Numbers - Chapter 21
Holy Bible

1 : ಇಸ್ರಯೇಲರು ಅತಾರೀಮ್ ಮಾರ್ಗವಾಗಿ ಬರುತ್ತಿದ್ದಾರೆಂದು ನೆಗೇಬಿನಲ್ಲಿ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯದಲ್ಲಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಕೇಳಿದನು. ಅವನು ಇಸ್ರಯೇಲರ ಮೇಲೆ ಯುದ್ಧಮಾಡಿ ಕೆಲವರನ್ನು ಸೆರೆಹಿಡಿದನು.
2 : ಇಸ್ರಯೇಲರು ಸರ್ವೇಶ್ವರನಿಗೆ ಹರಕೆ ಮಾಡಿಕೊಂಡರು: “ನಾವು ಈ ಜನರನ್ನು ಜಯಿಸುವಂತೆ ಅನುಗ್ರಹಿಸಿದರೆ ಅವರ ಗ್ರಾಮಗಳನ್ನು ಪೂರ್ಣ ಹಾಳುಮಾಡಿ ಸರ್ವೇಶ್ವರನಾದ ನಿಮಗಾಗಿಯೇ ವಿೂಸಲಿಡುತ್ತೇವೆ,” ಎಂದರು.
3 : ಸರ್ವೇಶ್ವರ ಅವರ ಪ್ರಾರ್ಥನೆಯನ್ನು ಆಲಿಸಿದರು; ಅವರು ಆ ಕಾನಾನ್ಯರನ್ನು ಜಯಿಸುವಂತೆ ಮಾಡಿದರು. ಇಸ್ರಯೇಲರು ಆ ಜನರನ್ನೂ ಅವರ ಗ್ರಾಮಗಳನ್ನೂ ನಿಶ್ಯೇಷವಾಗಿ ನಾಶಮಾಡಿಬಿಟ್ಟರು. ಈ ಕಾರಣ ಆ ಪ್ರದೇಶಕ್ಕೆ ‘ಹೊರ್ಮಾ’ ಎಂದು ಹೆಸರಾಯಿತು.
4 : ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು.
5 : ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್‍ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು.
6 : ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು.
7 : ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು.
8 : ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು.
9 : ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
10 : ತರುವಾಯ ಇಸ್ರಯೇಲರು ಅಲ್ಲಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
11 : ಓಬೋತಿನಿಂದ ಹೊರಟು ಮೋವಾಬ್ ನಾಡಿನ ಪೂರ್ವ ದಿಕ್ಕಿನ ಮರುಭೂಮಿಯಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
12 : ಅಲ್ಲಿಂದ ಹೊರಟು ಜೆರೆಬ್ ಕಣಿವೆಯಲ್ಲಿ ಇಳಿದುಕೊಂಡರು.
13 : ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ಹೊಳೆ ಅಮೋರಿಯರ ಪ್ರದೇಶದಿಂದಾಚೆ ಇರುವ ಮರುಭೂಮಿಯಲ್ಲಿ ಮೋವಾಬ್ಯರಿಗೂ ಅಮೋರಿಯರಿಗೂ ನಡುವೆ ಇದ್ದು ಮೋವಾಬ್ಯರ ಎಲ್ಲೆಯಾಗಿದೆ.
14 : ಅದನ್ನು ಉಲ್ಲೇಖಿಸುತ್ತಾ, “ಸರ್ವೇಶ್ವರನ ವಿಷಯ” ಎಂಬ ಗ್ರಂಥ ಹೀಗೆನ್ನುತ್ತದೆ: ‘ಸೂಫಕ್ಕೆ ಸೇರಿದ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಹಳ್ಳಗಳನ್ನು,
15 : ಆರ್ ಪಟ್ಟಣದ ತನಕ ಮೋವಾಬಿನ ಎಲ್ಲೆಯಾಗಿರುವ ಕೊರಕಲನ್ನು’ ದಾಟಿದ್ದಾಯಿತು.
16 : ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಸೇರಿಸು, ಅವರಿಗೆ ಜಲಧಾರೆಯನ್ನು ಕೊಡುವೆನು” ಎಂದು ಸರ್ವೇಶ್ವರ ಮೋಶೆಗೆ ಹೇಳಿದ್ದು ಇಲ್ಲಿನ ಬಾವಿಯನ್ನು ಕುರಿತೇ.
17 : ಆ ಕಾಲದಲ್ಲಿ ಇಸ್ರಯೇಲರು ಹಾಡಿದ ಗೀತೆ ಇದು: ಬಾವಿಯೇ, ಎದ್ದು ಬಾ ಉಕ್ಕುತ್ತಾ ಜನರೇ, ಹಾಡಿ ಹಿಗ್ಗುತ್ತಾ !
18 : ಹಿರಿಯರು ತೋಡಿದರೀ ಬಾವಿಯನ್ನು ಕೋಲುಕಡ್ಡಿಗಳಿಂದ ಪ್ರಜಾಧಿಪತಿಗಳು ಅಗೆದರಿದನ್ನು ರಾಜದಂಡಗಳಿಂದ.
19 : ಅವರು ಮರುಭೂಮಿಯನ್ನು ಬಿಟ್ಟು ಮತ್ತಾನಕ್ಕೂ ಮತ್ತಾನದಿಂದ ನಹಲೀಯೇಲಿಗೂ ನಹಲೀಯೇಲಿನಿಂದ ಬಾಮೋತಿಗೂ ಬಂದರು.
20 : ಬಾಮೋತಿನಿಂದ ಮೋವಾಬ್ಯರ ಬೈಲು ಪ್ರದೇಶದಲ್ಲಿರುವ ಕಣಿವೆಗೆ, ಅಂದರೆ ‘ಪಿಸ್ಗಾ’ ಎಂಬ ಮಲೆನಾಡಿನ ಅಂಚಿಗೆ ಬಂದರು. ಕೆಳಗಿರುವ ‘ಯೆಷೀಮೋನ್’ ಎಂಬ ಮರಳುಗಾಡು ಆ ಗುಡ್ಡದ ಮೇಲಿಂದ ಕಾಣಿಸುತ್ತದೆ.
21 : ಇಸ್ರಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳಿಸಿದರು.
22 : “ನಿಮ್ಮ ನಾಡನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಹೊಲಗದ್ದೆಗಳ ಮೇಲಾಗಲಿ, ದ್ರಾಕ್ಷಿತೋಟಗಳ ಮೂಲಕವಾಗಲಿ ಹಾದುಹೋಗುವುದಿಲ್ಲ; ನಿಮ್ಮ ನಾಡನ್ನು ದಾಟುವವರೆಗೂ ರಾಜಮಾರ್ಗದಲ್ಲೇ ನಡೆದು ಹೋಗುತ್ತೇವೆ,” ಎಂದು ಹೇಳಿಸಿದರು.
23 : ಆದರೆ ಸೀಹೋನನು ತನ್ನ ನಾಡನ್ನು ದಾಟುವುದಕ್ಕೆ ಇಸ್ರಯೇಲರಿಗೆ ಅಪ್ಪಣೆ ಕೊಡಲಿಲ್ಲ. ಬದಲಿಗೆ ಅವರನ್ನು ಎದುರಿಸಲು ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಮರುಭೂಮಿಗೆ ಹೊರಟು, ಯಹಚಕ್ಕೆ ಬಂದು, ಅವರೊಡನೆ ಯುದ್ಧ ಮಾಡಿದನು.
24 : ಇಸ್ರಯೇಲರು ಅವನ ಜನರನ್ನು ಸೋಲಿಸಿದರು, ಕತ್ತಿಯಿಂದ ಸಂಹರಿಸಿದರು. ಅರ್ನೋನ್ ಹೊಳೆಯಿಂದ ಯಬ್ಬೋಕ್ ಹೊಳೆಯವರೆಗೂ ಹಾಗೂ ಅಮ್ಮೋನಿಯರ ಎಲ್ಲೆಯವರೆಗೂ ಇದ್ದ ಸೀಹೋನನ ನಾಡನ್ನೆಲ್ಲಾ ಸ್ವಾಧೀನ ಮಾಡಿಕೊಂಡರು. ಅಮ್ಮೋನಿಯರ ಎಲ್ಲೆ ಒಂದು ದುರ್ಗವಾಗಿತ್ತು.
25 : ಇಸ್ರಯೇಲರು ಈ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಹೆಷ್ಬೋನಿನಲ್ಲೂ ಅದಕ್ಕೆ ಸೇರಿದ ಗ್ರಾಮಗಳಲ್ಲೂ ಅಮೋರಿಯರ ಬೇರೆ ಎಲ್ಲಾ ಊರುಗಳಲ್ಲೂ ವಾಸಿಸಿದರು.
26 : ಹೆಷ್ಬೋನ್ ಪಟ್ಟಣ ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಹಿಂದಿನ ಅರಸನ ಮೇಲೆ ಯುದ್ಧ ಮಾಡಿ ಅರ್ನೋನ್ ಹೊಳೆಯವರೆಗೂ ಅವನ ನಾಡನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದನು.
27 : ಈ ವಿಷಯವಾಗಿಯೇ ಕವಿಗಳು ಹೀಗೆಂದು ಹಾಡಿದ್ದಾರೆ: ಹೆಷ್ಬೋನಿಗೆ ಬನ್ನಿ, ಕಟ್ಟಿ ಅದನ್ನು ಪುನಃ; ಮತ್ತೆ ಸ್ಥಾಪನೆ ಆಗಲಿ ಸೀಹೋನನಾ ಪಟ್ಟಣ.
28 : ಸೀಹೋನನಾ ಪಟ್ಟಣ, ಆ ಹೆಷ್ಬೋನ್, ಅಲ್ಲಿಂದಲೆ ಹೊರಟು ಬಂದಿತು ಅಗ್ನಿಜ್ವಾಲೆ. ದಹಿಸಿ ಬಿಟ್ಟಿತದು ಮೋವಾಬ್ಯರ ರಾಜಧಾನಿಯಾದ ಆರ್ ನಗರವನ್ನು, ಅರ್ನೋನ್ ಹೊಳೆಯ ಬಳಿಯ ಪೂಜಾಸ್ಥಳಗಳ ದೇವತೆಗಳನ್ನು.
29 : ಮೋವಾಬ್ಯರೇ, ನಿಮಗೆ ಧಿಕ್ಕಾರ ! ಕೆಮೋಷಿನ ಭಕ್ತರೇ, ನಿಮಗೆ ಪರಿವಿನಾಶ ! ಮಾಡಿಹನಾತ ತನ್ನ ಕುವರರನ್ನು ದೇಶಭ್ರಷ್ಟರನ್ನಾಗಿ ತನ್ನ ಕುವರಿಯರನ್ನು ಸೆರೆಯಾಳುಗಳನ್ನಾಗಿ ಅಮೋರಿಯರ ಅರಸ ಸೀಹೋನನಿಗೆ ಸೆರೆಯವರನ್ನಾಗಿ.
30 : ಅವರನ್ನು ಹೊಡೆದೆವು ನಾವು ಬಿಲ್ಲು ಬಾಣಗಳಿಂದ, ಹೆಷ್ಬೋನಿನಿಂದ ದೀಬೋನಿನವರೆಗೆ ಸರ್ವನಾಶ ! ಹಾಳು ಮಾಡಿದೆವು ಮೇದೆಬಾ ಊರಿನ ನೆರೆಯಲ್ಲಿರುವ ನೋಫಹದ ತನಕ.
31 : ಹೀಗೆ ಇಸ್ರಯೇಲರು ಅಮ್ಮೋನಿಯರ ನಾಡಿನಲ್ಲಿ ವಾಸಮಾಡುವಂತಾಯಿತು.
32 : ಬಳಿಕ ಮೋಶೆ ಯಗ್ಜೇರನ್ನು ನೋಡಿ ಬರಲು ಗೂಢಚಾರರನ್ನು ಕಳಿಸಿದನು. ಇದಾದ ಬಳಿಕ ಇಸ್ರಯೇಲರು ಅದರ ಗ್ರಾಮಗಳನ್ನು ವಶಪಡಿಸಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
33 : ಇಸ್ರಯೇಲರು ಹಿಂದಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಬಾಷಾನಿನ ಅರಸ ಓಗನು ತನ್ನ ಜನರೆಲ್ಲರೊಡನೆ ಅವರಿಗೆ ವಿರುದ್ಧ ಯುದ್ಧಮಾಡಲು ಎದ್ರೈವೂರಿಗೆ ಹೊರಟು ಬಂದನು.
34 : ಸರ್ವೇಶ್ವರ ಮೋಶೆಗೆ, “ಅವನಿಗೆ ಭಯಪಡಬೇಡ; ಅವನನ್ನೂ ಅವನ ಸಮಸ್ತ ಪ್ರಜೆಯನ್ನೂ ನಾಡನ್ನೂ ನಿನ್ನ ಕೈವಶಮಾಡಿದ್ದೇನೆ. ನೀನು ಹೆಷ್ಬೋನಿನಲ್ಲಿ ಅಮೋರಿಯರ ಅರಸ ಸೀಹೋನನಿಗೆ ಮಾಡಿದಂತೆಯೇ ಇವನಿಗೂ ಮಾಡು,” ಎಂದು ಹೇಳಿದರು.
35 : ಹಾಗೆಯೇ ಇಸ್ರಯೇಲರು ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಒಬ್ಬನನ್ನೂ ಬಿಡದೆ ಕೊಂದು ಅವನ ನಾಡನ್ನು ಸ್ವಾಧೀನಪಡಿಸಿಕೊಂಡರು.

Holydivine