Proverbs - Chapter 10
Holy Bible

1 : ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.
2 : ಅನ್ಯಾಯದ ಸಂಪತ್ತು ನಿಷ್ಪ್ರಯೋಜಕ; ಧರ್ಮವು ಮೃತ್ಯುವಿನಿಂದ ರಕ್ಷಕ.
3 : ಸತ್ಪುರುಷನನ್ನು ಸರ್ವೇಶ್ವರ ಹಸಿವೆಗೊಳಿಸನು; ದುಷ್ಟನ ಆಶೆಯನ್ನಾತ ಭಂಗಪಡಿಸುವನು.
4 : ಜೋಲುಗೈ ತರುತ್ತದೆ ದಾರಿದ್ರ್ಯ; ಚುರುಕು ಕೈ ತರುತ್ತದೆ ಐಶ್ವರ್ಯ.
5 : ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತ; ಕೊಯ್ಲಿನಲ್ಲಿ ತೂಕಡಿಸುವವನು ಲಜ್ಜೆಗೆಡುಕ.
6 : ಸಜ್ಜನರ ತಲೆಯ ಮೇಲೆ ಆಶೀರ್ವಾದ; ದುರ್ಜನರ ಬಾಯಿ ಹಿಂಸಾಚಾರದ ಮುಚ್ಚಳ.
7 : ಸಜ್ಜನರ ಸ್ಮರಣೆ ಮಂಗಳಕರ; ದುರ್ಜನರ ಹೆಸರು ಅಸಹ್ಯಕರ.
8 : ಬುದ್ಧಿಜೀವಿಗಳು ಆಜ್ಞೆಗಳನ್ನು ಅಂಗೀಕರಿಸುವರು; ಹರಟೆಕೋರ ಹುಚ್ಚರು ನೆಲ ಕಚ್ಚುವರು.
9 : ನಿರ್ದೋಷಿ ನಡೆಯುವನು ನಿರ್ಭಯನಾಗಿ; ವಕ್ರಮಾರ್ಗಿ ಸಿಕ್ಕಿಬಿಡುವನು ಬಟ್ಟ ಬಯಲಾಗಿ.
10 : ಕಣ್ಣು ಮಿಟುಕಿಸುವವನು ತೊಂದರೆಗೆ ಕಾರಣನು; ನೆಟ್ಟಗೆ ಗದರಿಸುವವನು ಸಮಾಧಾನಕರನು.
11 : ಸಜ್ಜನನ ಬಾಯಿ ಜೀವನ ಬುಗ್ಗೆ; ದುರ್ಜನನ ಬಾಯಿತುಂಬ ಚಿತ್ರಹಿಂಸೆ.
12 : ಜಗಳವೆಬ್ಬಿಸುತ್ತದೆ ದ್ವೇಷ; ಪಾಪಗಳ ಮರೆಸುತ್ತದೆ ಪ್ರೇಮ.
13 : ಬುದ್ಧಿವಂತನ ಬಾಯಿಂದ ಜ್ಞಾನ; ಬುದ್ಧಿಹೀನನ ಬೆನ್ನಿಗೆ ಬೆತ್ತ.
14 : ಬುದ್ಧಿವಂತರು ಜ್ಞಾನದ ಭಂಡಾರಿಗಳು; ಮೂರ್ಖನ ಮಾತುಗಳು ವಿನಾಶದ ಸೋಪಾನಗಳು.
15 : ಐಶ್ವರ್ಯವಂತನಿಗೆ ಐಶ್ವರ್ಯವೇ ಬಲವಾದ ಡೆಂಕಣ; ಬಡವನ ಅಳಿವಿಗೆ ಬಡತನವೇ ಕಾರಣ.
16 : ಸಜ್ಜನರ ದುಡಿತ ಜೀವಾಸ್ಪದ; ದುರ್ಜನರ ಆದಾಯ ಪಾಪಾಸ್ಪದ.
17 : ಶಿಸ್ತನ್ನು ಕೈಗೊಳ್ಳುವವನು ಜೀವಮಾರ್ಗದಲ್ಲಿರುವವನು; ತಿದ್ದುಪಾಟನ್ನು ತಿರಸ್ಕರಿಸುವವನು ದಾರಿ ತಪ್ಪುವನು.
18 : ಹೊಟ್ಟೆಯಲ್ಲಿ ಹಗೆ ಇಟ್ಟುಕೊಳ್ಳುವವನು ಸಟೆಗಾರ; ಚಾಡಿಹೇಳಿ ಕೇಡುಮಾಡುವುದು ಮೂರ್ಖತನ.
19 : ವಾಚಾಳಿಗೆ ಪಾಪ ತಪ್ಪದು; ಮೌನಿಗೆ ಜ್ಞಾನ ಕೆಡದು.
20 : ಸಜ್ಜನರ ನಾಲಿಗೆ ಚಕ್ಕಬೆಳ್ಳಿ; ದುರ್ಜನರ ಹೃದಯ ಹುಲ್ಲುಕಡ್ಡಿ.
21 : ಸಜ್ಜನರ ಭಾಷಣದಿಂದ ಬಹು ಜನರಿಗೆ ಪೋಷಣ; ಬುದ್ಧಿಹೀನತೆಯಿಂದ ಮೂರ್ಖರಿಗೆ ನಾಶನ.
22 : ಸರ್ವೇಶ್ವರನ ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟ ದುಃಖ.
23 : ಮೂರ್ಖನಿಗೆ ಕೆಡುಕುಮಾಡುವ ಚಟ; ಬುದ್ಧಿವಂತನಿಗೆ ಜ್ಞಾನಗಳಿಸುವ ಹಟ.
24 : ದುರ್ಜನರು ಭಯಪಡುವುದೇ ಸಂಭವಿಸುವುದು; ಸಜ್ಜನರು ಇಷ್ಟಪಡುವುದೇ ಲಭಿಸುವುದು.
25 : ಬಿರುಗಾಳಿ ಬೀಸಿದರೆ ದುರ್ಜನರು ಇಲ್ಲವಾಗುವರು; ಸಜ್ಜನರಾದರೋ ಸದಾಕಾಲ ಸ್ಥಿರವಾಗಿ ನಿಲ್ಲುವರು.
26 : ಹಲ್ಲಿಗೆ ಹುಳಿ ಹೇಗೋ, ಕಣ್ಣಿಗೆ ಹೊಗೆ ಹೇಗೋ; ಯಜಮಾನನಿಗೆ ಮೈಗಳ್ಳನು ಹಾಗೆ.
27 : ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ಬಾಳುವರು ದೀರ್ಘಕಾಲ; ದುರುಳ ಜನರ ಜೀವಮಾನವೋ ಅಲ್ಪಕಾಲ.
28 : ಸಜ್ಜನರ ನಂಬಿಕೆ ಆನಂದಕರ; ದುರ್ಜನರ ನಿರೀಕ್ಷೆ ವಿನಾಶಕರ.
29 : ಸನ್ಮಾರ್ಗಿಗೆ ಸರ್ವೇಶ್ವರನೆ ಆಶ್ರಯ; ಕೆಡುಕನಿಗೆ ಆತನೆ ಪ್ರಳಯ.
30 : ಸಜ್ಜನರು ಎಂದಿಗೂ ಕದಲರು; ದುರ್ಜನರು ನಾಡಿನಲ್ಲಿ ನಿಲ್ಲರು.
31 : ಸಜ್ಜನರ ಬಾಯಲ್ಲಿ ಜ್ಞಾನ ಮೊಳೆಯುವುದು; ನೀಚನ ನಾಲಿಗೆಯೂ ಕತ್ತರಿಸಿ ಹೋಗುವುದು.
32 : ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.

Holydivine