Numbers - Chapter 4
Holy Bible

1 : ಸರ್ವೇಶ್ವರಸ್ವಾಮಿ, ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು:
2 : “ನೀವು ಲೇವಿಯರಲ್ಲಿಯ ಕೆಹಾತ್ಯರನ್ನು ಎಣಿಕೆ ಮಾಡಬೇಕು.
3 : ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರನ್ನು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.
4 : “ಕೆಹಾತ್ಯರು ಕೈಗೊಳ್ಳಬೇಕಾದ ಕರ್ತವ್ಯಗಳು ಇವು: ದೇವದರ್ಶನದ ಗುಡಾರದಲ್ಲಿ ಪರಮ ಪವಿತ್ರವಾದ ವಸ್ತುಗಳನ್ನು ಅವರು ನೋಡಿಕೊಳ್ಳಬೇಕು.
5 : ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು.
6 : ಅದರ ಮೇಲೆ ಹಸನಾದ ತೊಗಲನ್ನು ಮತ್ತು ನೀಲಿ ಬಟ್ಟೆಯನ್ನು ಹೊದಿಸಬೇಕು. (ಮಂಜೂಷದ ಬಳೆಗಳಿಗೆ) ಹೊರುವ ಕೋಲುಗಳನ್ನು ಸಿಕ್ಕಿಸಬೇಕು.
7 : “ಸನ್ನಿಧಿ ಕಾಣಿಕೆಯ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಿ ಅದರ ಮೇಲೆ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು ಹಾಗೂ ಧಾನ್ಯದ್ರವ್ಯಾರ್ಪಣೆಯ ಬಟ್ಟಲುಗಳನ್ನು ಅವರು ಇಡಬೇಕು. ನಿತ್ಯಾರ್ಪಣೆಯ ರೊಟ್ಟಿಗಳನ್ನು ಅದರ ಮೇಲೆ ಇಡಬೇಕು.
8 : ಅವೆಲ್ಲವುಗಳ ಮೇಲೆ ರಕ್ತವರ್ಣದ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಸಿಕ್ಕಿಸಬೇಕು.
9 : “ದೀಪಸ್ತಂಭವನ್ನು, ದೀಪದ ಕುಡಿ ತೆಗೆಯುವ ಬಟ್ಟಲುಗಳನ್ನು ಹಾಗೂ ಎಣ್ಣೆಯ ಪಾತ್ರೆಗಳನ್ನು ನೀಲಿಬಟ್ಟೆಯಿಂದ ಮುಚ್ಚಿಡಬೇಕು.
10 : ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಹಸನಾದ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡ ದಂಡಕ್ಕೆ ಕಟ್ಟಬೇಕು.
11 : “ತರುವಾಯ ಅವರು ಬಂಗಾರದ ವೇದಿಕೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಹಾಕಬೇಕು.
12 : ದೇವಸ್ಥಾನದ ಸೇವೋಪಕರಣಗಳನ್ನೆಲ್ಲಾ ನೀಲಿ ಬಟ್ಟೆಯಲ್ಲಿಟ್ಟು, ಹಸನಾದ ತೊಗಲನ್ನು ಹೊದಿಸಿ ಅಡ್ಡ ದಂಡಕ್ಕೆ ಕಟ್ಟಬೇಕು.
13 : ಬಲಿಪೀಠದ ಬೂದಿಯನ್ನು ತೆಗೆದುಬಿಟ್ಟು ಆ ಪೀಠದ ಮೇಲೆ ಊದಾ ವರ್ಣದ ಬಟ್ಟೆಯನ್ನು ಹಾಸಿ
14 : ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಠಿಕೆಗಳು, ಮುಳ್ಳುಗಳು, ಸಲಿಕೆಗಳು ಹಾಗೂ ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು, ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು.
15 : ಆರೋನನು ಮತ್ತು ಅವನ ಮಕ್ಕಳು ದಂಡು ಹೊರಡುವ ಕಾಲದಲ್ಲಿ ದೇವಸ್ಥಾನದ ಎಲ್ಲ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು. ಮುಟ್ಟಿದರೆ ಬದುಕಲಾರರು. ಕೆಹಾತ್ಯರು ದೇವದರ್ಶನದ ಗುಡಾರದ ಸಲಕರಣೆಗಳಲ್ಲಿ ಹೊರಬೇಕಾದವುಗಳು ಇವೇ.
16 : “ಮಹಾಯಾಜಕ ಆರೋನನ ಮಗ ಎಲ್ಲಾಜಾರನು ದೀಪದ ಎಣ್ಣೆಯನ್ನು, ಪರಿಮಳ ಧೂಪವನ್ನು, ಅನುದಿನ ನೈವೇದ್ಯ ಮಾಡುವ ಧಾನ್ಯ ದ್ರವ್ಯಗಳನ್ನು ಹಾಗೂ ಅಭಿಷೇಕ ತೈಲವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳಬೇಕು. ದೇವದರ್ಶನದ ಗುಡಾರದ ಎಲ್ಲ ಭಾಗಗಳು, ಅದರಲ್ಲಿ ಇರುವ ಸಮಸ್ತ ವಸ್ತುಗಳು, ಪಾತ್ರೆಪರಿಕರಗಳು ಹಾಗೂ ಅವುಗಳಲ್ಲಿರುವುದೆಲ್ಲವೂ ಅವನ ಮೇಲ್ವಿಚಾರಣೆ ಯಲ್ಲಿರಬೇಕು.”
17 : ಸರ್ವೇಶ್ವರ ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು:
18 : “ಕೆಹಾತ್ಯರ ಗೋತ್ರ ಕುಟುಂಬಗಳವರು ಲೇವಿಯರೊಳಗೆ ಉಳಿಯದೆ ನಾಶವಾಗುವುದಕ್ಕೆ ಆಸ್ಪದಕೊಡಬೇಡಿ.
19 : ಪರಮ ಪವಿತ್ರವಾದ ವಸ್ತುಗಳ ಹತ್ತಿರಕ್ಕೆ ಬರುವಾಗ ಅವರು ಸಾಯದಂತೆ ಎಚ್ಚರಿಕೆ ವಹಿಸಿರಿ. ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಅವರವರ ಕೆಲಸಗಳನ್ನು, ಹೊರಬೇಕಾದ ಹೊರೆಗಳನ್ನು ಗೊತ್ತುಮಾಡಬೇಕು.
20 : ಕೆಹಾತ್ಯರೇ ಒಳಗೆ ಬಂದು, ಒಂದು ಕ್ಷಣ ಮಾತ್ರವೂ ಆ ಪವಿತ್ರ ವಸ್ತುಗಳನ್ನು ನೋಡದಿರಲಿ; ನೋಡಿ ಸಾಯದಿರಲಿ.”
21 : ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆ ಇದು:
22 : “ನೀನು ಗೇರ್ಷೋನ್ಯರನ್ನು ಲೆಕ್ಕಿಸಬೇಕು.
23 : ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರ ಕುಟುಂಬದ ಪ್ರಕಾರ ಎಣಿಸಬೇಕು.
24 : “ಪರಿಚರ್ಯ ಮಾಡುವುದರಲ್ಲೂ ಹೊರೆಗಳನ್ನು ಹೊರುವುದರಲ್ಲೂ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇವು:
25 : ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು - ಅಂದರೆ ಗುಡಾರ, ಅದರ ಹೊದಿಕೆ, ಅದರ ಮೇಲಿನ ಹಸನಾದ ತೊಗಲಿನ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಿನ ಪರದೆ,
26 : ಗುಡಾರದ ಮತ್ತು ಬಲಿಪೀಠದ ಸುತ್ತಣ ಅಂಗಳದ ತೆರೆಗಳು, ಅದರ ಬಾಗಿಲಿನ ಪರದೆ, ಹಗ್ಗಗಳು ಮತ್ತು ಅವುಗಳ ಎಲ್ಲ ಉಪಕರಣಗಳು, ಇವುಗಳನ್ನು ಹೊರಬೇಕು; ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಅವರೇ ಮಾಡಬೇಕು.
27 : ಗೇರ್ಷೋನ್ಯರು ಹೊರೆಹೊರುವುದರಲ್ಲೂ ಬೇರೆ ಪರಿಚರ್ಯ ಮಾಡುವುದರಲ್ಲೂ ಆರೋನನ ಮತ್ತು ಅವನ ಮಕ್ಕಳ ಅಪ್ಪಣೆಯ ಪ್ರಕಾರವೇ ನಡೆಯಬೇಕು. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು.
28 : ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇದೇ. ಮಹಾಯಾಜಕ ಆರೋನನ ಮಗ ಈತಮಾರನು ಅವರ ಮೇಲ್ವಿಚಾರಣೆಯನ್ನು ಮಾಡಬೇಕು.
29 : “ಮೆರಾರೀಯರಲ್ಲೂ ಯಾರಾರು ಮೂವತ್ತರಿಂದ ಐವತ್ತು ವರ್ಷ ವಯಸ್ಸಿನವರಿದ್ದಾರೋ ಹಾಗೂ
30 : ದೇವದರ್ಶನದ ಗುಡಾರದ ಸೇವೆಮಾಡಲು ಯೋಗ್ಯರಾಗಿದ್ದಾರೋ ಅವರನ್ನು ಗೋತ್ರ ಕುಟುಂಬಗಳ ಪ್ರಕಾರ ಎಣಿಕೆಮಾಡು.
31 : ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕರ್ತವ್ಯಗಳು ಯಾವುವೆಂದರೆ -
32 : ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೆಕಲ್ಲುಗಳನ್ನು, ಗೂಟಗಳನ್ನು, ಹಗ್ಗಗಳನ್ನು ಮತ್ತು ಅವುಗಳ ಎಲ್ಲ ಉಪಕರಣಗಳನ್ನು ಹೊರಬೇಕು. ಅವರವರ ಹೊರೆಗಳನ್ನೆಲ್ಲ ನೀವೇ ಹೆಸರಿಸಿ ಗೊತ್ತುಮಾಡಬೇಕು.
33 : ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗ ಈತಮಾರನ ಕೈಕೆಳಗೆ ಇದನ್ನೆಲ್ಲಾ ಮಾಡಬೇಕು.” ಲೇವಿಯರ ಜನಗಣತಿ
34 : ಮೋಶೆ ಹಾಗು ಆರೋನರು ಮತ್ತು ಸಮೂಹದ ಮುಖ್ಯಸ್ಥರು ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರ್ಷದವರೆಗಿನ ವಯಸ್ಸುಳ್ಳವರಾಗಿದ್ದರೋ
35 : ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದರೋ ಅವರನ್ನು ಗೋತ್ರ ಕುಟುಂಬಗಳ ಪ್ರಕಾರ ಎಣಿಸಿದರು.
36 : ಅವರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 2750.
37 : ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಯಂತೆ ಕೆಹಾತ್ಯರನ್ನು ಮೋಶೆ - ಆರೋನರು ಎಣಿಕೆ ಮಾಡಿದಾಗ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಜನ.
38 : ಗೇರ್ಷೋನ್ಯರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾಗಿದ್ದವರ
39 : ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
40 : ಗೋತ್ರಕುಟುಂಬದ ಪ್ರಕಾರ ಎಣಿಕೆಯಾದವರ ಸಂಖ್ಯೆ - 2630.
41 : ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಹಾಗು ಆರೋನರಿಂದ ಎಣಿಕೆಯಾಗಿ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಮಂದಿ.
42 : ಮೆರಾರೀಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
43 : ಮೆರಾರೀಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
44 : ಗೋತ್ರಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ - 3200.
45 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಮೆರಾರೀಯರನ್ನು ಮೋಶೆ - ಆರೋನರು ಎಣಿಕೆ ಮಾಡಿದಾಗ ಅವರ ಸಂಖ್ಯೆ ಇಷ್ಟೇ ಇತ್ತು.
46 : ಮೋಶೆ ಹಾಗು ಆರೋನರು ಮತ್ತು ಇಸ್ರಯೇಲರ ಮುಖ್ಯಸ್ಥರು ಲೇವಿಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾಗಿದ್ದವರನ್ನು ಮತ್ತು
47 : ದೇವದರ್ಶನದ ಗುಡಾರದ ಸೇವೆಯನ್ನು ಕೈಗೊಳ್ಳಲು
48 : ಹಾಗೂ ಅದರ ಹೊರೆಗಳನ್ನು ಹೊರಲು ಶಕ್ತರಾಗಿದ್ದವರನ್ನು ಎಣಿಕೆ ಮಾಡಿದಾಗ ದೊರೆತ ಸಂಖ್ಯೆ - 8580.
49 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಯೊಬ್ಬನಿಗೆ ಅವನವನ ಕೆಲಸ ಹಾಗೂ ಹೊಣೆಯನ್ನು ಗೊತ್ತುಮಾಡಲಾಯಿತು. ಹೀಗೆ ಸರ್ವೇಶ್ವರನ ಆಜ್ಞೆಯ ಮೇರೆಗೆ ಜನಗಣತಿ ನಡೆಯಿತು.

Holydivine