Numbers - Chapter 6
Holy Bible

1 : ಸರ್ವೇಶ್ವರಸ್ವಾಮಿ, ಮೋಶೆಗೆ ಹೀಗೆಂದರು:
2 : “ನೀನು ಇಸ್ರಯೇಲರಿಗೆ ಆಜ್ಞಾಪಿಸಬೇಕಾದುದು ಇದು - ಯಾವ ಗಂಡಸೇ ಆಗಲಿ, ಹೆಂಗಸೇ ಆಗಲಿ, ನಾಜೀರರ ವ್ರತವನ್ನು ಅಂದರೆ, ಸರ್ವೇಶ್ವರನಿಗೆ ತನ್ನನ್ನೇ ಪ್ರತಿಷ್ಠಿಸಿಕೊಳ್ಳುವ ವಿಶೇಷ ವ್ರತವನ್ನು ಕೈಗೊಂಡಾಗ
3 : ದ್ರಾಕ್ಷಾರಸವನ್ನು ಹಾಗೂ ಮದ್ಯಪಾನವನ್ನು ಮುಟ್ಟಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು. ದ್ರಾಕ್ಷಿ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿ ಅಥವಾ ಒಣಗಿದ ದ್ರಾಕ್ಷಿ ಹಣ್ಣನ್ನು ತಿನ್ನಬಾರದು.
4 : ಅಂಥವನು ವ್ರತ ಕೈಗೊಂಡು ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ದ್ರಾಕ್ಷಾ ಬಳ್ಳಿಯಿಂದ ಉತ್ಪನ್ನವಾದ ಹೀಚನ್ನಾಗಲಿ, ಸಿಪ್ಪೆಯನ್ನಾಗಲಿ ತಿನ್ನಬಾರದು.
5 : “ಅವನು ತನ್ನ ವ್ರತ ದಿನಗಳಲ್ಲೆಲ್ಲಾ ಕ್ಷೌರ ಮಾಡಿಸಿಕೊಳ್ಳಬಾರದು. ತನ್ನನ್ನೇ ಪ್ರತಿಷ್ಠಿಸಿ ಕೊಂಡ ದಿನಗಳು ಮುಗಿಯುವ ತನಕ ವ್ರತಬದ್ಧನಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬೆಳೆಯಬಿಡಬೇಕು.
6 : ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ಯಾವ ಶವವನ್ನು ಮುಟ್ಟಬಾರದು.
7 : ತಾಯಿತಂದೆ, ಅಣ್ಣತಮ್ಮ, ಅಕ್ಕತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿಮಿತ್ತ ಕೈಗೊಂಡ ವ್ರತ ಅವನ ತಲೆಯ ಮೇಲಿದೆ;
8 : ತಾನು ಪ್ರತಿಷ್ಠಿಸಿಕೊಂಡಿರುವ ದಿನಗಳಲ್ಲೆಲ್ಲಾ ಅವನು ಸರ್ವೇಶ್ವರನಿಗೆ ವಿೂಸಲಾಗಿಯೇ ಇರಬೇಕು.
9 : “ಆಕಸ್ಮಿಕವಾಗಿ ಯಾರಾದರೂ ಅವನ ಬಳಿಯಲ್ಲೇ ಸತ್ತು, ಅವನು ಪ್ರತಿಷ್ಠಿಸಿಕೊಂಡಿದ್ದ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಂದು ಅಂದರೆ ಶುದ್ಧೀಕರಣ ದಿನದಂದು ತಲೆಯನ್ನು ಕ್ಷೌರ ಮಾಡಿಸಿಕೊಳ್ಳಬೇಕು.
10 : ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಕೊಡಬೇಕು.
11 : ಯಾಜಕನು ದೋಷಪರಿಹಾರಬಲಿಯನ್ನಾಗಿ ಒಂದನ್ನೂ ಸಂಪೂರ್ಣ ದಹನ ಬಲಿಯನ್ನಾಗಿ ಇನ್ನೊಂದನ್ನೂ ಸಮರ್ಪಿಸಲಿ. ಹೀಗೆ ಶವಸೋಂಕಿದವನಿಗಾಗಿ ದೋಷಪರಿಹಾರ ಮಾಡಿ ಅವನ ತಲೆಗೂದಲು ಅಂದಿನಿಂದ ಪವಿತ್ರವೆಂದು ನಿರ್ಣಯಿಸಲಿ.
12 : ಅವನು ಎಷ್ಟು ದಿನಗಳವರೆಗೆ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನೋ ಅಷ್ಟು ದಿನಗಳವರೆಗೆ ಹೊಸದಾಗಿ ತನ್ನನ್ನು ಸರ್ವೇಶ್ವರನಿಗೆ ಪ್ರತಿಷ್ಠಿಸಿಕೊಳ್ಳಬೇಕು. ಅದಲ್ಲದೆ ಪ್ರಾಯಶ್ಚಿತ್ತಬಲಿಯಾಗಿ ಒಂದು ವರ್ಷದ ಕುರಿಯನ್ನು ಸಮರ್ಪಿಸಬೇಕು. ಮೊದಲು ಮಾಡಿದ್ದ ವ್ರತಕ್ಕೆ ವಿಘ್ನಪ್ರಾಪ್ತವಾದ್ದರಿಂದ ಕಳೆದುಹೋದ ದಿನಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.
13 : “ನಾಜೀರ ವ್ರತಸ್ಥನು ತನ್ನ ವ್ರತಾವಧಿ ಮುಗಿದಾಗ ಈ ಕ್ರಮವನ್ನು ಅನುಸರಿಸಬೇಕು. ಅವನು ದೇವದರ್ಶನದ ಗುಡಾರದ ಬಾಗಿಲಿಗೆ ಬಂದು ಸರ್ವೇಶ್ವರನಿಗೆ ಈ ಕಾಣಿಕೆಗಳನ್ನು ಸಲ್ಲಿಸಬೇಕು:
14 : ದಹನಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಟಗರು, ಪಾಪಪರಿಹಾರಬಲಿ ಗಾಗಿ ಕಳಂಕರಹಿತವಾದ ಒಂದು ವರ್ಷದ ಕುರಿ, ಸಮಾಧಾನಬಲಿಗಾಗಿ ಕಳಂಕರಹಿತವಾದ ಒಂದು ಟಗರು.
15 : ಇದಲ್ಲದೆ ಒಂದು ಬುಟ್ಟಿ ತುಂಬ ಎಣ್ಣೆಬೆರೆಸಿದ ಗೋದಿ ಹಿಟ್ಟಿನ ಹುಳಿಯಿಲ್ಲದ ರೊಟ್ಟಿಗಳು, ಎಣ್ಣೆಹಾಕಿದ ಹುಳಿಯಿಲ್ಲದ ಕಡುಬುಗಳು ಮತ್ತು ಮೇಲೆ ಹೇಳಿದ ಬಲಿಗಳ ಸಮೇತ ಕೊಡಬೇಕಾದ ಧಾನ್ಯದ್ರವ್ಯ-ಪಾನದ್ರವ್ಯಗಳು, ಇವುಗಳನ್ನೆಲ್ಲಾ ಸಮರ್ಪಿಸಬೇಕು.
16 : “ಯಾಜಕನು ಇವುಗಳನ್ನು ಸರ್ವೇಶ್ವರನ ಸನ್ನಿಧಿಗೆ ತಂದು ನಾಜೀರ ವ್ರತ ಪಾಪಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಸಮರ್ಪಿಸಬೇಕು.
17 : ಅನಂತರ ಟಗರನ್ನೂ ಬುಟ್ಟಿ ತುಂಬ ಹುಳಿಯಿಲ್ಲದ ರೊಟ್ಟಿಗಳನ್ನೂ ಸರ್ವೇಶ್ವರನಿಗೆ ಸಮಾಧಾನ ಯಜ್ಞವಾಗಿ ಸಮರ್ಪಿಸಬೇಕು. ತಂದ ಧಾನ್ಯದ್ರವ್ಯ - ಪಾನದ್ರವ್ಯಗಳನ್ನು ಯಾಜಕನು ನೈವೇದ್ಯ ಮಾಡಬೇಕು.
18 : ಬಳಿಕ ನಾಜೀರ ವ್ರತಸ್ಥನು ತನ್ನ ದೀಕ್ಷೆಯನ್ನು ಸೂಚಿಸುವ ತಲೆಯ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರ ಮಾಡಿಸಿಕೊಳ್ಳಬೇಕು. ಆ ಕೂದಲನ್ನು ಸಮಾಧಾನಬಲಿಯ ದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.
19 : “ತರುವಾಯ ಯಾಜಕರು ಆ ಟಗರಿನ ಬೆಂದ ಮುಂದೊಡೆಯನ್ನು ಬುಟ್ಟಿಯಲ್ಲಿನ ಹುಳಿ ಇಲ್ಲದ ಒಂದು ರೊಟ್ಟಿಯನ್ನು ಹಾಗೂ ಹುಳಿ ಇಲ್ಲದ ಒಂದು ಕಡುಬನ್ನು ತೆಗೆದುಕೊಂಡು ನಾಜೀರ ವ್ರತಸ್ಥನು ಕ್ಷೌರ ಮಾಡಿಸಿಕೊಂಡ ನಂತರ ಅವನ ಕೈಯಲ್ಲಿ ಇಡಬೇಕು; ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿ ಎತ್ತಬೇಕು.
20 : ಇದು ನೈವೇದ್ಯವಾಗಿ ಆರತಿಯೆತ್ತುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಬೇಕು. ಇದಾದ ನಂತರ ನಾಜೀರ ವ್ರತಸ್ಥನು ದ್ರಾಕ್ಷಾರಸವನ್ನು ಪಾನಮಾಡಬಹುದು.
21 : “ಇದುವೇ ನಾಜೀರ ವ್ರತಸ್ಥರು ಅನುಸರಿಸಬೇಕಾದ ವಿಧಿ; ತಮ್ಮ ವ್ರತಪೂರ್ತಿಯಾಗಿ ಸರ್ವೇಶ್ವರನಿಗೆ ಅವರು ಸಮರ್ಪಿಸಬೇಕಾದ ಕಾಣಿಕೆ. ಅವರು ತಮ್ಮ ಶಕ್ತಿಗನುಸಾರ ಹೆಚ್ಚಾಗಿಯೂ ಕೊಡಬಹುದು. ಆದರೆ ತಾವು ಕೊಡುತ್ತೇವೆಂದು ಹರಕೆ ಮಾಡಿದಷ್ಟನ್ನು ವ್ರತ ವಿಧಿಗನುಸಾರ ಕೊಡಲೇಬೇಕು.”
22 : ಸರ್ವೇಶ್ವರ ಮೋಶೆಗೆ ಹೀಗೆಂದರು:
23 : “ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು: ‘ನೀವು ಇಸ್ರಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳುಬೇಕು -
24 : ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿ, ಕಾಪಾಡಲಿ!
25 : ಸರ್ವೇಶ್ವರ ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ, ನಿಮಗೆ ದಯೆತೋರಲಿ!
26 : ಸರ್ವೇಶ್ವರ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು, ಶಾಂತಿಯನ್ನು ಅನುಗ್ರಹಿಸಲಿ!’
27 : ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಚರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.” ಗೋತ್ರನಾಯಕರ ಕಾಣಿಕೆಗಳು

Holydivine