Numbers - Chapter 16
Holy Bible

1 : ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಚಾರನ ಮಗನೂ ಆದ ಕೋರಹ ಮತ್ತು ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನ್ ಹಾಗೂ ಅಬೀರಾಮ್ ಮತ್ತು ಪೆಲೆತನ ಮಗ ಓನ್ - ಇವರು ಮೋಶೆಗೆ ವಿರುದ್ಧ ಪ್ರತಿಭಟಿಸಿದರು.
2 : ಇವರ ಸಮೇತ ಸಮುದಾಯದವರಲ್ಲಿ ಮುಖ್ಯಸ್ಥರೂ ಸಲಹೆಗಾರರೂ ಹೆಸರಾಂತ ವ್ಯಕ್ತಿಗಳೂ ಆಗಿದ್ದ 250 ಮಂದಿ ಇಸ್ರಯೇಲರು ಕೂಡ ದಂಗೆಯೆದ್ದರು.
3 : ಇವರೆಲ್ಲರೂ ಜೊತೆಗೂಡಿ ಮೋಶೆ ಮತ್ತು ಆರೋನರ ಬಳಿಗೆ ಬಂದು, “ನಿಮ್ಮ ವರ್ತನೆ ಅಧಿಕವಾಯಿತು. ಈ ಸಮುದಾಯದಲ್ಲಿ ಪ್ರತಿ ಒಬ್ಬನೂ ಪ್ರತಿಷ್ಠಿತನೇ. ಸರ್ವೇಶ್ವರ ಇವರೆಲ್ಲರಲ್ಲಿ ವಾಸವಾಗಿದ್ದಾರಲ್ಲವೆ? ಹೀಗಿರಲಾಗಿ ಸರ್ವೇಶ್ವರನ ಸಮುದಾಯದವರಿಗಿಂತ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇಕೆ?” ಎಂದು ವಾದಿಸಿದರು.
4 : ಈ ಮಾತುಗಳನ್ನು ಕೇಳಿದ್ದೇ ಮೋಶೆ ನೆಲದ ಮೇಲೆ ಬೋರಲಾಗಿ ಬಿದ್ದನು.
5 : ಕೋರಹನಿಗೂ ಅವನ ಪಂಗಡದವರೆಲ್ಲರಿಗೂ ಹೀಗೆಂದನು: “ಸರ್ವೇಶ್ವರ ತನ್ನವರು ಯಾರೆಂದು ನಾಳೆ ತಿಳಿಸುವರು. ಯಾರನ್ನು ಪ್ರತಿಷ್ಠಿಸಿದ್ದಾರೋ ಹಾಗೂ ತಾವೇ ಆರಿಸಿಕೊಂಡಿದ್ದಾರೋ ಅವರನ್ನು ಮಾತ್ರ ತಮ್ಮ ಹತ್ತಿರಕ್ಕೆ ಬರಗೊಳಿಸುವರು.
6 : ನೀವು ಮಾಡಬೇಕಾದುದಿಷ್ಟು - ಕೋರಹನು ಮತ್ತು ಅವನ ಪಂಗಡದವರಾದ ನೀವೆಲ್ಲರೂ ಧೂಪಾರತಿಗಳನ್ನು ತಂದು ಅವುಗಳಲ್ಲಿ ಕೆಂಡವನ್ನಿಟ್ಟು ನಾಳೆ ಸರ್ವೇಶ್ವರನ ಸನ್ನಿಧಿಯಲ್ಲಿ ಧೂಪಹಾಕಬೇಕು.
7 : ಆಗ ಸರ್ವೇಶ್ವರ ಯಾರನ್ನು ಮೆಚ್ಚುತ್ತಾರೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ಅಧಿಕವಾದುದು ನಿಮ್ಮ ವರ್ತನೆಯೆ!”
8 : ಮೋಶೆ ಕೋರಹನಿಗೆ - “ಲೇವಿಯರೇ ಕೇಳಿ:
9 : ಇಸ್ರಯೇಲರ ದೇವರು ತಮ್ಮ ಸಮುದಾಯದವರಾದ ನಿಮ್ಮನ್ನು ಪ್ರತ್ಯೇಕಿಸಿ ತಮ್ಮ ಗುಡಾರದ ಪರಿಚರ್ಯವನ್ನು ಮಾಡಲು ಹಾಗೂ ಸರ್ವಸಮುದಾಯದ ಸೇವೆಯನ್ನು ಕೈಗೊಳ್ಳಲು ತಮ್ಮ ಬಳಿಯಲ್ಲೇ ಇಟ್ಟುಕೊಂಡರು.
10 : ಇದು ಕೋರಹನಾದ ನಿನಗೂ ನಿನ್ನ ಸ್ವಕುಲದವರಾದ ಲೇವಿಯರಿಗೂ ಕೇವಲ ಅಲ್ಪಕಾರ್ಯವೆಂದು ತೋರಿತೇ? ಯಾಜಕಪದವಿ ನಿಮಗಾಗಬೇಕೆಂದು ಕೋರುತ್ತೀರೋ?
11 : ಆರೋನನಂಥವನಿಗೇ ವಿರೋಧವಾಗಿ ಗೊಣಗುವವರಾದ್ದರಿಂದ ನೀನು ಮತ್ತು ನಿನ್ನ ಪಂಗಡದವರೆಲ್ಲರು ಸರ್ವೇಶ್ವರನಿಗೆ ವಿರುದ್ಧ ಕೂಡಿಕೊಂಡವರಾದಿರಿ!” ಎಂದನು.
12 : ಮೋಶೆ ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬಿರಾಮರನ್ನು ಬರುವಂತೆ ಹೇಳಿಕಳಿಸಿದನು.
13 : ಅವರು ಅವನಿಗೆ, “ನಾವು ಬರುವುದಿಲ್ಲ, ಹಾಲೂಜೇನೂ ಹರಿಯುವ ದೇಶದಿಂದ ನಮ್ಮನ್ನು ಕರೆತಂದು ಈ ಮರಳುಗಾಡಿನಲ್ಲಿ ಸಾಯಿಸುತ್ತಿರುವೆ, ಇದು ಅಲ್ಪಕಾರ್ಯ ಎಂದು ಎಣಿಸುತ್ತೀಯೋ? ನಮ್ಮ ಮೇಲೆ ದೊರೆತನ ಮಾಡಬೇಕೆಂದು ಕೋರುತ್ತಿರುವೆಯೋ?”
14 : ಅಷ್ಟು ಮಾತ್ರವಲ್ಲ, ಹಾಲೂಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲೇ ಇಲ್ಲ; ಹೊಲ ಹಾಗು ದ್ರಾಕ್ಷಿ ತೋಟಗಳನ್ನು ನಮ್ಮ ಸ್ವಾಧೀನಕ್ಕೆ ಕೊಟ್ಟೂ ಇಲ್ಲ. ಈ ಜನರ ಕಣ್ಣಿಗೆ ಮಣ್ಣು ಹಾಕಬೇಕೆಂದಿರು ವೆಯಾ? ನಾವು ಬರುವುದಿಲ್ಲ,” ಎಂದು ಹೇಳಿದರು.
15 : ಅದಕ್ಕೆ ಮೋಶೆ ಬಹುಕೋಪಗೊಂಡನು. ಸರ್ವೇಶ್ವರನಿಗೆ, “ತಾವು ಇವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡಿ. ನಾನು ಇವರಿಂದ ಒಂದು ಕತ್ತೆಯನ್ನೂ ಕೂಡ ತೆಗೆದುಕೊಂಡವನಲ್ಲ. ಅವರಲ್ಲಿ ಒಬ್ಬನಿಗಾದರೂ ಹಾನಿಮಾಡಿದವನಲ್ಲ,” ಎಂದು ಮನವಿಮಾಡಿದನು.
16 : ಮೋಶೆ ಕೋರಹನಿಗೆ, “ನೀನೂ ನಿನ್ನ ಪಂಗಡದವರು ಮತ್ತು ಆರೋನನು ನಾಳೆ ಸರ್ವೇಶ್ವರನ ಸನ್ನಿಧಿಗೆ ಬರಬೇಕು.
17 : ಪಂಗಡದ ಪ್ರತಿಯೊಬ್ಬನು ತನ್ನತನ್ನ ಧೂಪಾರತಿಯನ್ನು ಅಂದರೆ ಒಟ್ಟು 250 ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಸರ್ವೇಶ್ವರನ ಸನ್ನಿಧಿಗೆ ಬರಬೇಕು. ನೀನು ಮತ್ತು ಆರೋನನು ಕೂಡ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು,” ಎಂದು ಹೇಳಿದನು.
18 : ಅದರಂತೆ ಅವರೆಲ್ಲರೂ ತಮ್ಮತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಬಂದು, ಅವುಗಳಲ್ಲಿ ಕೆಂಡವನ್ನಿಟ್ಟು ಧೂಪ ದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆ ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತುಕೊಂಡರು.
19 : ಬಳಿಕ ಕೋರಹನು ಸಮುದಾಯದವರೆಲ್ಲರನ್ನು ತಮಗೆ ಎದುರಾಗಿ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿದನು. ಆಗ ಸರ್ವೇಶ್ವರನ ತೇಜಸ್ಸು ಸಮುದಾಯದವರೆಲ್ಲರಿಗೆ ಹೊಳೆಯಿತು.
20 : ಮೋಶೆ -ಆರೋನರಿಗೆ ಸರ್ವೇಶ್ವರ,
21 : “ನೀವು ಈ ಸಮುದಾಯದವರಿಂದ ಪ್ರತ್ಯೇಕವಾಗಿ ನಿಲ್ಲಿ; ನಾನು ಇವರನ್ನು ಒಂದು ಕ್ಷಣಮಾತ್ರದಲ್ಲಿ ಭಸ್ಮ ಮಾಡಿಬಿಡುತ್ತೇನೆ,” ಎಂದರು.
22 : ಮೋಶೆ ಮತ್ತು ಆರೋನರು ಅಡ್ಡಬಿದ್ದು, “ದೇವರೇ, ಸರ್ವ ದೇಹಾತ್ಮಗಳಿಗೆ ದೇವರಾಗಿರುವವರೇ, ಒಬ್ಬನೇ ಒಬ್ಬನು ಪಾಪಮಾಡಿರುವಲ್ಲಿ ನೀವು ಸಮುದಾಯದ ಎಲ್ಲರ ಮೇಲೆ ಕೋಪಗೊಳ್ಳಬಹುದೆ?” ಎಂದು ಭಿನ್ನವಿಸಿದರು.
23 : ಆಗ ಸರ್ವೇಶ್ವರ ಮೋಶೆಗೆ,
24 : “ಇಸ್ರಯೇಲ್ ಸಮಾಜದವರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಲಿರದೆ ದೂರವಿರಬೇಕೆಂದು ಅವರಿಗೆ ಆಜ್ಞಾಪಿಸು,” ಎಂದರು.
25 : ಆಗ ಮೋಶೆ ಎದ್ದು ದಾತಾನ್ - ಅಬೀರಾಮರ ಬಳಿಗೆ ಹೋದನು. ಇಸ್ರಯೇಲರ ಹಿರಿಯರು ಅವನ ಹಿಂದೆ ಹೋದರು.
26 : ಇಸ್ರಯೇಲ್ ಸಮಾಜದವರಿಗೆ ಅವನು, ‘ಈ ದುಷ್ಟರ ಡೇರೆಗಳ ಬಳಿಯಿರದೆ ದೂರಹೋಗಿ. ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬೇಡಿ. ಇವರ ದೋಷಗಳಿಗೆ ಬರಲಿರುವ ಶಿಕ್ಷೆ ನಿಮ್ಮನ್ನು ಕೊಚ್ಚಿಕೊಂಡು ಹೋದೀತು,” ಎಂದು ಎಚ್ಚರಿಸಿದನು.
27 : ಆದಕಾರಣ ಅವರೆಲ್ಲರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಲಿರದೆ ಬೇರೆ ಹೋದರು. ದಾತಾನ್, ಅಬೀರಾಮ ಮತ್ತು ಅವರ ಮಡದಿ ಮಕ್ಕಳು, ಬಂಧುಬಳಗದವರೂ ಹೊರಗೆ ಬಂದು ತಮ್ಮತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು.
28 : ಮೋಶೆ ಜನರಿಗೆ, “ಈ ಕಾರ್ಯ ಗಳೆಲ್ಲ ನನ್ನ ಸ್ವಂತ ಆಲೋಚನೆಯಿಂದ ಆಗಲಿಲ್ಲ, ಸರ್ವೇಶ್ವರನೇ ಇವುಗಳನ್ನು ನಡೆಸುವುದಕ್ಕೆ ನನ್ನನ್ನು ಕಳಿಸಿದ್ದಾರೆಂದು ನೀವೇ ತಿಳಿದುಕೊಳ್ಳಬಹುದು.
29 : ಅದು ಹೇಗೆಂದರೆ - ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಅಥವಾ ಎಲ್ಲರಿಗೂ ಸಂಭವಿಸುವ ಗತಿ ಇವರಿಗೆ ಒದಗಿದರೆ ಸರ್ವೇಶ್ವರ ನನ್ನನ್ನು ಕಳಿಸಲಿಲ್ಲವೆಂದು ತಿಳಿದುಕೊಳ್ಳಬೇಕು.
30 : ಬದಲಿಗೆ ಸರ್ವೇಶ್ವರ ಇವರಿಗಾಗಿ ಆಶ್ಚರ್ಯಕರವಾದ ಶಿಕ್ಷೆಯನ್ನು ಕಲ್ಪಿಸಿ ಅಂದರೆ, ಭೂಮಿ ಬಾಯ್ದೆರೆದು ಇವರನ್ನು ಹಾಗು ಇವರಿಗಿರುವ ಸರ್ವಸ್ವವನ್ನು ನುಂಗಿಬಿಟ್ಟರೆ, ಇವರೆಲ್ಲರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಸರ್ವೇಶ್ವರನನ್ನು ಉಲ್ಲಂಘಿಸಿದವರೆಂದು ನೀವು ತಿಳಿದುಕೊಳ್ಳಬೇಕು,” ಎಂದು ಹೇಳಿದನು.
31 : ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಜನರ ಕೆಳಗಿದ್ದ ನೆಲವು ಸೀಳಿತು.
32 : ಭೂಮಿ ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸೇರಿದ ವ್ಯಕ್ತಿಗಳೆಲ್ಲರನ್ನೂ ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.
33 : ಅವರು ಸಜೀವರಾಗಿ, ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಇಳಿದುಬಿಟ್ಟರು. ಭೂಮಿ ಅವರನ್ನು ಮುಚ್ಚಿಕೊಂಡಿತು.
34 : ಹೀಗೆ ಅವರು ಸಮುದಾಯದಿಂದ ನಾಶವಾದರು. ಅವರ ಸುತ್ತಲಿದ್ದ ಇಸ್ರಯೇಲರೆಲ್ಲರೂ ಸಾಯುವವರ ಹಾಹಾಕಾರವನ್ನು ಕೇಳಿ, “ಭೂಮಿ ನಮ್ಮನ್ನು ನುಂಗದಿರಲಿ” ಎಂದುಕೊಂಡು ಓಡಿಹೋದರು.
35 : ಸರ್ವೇಶ್ವರನ ಬಳಿಯಿಂದ, ಬೆಂಕಿ ಹೊರಟು ಧೂಪಾರತಿಯನ್ನು ಅರ್ಪಿಸುತ್ತಿದ್ದ ಆ 250 ಮಂದಿಯನ್ನು ಭಸ್ಮಮಾಡಿತು.
36 : ಸರ್ವೇಶ್ವರಸ್ವಾಮಿ ಮೋಶೆಗೆ,
37 : “ಸುಟ್ಟು ಹೋದವರ ನಡುವೆಯಿಂದ ಆ ಧೂಪಾರತಿ ಗಳನ್ನು ಎತ್ತಬೇಕೆಂದು ಮಹಾಯಾಜಕ ಆರೋನನ ಮಗ ಎಲ್ಲಾಜಾರನಿಗೆ ಆಜ್ಞಾಪಿಸು; ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರಕ್ಕೆ ಚೆಲ್ಲು.
38 : ಆ ಧೂಪಾರತಿಗಳು ಸರ್ವೇಶ್ವರನ ಸನ್ನಿಧಿಗೆ ತರಲಾದವುಗಳು. ಈ ಕಾರಣ ಪವಿತ್ರವಾದುವು. ಆದುದರಿಂದ ಅವುಗಳನ್ನು ತಗಡುಗಳಾಗಿ ತಟ್ಟಿ ಬಲಿಪೀಠಕ್ಕೆ ಮುಚ್ಚಳವನ್ನಾಗಿ ಮಾಡಿಸು. ಹೀಗೆ ಅವು ಇಸ್ರಯೇಲರಿಗೆ ನೆನಪು ಹುಟ್ಟಿಸುವ ಗುರುತುಗಳಾಗುವುವು,” ಎಂದು ಹೇಳಿದರು.
39 : ಮೋಶೆಯ ಮುಖಾಂತರ ಸರ್ವೇಶ್ವರ ಹೇಳಿದ ಅಪ್ಪಣೆಯ ಮೇರೆಗೆ ಯಾಜಕ ಎಲ್ಲಾಜಾರನು, ಸುಟ್ಟುಹೋದವರು ತಂದಿದ್ದ ಆ ಕಂಚಿನ ಧೂಪಾರತಿಗಳನ್ನು ತಗಡುಗಳನ್ನಾಗಿ ತಟ್ಟಿಸಿ ಬಲಿಪೀಠಕ್ಕೆ ಮುಚ್ಚಳವನ್ನು ಮಾಡಿಸಿದನು.
40 : ಆರೋನನ ಸಂತತಿಯವರಲ್ಲದೆ ಇತರರು ಸರ್ವೇಶ್ವರನ ಸನ್ನಿಧಿಗೆ ಬಂದು ಧೂಪವನ್ನು ಅರ್ಪಿಸಬಾರದು; ಅರ್ಪಿಸಿದರೆ ಕೋರಹನಿಗೂ ಅವನ ಪಂಗಡದವರಿಗೂ ಆದ ಗತಿಗೆ ಗುರಿ ಆಗುವರು ಎಂದು ಇಸ್ರಯೇಲರಿಗೆ ಎಚ್ಚರಿಕೆ ನೀಡುವ ಚಿನ್ಹೆಯಾಯಿತು. ಆರೋನನ ಮಧ್ಯಸ್ಥಿಕೆಯ ಪ್ರಭಾವ
41 : ಆದರೂ ಇಸ್ರಯೇಲ್ ಸಮುದಾಯದವರು ಮೋಶೆ ಮತ್ತು ಆರೋನರ ಮೇಲೆ ಗೊಣ ಗುಟ್ಟತೊಡಗಿದರು. ‘ಸರ್ವೇಶ್ವರನ ಜನರನ್ನು ಸಾಯಿಸಿದವರು ನೀವೇ’ ಎಂದು ಹೇಳುವವರಾದರು.
42 : ಸಮುದಾಯದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರ ವಿರುದ್ಧ ಪ್ರತಿಭಟಿಸಲು ಸಭೆ ಸೇರಿದರು. ಅವರು ದೇವದರ್ಶನದ ಗುಡಾರದತ್ತ ನೋಡಿದಾಗ, ಮೇಘವೊಂದು ಅದನ್ನು ಆವರಿಸಿತು ಮತ್ತು ಸರ್ವೇಶ್ವರನ ತೇಜಸ್ಸು ಹೊಳೆಯಿತು.
43 : ಮೋಶೆ - ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.
44 : ಆಗ ಸರ್ವೇಶ್ವರ ಮೋಶೆಗೆ: “ನೀವಿಬ್ಬರು ಸಮುದಾಯದವರೊಂದಿಗೆ ಸೇರದೆ ಬೇರೆ ನಿಲ್ಲಬೇಕು. ಒಂದೇ ಕ್ಷಣದಲ್ಲಿ ನಾನು ಅವರನ್ನು ಭಸ್ಮ ಮಾಡಿಬಿಡುತ್ತೇನೆ,” ಎಂದರು.
45 : ಆಗ ಮೋಶೆ, ಆರೋನರು ಸಾಷ್ಟಾಂಗವೆರಗಿದರು.
46 : ಮೋಶೆ, ಆರೋನನನ್ನು ಉದ್ದೇಶಿಸಿ, “ಸರ್ವೇಶ್ವರನಿಗೆ ಕೋಪವುಂಟಾಗಿದೆ; ಈ ಜನರೊಳಗೆ ಘೋರ ವ್ಯಾಧಿಯೊಂದು ಪ್ರಾರಂಭವಾಗಿಬಿಟ್ಟಿದೆ. ನೀನು ಧೂಪಾರತಿಯನ್ನು ತೆಗೆದುಕೊಂಡು, ಅದರಲ್ಲಿ ಬಲಿಪೀಠದಿಂದ ಕೆಂಡಗಳನ್ನು ಇಟ್ಟು, ಧೂಪಹಾಕಿ ಸಮುದಾಯದವರ ಬಳಿಗೆ ಬೇಗಹೋಗು; ಅವರ ಪರವಾಗಿ ದೋಷ ಪರಿಹಾರವನ್ನು ಮಾಡು,” ಎಂದು ಹೇಳಿದನು.
47 : ಮೋಶೆ ಹೇಳಿದಂತೆಯೇ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮುದಾಯದವರ ಬಳಿಗೆ ಓಡಿಬಂದಾಗ ಆ ಘೋರ ವ್ಯಾಧಿ ಜನರಲ್ಲಿ ಹರಡಿಕೊಳ್ಳುತ್ತಲಿತ್ತು. ಅವನು ಧೂಪ ಹಾಕಿ ಆ ಜನರ ಪರವಾಗಿ ದೋಷಪರಿಹಾರ ಮಾಡಿದನು;
48 : ಸತ್ತವರಿಗು ಹಾಗೂ ಬದುಕುವವರಿಗು ನಡುವೆ ಅವನು ನಿಂತನು. ಆ ವಿಪತ್ತು ಶಮನವಾಯಿತು.
49 : ಕೋರಹನನ್ನು ಸೇರಿಕೊಂಡು ಸತ್ತವರಲ್ಲದೆ ಆ ವಿಪತ್ತಿನಿಂದಲೇ ಸತ್ತವರ ಸಂಖ್ಯೆ 14,700.
50 : ವಿಪತ್ತು ನಿಂತ ಮೇಲೆ ಆರೋನನು ದೇವ ದರ್ಶನದ ಗುಡಾರದ ಬಳಿಯಿದ್ದ ಮೋಶೆಯ ಬಳಿಗೆ ಹಿಂದಿರುಗಿದನು.

Holydivine