Numbers - Chapter 22
Holy Bible

1 : ಇಸ್ರಯೇಲರು ಪ್ರಯಾಣಮಾಡಿ ಜೋರ್ಡನ್ ನದಿ ತೀರದಲ್ಲಿ ಜೆರಿಕೋ ನಗರಕ್ಕೆ ಹತ್ತಿರವಿರುವ ಮೋವಾಬ್ಯರ ಬೈಲಿನಲ್ಲಿ ಇಳಿದುಕೊಂಡರು.
2 : ಆ ಕಾಲದಲ್ಲಿ ಚಿಪ್ಪೋರನ ಮಗನಾದ ಬಾಲಾಕನು ಮೋವಾಬ್ಯರಿಗೆ ಅರಸನಾಗಿದ್ದನು. ಇಸ್ರಯೇಲರು ಅಮೋರಿಯರನ್ನು ಕೊಂದ ವರ್ತಮಾನವನ್ನು ಈತ ಕೇಳಿದ್ದನು.
3 : ಇಸ್ರಯೇಲರು ಬಹು ಮಂದಿ ಇದ್ದುದರಿಂದ ಮೋವಾಬ್ಯರು ಬಹಳವಾಗಿ ದಿಗಿಲುಪಟ್ಟರು; ಇಸ್ರಯೇಲರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು.
4 : ಮಿದ್ಯಾನ್ಯರ ಹಿರಿಯರಿಗೆ, “ದನಕರುಗಳು ಅಡವಿಯ ಹುಲ್ಲನ್ನೆಲ್ಲಾ ಮೇದುಬಿಡುವಂತೆ ಈ ಸಮುದಾಯದವರು ನಮ್ಮನ್ನೂ ನಮ್ಮ ಸುತ್ತಮುತ್ತಲಿನವರನ್ನೂ ನಿರ್ಮೂಲ ಮಾಡುವ ಹಾಗಿದೆ,” ಎಂದು ಎಚ್ಚರಿಸಿದರು.
5 : ಬಾಲಾಕನು ಬೆಯೋರನ ಮಗ ಬಿಳಾಮನನ್ನು ಕರೆಸುವುದಕ್ಕೆ ಸ್ವಜನರ ನಾಡಾದ ಯೂಫ್ರೆಟಿಸ್ ನದಿಯ ತೀರದಲ್ಲಿರುವ ‘ಪೆತೋರ್’ ಎಂಬ ಊರಿಗೆ ದೂತರನ್ನು ಕಳಿಸಿದನು. “ತಾವು ದಯವಿಟ್ಟು ಬರಬೇಕು. ಯಾವುದೋ ಒಂದು ಜನಾಂಗ ಈಜಿಪ್ಟ್ ದೇಶದಿಂದ ಬಂದಿದೆ; ಭೂಮಿಯನ್ನೆಲ್ಲಾ ಆವರಿಸಿಕೊಂಡಿದೆ; ನನಗೆದುರಾಗಿ ಬಂದಿಳಿದಿದೆ. ಅವರು ನಮಗಿಂತ ಬಲಿಷ್ಠರು.
6 : ಆದುದರಿಂದ ತಾವು ದಯಮಾಡಿ ಬಂದು ಈ ಜನಕ್ಕೆ ಶಾಪಹಾಕಿ ನಮಗೆ ನೆರವಾಗಬೇಕು. ಆಗ ಇವರನ್ನು ಸೋಲಿಸಿ ಈ ನಾಡಿನಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ತಮ್ಮ ಆಶೀರ್ವಾದದಿಂದ ಶುಭ, ತಮ್ಮ ಶಾಪದಿಂದ ಅಶುಭವುಂಟಾಗುತ್ತದೆ ಎಂದು ನಾನು ಬಲ್ಲೆ,” ಎಂದು ಹೇಳಿಕಳಿಸಿದನು.
7 : ಮೋವಾಬ್ಯರ ಹಾಗೂ ಮಿದ್ಯಾನ್ಯರ ಮುಖ್ಯಸ್ಥರು ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಯನ್ನು ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದರು. ಬಾಲಾಕನು ಹೇಳಿಕಳಿಸಿದ್ದ ಮಾತುಗಳನ್ನು ತಿಳಿಸಿದರು.
8 : ಆಗ ಬಿಳಾಮನು, “ಈ ರಾತ್ರಿ ನೀವು ಇಲ್ಲೇ ತಂಗಿರಿ. ಸರ್ವೇಶ್ವರ ನನಗೆ ಕೊಡುವ ಉತ್ತರವನ್ನು ಬೆಳಿಗ್ಗೆ ತಿಳಿಸುವೆನು,” ಎಂದನು. ಅಂತೆಯೆ, ಮೋವಾಬ್ಯರ ಮುಖಂಡರು ಬಿಳಾಮನ ಬಳಿಯಲ್ಲಿ ಉಳಿದುಕೊಂಡರು.
9 : ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಬಳಿ ತಂಗಿರುವ ಈ ಜನರು ಯಾರು?” ಎಂದು ವಿಚಾರಿಸಿದರು.
10 : ಬಿಳಾಮನು, “ಮೋವಾಬ್ಯರ ಅರಸನು, ಅಂದರೆ ಚಿಪ್ಪೋರನ ಮಗ ಬಾಲಾಕನು ಅವರನ್ನು ನನ್ನ ಬಳಿಗೆ ದೂತರನ್ನಾಗಿ ಕಳಿಸಿದ್ದಾನೆ;
11 : ‘ದಯಮಾಡಿ ಬರಬೇಕು. ಯಾವುದೋ ಒಂದು ಜನಾಂಗ ಈಜಿಪ್ಟ್ ದೇಶದಿಂದ ಹೊರಟು ಬಂದಿದೆ; ಭೂಮಿಯನ್ನೆಲ್ಲಾ ಆವರಿಸಿಕೊಂಡಿದೆ; ನೀನು ಬಂದು ಅವರಿಗೆ ಶಾಪಹಾಕಬೇಕು; ಹಾಕಿದರೆ ಅವರನ್ನು ಸೋಲಿಸಿ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು,’ ಎಂದು ಹೇಳಿಕಳಿಸಿದ್ದಾನೆ,” ಎಂದು ಉತ್ತರ ಕೊಟ್ಟನು.
12 : ಅದಕ್ಕೆ ದೇವರು, “ನೀನು ಅವರ ಜೊತೆಯಲ್ಲಿ ಹೋಗಬಾರದು. ಆ ಜನಾಂಗದವರು ನನ್ನ ಆಶೀರ್ವಾದ ಹೊಂದಿದವರು. ಅವರನ್ನು ಶಪಿಸಬಾರದು,” ಎಂದು ಹೇಳಿಬಿಟ್ಟರು.
13 : ಬೆಳಿಗ್ಗೆ ಬಿಳಾಮನು ಬಾಲಾಕನ ಮುಖಂಡರಿಗೆ, “ನಾನು ನಿಮ್ಮ ಜೊತೆಯಲ್ಲಿ ಬರುವುದಕ್ಕೆ ಸರ್ವೇಶ್ವರನ ಅಪ್ಪಣೆಯಿಲ್ಲ. ನೀವು ನಿಮ್ಮ ನಾಡಿಗೆ ತೆರಳಿ,” ಎಂದನು.
14 : ಮೋವಾಬ್ಯರ ಮುಖಂಡರು ಹೊರಟು ಬಾಲಾಕನ ಬಳಿಗೆ ಬಂದರು. ಬಿಳಾಮನು ಬರಲು ಒಪ್ಪಲಿಲ್ಲವೆಂದು ತಿಳಿಸಿದರು.
15 : ಬಾಲಾಕನು ಅವರಿಗಿಂತಲೂ ಹೆಚ್ಚು ಗಣ್ಯವಂತ ಮುಂದಾಳುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕಳಿಸಿದನು.
16 : ಇವರು ಬಿಳಾಮನ ಬಳಿಗೆ ಬಂದು, “ಚಿಪ್ಪೋರನ ಮಗ ಬಾಲಾಕನು ತಮಗೆ ತಿಳಿಸುವುದು ಇದು: ‘ತಾವು ದಯಮಾಡಿ ನನ್ನ ಬಳಿಗೆ ಬರಲು ಯಾವ ಅಡ್ಡಿಯನ್ನು ಒಡ್ಡಬೇಡಿ.
17 : ನಾನು ತಮ್ಮನ್ನು ಬಹಳವಾಗಿ ಸನ್ಮಾನಿಸುವೆನು; ತಾವು ಏನು ಹೇಳಿದರೂ ಅದರಂತೆಯೇ ಮಾಡುವೆನು; ತಾವು ಅಗತ್ಯವಾಗಿ ಬಂದು ಈ ಜನಾಂಗದವರನ್ನು ಶಪಿಸಿ ನನಗೆ ನೆರವಾಗಬೇಕು’ ಎಂದು ಹೇಳಿಕಳಿಸಿದ್ದಾರೆ,” ಎಂದರು.
18 : ಅದಕ್ಕೆ ಬಿಳಾಮನು, “ಬಾಲಾಕನು ತನ್ನ ಮನೆ ತುಂಬ ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಚಿಕ್ಕದರಲ್ಲಾಗಲಿ ದೊಡ್ಡದರಲ್ಲಾಗಲಿ ಉಲ್ಲಂಘಿಸಲಾರೆ.
19 : ನೀವು ಕೂಡ ಈ ರಾತ್ರಿ ಇಲ್ಲೇ ತಂಗಿರಿ, ಸರ್ವೇಶ್ವರ ಏನು ಹೇಳುತ್ತಾರೋ ಅದನ್ನು ತಿಳಿದುಕೊಳ್ಳುತ್ತೇನೆ,” ಎಂದು ಬಾಲಾಕನು ದೂತರಿಗೆ ಉತ್ತರಕೊಟ್ಟನು.
20 : ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಆ ಜನರು ನಿನ್ನನ್ನು ಕರೆಯುವುದಕ್ಕೆ ಬಂದಿರುವುದರಿಂದ ಎದ್ದು ಅವರ ಜೊತೆಯಲ್ಲಿ ಹೋಗು; ಆದರೆ ನಾನು ಆಜ್ಞಾಪಿಸುವ ಪ್ರಕಾರವೇ ಮಾಡಬೇಕು,” ಎಂದರು.
21 : ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಮುಂದಾಳುಗಳ ಜೊತೆಯಲ್ಲಿ ಹೊರಟನು.
22 : ಬಿಳಾಮನು ಹೀಗೆ ಹೋದುದರಿಂದ ದೇವರಿಗೆ ಸಿಟ್ಟಾಯಿತು. ಸರ್ವೇಶ್ವರನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಹತ್ತಿ ಇಬ್ಬರು ಆಳುಗಳ ಸಂಗಡ ಸವಾರಿ ಮಾಡುತ್ತಿದ್ದನು.
23 : ಸರ್ವೇಶ್ವರನ ದೂತನು ಬಿಚ್ಚು ಗತ್ತಿಯನ್ನು ಕೈಯಲ್ಲಿ ಹಿಡಿದು ದಾರಿಯಲ್ಲೇ ನಿಂತನು. ಇದನ್ನು ಕಂಡ ಆ ಕತ್ತೆ ದಾರಿಯನ್ನು ಬಿಟ್ಟು ಅಡವಿ ಕಡೆಹೋಯಿತು. ದಾರಿಗೆ ತಿರುಗಿಸಲು ಬಿಳಾಮನು ಅದನ್ನು ಹೊಡೆದನು.
24 : ಬಳಿಕ ಸರ್ವೇಶ್ವರನ ದೂತನು ದ್ರಾಕ್ಷಿ ತೋಟಗಳ ಸಂದಿಯಲ್ಲಿ ನಿಂತನು. ಈ ಕಡೆಯಲ್ಲೂ ಗೋಡೆಯಿತ್ತು.
25 : ಕತ್ತೆ ಆ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡಿತು. ಬಿಳಾಮನ ಕಾಲನ್ನು ಆ ಗೋಡೆಗೆ ಇರುಕಿಸಿತು. ಅವನು ಅದನ್ನು ಮತ್ತೆ ಹೊಡೆದನು.
26 : ಅನಂತರ ಸರ್ವೇಶ್ವರನ ದೂತನು ಮುಂದೆ ಹೋಗಿ ಎಡಕ್ಕಾಗಲಿ ಬಲಕ್ಕಾಗಲಿ ತಿರುಗಲು ದಾರಿಯಿಲ್ಲದ ಇಕ್ಕಟ್ಟಾದ ಒಂದು ಸ್ಥಳದಲ್ಲಿ ನಿಂತುಕೊಂಡನು.
27 : ಕತ್ತೆ ಅವನನ್ನು ನೋಡಿ ಬಿಳಾಮನ ಕೆಳಗೆ ಬಿದ್ದುಕೊಂಡಿತು. ಬಿಳಾಮನು ಸಿಟ್ಟುಗೊಂಡು ಕೈಗೋಲಿಂದ ಹೊಡೆದನು.
28 : ಆಗ ಸರ್ವೇಶ್ವರ ಆ ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟರು. ಅದು ಬಿಳಾಮನಿಗೆ, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದೆ?” ಎಂದು ಪ್ರಶ್ನೆ ಹಾಕಿತು.
29 : ಅದಕ್ಕೆ ಬಿಳಾಮನು, “ನೀನು ಇಷ್ಟಬಂದಂತೆ ನನ್ನನ್ನು ಅತ್ತಿತ್ತ ಆಡಿಸಿದೆ; ನನ್ನ ಕೈಯಲ್ಲಿ ಕತ್ತಿಯಿದ್ದಿದ್ದರೆ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆ,” ಎಂದನು.
30 : ಅದಕ್ಕೆ ಆ ಕತ್ತೆ, “ನಿನ್ನ ಜೀವಮಾನವೆಲ್ಲ, ಇಂದಿನ ತನಕ ಸವಾರಿ ಮಾಡುತ್ತಿದ್ದ ಕತ್ತೆ ನಾನಲ್ಲವೆ? ನಾನು ಎಂದಾದರೂ ಈ ರೀತಿ ಮಾಡಿದ್ದುಂಟೆ?” ಎಂದಿತು. ಆಗ ಬಿಳಾಮನು “ಇಲ್ಲ” ಎಂದನು.
31 : ಅಷ್ಟರಲ್ಲೇ ಸರ್ವೇಶ್ವರ ಬಿಳಾಮನ ಕಣ್ಣುಗಳನ್ನು ತೆರೆದರು. ಅವರ ದೂತನು ಬಿಚ್ಚು ಕತ್ತಿಯನ್ನು ಹಿಡಿದು ದಾರಿಯಲ್ಲೆ ನಿಂತಿರುವುದನ್ನು ಕಂಡನು. ಕೂಡಲೆ ಅಡ್ಡಬಿದ್ದು ನಮಸ್ಕರಿಸಿದನು.
32 : ಆಗ ಸರ್ವೇಶ್ವರನ ದೂತ, “ಮೂರು ಸಾರಿ ನಿನ್ನ ಕತ್ತೆಯನ್ನೇಕೆ ಹೊಡೆದೆ? ನೀನು ಹಿಡಿದ ಮಾರ್ಗ ಸರಿಯಲ್ಲ. ನಿನ್ನನ್ನು ತಡೆಗಟ್ಟಲು ನಾನೇ ಬಂದೆ.
33 : ಈ ಕತ್ತೆ ನನ್ನನ್ನು ನೋಡಿ ಮೂರು ಸಾರಿ ನನ್ನೆದುರಿನಿಂದ ಪಕ್ಕಕ್ಕೆ ತಿರುಗಿ ಕೊಂಡಿತು. ಹಾಗೆ ತಿರುಗಿಕೊಳ್ಳದೆ ಹೋಗಿದ್ದರೆ ನಿನ್ನನ್ನು ಕೊಂದು ಕತ್ತೆಯನ್ನು ಉಳಿಸುತ್ತಿದ್ದೆ,” ಎಂದು ಹೇಳಿದನು.
34 : ಅದಕ್ಕೆ ಬಿಳಾಮನು, “ನಾನು ಪಾಪ ಮಾಡಿದೆ, ನೀನೆ ನನಗೆದುರಾಗಿ ದಾರಿಯಲ್ಲಿ ನಿಂತಿರುವುದು ನನಗೆ ತಿಳಿಯದೆ ಹೋಯಿತು. ನಾನು ಮಾಡುವುದು ನಿನಗೆ ಕೆಟ್ಟದ್ದಾಗಿ ತೋರಿದರೆ ಹಿಂದಕ್ಕೆ ತಿರುಗಿಕೊಳ್ಳುತ್ತೇನೆ,” ಎಂದನು.
35 : ಆಗ ಸರ್ವೇಶ್ವರನ ದೂತನು, “ಆ ವ್ಯಕ್ತಿಗಳ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವುದನ್ನೇ ಹೊರತು ಬೇರೆ ಏನನ್ನೂ ಹೇಳಬೇಡ,” ಎಂದು ತಿಳಿಸಿದನು. ಬಿಳಾಮನು ಬಾಲಾಕನ ಮುಂದಾಳುಗಳ ಜೊತೆ ಹೊರಟನು.
36 : ಬಿಳಾಮನು ಬಂದ ಸಮಾಚಾರ ಬಾಲಾಕನಿಗೆ ಮುಟ್ಟಿತು. ಅವನು ಬಿಳಾಮನನ್ನು ಬರಮಾಡಿಕೊಳ್ಳಲು ತನ್ನ ನಾಡಗಡಿಯಾದ ಅರ್ನೋನ್ ಹೊಳೆಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೊರಟುಬಂದನು.
37 : ಅಲ್ಲಿ ಬಿಳಾಮನನ್ನು ಕಂಡು, “ತಮ್ಮನ್ನು ತುರ್ತಾಗಿ ಕರೆದುತರಲು ನಾನು ದೂತರನ್ನು ಕಳಿಸಿದೆನಲ್ಲವೆ? ತಾವೇಕೆ ಆಗಲೇ ಬರಲಿಲ್ಲ? ತಮಗೆ ಯೋಗ್ಯವಾದ ಸತ್ಕಾರ ನೀಡಲು ನಾನು ಅಸಮರ್ಥನೇ?” ಎಂದನು.
38 : ಅದಕ್ಕೆ ಬಿಳಾಮನು, “ಅದಿರಲಿ, ನಾನೀಗ ಬಂದಾಯಿತು. ಆದರೆ ನಾನಾಗಿ ಏನನ್ನು ಹೇಳುವ ಶಕ್ತಿ ನನಗಿಲ್ಲ. ದೇವರು ಆಡಿಸಿದ ಮಾತನ್ನೇ ಹೇಳಲು ಸಾಧ್ಯ,” ಎಂದು ಹೇಳಿದನು.
39 : ಇದಾದ ಬಳಿಕ ಬಿಳಾಮನು ಬಾಲಾಕನೊಂದಿಗೆ ಹೋದನು. ಅವರು ಕಿರ್ಯತ್ ಹುಚೋತಿಗೆ ಬಂದರು.
40 : ಬಾಲಾಕನು ಹೋರಿಗಳನ್ನು ಹಾಗೂ ಕುರಿಗಳನ್ನು ಕೊಂದು ಬಲಿಕೊಟ್ಟು, ಅವುಗಳ ಮಾಂಸವನ್ನು ಬಿಳಾಮನಿಗೂ ಅವನ ಸಂಗಡವಿದ್ದ ಮುಂದಾಳುಗಳಿಗೂ ಕಳಿಸಿದನು.
41 : ಮರುದಿನ ಬೆಳಿಗ್ಗೆ ಬಾಲಾಕನು ಬಿಳಾಮನನ್ನು ಕರೆದುಕೊಂಡು ‘ಬಾಳ್’ ಎಂಬ ದೇವತೆಯ ಪೂಜಾಸ್ಥಳಗಳಿದ್ದ ಗುಡ್ಡವನ್ನು ಹತ್ತಿ ಇಸ್ರಯೇಲರ ಶಿಬಿರದೊಂದು ಭಾಗವನ್ನು ತೋರಿಸಿದನು.

Holydivine