Numbers - Chapter 20
Holy Bible

1 : ಇಸ್ರಯೇಲ್ ಸಮಾಜದವರು ಮೊದಲನೆಯ ತಿಂಗಳಲ್ಲಿ ‘ಚಿನ್’ ಎಂಬ ಮರುಭೂಮಿಗೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಮೃತಳಾದಳು; ಆಕೆಯನ್ನು ಅಲ್ಲೇ ಸಮಾಧಿ ಮಾಡಿದರು.
2 : ಜನರಿಗೆ ನೀರು ಇಲ್ಲದೆ ಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆ ಸೇರಿ ಮೋಶೆಯ ಸಂಗಡ ವಾದಿಸತೊಡಗಿದರು:
3 : “ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧು ಬಳಗದವರು ಸತ್ತಂತೆ ನಾವೂ ಸತ್ತು ಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ನೀವು ಸರ್ವೇಶ್ವರನ ಪ್ರಜೆಯಾದ
4 : ನಮ್ಮನ್ನು ಈ ಮರಳುಗಾಡಿಗೆ ಕರೆದುಕೊಂಡು ಬಂದುದೇಕೆ? ನಾವೂ ನಮ್ಮ ಜಾನುವಾರಗಳೂ ಇಲ್ಲಿ ಸಾಯಬೇಕೆಂದೋ?
5 : ಈಜಿಪ್ಟ್ ದೇಶದಿಂದ ನಮ್ಮನ್ನು ಬರಮಾಡಿದ್ದು ಈ ಕೀಳು ಸ್ಥಳಕ್ಕೆ ಸೇರಿಸಲಿಕ್ಕೋ? ಈ ನೆಲದಲ್ಲಿ ದವಸಧಾನ್ಯ ಬೆಳೆಯುವಂತಿಲ್ಲ; ಅಂಜೂರವಿಲ್ಲ, ದ್ರಾಕ್ಷಿಯಿಲ್ಲ, ದಾಳಿಂಬೆಯಿಲ್ಲ, ಕುಡಿಯುವುದಕ್ಕೆ ನೀರು ಕೂಡ ಇಲ್ಲ,” ಎಂದು ದೂರಿದರು.
6 : ಮೋಶೆ ಮತ್ತು ಆರೋನರು ಆ ಜನಸಂದಣಿಯನ್ನು ಬಿಟ್ಟು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಬಂದು ಸಾಷ್ಟಾಂಗವೆರಗಿದರು. ಆಗ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು.
7 : ಆಗ ಸರ್ವೇಶ್ವರ ಮೋಶೆಗೆ, “ನೀನು ಆ ಕೋಲನ್ನು ಕೈಗೆ ತೆಗೆದುಕೋ. ನೀನು ಮತ್ತು ನಿನ್ನ ಸಹೋದರ ಆರೋನನು ಜನಸಮೂಹದವರನ್ನು ಸಭೆ ಸೇರಿಸಿರಿ. ಅವರೆಲ್ಲರ ಎದುರಿನಲ್ಲೇ ನೀರುಕೊಡಬೇಕೆಂದು ಆ ಕಡಿದಾದ ಬಂಡೆಗೆ ಆಜ್ಞೆಮಾಡು.
8 : ಅದರಿಂದ ನೀರು ಹೊರಟು ಬರುವುದು. ಅದನ್ನು ಜನಸಮೂಹದವರಿಗೂ ಅವರ ಜಾನುವಾರಗಳಿಗೂ ಕುಡಿಯಲು ಕೊಡಬಹುದು,” ಎಂದರು.
9 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆ ಕೋಲನ್ನು ಅವರ ಸನ್ನಿಧಿಯಿಂದ ತೆಗೆದು ಕೊಂಡನು.
10 : ಆರೋನನ ಜೊತೆಯಲ್ಲಿ ಜನ ಸಮೂಹದವರ ಬಳಿಗೆ ಹೋಗಿ ಕಡಿದಾದ ಆ ಬಂಡೆಗೆದುರಾಗಿ ಅವರನ್ನು ಸಭೆಸೇರಿಸಿದನು. ಅವರನ್ನು ಸಂಬೋಧಿಸುತ್ತಾ, “ದಂಗೆಕಾರರೇ ಕೇಳಿ: ಈ ಬಂಡೆಯಿಂದ ನಿಮಗೆ ನಾವು ನೀರನ್ನು ಬರಮಾಡಬೇಕೋ,” ಎಂದು ಹೇಳಿ
11 : ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡುಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನಸಮೂಹದವರೂ ಅವರ ಜಾನುವಾರಗಳೂ ಕುಡಿದರು.
12 : ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದೇ ಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗಕೂಡದು,” ಎಂದು ಹೇಳಿದರು.
13 : ಇಸ್ರಯೇಲರು ಅಲ್ಲಿ ಸರ್ವೇಶ್ವರನ ಸಂಗಡ ವಾದಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ ‘ಮೆರಿಬಾ’ ಎಂದು ಹೆಸರಾಯಿತು. ಅಲ್ಲಿ ಸರ್ವೇಶ್ವರ ತಮ್ಮ ಪರಮ ಪಾವನತೆಯನ್ನು ವ್ಯಕ್ತಪಡಿಸಿದರು.
14 : ಮೋಶೆ ಕಾದೇಶಿನಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳಿಸಿದನು. “ತಮ್ಮ ಸಂಬಂಧಿಕರಾದ ಇಸ್ರಯೇಲರು ತಮ್ಮಲ್ಲಿ ಮಾಡುವ ಮನವಿ ಇದು - ನಮಗೆ ಸಂಭವಿಸಿದ ಕಷ್ಟದುಃಖಗಳೆಲ್ಲಾ ತಮಗೆ ತಿಳಿದೇ ಇವೆ.
15 : ನಮ್ಮ ಪೂರ್ವಜರು ಈಜಿಪ್ಟ್ ದೇಶಕ್ಕೆ ಹೋದದ್ದು, ಅಲ್ಲಿ ನಾವು ಬಹು ದಿವಸ ವಾಸವಾಗಿದ್ದದ್ದು, ಈಜಿಪ್ಟಿನವರು ನಮ್ಮನ್ನೂ ನಮ್ಮ ಪೂರ್ವಜರನ್ನೂ ಹಿಂಸಿಸಿದ್ದು, ಇವೆಲ್ಲಾ ತಿಳಿದ ವಿಷಯಗಳು.
16 : ನಾವು ಸರ್ವೇಶ್ವರನಿಗೆ ಮೊರೆಯಿಟ್ಟೆವು. ಅವರು ನಮ್ಮ ಪ್ರಾರ್ಥನೆಯನ್ನು ಆಲಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಇದೆಲ್ಲದರ ಅರಿವು ತಮಗಿದೆ. ಈಗ ನಾವು ತಮ್ಮ ರಾಜ್ಯದ ಗಡಿಪ್ರದೇಶವಾದ ಕಾದೇಶ ಎಂಬ ಊರಲ್ಲಿದ್ದೇವೆ.
17 : ತಮ್ಮ ನಾಡನ್ನು ದಾಟಿ ಹೋಗಲು ಅಪ್ಪಣೆ ಆಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗದ್ದೆಗಳ ಮೇಲಾಗಲಿ, ದ್ರಾಕ್ಷಿತೋಟಗಳ ಮೂಲಕವಾಗಲಿ ಹೋಗುವುದಿಲ್ಲ. ಬಾವಿಗಳ ನೀರನ್ನೂ ಕುಡಿಯುವುದಿಲ್ಲ. ರಾಜಮಾರ್ಗದಲ್ಲೇ ನಡೆದು, ತಮ್ಮ ನಾಡಿನ ಗಡಿ ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ,” ಎಂದು ಹೇಳಿಕಳಿಸಿದನು.
18 : ಆದರೆ ಎದೋಮ್ಯರು, “ನಮ್ಮ ನಾಡನ್ನು ನೀವು ದಾಟಿ ಹೋಗಕೂಡದು. ದಾಟುವುದಾದರೆ ನಿಮ್ಮ ಮೇಲೆ ಯುದ್ಧಮಾಡುತ್ತೇವೆ,” ಎಂದು ಉತ್ತರಕೊಟ್ಟರು.
19 : ಅದಕ್ಕೆ ಇಸ್ರಯೇಲರು, “ನಾವು ರಾಜಮಾರ್ಗದಲ್ಲೇ ಹೋಗುತ್ತೇವೆ. ನಾವಾಗಲಿ, ನಮ್ಮ ಜಾನುವಾರುಗಳಾಗಲಿ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುತ್ತೇವೆ. ಬೇರೆ ಏನೂ ನಮಗೆ ಬೇಡ; ಕಾಲ್ನಡೆಯಾಗಿ ದಾಟಿಹೋಗುವುದಕ್ಕೆ ಮಾತ್ರ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದರು.
20 : ಆದರೆ ಎದೋಮ್ಯರು, “ನೀವು ದಾಟಲೇ ಕೂಡದು,” ಎಂದು ಉತ್ತರಿಸಿದರು ಮಾತ್ರವಲ್ಲ, ದೊಡ್ಡ ಪಡೆಯಾಗಿ ಕೂಡಿಕೊಂಡು ಅವರ ಮೇಲೆ ದಾಳಿಮಾಡಲು ಬಂದರು.
21 : ಹೀಗೆ ಎದೋಮ್ಯರು ತಮ್ಮ ನಾಡನ್ನು ದಾಟಿ ಹೋಗಲು ಅಪ್ಪಣೆ ಕೊಡದ ಕಾರಣ ಇಸ್ರಯೇಲರು ಅಲ್ಲಿಂದ ಹಿಂದಿರುಗಿ ಹೊರಟುಹೋದರು.
22 : ಇಸ್ರಯೇಲ್ ಇಡೀ ಸಮಾಜದವರು ಕಾದೇಶಿನಿಂದ ಹೊರಟು ‘ಹೋರ್’ ಎಂಬ ಬೆಟ್ಟಕ್ಕೆ ಬಂದರು.
23 : ಎದೋಮ್ಯರ ನಾಡಿನ ಗಡಿ ಹತ್ತಿರ ಇರುವ ಆ ಹೋರ್ ಬೆಟ್ಟದ ಬಳಿ ಸರ್ವೇಶ್ವರ, ಮೋಶೆ ಮತ್ತು ಆರೋನರ ಸಂಗಡ ಮಾತಾಡಿದರು:
24 : “ಆರೋನನು ದೇಹತ್ಯಜಿಸಿ ತನ್ನ ಪೂರ್ವಜರನ್ನು ಸೇರಲಿ. ನೀವಿಬ್ಬರೂ ಮೆರೀಬಾ ಪ್ರವಾಹದ ಬಳಿ ನನ್ನ ಮಾತನ್ನು ವಿೂರಿ ನಡೆದಿರಿ. ಆದ್ದರಿಂದ ನಾನು ಇಸ್ರಯೇಲರಿಗೆ ವಾಗ್ದಾನ ಮಾಡಿದ ನಾಡನ್ನು ಆರೋನನು ಪ್ರವೇಶಿಸಕೂಡದು.
25 : ಅವನನ್ನೂ ಅವನ ಮಗ ಎಲ್ಲಾಜಾರನನ್ನೂ ಕರೆದುಕೊಂಡು ನೀನು ಹೋರ್ ಬೆಟ್ಟವನ್ನು ಹತ್ತು.
26 : ಅಲ್ಲಿ ಆರೋನನ ಯಾಜಕ ವಸ್ತ್ರಗಳನ್ನು ತೆಗೆದು ಅವನ ಮಗ ಎಲ್ಲಾಜಾರನಿಗೆ ತೊಡಿಸು. ಆರೋನನು ಅಲ್ಲಿ ದೇಹವನ್ನು ಬಿಟ್ಟು ತನ್ನ ಪೂರ್ವಜರ ಬಳಿ ಸೇರಲಿ,” ಎಂದು ವಿಧಿಸಿದರು.
27 : ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಮಾಡಿದನು. ಸರ್ವಸಮುದಾಯದವರು ನೋಡುತ್ತಿರುವಾಗ ಅವರು ಹೋರ್ ಬೆಟ್ಟವನ್ನು ಹತ್ತಿದರು.
28 : ಮೋಶೆ ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗ ಎಲ್ಲಾಜಾರನಿಗೆ ತೊಡಿಸಿದನು. ಆರೋನನು ಅಲ್ಲೇ ಬೆಟ್ಟದ ತುದಿಯಲ್ಲಿ ಸತ್ತುಹೋದನು. ಬಳಿಕ ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದುಬಂದರು. ಆರೋನನು ಸತ್ತುಹೋದುದನ್ನು ಇಸ್ರಯೇಲ್ ಸಮಾಜದವರೆಲ್ಲರೂ ತಿಳಿದು ಅವನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದರು.

Holydivine