Numbers - Chapter 14
Holy Bible

1 : ಜನರೆಲ್ಲರು, ಈ ವರದಿಯನ್ನು ಕೇಳಿ ಗಟ್ಟಿಯಾಗಿ ಗೋಳಿಟ್ಟರು. ರಾತ್ರಿಯೆಲ್ಲಾ ಅಳುತ್ತಿದ್ದರು.
2 : ಇಸ್ರಯೇಲರೆಲ್ಲರು ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿದರು. “ಈಜಿಪ್ಟಿನಲ್ಲೇ ನಾವು ಸತ್ತಿದ್ದರೆ ಚೆನ್ನಾಗಿತ್ತು.
3 : ಕತ್ತಿಯ ಬಾಯಿಗೆ ತುತ್ತಾಗಿಸಲು ಸರ್ವೇಶ್ವರಸ್ವಾಮಿ ನಮ್ಮನ್ನೇಕೆ ಈ ನಾಡಿಗೆ ಬರಮಾಡಿದರು? ನಮ್ಮ ಮಡದಿ ಮಕ್ಕಳು ಪರರ ಪಾಲಾಗುವರಲ್ಲಾ? ನಾವು ಮರಳಿ ಈಜಿಪ್ಟ್ ದೇಶಕ್ಕೆ ಹೋಗುವುದೇ ಒಳಿತಲ್ಲವೆ?” ಎಂದು ಹೇಳಿಕೊಂಡರು.
4 : “ಒಬ್ಬ ನಾಯಕನನ್ನು ನೇಮಿಸಿಕೊಂಡು ಈಜಿಪ್ಟಿಗೆ ಹಿಂದಿರುಗಿ ಹೋಗೋಣ,” ಎಂದೂ ಒಬ್ಬರಿಗೊಬ್ಬರು ಮಾತಾಡಿಕೊಂಡರು.
5 : ಆಗ ಮೋಶೆ ಮತ್ತು ಆರೋನರು ಇಸ್ರಯೇಲರ ಸರ್ವಸಮೂಹದ ಮುಂದೆ ಅಡ್ಡಬಿದ್ದರು.
6 : ಅಲ್ಲದೆ ನಾಡನ್ನು ಸಂಚರಿಸಿ ನೋಡಿ ಬಂದವರಲ್ಲಿ ನೂನನ ಮಗ ಯೆಹೋಶುವನು ಮತ್ತು ಯೆಫುನ್ನೆಯ ಮಗ ಕಾಲೇಬನು ಸಿಟ್ಟಿನಿಂದ ತಮ್ಮ ಬಟ್ಟೆಗಳನ್ನೇ ಹರಿದುಕೊಂಡು,
7 : ಇಸ್ರಯೇಲರ ಸರ್ವ ಸಮೂಹದವರಿಗೆ ಹೀಗೆಂದರು: “ನಾವು ಸಂಚರಿಸಿ ನೋಡಿಬಂದ ನಾಡು ಅತ್ಯುತ್ತಮವಾದುದು;
8 : ಹಾಲೂ ಜೇನೂ ಹರಿಯುವ ನಾಡದು! ಸರ್ವೇಶ್ವರನಿಗೆ ಮೆಚ್ಚುಗೆ ಆದರೆ ಅದರಲ್ಲಿ ನಮ್ಮನ್ನು ಸೇರಿಸುವರು, ಅದನ್ನೇ ನಮ್ಮ ಸ್ವಾಧೀನಕ್ಕೆ ಕೊಡುವರು.
9 : ಆದ್ದರಿಂದ ಸರ್ವೇಶ್ವರನಿಗೆ ವಿರುದ್ಧ ದಂಗೆ ಏಳಬೇಡಿ. ಆ ನಾಡಿನ ಜನರಿಗೆ ದಿಗಿಲು ಪಡಬೇಡಿ. ಅವರು ನಮಗೆ ತುತ್ತಾಗುವರು, ನಾವು ಪುಷ್ಠಿ ಆಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ. ಸರ್ವೇಶ್ವರ ನಮ್ಮ ಕಡೆ ಇದ್ದಾರೆ. ಅವರಿಗೆ ಭಯಪಡಬೇಡಿ.”
10 : ಆದರೆ ಜನಸಂದಣಿ ಅವರಿಗೆ ಕಿವಿಗೊಡಲೊಲ್ಲದೆ ಕಲ್ಲು ಎಸೆದು ಅವರನ್ನು ಕೊಲ್ಲಬೇಕೆಂದಿದ್ದರು. ಆಗ ಸರ್ವೇಶ್ವರನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಹೊಳೆದು ಇಸ್ರಯೇಲರೆಲ್ಲರಿಗೂ ಕಾಣಿಸಿಕೊಂಡಿತು.
11 : ಮೋಶೆಗೆ ಸರ್ವೇಶ್ವರ, “ಇನ್ನೆಷ್ಟು ಕಾಲ ಈ ಜನರು ನನ್ನನ್ನು ಅಲಕ್ಷ್ಯಮಾಡುವರು? ನಾನು ಮಾಡಿದ ಮಹತ್ಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಇನ್ನೆಷ್ಟು ಕಾಲ ನಂಬದೆ ಇರುವರು?
12 : ಆಗಲಿ, ನಾನು ಇವರಿಗೆ ದೊಡ್ಡ ರೋಗವನ್ನು ಬರಮಾಡಿ ಇವರನ್ನು ನಿರ್ಮೂಲ ಮಾಡಿಬಿಡುತ್ತೇನೆ; ಇವರಿಗಿಂತ ದೊಡ್ಡದೂ ಬಲಿಷ್ಠವೂ ಆದ ಜನಾಂಗವೊಂದನ್ನು ನಿನ್ನಿಂದಲೇ ಹುಟ್ಟಿಸುವೆನು,” ಎಂದು ಹೇಳಿದರು.
13 : ಅದಕ್ಕೆ ಮೋಶೆ: “ನೀವು ಹಾಗೆ ಮಾಡುವುದಾದರೆ ಈಜಿಪ್ಟಿನವರು ಈ ಸಮಾಚಾರವನ್ನು ಕೇಳುವರು. ಅವರ ಕೈಯಿಂದ ನೀವು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಸಂಗತಿಯನ್ನು ಈ ಕಾನಾನ್ ನಾಡಿನ ನಿವಾಸಿಗಳಿಗೆ ತಿಳಿಸುವರು.
14 : ಅಲ್ಲದೆ ಸರ್ವೇಶ್ವರಾ, ನೀವು ಇಸ್ರಯೇಲರ ನಡುವೆ ಇರುವುದಾಗಿ, ನೀವು ಇಸ್ರಯೇಲರಿಗೆ ಪ್ರತ್ಯಕ್ಷ ಕಾಣಿಸಿಕೊಳ್ಳುವುದಾಗಿ, ಹಗಲಿನಲ್ಲಿ ಮೇಘಸ್ತಂಭದಲ್ಲೂ, ಇರುಳಲ್ಲಿ ಅಗ್ನಿಸ್ತಂಭದಲ್ಲೂ ಇದ್ದು ಇವರ ಮುಂದೆ ನಡೆದು ಹೋಗುವುದಾಗಿ ಹಾಗೂ ನೀವಿರುವ ಮೇಘ ಇಸ್ರಯೇಲರ ಮೇಲೆ ಇರುವುದಾಗಿ ಈ ನಾಡಿನವರು ಕೇಳಿದ್ದಾರೆ.
15 : ಹೀಗಿರಲಾಗಿ ನೀವು ಒಂದೇ ಪೆಟ್ಟಿನಿಂದ ಈ ಜನರನ್ನೆಲ್ಲಾ ಸಾಯಿಸಿದರೆ ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿಮಗೆ ವಿರುದ್ಧ ಮಾತಾಡಿಕೊಳ್ಳುವರು:
16 : ‘ಸರ್ವೇಶ್ವರ ಪ್ರಮಾಣ ಪೂರ್ವಕವಾಗಿ ವಾಗ್ದಾನ ಮಾಡಿದ ನಾಡಿಗೆ ತನ್ನ ಜನರನ್ನು ಸೇರಿಸಲು ಶಕ್ತಿ ಸಾಲದೆ ಹೋಯಿತು; ಅವರನ್ನು ಮರುಭೂಮಿಯಲ್ಲೇ ಕೊಂದುಹಾಕಿಬಿಟ್ಟ’ ಎಂದುಕೊಳ್ಳುವರು.
17 : ಆದ್ದರಿಂದ ಪ್ರಭೂ, ನಿಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿರಿ: ಹಿಂದೆ ನೀವು ನಿಮ್ಮ ವಿಷಯದಲ್ಲಿ:
18 : ‘ಸರ್ವೇಶ್ವರ ದೀರ್ಘಶಾಂತನು, ಪ್ರೀತಿಮಯನು, ಪಾಪ-ಅಪರಾಧಗಳನ್ನು ಕ್ಷಮಿಸುವವನು, ಆದರೂ ಶಿಕ್ಷಿಸದೆ ಬಿಡದವನು; ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರುನಾಲ್ಕು ತಲೆಗಳವರೆಗೆ ಬರಮಾಡುವವನು,’ ಎಂದು ಹೇಳಿದ್ದೀರಿ. ಆ ಮಾತನ್ನು ನೆನಪಿಗೆ ತಂದುಕೊಳ್ಳಿ.
19 : ನಾವು ಈಜಿಪ್ಟ್ ದೇಶವನ್ನು ಬಿಟ್ಟುಬಂದ ದಿನದಿಂದ ಇಂದಿನವರೆಗೆ ಈ ಜನರ ಪಾಪಗಳನ್ನು ಕ್ಷಮಿಸಿದ್ದೀರಿ. ಅದೇ ಪ್ರಕಾರ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದು ಪ್ರಾರ್ಥಿಸಿದನು.
20 : ಅದಕ್ಕೆ ಸರ್ವೇಶ್ವರ, “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಕ್ಷಮಿಸಿದ್ದೇನೆ.
21 : ಆದರೂ ನನ್ನ ಜೀವದಾಣೆ, ಸರ್ವೇಶ್ವರನ ಮಹಿಮೆ ಅಖಿಲ ವಿಶ್ವವನ್ನು ತುಂಬಿದೆಯೆಂಬ ಸತ್ಯವಾಕ್ಯದ ಆಣೆ, ನನ್ನನ್ನು ಅಲಕ್ಷ್ಯ ಮಾಡಿದ ಇವರಲ್ಲಿ ಯಾರೂ ವಾಗ್ದತ್ತ ನಾಡನ್ನು ನೋಡುವುದಿಲ್ಲ.
22 : ಈಜಿಪ್ಟ್ ದೇಶದಲ್ಲೂ ಮರುಭೂಮಿಯಲ್ಲೂ ನಾನು ಮಾಡಿದ ಮಹತ್ಕಾರ್ಯಗಳನ್ನು ಹಾಗೂ ನನ್ನ ಅಸ್ತಿತ್ವದ ತೇಜಸ್ಸನ್ನು ಈ ಮಾನವರೆಲ್ಲರೂ ನೋಡಿದ್ದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ. ಬದಲಿಗೆ ನನ್ನನ್ನು ಪದೇಪದೇ ಪರೀಕ್ಷಿಸಿದ್ದಾರೆ.
23 : ಆದ್ದರಿಂದ ಇವರ ಪೂರ್ವಜರಿಗೆ ಪ್ರಮಾಣ ಪೂರ್ವಕವಾಗಿ ನಾನು ವಾಗ್ದಾನ ಮಾಡಿದ ಆ ನಾಡನ್ನು ಇವರಾರೂ ನೋಡುವುದಿಲ್ಲ.
24 : ನನ್ನ ದಾಸನಾದ ಕಾಲೇಬನಾದರೋ ಅವರಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದಿದ್ದಾನೆ. ಆದ್ದರಿಂದ ಅವನು ಸಂಚರಿಸಿ ಬಂದ ಆ ನಾಡಿಗೆ ಅವನನ್ನು ಸೇರಿಸುವೆನು. ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು.
25 : (ಅಮಾಲೇಕ್ಯರು ಹಾಗು ಕಾನಾನ್ಯರು ಅದರ ಕಣಿವೆಯಲ್ಲಿ ವಾಸಮಾಡುತ್ತಿದ್ದಾರೆ); ಈ ಕಾರಣ ನೀವು ನಾಳೆ ಹಿಂದಿರುಗಿ ಕೆಂಪುಸಮುದ್ರಕ್ಕೆ ಹೋಗುವ ದಾರಿ ಹಿಡಿದು ಮರುಭೂಮಿಗೆ ಪ್ರಯಾಣ ಮಾಡಬೇಕು,” ಎಂದು ಹೇಳಿದರು.
26 : ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ:
27 : “ನನಗೆ ವಿರೋಧವಾಗಿ ಗೊಣಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ಕಾಲ ಸಹಿಸಲಿ! ಈ ಇಸ್ರಯೇಲರು ನನಗೆ ವಿರುದ್ಧ ಗೊಣಗುಟ್ಟುವ ಮಾತುಗಳು ನನಗೆ ಕೇಳಿಸಿವೆ.
28 : ನೀವು ಅವರಿಗೆ ಹೀಗೆ ಹೇಳಬೇಕು: ‘ಸರ್ವೇಶ್ವರ ಹೇಳುವುದೇನೆಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ.
29 : ನಿಮ್ಮ ಶವಗಳು ಈ ಮರುಭೂಮಿಯಲ್ಲೇ ಬೀಳುವುವು. ನೀವು ನನಗೆ ವಿರೋಧವಾಗಿ ಗೊಣಗಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರೂ ಅಂದರೆ, ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು.
30 : ಯೆಫುನ್ನೆಯ ಮಗ ಕಾಲೇಬ್ ಮತ್ತು ನೂನನ ಮಗ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ನಿವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ನಾಡನ್ನು ಸೇರುವುದಿಲ್ಲ.
31 : ಆದರೆ ನಿಮ್ಮ ಮಕ್ಕಳನ್ನು, ಪರರ ಪಾಲಾಗುವರು ಎಂದು ಹೇಳಿದ ನಿಮ್ಮ ಚಿಕ್ಕಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದ ನಾಡನ್ನು ಅವರು ಅನುಭವಿಸುವರು.
32 : ನೀವಾದರೋ ಈ ಮರುಭೂಮಿಯಲ್ಲೇ ಬೀಳುವ ತನಕ
33 : ನಿಮ್ಮ ಮಕ್ಕಳು ನೀವು ಮಾಡಿದ ದ್ರೋಹದ ಫಲವನ್ನು ಅನುಭವಿಸುವವರಾಗಿ ನಾಲ್ವತ್ತು ವರ್ಷ ಮರುಭೂಮಿಯಲ್ಲೇ ಅಲೆದಾಡುವರು.
34 : ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ; ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ.
35 : ಇದು ಸರ್ವೇಶ್ವರನೆಂಬ ನಾನೇ ಹೇಳಿದ ಮಾತು. ನನಗೆ ವಿರೋಧವಾಗಿ ಒಟ್ಟು ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಮಾಡಿಯೇ ತೀರುವೆನು. ಮರುಭೂಮಿಯಲ್ಲೇ ಅವರೆಲ್ಲರು ಸಾಯಬೇಕು,” ಎಂದು ಹೇಳಿದರು.
36 : ಆ ನಾಡನ್ನು ಸಂಚರಿಸಿ ನೋಡಿಬರುವುದಕ್ಕೆ ಮೋಶೆಯಿಂದ ಕಳಿಸಲಾಗಿದ್ದವರು ಹಿಂದಿರುಗಿ ಬಂದು ಆ ನಾಡಿನ ಬಗ್ಗೆ ಅಶುಭ ಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಮೋಶೆಗೆ ವಿರುದ್ಧ ಗೊಣಗುವಂತೆ ಮಾಡಿದ್ದರು.
37 : ಅಂಥ ವ್ಯಕ್ತಿಗಳು ಸರ್ವೇಶ್ವರನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
38 : ಅವರಲ್ಲಿ ನೂನನ ಮಗ ಯೆಹೋಶುವನು ಮತ್ತು ಯೆಫುನ್ನೆಯ ಮಗ ಕಾಲೇಬನು ಉಳಿದುಕೊಂಡರು.
39 : ಮೋಶೆ ಸರ್ವೇಶ್ವರನ ಮತುಗಳನ್ನೆಲ್ಲಾ ಇಸ್ರಯೇಲರಿಗೆ ತಿಳಿಸಿದನು. ಅವರು ಬಹಳವಾಗಿ ವ್ಯಸನಪಟ್ಟರು.
40 : ಮಾರನೆಯ ದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪಮಾಡಿರುವುದೇನೋ ನಿಜ; ಸರ್ವೇಶ್ವರ ವಾಗ್ದಾನಮಾಡಿದ ಸ್ಥಳಕ್ಕೆ ಏರಿ ಹೋಗೋಣ ಬನ್ನಿ,” ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋಗಲಾರಂಭಿಸಿದರು.
41 : ಆದರೆ ಮೋಶೆ ಅವರಿಗೆ, “ಸರ್ವೇಶ್ವರನ ಆಜ್ಞೆಯನ್ನು ಏಕೆ ವಿೂರುತ್ತೀರಿ? ಇದು ಕೈಗೂಡುವುದಿಲ್ಲ.
42 : ಸರ್ವೇಶ್ವರ ನಿಮ್ಮ ಸಂಗಡ ಇಲ್ಲ, ಹತ್ತಬೇಡಿ. ನೀವು ಶತ್ರುಗಳ ಮುಂದೆ ನಿಲ್ಲಲಾರಿರಿ, ಬಿದ್ದು ಸತ್ತುಹೋಗುವಿರಿ.
43 : ಅಲ್ಲಿ ಅಮಾಲೇಕ್ಯರು ಹಾಗೂ ಕಾನಾನ್ಯರು ನಿಮಗೆ ಎದುರಾಗುವರು; ನೀವು ಅವರ ಕತ್ತಿಗೆ ತುತ್ತಾಗುವಿರಿ. ನೀವು ಸರ್ವೇಶ್ವರನ ಮಾತನ್ನು ಅನುಸರಿಸಿದೆ ಪ್ರತಿಭಟಿಸಿದ್ದೀರಿ. ಕತ್ತಿಗೆ ತುತ್ತಾಗುವಿರಿ. ಈ ಕಾರಣ ಅವರು ನಿಮ್ಮೊಂದಿಗೆ ಇರುವುದಿಲ್ಲ,” ಎಂದು ಹೇಳಿದನು.
44 : ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತೇಹತ್ತಿದರು. ಸರ್ವೇಶ್ವರನ ಒಡಂಬಡಿಕೆಯಾದ ಮಂಜೂಷವಾಗಲಿ, ಮೋಶೆಯಾಗಲಿ ಪಾಳೆಯವನ್ನು ಬಿಟ್ಟು ಹೊರಡಲಿಲ್ಲ.
45 : ಆ ಮಲೆನಾಡಿನಲ್ಲಿ ವಾಸವಾಗಿದ್ದ ಅಮಾಲೇಕ್ಯರು ಹಾಗೂ ಕಾನಾನ್ಯರು ಇಳಿದುಬಂದು ಅವರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೂ ಬೆನ್ನಟ್ಟಿ ಬಂದು ಸಂಹರಿಸಿದರು.

Holydivine