Proverbs - Chapter 30
Holy Bible

1 : ಮಸ್ಸಾಗೆ ಸೇರಿದ ಜಾಕೆ ಎಂಬುವವನ ಮಗ ಆಗೂರನ ಹಿತೋಕ್ತಿಗಳು: ಈತನು ಇಂಥಿಯೇಲನಿಗೆ ಹಾಗೂ ಉಕ್ಕಾಲನಿಗೆ ಮಾಡಿದ ಪ್ರವಾದನೆ:
2 : ಮಾನವರಲ್ಲಿ ನನ್ನಂಥ ಪಶುಪ್ರಾಯನಿಲ್ಲ; ಮನುಷ್ಯ ವಿವೇಕವೂ ನನಗಿಲ್ಲ.
3 : ಜ್ಞಾನವನ್ನು ನಾನು ಪಡೆದುಕೊಂಡಿಲ್ಲ ಪರಮಪಾವನರ ತಿಳುವಳಿಕೆ ನನಗಿಲ್ಲ.
4 : ಕಾಶಕ್ಕೆ ಏರಿ ಮರಳಿದವನು ಯಾರು? ಮುಷ್ಟಿಯಲ್ಲಿ ಗಾಳಿಯನ್ನು ಹಿಡಿದಿಟ್ಟವನು ಯಾರು? ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಎಲ್ಲೆಮೇರೆಗಳನ್ನು ನಿಗದಿಮಾಡಿದವನು ಯಾರು? ಆತನ ಹೆಸರೇನು? ಆತನ ಮಗನ ಹೆಸರೇನು? ಬಲ್ಲೆಯಾ?
5 : ದೇವರ ಒಂದೊಂದು ಮಾತೂ ಪರಿಶುದ್ಧ; ಆತನೇ ಶರಣರ ಖೇಡ್ಯ;
6 : ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿಬಂದೀಯೆ!
7 : ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು:
8 : ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು.
9 : ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.
10 : ದಾಸನ ವಿರುದ್ಧ ದಣಿಗೆ ದೂರು ಹೇಳಬೇಡ; ಅವನು ನಿನ್ನನ್ನು ಶಪಿಸಾನು, ನಿನ್ನಲ್ಲೆ ದೋಷಕಂಡು ಬಂದೀತು.
11 : ತಂದೆಯನ್ನೇ ಶಪಿಸುವ, ತಾಯಿಗು ಮರ್ಯಾದೆಯನ್ನೂ ತರದ ಮಕ್ಕಳುಂಟು.
12 : ತಮ್ಮ ಕೊಳೆಯನ್ನು ತೊಳೆದುಕೊಳ್ಳದ, ತಾವೆ ಪರಿಶ್ಮದ್ಧರೆಂದು ಎಣಿಸಿಕೊಳ್ಳುವ ಜನರುಂಟು.
13 : ಮೇಲಿಂದ ಮೇಲಕ್ಕೆ ದೃಷ್ಟಿಸಿ ನೋಡುವ, ಠೀವಿಯಿಂದ ಕಣ್ಣುರೆಪ್ಪೆಗಳನ್ನೇರಿಸುವ ಜನರುಂಟು.
14 : ಖಡ್ಗದಂಥ ಹಲ್ಲುಗಳು, ಕತ್ತಿಯಂಥ ಕೋರೆಗಳೂ ಉಳ್ಳವರಿದ್ದಾರೆ. ನಾಡಿನ ಬಡವರನ್ನು ಇವರು ತಿಂದುಬಿಡುವರು; ಜನರಲ್ಲಿ ದಿಕ್ಕಿಲ್ಲದವರನ್ನು ಇವರು ನುಂಗಿಬಿಡುವರು.
15 : ಜಿಗಣೆಗೆ “ಕೊಡು, ಕೊಡು” ಎಂಬ ಇಬ್ಬರು ಹೆಣ್ಣು ಮಕ್ಕಳುಂಟು; ಎಂದೂ ತೃಪ್ತಿ ಪಡೆಯದವು ಮೂರುಂಟು: ಹೌದು, ‘ಸಾಕು’ ಎನ್ನದವುಗಳು ನಾಲ್ಕುಂಟು:
16 : ಅವು ಯಾವುವೆಂದರೆ: ಪಾತಾಳ, ಹೆರದಗರ್ಭ, ನೀರಿಗಾಗಿ ಹಾತೊರೆಯುವ ಭೂಮಿ. ‘ಸಾಕಾಯಿತು’ ಎನ್ನದ ಬೆಂಕಿ.
17 : ತಂದೆಯನ್ನು ಪರಿಹಾಸ್ಯ ಮಾಡುವ ಕಣ್ಣನ್ನು, ತಾಯಿಯ ಆಜ್ಞೆಯನ್ನು ಧಿಕ್ಕರಿಸುವ ನೇತ್ರವನ್ನು ಹಳ್ಳಕೊಳ್ಳದ ಕಾಗೆಗಳು ಕುಕ್ಕುವುವು, ರಣಹದ್ದುಗಳು ತಿಂದುಬಿಡುವುವು.
18 : ನನ್ನ ಅರಿವಿಗೆ ಬಾರದ ಮೂರು ವಿಷಯಗಳಿವೆ: ಹೌದು, ನನ್ನ ಬುದ್ಧಿಗೆ ಎಟುಕದವು ನಾಲ್ಕಿವೆ:
19 : ಅವು ಯಾವುವೆಂದರೆ: ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಯುವಕ-ಯುವತಿಯರ ಪರಸ್ಪರ ಆಕರ್ಷಣೆ.
20 : ವ್ಯಭಿಚಾರಿಣಿಯ ವರ್ತನೆ ಹೀಗಿದೆ: ಅವಳು ಉಣ್ಣುತ್ತಾಳೆ, ಬಾಯಿ ಒರೆಸಿಕೊಳ್ಳುತ್ತಾಳೆ. ಬಳಿಕ ‘ನಾನು ತಪ್ಪುಮಾಡಲಿಲ್ಲವಲ್ಲಾ’ ಎನ್ನುತ್ತಾಳೆ.
21 : ಜಗತ್ತು ಮೂರು ವಿಷಯಗಳ ನಿಮಿತ್ತ ಕಂಪಿಸುತ್ತದೆ: ನಾಲ್ಕರ ನಿಮಿತ್ತವೂ ಹೊರೆ ತಾಳಲಾರದಂತೆ ಆಗುತ್ತದೆ:
22 : ಅವು ಯಾವುವೆಂದರೆ: ಅರಸನಾದ ಆಳು. ಹೊಟ್ಟೆ ತುಂಬಿಸಿಕೊಂಡು ಸುತ್ತಾಡುವ ನೀಚ.
23 : ಯಾರಿಗೂ ಬೇಡದವಳಾಗಿದ್ದ ಮದುವೆಯಾದ ಚಂಡಿ, ಧರ್ಮಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.
24 : ಚಿಕ್ಕವು ಆದರೂ ದೊಡ್ಡ ಜ್ಞಾನವುಳ್ಳ ನಾಲ್ಕು ಜಂತುಗಳುಂಟು:
25 : ಇರುವೆಗಳು - ಬಲಹೀನ ಜಂತುಗಳು, ಆದರೂ ಸುಗ್ಗಿಯಲ್ಲೆ ಆಹಾರವನ್ನು ಸೇರಿಸಿಟ್ಟುಕೊಳ್ಳುತ್ತವೆ;
26 : ಬೆಟ್ಟದ ಮೊಲಗಳು - ದೊಡ್ಡ ಪ್ರಾಣಿಗಳೇನೂ ಅಲ್ಲ, ಆದರೂ ಬಂಡೆಗಳ ಬಿರುಕುಗಳಲ್ಲಿ ಮನೆಮಾಡಿಕೊಳ್ಳುತ್ತವೆ;
27 : ಮಿಡತೆಗಳು - ಅವಕ್ಕೆ ಅರಸನಿಲ್ಲ ಆದರೂ ಅವೆಲ್ಲ ದಂಡುದಂಡಾಗಿ ಹೊರಡುತ್ತವೆ;
28 : ಹಲ್ಲಿ - ಅಂಗೈ ಆಸರೆ ಪಡೆವ ಪ್ರಾಣಿ ಆದರೂ ಅರಮನೆಗಳಲ್ಲಿ ವಾಸ ಮಾಡುತ್ತದೆ.
29 : ಗಂಭೀರ ಗಮನದ ಮೂರು ಪ್ರಾಣಿಗಳುಂಟು: ಹೌದು ಗಂಭೀರ ಗತಿಯ ನಾಲ್ಕನೆಯ ಪ್ರಾಣಿಯೂ ಉಂಟು:
30 : ಯಾವುದಕ್ಕು ಹೆದರಿ ಓರೆಯಾಗದ ಮೃಗರಾಜನಾದ ಸಿಂಹ,
31 : ಕತ್ತೆತ್ತಿ ನಡೆಯುವ ಹುಂಜ, ಮಂದೆಗೆ ಮುಂದೆ ಹೋಗುವ ಹೋತ, ಸೈನ್ಯ ಸಮೇತನಾದ ರಾಜ.
32 : ನೀನು ಗರ್ವದಿಂದ ಮೂರ್ಖನಾಗಿ ನಡೆದಿದ್ದರೆ, ದುರಾಲೋಚನೆಯನ್ನು ಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೊ.
33 : ಹಾಲು ಕಡೆಯುವುದರಿಂದ ಬೆಣ್ಣೆ; ಮೂಗು ಹಿಂಡುವುದರಿಂದ ರಕ್ತ; ಕೋಪ ಎಬ್ಬಿಸುವುದರಿಂದ ಜಗಳ.

Holydivine