Proverbs - Chapter 13
Holy Bible

1 : ಬುದ್ಧಿವಂತ ಮಗ ತಂದೆಯ ಶಿಕ್ಷಣವನ್ನು ಕೇಳುವನು; ಕಿತ್ತಾಡುವ ಮಗ ಗದರಿಕೆಯನ್ನೂ ಕೇಳಲೊಲ್ಲನು.
2 : ಸಜ್ಜನರ ಊಟ ಫಲಹಾರ; ವಂಚಕರ ಆಹಾರ ಹಿಂಸಾಚಾರ.
3 : ಬಾಯಿಯನ್ನು ಕಾಯುವವನು ಜೀವವನ್ನು ಕಾಯುವನು; ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
4 : ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಟರನ್ನಾಗಿಸುವ ಮೃಷ್ಟಾನ್ನ.
5 : ಸಜ್ಜನನಿಗೆ ಮೋಸಮಾತು ಅಸಹ್ಯ; ದುರ್ಜನನ ನಡತೆ ನಿಂದಾಸ್ಪದ.
6 : ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು.
7 : ಒಬ್ಬ ಹಣಕೂಡಿಸಿದ್ದರೂ ಘನದರಿದ್ರನಿರಬಹುದು; ಮತ್ತೊಬ್ಬ ಹಣವೆಚ್ಚಮಾಡಿ ಕಡುಬಡವ ನಾಗಿದ್ದರೂ ಐಶ್ವರ್ಯವಂತನಗಿರಬಹುದು.
8 : ಹಣವಂತನ ಪ್ರಾಣರಕ್ಷಣೆಗೆ ಅವನ ಹಣವೇ ಈಡು; ಬಡವನಿಗೆ ಈಡಿನ ಬೆದರಿಕೆಯೂ ಇರದು.
9 : ಸಜ್ಜನರ ಬೆಳಕು ಪ್ರಜ್ವಲಿಸುವುದು; ದುರ್ಜನರ ದೀಪವು ಆರಿಹೋಗುವುದು.
10 : ಗರ್ವದಿಂದ ಹುಟ್ಟುವುದು ಕಲಹಕದನ; ಆಲೋಚನೆಯನ್ನು ಕೇಳುವುದು ಸುಜ್ಞಾನ.
11 : ಬಿಟ್ಟಿಯಾಗಿ ಸಿಕ್ಕಿದ ಸಂಪತ್ತು ಬೇಗನೆ ಕರಗುವುದು; ದುಡಿದು ಕೂಡಿಸಿದ ಹಣ ಅಭಿವೃದ್ಧಿಯಾಗುವುದು.
12 : ಕೋರಿದ್ದು ತಡವಾದರೆ ಮನಸ್ಸಿಗೆ ತುಡಿತ; ಕೈಗೂಡಿದ ಇಷ್ಟಾರ್ಥ ಜೀವವೃಕ್ಷ.
13 : ದೇವವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು.
14 : ಜ್ಞಾನಿಯ ಬೋಧೆ ಜೀವದ ಬುಗ್ಗೆ; ಮಾಡುವುದದು ಮರಣದಿಂದ ಬಿಡುಗಡೆ.
15 : ಸುಬುದ್ಧಿ ದಯಾಸ್ಪದ; ದುರಾಚಾರ ವಿನಾಶಕರ.
16 : ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ.
17 : ಕೆಟ್ಟದೂತನು ಕೇಡಿಗೆ ಸಿಕ್ಕಿಸುವನು; ನಂಬಿಕಸ್ಥ ದೂತನು ಸುಕ್ಷೇಮಕಾರನು.
18 : ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ.
19 : ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.
20 : ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.
21 : ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು.
22 : ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯದ ಸೊತ್ತು; ಪಾಪಿಯ ಸೊತ್ತು ಸತ್ಪುರುಷರಿಗೆ ಸೇರುವ ಸಂಪತ್ತು.
23 : ಬಡವರಿಗೆ ಬಂಜರುಭೂಮಿಯೂ ಬೆಳೆಯನ್ನೀಯುವುದುಂಟು; ಭಂಡತನ ಇರುವಲ್ಲಿ ಅದು ಕೂಡ ಹಾಳಾಗುವುದುಂಟು.
24 : ಬೆತ್ತಹಿಡಿಯದ ತಂದೆ ಮಗನಿಗೆ ಶತ್ರು; ಎಚ್ಚರಿಕೆಯಿಂದ ಶಿಕ್ಷಿಸುವ ತಂದೆ ಮಗನಿಗೆ ಮಿತ್ರನು.
25 : ನೀತಿವಂತನು ಹೊಟ್ಟೆತುಂಬ ಉಣ್ಣುವನು; ದುಷ್ಟನು ಹೊಟ್ಟೆ ಹಸಿವಿನಿಂದ ಬಳಲುವುದು.

Holydivine