Proverbs - Chapter 29
Holy Bible

1 : ಎಷ್ಟು ಗದರಿಸಿದರೂ ತಗ್ಗದ ಹಟಮಾರಿ ಫಕ್ಕನೆ ಬೀಳುವನು, ಮತ್ತೆ ಏಳನು.
2 : ಸಜ್ಜನರ ಅಧಿಕಾರದಿಂದ ಜನರಿಗೆ ನಲಿದಾಟ; ದುರ್ಜನರ ಆಳ್ವಿಕೆಯಿಂದ ಜನರಿಗೆ ನರಳಾಟ.
3 : ಜ್ಞಾನಪ್ರಿಯ ಮಗನಿಂದ ತಂದೆಗೆ ಸಂತೋಷ; ವೇಶ್ಯೆಯರ ಸಂಗದಿಂದ ಆಸ್ತಿ ವಿನಾಶ.
4 : ನ್ಯಾಯಪಾಲಕ ರಾಜನಿಂದ ನಾಡಿನ ಅಭಿವೃದ್ಧಿ; ಲಂಚಕೋರ ಅರಸನಿಂದ ದೇಶ ಹಿಡಿವುದು ವಿನಾಶದ ಹಾದಿ.
5 : ನೆರೆಯವನನ್ನು ಅಳತೆಮೀರಿ ಹೊಗಳುವವನು ಅವನ ಕಾಲಿಗೆ ಬಲೆಯನ್ನು ಒಡ್ಡುವನು.
6 : ಕೆಟ್ಟವನು ತನ್ನ ಪಾಪಪಾಶದಲ್ಲೆ ಸಿಕ್ಕಿಬೀಳುವನು; ಒಳ್ಳೆಯವನು ಉಲ್ಲಾಸದಿಂದ ಹಾಡಿ ಹರ್ಷಿಸುವನು.
7 : ನೀತಿವಂತನು ದಲಿತರ ಹಕ್ಕುಬಾಧ್ಯತೆಯನ್ನು ಕಾದಿರಿಸುವನು; ದುಷ್ಟರಿಗಿಲ್ಲ ಅದನ್ನು ಗ್ರಹಿಸುವಷ್ಟು ಅಕ್ಕರೆ.
8 : ಕುಚೋದ್ಯರು ಪಟ್ಟಣಕ್ಕೆ ಬೆಂಕಿ ಹಚ್ಚುವರು; ಜ್ಞಾನಿಗಳೊ ರೋಷಾಗ್ನಿಯನ್ನು ಆರಿಸುವರು.
9 : ಮೂರ್ಖನ ಸಂಗಡ ಜ್ಞಾನಿ ತರ್ಕಮಾಡಿದ್ದೆ ಆದರೆ ಆ ಮೂರ್ಖ ರೇಗಬಹುದು, ನಗಬಹುದು, ತರ್ಕಮಾತ್ರ ಮುಗಿಯದು.
10 : ಕೊಲೆಪಾತಕರು ನೀತಿವಂತನನ್ನು ದ್ವೇಷಿಸುವರು; ಅಂಥವನ ಪ್ರಾಣಕ್ಕೂ ಹೊಂಚುಹಾಕುವರು.
11 : ಮೂಢನು ತನ್ನ ಕೋಪವನ್ನೆಲ್ಲ ವ್ಯಕ್ತಪಡಿಸುವನು; ಜ್ಞಾನಿ ತನ್ನ ಕೋಪವನ್ನು ತಡೆಹಿಡಿದು ಶಮನಗೊಳ್ಳುವನು.
12 : ಸುಳ್ಳುವರದಿಗೆ ಕಿವಿಗೊಡುವ ರಾಜಸೇವಕರೆಲ್ಲರು ದುರುಳರು.
13 : ದಲಿತನೂ, ದಬ್ಬಾಳಿಕೆ ನಡೆಸುವವನೂ ಸ್ಥಿತಿಯಲ್ಲಿ ಎದುರುಬದುರು; ಆದರೆ ಸರ್ವೇಶ್ವರನೆ ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವವನು.
14 : ಬಡಬಗ್ಗರನ್ನು ನ್ಯಾಯವಾಗಿ ಆಳುವ ಅರಸನ ಸಿಂಹಾಸನ ಸದಾ ಸುಭದ್ರ.
15 : ಬೆತ್ತ ಬೆದರಿಕೆಗಳು ಜ್ಞಾನ ತರುತ್ತವೆ; ಶಿಕ್ಷಿಸದೆ ಬಿಟ್ಟ ಮಗನು ತಾಯಿಗೆ ತರುತ್ತಾನೆ ಅಪಕೀರ್ತಿ.
16 : ದುಷ್ಟರ ವೃದ್ಧಿ ಪಾಪಾಭಿವೃದ್ಧಿ; ಅವರ ಪತನವನ್ನು ಸಜ್ಜನರು ಕಣ್ಣಾರೆಕಾಣುವರು.
17 : ನಿನ್ನ ಮಗನನ್ನು ದಂಡಿಸಿ ಸರಿಪಡಿಸು; ಅವನು ನಿನ್ನನ್ನು ಸಂತೋಷಪಡಿಸುವನು, ಮನೋಲ್ಲಾಸ ಗೊಳಿಸುವನು.
18 : ಪ್ರವಾದನೆಗಳಿಲ್ಲದಿರುವಾಗ ಪ್ರಜೆಗಳು ಅಂಕೆ ಮೀರಿ ನಡೆಯುತ್ತಾರೆ, ಧರ್ಮಶಾಸ್ತ್ರಾನುಸಾರ ನಡೆಯುವವನು ಭಾಗ್ಯವಂತನು.
19 : ಮಾತಿನಿಂದ ಮಾತ್ರ ಸೇವಕನನ್ನು ತಿದ್ದಲಾಗದು; ಮಾತುಕಿವಿಗೆ ಬಿದ್ದರೂ ಅದನ್ನು ಗ್ರಹಿಸಲಾರದು.
20 : ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲು ಮೂಢನ ಸುಧಾರಣೆ ಹೆಚ್ಚು ಸಾಧ್ಯ.
21 : ಬಾಲ್ಯದಿಂದ ಕೋಮಲವಾಗಿ ಸಾಕಲಾದ ಸೇವಕನು, ಕೊನೆಗೆ ಕುಮಾರನಂತೆ ನಿನ್ನದೆಲ್ಲವನ್ನು ಕಿತ್ತುಕೊಂಡಾನು.
22 : ಕೋಪಿಷ್ಠನು ಜಗಳವೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.
23 : ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ಇಳಿಸುವುದು; ನಮ್ರತೆ ಅವನನ್ನು ಗೌರವಸ್ಥಿತಿಗೆ ಏರಿಸುವುದು.
24 : ಚೋರರ ಮಿತ್ರ ಸ್ವಂತ ಪ್ರಾಣಕ್ಕೆ ಶತ್ರು, ಶಾಪ ಕಿವಿಗೆ ಬೀಳುತ್ತಿದ್ದರೂ ಆತ ಮೌನ ತಾಳುವನು.
25 : ಮಾನವರಿಗೆ ಹೆದರಿ ನಡೆವವನು ಬಲೆಗೆ ಸಿಕ್ಕಿಬೀಳುವನು; ಸರ್ವೇಶ್ವರನಲ್ಲಿ ನಂಬಿಕೆಯಿಟ್ಟವನು ಸಂರಕ್ಷಣೆ ಹೊಂದುವನು.
26 : ರಾಜ್ಯಾಧಿಕಾರಿಗಳಲ್ಲಿ ದಯೆಯಾಚಿಸುವವರು ಅನೇಕರು; ಪ್ರತಿಯೊಬ್ಬನಿಗೆ ಸರಿಯಾದ ನ್ಯಾಯದೊರಕಿಸುವವನು ಸರ್ವೇಶ್ವರನು.
27 : ಸಜ್ಜನರಿಗೆ ದುರ್ಮಾರ್ಗಿ ತಿರಸ್ಕøತನು; ದುರ್ಜನರಿಗೆ ಸನ್ಮಾರ್ಗಿ ತಿರಸ್ಕøತನು.

Holydivine