Numbers - Chapter 5
Holy Bible

1 : ಸರ್ವೇಶ್ವರಸ್ವಾಮಿ, ಮೋಶೆಗೆ ಹೀಗೆಂದರು:
2 : “ಕುಷ್ಠರೋಗಿಗಳಂಥ ಎಲ್ಲ ಅಂಟುರೋಗಿಗಳನ್ನು ಮೇಹಸ್ರಾವವುಳ್ಳವರನ್ನು ಹಾಗೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಯೇಲರಿಗೆ ಆಜ್ಞಾಪಿಸು.
3 : ಅಂಥವರು ಗಂಡಸರೇ ಆಗಿರಲಿ, ಹೆಂಗಸರೇ ಆಗಿರಲಿ, ಅವರೆಲ್ಲರನ್ನು ಪಾಳೆಯದಿಂದ ಹೊರಡಿಸಬೇಕು. ನಾನೇ ವಾಸವಾಗಿರುವ ಪಾಳೆಯವನ್ನು ಅವರು ಅಪವಿತ್ರಗೊಳಿಸಬಾರದು.”
4 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು. ಅಂಥವರೆಲ್ಲರನ್ನು ಪಾಳೆಯದಿಂದ ಹೊರದೂಡಿದರು.
5 : ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಇಸ್ರಯೇಲರಿಗೆ ಇಂತೆಂದು ಆಜ್ಞಾಪಿಸು.
6 : ಯಾವ ಗಂಡಸೇ ಆಗಲಿ ಹೆಂಗಸೇ ಆಗಲಿ, ಮತ್ತೊಬ್ಬನನ್ನು ಮೋಸಗೊಳಿಸಿ ಸರ್ವೇಶ್ವರನಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದರೆ, ಅಂಥವರು ಅಪರಾಧಿಗಳು.
7 : ಅವರು ತಮ್ಮ ಅಪರಾಧವನ್ನು ಒಪ್ಪಿಕೊಳ್ಳಬೇಕು. ಅಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು.
8 : ದಂಡವನ್ನು ತೆಗೆದುಕೊಳ್ಳತಕ್ಕವನು ತೀರಿಹೋಗಿ ಬಾಧ್ಯಸ್ಥನೂ ಇಲ್ಲದ ಪಕ್ಷಕ್ಕೆ, ಆ ದ್ರವ್ಯ ಸರ್ವೇಶ್ವರನಿಗೆ ಸೇರಬೇಕು. ಅದು ಮತ್ತು ದೋಷಪರಿಹಾರಕ್ಕಾಗಿ ಅರ್ಪಿಸಲ್ಪಡುವ ಪ್ರಾಯಶ್ಚಿತ್ತ ಬಲಿಪ್ರಾಣಿಯಾದ ಟಗರು ಇವೆರಡೂ ಯಾಜಕನಿಗೆ ಸೇರಬೇಕು.
9 : ಇಸ್ರಯೇಲಿನ ಜನರು ಪ್ರತ್ಯೇಕಿಸಿ ಯಾಜಕನಿಗೆ ಒಪ್ಪಿಸುವ ಪವಿತ್ರ ವಸ್ತುಗಳೆಲ್ಲವೂ ಯಾಜಕನವುಗಳಾಗಿಯೇ ಇರಬೇಕು.
10 : ಒಬ್ಬನು ಸರ್ವೇಶ್ವರನಿಗೆ ವಿೂಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದೊಪ್ಪಿಸುತ್ತಾನೋ ಅದು ಅವನದಾಗಿಯೇ ಇರಬೇಕು.”
11 : ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು -
12 : ಒಬ್ಬನ ಹೆಂಡತಿ ತಪ್ಪುದಾರಿ ಹಿಡಿದು, ತನ್ನ ಗಂಡನಿಗೆ ಅಪ್ರಾಮಾಣಿಕಳಾಗಿ ನಡೆದು ಸಿಕ್ಕಿಕೊಳ್ಳದೆ, ಸಾಕ್ಷಿಯಿಲ್ಲದೆ,
13 : ಗುಟ್ಟಾಗಿಯೇ ಪರ ಪುರುಷನೊಡನೆ ಸಂಗಮಿಸಿ, ಗಂಡನಿಗೆ ದ್ರೋಹಿಯಾಗಿ ಅಶುದ್ಧಗಳಾಗಿರಬಹುದು.
14 : ಅಥವಾ ಹಾಗೆ ಮಾಡದೆ, ಕೆಟ್ಟುಹೋಗದೆ ಇದ್ದರೂ ಕೆಟ್ಟು ಹೋದಳೆಂದು ಗಂಡನ ಸಂಶಯಕ್ಕೆ ಗುರಿಯಾಗಿರಬಹುದು.
15 : ಈ ಎರಡು ಸಂದರ್ಭಗಳಲ್ಲೂ ಆ ಗಂಡನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ, ಅವನು ಯಾಜಕನಿಗೆ ಮೂರು ಸೇರು ಜವೆಗೋದಿ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಪಾಪವನ್ನು ಹೊರಪಡಿಸುವುದಕ್ಕೂ, ಸರ್ವೇಶ್ವರನಿಗೆ ನೈವೇದ್ಯವಾದ ಕಾಣಿಕೆ. ಆದ್ದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹುಯ್ಯಬಾರದು, ಸಾಂಬ್ರಾಣಿಯನ್ನು ಹಾಕಬಾರದು.
16 : “ಯಾಜಕನು ಅವಳನ್ನು ಕರೆದು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಬೇಕು.
17 : ಒಂದು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು.
18 : ಯಾಜಕನು ಆಕೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆ ಕೂದಲನ್ನು ಕೆದರಿಸಿ, ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು ಶಾಪವನ್ನು ತರುವ ಆ ವಿಷಕರವಾದ ನೀರನ್ನು ತನ್ನ ಕೈಯಲ್ಲೇ ಹಿಡಿದುಕೊಳ್ಳಬೇಕು.
19 : ಅದೇ ಯಾಜಕನು ಅವಳಿಂದ ಶಪಥಪೂರ್ವಕ ಪ್ರಮಾಣ ಮಾಡಿಸುತ್ತಾ ಅವಳಿಗೆ - “ನೀನು ನಿನ್ನ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ, ಪರಪುರುಷನನ್ನು ಕೂಡದೆ, ಅಶುದ್ಧಳಾಗದೆ ಇರುವವಳಾದರೆ ಶಾಪತರುವ ಈ ವಿಷಕರವಾದ ನೀರಿನಿಂದ ನಿನಗೆ ಹಾನಿಯಾಗದು.
20 : ಆದರೆ ನೀನು ಗಂಡಸಿದ್ದವಳಾಗಿ ಪರಪುರುಷನನ್ನು ಕೂಡಿ ಕೆಟ್ಟಿದ್ದರೆ, ನಿನ್ನ ಗಂಡನಲ್ಲದ ಬೇರೊಬ್ಬನು ನಿನ್ನನ್ನು ಸಂಗಮಿಸಿದ್ದರೆ,
21 : ಸರ್ವೇಶ್ವರನು ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ, ನಿನ್ನ ಹೊಟ್ಟೆ ಉಬ್ಬುವಂತೆ ಮಾಡಿ, ನೀನು ನಿನ್ನ ಜನರ ಮಧ್ಯೆ ಶಾಪಗ್ರಸ್ತಳನ್ನಾಗಿ ಮಾಡಲಿ.
22 : ಶಾಪತರುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ,” ಎಂದು ಹೇಳಬೇಕು. ಅದಕ್ಕೆ ಆ ಹೆಂಗಸು, “ಆಮೆನ್, ಹಾಗೆಯೇ ಆಗಲಿ,” ಎಂದು ಹೇಳಬೇಕು.
23 : “ಬಳಿಕ ಯಾಜಕನು ಆ ಶಾಪವಚನಗಳನ್ನು ಒಂದು ಪತ್ರದಲ್ಲಿ ಬರೆದು ಆ ವಿಷಕರ ಜಲದಲ್ಲಿ ತೊಳೆಯಲಿ;
24 : ಶಾಪತರುವ ಆ ನೀರನ್ನು ಆಕೆಗೆ ಕುಡಿಸಲಿ; ಆ ನೀರು ಅವಳೊಳಗೆ ಸೇರಿ ವಿಷಕರ ಆಗುವುದು.
25 : ಆಮೇಲೆ ವ್ಯಭಿಚಾರ ಸಂಶಯ ಸೂಚಕವಾದ ಆ ಹಿಟ್ಟನ್ನು ಅವಳ ಕೈಯಿಂದ ತೆಗೆದುಕೊಂಡ ಯಾಜಕನು ಬಲಿಪೀಠದ ಹತ್ತಿರಕ್ಕೆ ಬರಬೇಕು.
26 : ನೈವೇದ್ಯವಾದುದ್ದನ್ನು ಸೂಚಿಸುವುದಕ್ಕಾಗಿ ಆ ಹಿಟ್ಟಿನಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಅವನು ಹೋಮಮಾಡಬೇಕು. ಕೊನೆಗೆ ಯಾಜಕನು ಆ ನೀರನ್ನು ಆಕೆಗೆ ಕುಡಿಸಬೇಕು.
27 : ಅವಳು ದೋಷಿಯಾಗಿ ಗಂಡನಿಗೆ ದ್ರೋಹವೆಸಗಿದ್ದರೆ ಕುಡಿದ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷ ಆಗುವುದು. ಈ ಕಾರಣ ಅವಳ ಹೊಟ್ಟೆ ಉಬ್ಬುವುದು, ಅವಳ ಜನನೇಂದ್ರಿಯಗಳು ಬತ್ತಿ ಹೋಗುವುವು. ಆಕೆ ತನ್ನ ಜನರ ಮಧ್ಯೆ ಶಾಪಗ್ರಸ್ತಳಾಗುವಳು.
28 : ಆದರೆ ಆಕೆ ದುಷ್ಟಳಾಗಿ ಇರದೆ, ನಿರಪರಾಧಿಯಾಗಿದ್ದ ಪಕ್ಷಕ್ಕೆ ಅವಳಿಗೆ ಯಾವ ಹಾನಿಯೂ ಸಂಭವಿಸದೆ ಗರ್ಭವತಿ ಆಗುವಳು.
29 : “ವ್ಯಭಿಚಾರ ಸಂಶಯವನ್ನು ಪರಿಹರಿಸುವ ವಿಧಿ ಇದುವೆ. ಹೆಂಡತಿಯಾದವಳು ಗಂಡನ ಸ್ವಾಧೀನದಲ್ಲಿದ್ದರೂ ಪಾತಿವ್ರತ್ಯವನ್ನು ತೊರೆದು ಜಾರತ್ವ ಮಾಡಿರುವಾಗ
30 : ಅಥವಾ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗ ಅವನು ಅವಳನ್ನು ಸರ್ವೇಶ್ವರನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿನಿಯಮವನ್ನು ನೆರವೇರಿಸಬೇಕು.
31 : ಆಗ ಗಂಡನು ನಿರಪರಾಧಿಯಾಗುವನು. ಹೆಂಡತಿ ತನ್ನ ಅಕ್ರಮಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುವಳು.”

Holydivine