Proverbs - Chapter 19
Holy Bible

1 : ಕಪಟವಾಗಿ ಮಾತಾಡುವ ಮೂಢನಿಗಿಂತ ನಿರ್ದೋಷಿಯಾಗಿ ನಡೆವ ಬಡವನೇ ಲೇಸು.
2 : ಅರಿವಿಲ್ಲದ ಹುರುಪು ಸರಿಯಲ್ಲ; ದುಡುಕುವ ಕಾಲು ದಾರಿತಪ್ಪುವುದು ದಿಟ.
3 : ಮನುಷ್ಯನ ಬಾಳಿನ ಅಳಿವು ತನ್ನ ಮೂರ್ಖತನದಿಂದ; ಆದರೂ ಅವನು ಸಿಡಿದೇಳುವುದು ಸರ್ವೇಶ್ವರನ ವಿರುದ್ಧ
4 : ಧನವಂತನಿಗೆ ಸ್ನೇಹಿತರು ಬಹು ಮಂದಿ; ಬಡವನಿಗಿದ್ದ ಗೆಳೆಯನೂ ಪರಾರಿ.
5 : ಕಳ್ಳಸಾಕ್ಷಿ ದಂಡನೆಯನ್ನು ಪಡೆಯದಿರನು; ಸುಳ್ಳಾಡುವವನು ಅದನ್ನು ತಪ್ಪಿಸಿಕೊಳ್ಳಲಾರನು.
6 : ಉದಾರಿಯ ಕೃಪೆಕೋರುವವರು ಅನೇಕರು; ದಾನಶೂರನಿಗೆ ಎಲ್ಲರು ಸ್ನೇಹಿತರು.
7 : ಬಡವನನ್ನು ಬಂಧುಗಳೆಲ್ಲರು ಹಗೆಮಾಡುವರು; ಮಿತ್ರರೋ ಖರೆಯಾಗಿ ಅವನಿಗೆ ದೂರವಾಗುವರು; ಹಿಂಬಾಲಿಸಿ ಬರುವವರು ಅವನ ಬಾಯಿ ಮಾತನ್ನು ನಂಬರು.
8 : ಬುದ್ಧಿಯನ್ನು ಗಳಿಸುವವನು ತನಗೆ ತಾನೇ ಗೆಳೆಯನು; ವಿವೇಕವನ್ನು ಕಾಪಾಡುವವನು ಪಡೆಯುವನು ಏಳಿಗೆಯನ್ನು.
9 : ಕಳ್ಳಸಾಕ್ಷಿ ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ಹಾಳಾಗಿ ಹೋಗುವನು.
10 : ಭೋಗಜೀವನ ಬುದ್ಧಿಹೀನನಿಗೆ ಯೋಗ್ಯವಲ್ಲ; ದೊರೆಗಳ ಮೇಲೆ ದೊರೆತನ ದಾಸನಿಗೆ ತಕ್ಕುದಲ್ಲ.
11 : ವಿವೇಕಿಯು ಸಿಟ್ಟುಗೊಳ್ಳಲು ತಡಮಾಡುತ್ತಾನೆ; ತಪ್ಪನ್ನು ಕ್ಷಮಿಸುವುದೆಂದರೆ ಅವನಿಗೆ ಹೆಮ್ಮೆ.
12 : ರಾಜನ ರೋಷ ಸಿಂಹದ ಗರ್ಜನೆಯು; ಅವನ ದಯೆ ಹುಲ್ಲಿನ ಮೇಲಣ ಇಬ್ಬನಿಯು.
13 : ಬುದ್ಧಿಹೀನನಾದ ಮಗ ತಂದೆಗೆ ತರುತ್ತಾನೆ ಹಾನಿ; ಜಗಳವಾಡುವ ಹೆಂಡತಿ ತಟತಟನೆ ತೊಟ್ಟಿಕ್ಕುವ ಹನಿ.
14 : ಮನೆಮಾರು, ಆಸ್ತಿಪಾಸ್ತಿ ಬರುತ್ತವೆ ಪಿತ್ರಾರ್ಜಿತವಾಗಿ; ವಿವೇಕಿಯಾದ ಹೆಂಡತಿ ಸಿಕ್ಕುವುದು ಸರ್ವೇಶ್ವರನ ಅನುಗ್ರಹವಾಗಿ.
15 : ಮೈಗಳ್ಳತನ ಗಾಢನಿದ್ರೆಯಲ್ಲಿ ಮುಳುಗಿಸುವುದು; ಸೋಮಾರಿಯು ಹಸಿವಿನಿಂದ ಬಳಲುವನು.
16 : ದೈವಾಜ್ಞೆಯನ್ನು ಪಾಲಿಸುವವನು ತನ್ನನ್ನೇ ಕಾಪಾಡಿಕೊಳ್ಳುವನು; ದೈವವಾರ್ತೆಯ ಬಗ್ಗೆ ಅಜಾಗ್ರತನಾಗಿರುವವನು ಸಾಯುವನು.
17 : ಬಡವರಿಗೆ ತೋರುವ ದಯೆ ಸರ್ವೇಶ್ವರನಿಗೆ ಕೊಟ್ಟ ಸಾಲ; ಆ ಉಪಕಾರಕ್ಕೆ ಸರ್ವೇಶ್ವರನಿಂದಲೆ ಪ್ರತ್ಯುಪಕಾರ.
18 : ತಿದ್ದಿಕೊಳ್ಳುವನೆಂಬ ನಂಬಿಕೆಯಿರುವಾಗಲೆ ಮಗನನ್ನು ಶಿಕ್ಷಿಸು; ಇಲ್ಲವಾದರೆ ಅವನ ಅಳಿವಿಗೆ ನೀನೇ ಕಾರಣವಾಗುವೆ.
19 : ಕಡುಕೋಪಿ ದಂಡನೆಯನ್ನು ಅನುಭವಿಸಲಿ ಬಿಡು; ಒಮ್ಮೆ ಬಿಡಿಸಿದರೆ, ಬಾರಿಬಾರಿಗೂ ಬಿಡಿಸಬೇಕಾಗುವುದು.
20 : ಬುದ್ಧಿವಾದವನ್ನು ಕೇಳು, ತಿದ್ದುಪಾಟನ್ನು ಅಂಗೀಕರಿಸು; ಹಾಗೆ ಮಾಡಿದರೆ ಮುಂದಕ್ಕೆ ಜ್ಞಾನಿಯಾಗಿ ಬಾಳುವೆ.
21 : ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು.
22 : ಅತಿಯಾಸೆ ಗತಿಕೇಡು; ಇದ್ದೂ ಇಲ್ಲವೆನ್ನುವವನಿಗಿಂತ ಏನೂ ಇಲ್ಲದವನೆ ಲೇಸು.
23 : ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಜೀವಪ್ರಾಪ್ತಿ; ಅಂಥವನು ಸಂತುಷ್ಟನಾಗಿ ಬಾಳುವನು, ಅವನಿಗೆ ಕೇಡು ಸಂಭವಿಸದು.
24 : ಮೈಗಳ್ಳ ಕೈ ಹಾಕುತ್ತಾನೆ ತುತ್ತಿಗೆ; ಆದರೆ ಎತ್ತಲಾರ ಬಾಯ ಹತ್ತಿರಕ್ಕೆ.
25 : ಕುಚೋದ್ಯನಿಗೆ ಹೊಡೆ, ಮುಗ್ಧರು ಅದನ್ನು ಕಂಡು ಜಾಣರಾಗುವರು; ಜ್ಞಾನಿಯನ್ನು ಗದರಿಸಿದರೆ ಸಾಕು, ಅವನು ಮತ್ತಷ್ಟು ಜ್ಞಾನಿಯಾಗುವನು.
26 : ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು ನಿಂದೆ ಅವಮಾನಗಳಿಗೆ ತುತ್ತಾಗುವನು.
27 : ಮಗನೇ, ಉಪದೇಶ ಕೇಳುವುದನ್ನು ನಿಲ್ಲಿಸಬೇಡ; ನಿಲ್ಲಿಸಿದೆಯಾದರೆ ಬುದ್ಧಿಮಾತಿನಿಂದ ವಂಚಿತನಾಗುವೆ.
28 : ನೀಚಸಾಕ್ಷಿ ನ್ಯಾಯತೀರ್ಪನ್ನು ಮರ್ಯಾದಿಸನು; ದುಷ್ಟಸಾಕ್ಷಿ ದ್ರೋಹವನ್ನೂ ನುಂಗಿ ಬಿಡುವನು.
29 : ಕುಚೋದ್ಯನಿಗೆ ಕಾದಿದೆ ನ್ಯಾಯತೀರ್ಪು; ದಡ್ಡನ ಬೆನ್ನಿಗೆ ಬೀಳಲಿದೆ ದೊಣ್ಣೆಪೆಟ್ಟು.

Holydivine