೇ ಲೇಸು.
20 : ಬುದ್ಧಿವಂತನ ಮನೆಯ ಸಿರಿ, ಎಣ್ಣೆ ಬೆಣ್ಣೆ; ಬುದ್ಧಿಹೀನನು ನುಂಗಿಬಿಡುವನು ಸರ್ವಸ್ವವನ್ನೆ.
21 : ನೀತಿ ಪ್ರೀತಿ ಪಾಲಿಸುವವನಿಗೆ ಲಭಿಸುವುದು ಆಯುಸ್ಸು ಕೀರ್ತಿ, ದೊಡ್ಡಸ್ತಿಕೆ.
22 : ಜ್ಞಾನಿ ಹಿಡಿಯಬಲ್ಲನು ಬಲಿಷ್ಠರ ಪಟ್ಟಣವನ್ನು, ಕೆಡವಬಲ್ಲನು ಅವರ ಬಲವಾದ ಕೋಟೆಯನ್ನು.
23 : ಬಾಯನ್ನೂ ನಾಲಿಗೆಯನ್ನೂ ಕಾಯಬಲ್ಲವನು ಜಯಿಸುವನು ತೊಂದರೆ ತಾಪತ್ರಯಗಳನ್ನು.
24 : ಸೊಕ್ಕೇರಿದ ಗರ್ವಿ ಕುಚೋದ್ಯನೆನಿಸಿಕೊಳ್ಳುವನು; ಅಹಂಕಾರ, ಮದಮತ್ಸರಗಳಿಂದ ಅವನು ವರ್ತಿಸುವನು.
25 : ಮೈಗಳ್ಳನನ್ನು ಕೊಲ್ಲುವುದು ಅವನ ಇಚ್ಛೆಯೆ; ಬಗ್ಗದು ಅವನ ಕೈ ದುಡಿಮೆಗೆ.
26 : ಇಲ್ಲವೆನ್ನದೆ ಕೊಡುವವರು ಸಜ್ಜನರು; ದಾನವೆಲ್ಲ ಬೇಕೆನ್ನುತ್ತಿರುವವನು ಜಿಪುಣನು.
27 : ದುಷ್ಟರು ಅರ್ಪಿಸುವ ಬಲಿಯಜ್ಞ ಅಸಹ್ಯ; ದುರಾಲೋಚನೆಯಿಂದ ಅರ್ಪಿಸುವುದು ಮತ್ತೂ ಅಸಹ್ಯ.
28 : ಸುಳ್ಳು ಸಾಕ್ಷಿ ಹೇಳುವವನೇ ಅಳಿದು ಹೋಗುವನು; ಕೇಳಿದ್ದನ್ನೆ ಹೇಳುವವನ ಸಾಕ್ಷಿ ಅಳಿಯದೆ ಉಳಿಯುವುದು.
29 : ದುಷ್ಟನ ಮುಖದಲ್ಲಿ ಹಟಭಾವನೆ; ಸಜ್ಜನನ ನಡತೆಯಲ್ಲಿ ಸದೃಢತೆ.
30 : ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.
31 : ಯುದ್ಧಕ್ಕಾಗಿ ಸನ್ನದ್ಧವಾಗಿರಬಹುದು ಅಶ್ವ ಬಲ; ಜಯಸಿಗುವುದಾದರೋ ಸರ್ವೇಶ್ವರನಿಂದ.

Holydivine