Numbers - Chapter 25
Holy Bible

1 : ಇಸ್ರಯೇಲರು ಶಿಟ್ಟೀಮಿನಲ್ಲಿ ವಾಸಮಾಡುತ್ತಿದ್ದಾಗ ಮೋವಾಬ್ ಮಹಿಳೆಯರೊಡನೆ ಸಹವಾಸ ಮಾಡತೊಡಗಿದರು.
2 : ಆ ಮಹಿಳೆಯರು ತಮ್ಮ ದೇವತೆಗಳಿಗೆ ಮಾಡಿದ ಬಲಿಔತಣಗಳಲ್ಲಿ ಭಾಗಿಗಳಾಗಲು ಇಸ್ರಯೇಲರನ್ನು ಆಹ್ವಾನಿಸುತ್ತಿದ್ದರು. ಇವರು ಪ್ರಸಾದ ಸ್ವೀಕರಿಸಿ ಆ ದೇವತೆಗಳಿಗೆ ತಲೆಬಾಗುತ್ತಿದ್ದರು.
3 : ಹೀಗೆ ಇಸ್ರಯೇಲರು ಪೆಗೋರದ ‘ಬಾಳ್’ ದೇವತೆಯ ಭಕ್ತರಾದರು. ಇದರಿಂದ ಸರ್ವೇಶ್ವರಸ್ವಾಮಿ ಕೋಪಗೊಂಡರು.
4 : ಮೋಶೆಗೆ, “ಈ ಜನರ ಮುಖಂಡರೆಲ್ಲರನ್ನು ಹಿಡಿಸಿ, ನನ್ನ ಆಜ್ಞಾನುಸಾರ ಬಹಿರಂಗವಾಗಿ ಮರಣದಂಡನೆಗೆ ಗುರಿಮಾಡಿಸು. ಆಗ ನನ್ನ ಕೋಪಾಗ್ನಿ ಇಸ್ರಯೇಲರಿಂದ ತೊಲಗುವುದು,” ಎಂದರು.
5 : ಅಂತೆಯೇ ಮೋಶೆ ಇಸ್ರಯೇಲರ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಪ್ರತಿಯೊಬ್ಬನು ಪೆಗೋರದ ಬಾಳ್‍ದೇವತೆಗೆ ಪೂಜಿಸುವ ತನ್ನ ತನ್ನ ವಂಶದವರಿಗೆ ಪ್ರಾಣಶಿಕ್ಷೆಯನ್ನು ವಿಧಿಸಬೇಕು,” ಎಂದು ಆಜ್ಞಾಪಿಸಿದನು.
6 : ಇಸ್ರಯೇಲರ ಸರ್ವಸಮುದಾಯದವರು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ವಿಲಾಪಿಸುತ್ತಿದ್ದರು. ಇಸ್ರಯೇಲನಾದ ಒಬ್ಬ ವ್ಯಕ್ತಿ ಮೋಶೆಗೂ ಸರ್ವಸಮೂಹದವರಿಗೂ ಕಾಣುವಂತೆ ಒಬ್ಬ ಮಿದ್ಯಾನ್ ಮಹಿಳೆಯನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋದನು.
7 : ಕೂಡಲೆ ಮಹಾ ಯಾಜಕ ಆರೋನನ ಮೊಮ್ಮಗನೂ ಹಾಗು ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ಕೈಗೆ ತೆಗೆದುಕೊಂಡನು.
8 : ಆ ಇಸ್ರಯೇಲ ವ್ಯಕ್ತಿಯ ಹಿಂದೆಯೇ ಹೋಗಿ, ಅವನ ಒಳಕೋಣೆಯನ್ನು ಹೊಕ್ಕು ಅವರಿಬ್ಬರನ್ನು, ಅಂದರೆ ಆ ಇಸ್ರಯೇಲನನ್ನು ಮತ್ತು ಆ ಮಹಿಳೆಯನ್ನು ಒಂದೇ ಬಾರಿಗೆ ಹೊಟ್ಟೆಯಲ್ಲಿ ತಿವಿದುಕೊಂದನು. ಹೀಗೆ ಇಸ್ರಯೇಲರಿಗೆ ಒದಗಿದ್ದ ಜಾಡ್ಯ ನಿಂತು ಹೋಯಿತು.
9 : ಇಪ್ಪತ್ತುನಾಲ್ಕು ಸಾವಿರ ಮಂದಿ ಈಗಾಗಲೇ ಈ ಜಾಡ್ಯದಿಂದ ಸತ್ತಿದ್ದರು.
10 : ಸರ್ವೇಶ್ವರ ಮೋಶೆಗೆ ಹೀಗೆಂದರು:
11 : “ಮಹಾಯಾಜಕ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಇಸ್ರಯೇಲರ ಮೇಲೆ ನನಗಿದ್ದ ಕೋಪವನ್ನು ತೊಲಗಿಸಿದ್ದಾನೆ. ನನ್ನ ಬಗ್ಗೆ ಅವನೊಬ್ಬನೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ. ನನ್ನ ಗೌರವವನ್ನು ಕಾಪಾಡಿಕೊಳ್ಳಲು ಇನ್ನು ಇಸ್ರಯೇಲರನ್ನು ನಿರ್ಮೂಲ ಮಾಡಬೇಕಾದ ಅಗತ್ಯವಿಲ್ಲ.
12 : ಆದ ಕಾರಣ ನಾನು ಅವನ ಸಂಗಡ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳುತ್ತೇನೆಂದು ತಿಳಿಸು.
13 : ಆ ಒಪ್ಪಂದವೇನೆಂದರೆ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ವಾಗ್ದಾನ ಮಾಡುತ್ತೇನೆ. ಅವನು ತನ್ನ ದೇವರ ಗೌರವದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾನೆ; ಇಸ್ರಯೇಲರ ದೋಷಕ್ಕಾಗಿ ಪ್ರಾಯಶ್ಚಿತ್ತ ಮಾಡಿದ್ದಾನೆ. ಆದ್ದರಿಂದ ಅವನಿಗೇ ಈ ವಾಗ್ದಾನ ಮಾಡಿದ್ದೇನೆ.”
14 : ಆ ಮಿದ್ಯಾನ್ ಮಹಿಳೆಯೊಡನೆ ಹತನಾದವನ ಹೆಸರು ಜಿಮ್ರೀ. ಅವನು ಸಿಮೆಯೋನ್ ಕುಲದವರಲ್ಲಿ ಗೋತ್ರ ನಾಯಕನಾದ ಸಾಲೂ ಎಂಬವನ ಮಗ.
15 : ಹತಳಾದ ಮಿದ್ಯಾನ್ ಮಹಿಳೆಯ ಹೆಸರು ಕೊಜ್ಜೀ. ಅವಳು ಮಿದ್ಯಾನ್ಯರಲ್ಲಿ ಗೋತ್ರನಾಯಕನಾದ ಚೂರ್ ಎಂಬವನ ಮಗಳು.
16 : ಅನಂತರ ಸರ್ವೇಶ್ವರ ಮೋಶೆಗೆ:
17 : “ನೀನು ದಾಳಿಮಾಡಿ ಮಿದ್ಯಾನ್ಯರನ್ನು ಹಾಳು ಮಾಡು.
18 : ಅವರು ಪೆಗೋರದಲ್ಲಿ ನಡೆದ ಘಟನೆಗಳಲ್ಲೂ ತಮ್ಮ ನಾಯಕನ ಮಗಳಾದ ಕೊಜ್ಜೀ ಎಂಬ ಸ್ವಕುಲಸ್ತ್ರೀಯ ವಿಷಯದಲ್ಲೂ ನಿಮ್ಮನ್ನು ಮೋಸಗೊಳಿಸಿದ್ದಾರೆ. ನಿಮಗೆ ಕೇಡು ಮಾಡಿದ್ದಾರೆ,” ಎಂದರು. ಆ ಮಹಿಳೆ ಹತಳಾದುದು ಪೆಗೋರದ ಘಟನೆಗಳ ನಿಮಿತ್ತ ದೊಡ್ಡ ರೋಗ ಬಂದಾಗ.

Holydivine