Proverbs - Chapter 2
Holy Bible

1 : ಮಗನೇ, ನನ್ನ ಮಾತುಗಳನ್ನು ಅಂಗೀಕರಿಸು; ನಿಧಿಯಂತೆ ನನ್ನ ವಿಧಿಗಳನ್ನು ಕಾದಿರಿಸು.
2 : ಜ್ಞಾನದ ಕಡೆಗೆ ಕಿವಿಗೊಡು, ವಿವೇಕದ ಕಡೆಗೆ ಮನತಿರುಗಿಸು.
3 : ಬುದ್ಧಿಗಾಗಿ ಮೊರೆಯಿಡು, ವಿವೇಕಕ್ಕಾಗಿ ಕೂಗಿಕೊಳ್ಳು,
4 : ಹಣದಂತೆ ಅದನ್ನು ಹುಡುಕು, ನಿಧಿಯಂತೆ ಅದನ್ನು ತಡಕು.
5 ಆಗ ಅರಿತುಕೊಳ್ಳುವೆ ದೈವಭಯವನ್ನು, ಪಡೆದುಕೊಳ್ಳುವೆ ದೈವಜ್ಞಾನವನ್ನು.
6 : ಜ್ಞಾನವನ್ನು ನೀಡುವಾತ ಸರ್ವೇಶ್ವರನೇ; ತಿಳುವಳಿಕೆ, ವಿವೇಕ ಹೊರಡುವುದು ಆತನ ಬಾಯಿಂದಲೇ.
7 : ಜ್ಞಾನವನ್ನು ಸಜ್ಜನರಿಗೆ ಸೇರಿಸಿಡುವನಾತ
8 : ನ್ಯಾಯಮಾರ್ಗವನ್ನು ಕಾಯುವನಾತ, ಭಕ್ತರ ಹಾದಿಯನ್ನು ಭದ್ರವಾಗಿಸುವನಾತ.
9 : ಆಗ ನೀತಿನ್ಯಾಯಗಳನ್ನು ನೀನರಿತುಕೊಳ್ಳುವೆ, ಸಕಲ ಸನ್ಮಾರ್ಗಸತ್ಯತೆಗಳನ್ನೂ ತಿಳಿದುಕೊಳ್ಳುವೆ.
10 : ಜ್ಞಾನ ಉದಯಿಸುವುದು ನಿನ್ನ ಆತ್ಮದೊಳಗೆ.
11 : ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು
12 : ಹೀಗೆ ದುರ್ಮಾರ್ಗದಿಂದ ತಪ್ಪಿಸಿಕೊಳ್ಳುವೆ, ಮೂರ್ಖ ಮಾತುಗಾರನಿಂದ ಮರೆಯಾಗುವೆ.
13 : ಅಂಥವರು ಹಿಡಿವುದು ಕತ್ತಲು ಹಾದಿಯನ್ನು, ತೊರೆದುಬಿಡುವರು ಸತ್ಯದ ಮಾರ್ಗವನ್ನು.
14 : ಅವರು ಸಂತೋಷಿಸುವುದು ಕೇಡನ್ನು ಮಾಡುವುದರಲ್ಲಿ. ಉಲ್ಲಾಸಿಸುವುದು ಕೆಟ್ಟವರ ದುಷ್ಟತನದಲ್ಲಿ,
15 : ಅವರ ಮಾರ್ಗ ಅಂಕು, ಅವರ ನಡತೆ ಡೊಂಕು.
16 : ವಿವೇಕವು ನಿನ್ನನ್ನು ತಪ್ಪಿಸುವುದು ಜಾರಳಿಂದ, ಸವಿಮಾತಾಡುವ ಆ ಪರಸ್ತ್ರೀಯಳಿಂದ.
17 : ನಿನ್ನನ್ನು ಅದು ತಪ್ಪಿಸುವುದು ತನ್ನ ಯೌವನಕಾಲದ ಪ್ರಿಯನನ್ನು ತ್ಯಜಿಸಿದವಳಿಂದ, ತನ್ನ ದೇವರ ಮುಂದೆ ಮಾಡಿದ ಒಪ್ಪಂದವನ್ನು ಮರೆತವಳಿಂದ.
18 : ಅವಳ ಮನೆ ಪಾತಾಳಕ್ಕಿಳಿಸುವ ದಾರಿ, ಅವಳ ಮಾರ್ಗ ಪ್ರೇತಲೋಕಕ್ಕೆ ಹಾದಿ.
19 : ಅವಳ ಬಳಿಗೆ ಹೋಗುವವರು ಹಿಂದಿರುಗುವುದಿಲ್ಲ, ಅವರಿಗೆ ಜೀವಮಾರ್ಗ ಪುನಃ ದೊರಕುವುದಿಲ್ಲ.
20 : ನೀನಾದರೊ ಸಜ್ಜನರ ಮಾರ್ಗದಲ್ಲಿ ನಡೆವೆ, ನೀತಿವಂತರ ಹಾದಿಯನ್ನು ಹಿಡಿವೆ
21 : ಸತ್ಯವಂತರು ನಾಡಿನಲ್ಲಿ ಬಾಳುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.
22 : ದುರುಳರಾದರೋ ನಾಡಿನಿಂದ ಬೇರ್ಪಡುವರು, ದ್ರೋಹಿಗಳು ಅಲ್ಲಿಂದ ಅಳಿದು ನಾಶವಾಗುವರು.

Holydivine