Numbers - Chapter 19
Holy Bible

1 : ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರಿಗೆ ಹೀಗೆಂದರು:
2 : “ಸರ್ವೇಶ್ವರನಾದ ನಾನು ಒಂದು ವಿಧಿಯನ್ನು ನೇಮಿಸಿದ್ದೇನೆ. ಅದೇನೆಂದರೆ - ಎಂದೂ ನೊಗವನ್ನು ಹೊರದ ಹಾಗು ಯಾವ ಕುಂದುಕೊರತೆಯೂ ಇಲ್ಲದ ಒಂದು ಕೆಂದಾಕಳನ್ನು ನಿನಗೆ ತಂದು ಕೊಡಬೇಕೆಂದು ಇಸ್ರಯೇಲರಿಗೆ ತಿಳಿಸು.
3 : ಅದನ್ನು ನೀವು ಯಾಜಕ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಆತ ಅದನ್ನು ಪಾಳೆಯದ ಹೊರಗೆ ಹೊಡೆಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆಮಾಡಿಸಬೇಕು.
4 : ತರುವಾಯ ಎಲ್ಲಾಜಾರನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಿಂದ ದೇವದರ್ಶನದ ಗುಡಾರದ ಮುಂಭಾಗದತ್ತ ಏಳು ಸಾರಿ ಚಿಮುಕಿಸಬೇಕು.
5 : ಆ ಆಕಳನ್ನು ಚರ್ಮ, ಮಾಂಸ, ರಕ್ತ, ಕಲ್ಮಷಗಳ ಸಹಿತವಾಗಿ ತನ್ನ ಎದುರಿನಲ್ಲೇ ದಹಿಸಿಬಿಡಬೇಕು.
6 : ಯಾಜಕನು ದೇವದಾರು ಮರದ ಕಟ್ಟಿಗೆಯನ್ನು, ಹಿಸ್ಸೋಪ್ ಗಿಡದ ಬರಲನ್ನು ಮತ್ತು ರಕ್ತವರ್ಣದ ದಾರವನ್ನು ತೆಗೆದುಕೊಂಡು ಆ ಆಕಳನ್ನು ದಹಿಸುವ ಬೆಂಕಿಯಲ್ಲಿ ಹಾಕಬೇಕು.
7 : ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಂಜೆಯವರೆಗೂ ಅವನು ಮಡಿಗೆಟ್ಟವನಾಗಿರಬೇಕು.
8 : ಆ ಆಕಳನ್ನು ಸುಟ್ಟವನು ಕೂಡ ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸ್ನಾನಮಾಡಿ ಆ ದಿನದ ಸಂಜೆಯ ತನಕ ಮಡಿಗೆಟ್ಟವನಾಗಿರಬೇಕು.
9 : “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಯೇಲ್ ಸಮಾಜದವರ ಉಪಯೋಗಕ್ಕಾಗಿ ನೀವು ಜೋಪಾನವಾಗಿಡಬೇಕು. ಅದು ದೋಷ ಪರಿಹಾರಕವಾದುದು. ಅದರಿಂದ ಶುದ್ಧೀಕರಣ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲೇ ಇಟ್ಟಿರಬೇಕು.
10 : ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸಂಜೆಯವರೆಗೆ ಮಡಿಗೆಟ್ಟವನಾಗಿರಬೇಕು. ಇದು ಇಸ್ರಯೇಲರಿಗೂ ಅವರ ಮಧ್ಯೆ ವಾಸಿಸುವ ಇತರರಿಗೂ ಅನ್ವಯಿಸುವ ಶಾಶ್ವತ ನಿಯಮ.
11 : “ಮನುಷ್ಯನ ಶವವನ್ನು ಸೋಂಕಿದವನು ಏಳುದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.
12 : ಮೂರನೇ ದಿನ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನ ಶುದ್ಧನಾಗುವನು. ಮೂರನೆಯ ದಿನ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆ ದಿನದಲ್ಲೂ ಶುದ್ಧನಾಗನು.
13 : ಮನುಷ್ಯನ ಶವ ಸೋಂಕಿದವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಅವನು ಸರ್ವೇಶ್ವರನ ಗುಡಾರವನ್ನು ಅಪವಿತ್ರಪಡಿಸುತ್ತಾನೆ. ಅಂಥವನನ್ನು ಇಸ್ರಯೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣ ನೀರನ್ನು ಅವನ ಮೇಲೆ ಚಿಮುಕಿಸದೆ ಇರುವ ಕಾರಣ ಅವನು ಮಡಿಗೆಟ್ಟವನು; ಅವನಿಗುಂಟಾದ ಮೈಲಿಗೆ ಅವನಲ್ಲಿ ಉಳಿದಿರುತ್ತದೆ.
14 : “ಮೈಲಿಗೆ ನಿಯಮವಿದು: ಯಾರಾದರೂ ಡೇರೆಯೊಳಗೆ ಸತ್ತ ಸಂದರ್ಭದಲ್ಲಿ ಆ ಡೇರೆಯ ಒಳಗಿರುವವರೆಲ್ಲರು ಹಾಗೂ ಅದರೊಳಗೆ ಬರುವವರು ಕೂಡ ಮೈಲಿಗೆಯಾಗಿರುತ್ತಾರೆ.
15 : ಮುಚ್ಚಳಹಾಕಿ ಕಟ್ಟದಿರುವ ಎಲ್ಲ ಪಾತ್ರೆಗಳು ಕೂಡ ಮೈಲಿಗೆಯಾಗಿರುತ್ತವೆ.
16 : ಹೊರಗೆ ಬಯಲಿನಲ್ಲಿರುವ ಯಾವನಿಗಾದರೂ ಶಸ್ತ್ರಹತನ ಶವವಾಗಲಿ, ಬೇರೆ ಯಾವ ಮನುಷ್ಯ ಶವವಾಗಲಿ, ಮನುಷ್ಯನ ಎಲುಬಾಗಲಿ, ಸಮಾಧಿಯಾಗಲಿ, ಸೋಂಕಿದರೆ ಅವನು ಏಳು ದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.
17 : “ಅಂಥ ಮಡಿಗೆಟ್ಟವನನ್ನು ಪವಿತ್ರಪಡಿಸಬೇಕಾದರೆ ಆ ದೋಷಪರಿಹಾರಕ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿಟ್ಟು ಅದರ ಮೇಲೆ ಹರಿಯುವ ನೀರನ್ನು ಹೊಯ್ಯಬೇಕು.
18 : ಬಳಿಕ ಮೈಲಿಗೆಯಾಗದವನೊಬ್ಬನು ಆ ನೀರನ್ನು ಹಿಸ್ಸೋಪ್ ಗಿಡದ ಗೊಂಚಲಿನಿಂದ ಸಾವಾದ ಆ ಡೇರೆಯ ಮೇಲೂ ಅದರಲ್ಲಿರುವ ಸಲಕರಣೆಗಳ ಮೇಲೂ ವ್ಯಕ್ತಿಗಳ ಮೇಲೂ ಚಿಮುಕಿಸಬೇಕು. ಹಾಗೆಯೇ ಎಲುಬಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯಾಗಲಿ ಯಾರಿಗೆ ಸೋಂಕಿತೋ ಅವರ ಮೇಲೆಯೂ ಚಿಮುಕಿಸಬೇಕು.
19 : ಮೂರನೆಯ ದಿನದಲ್ಲೂ ಏಳನೆಯ ದಿನದಲ್ಲೂ ಮಡಿಗೆಟ್ಟವನ ಮೇಲೆ ಹಾಗೆಯೇ ಚಿಮುಕಿಸಬೇಕು. ಮಡಿಗೆಟ್ಟವನು ಏಳನೆಯ ದಿನ ದೋಷಪರಿಹಾರ ಹೊಂದುವನು. ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನ ಮಾಡಿಕೊಂಡು ಸಂಜೆ ಶುದ್ಧನಾಗುವನು.
20 : ಮಡಿಗೆಟ್ಟು ದೋಷಪರಿಹಾರ ಮಾಡಿಕೊಳ್ಳದವನು ಸರ್ವೇಶ್ವರನ ದೇವಸ್ಥಾನವನ್ನು ಅಪವಿತ್ರಗೊಳಿಸುತ್ತಾನೆ. ಆದಕಾರಣ ಅಂಥವನಿಗೆ ಸಭೆಯಿಂದ ಬಹಿಷ್ಕಾರ ಹಾಕಬೇಕು. ಶುದ್ಧೀಕರಣ ಜಲವನ್ನು ತನ್ನ ಮೇಲೆ ಚಿಮುಕಿಸಿಕೊಳ್ಳದೆ ಹೋದುದರಿಂದ ಅವನು ಮಡಿಗೆಟ್ಟವನಾಗಿಯೇ ಇರುತ್ತಾನೆ.
21 : “ಇದು ಇಸ್ರಯೇಲರಿಗೆ ಶಾಶ್ವತ ನಿಯಮ ಆಗಿರುತ್ತದೆ. ಮೈಲಿಗೆ ನೀಗಿಸುವ ಆ ನೀರನ್ನು ಚಿಮುಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಆ ನೀರನ್ನು ಮುಟ್ಟಿದವನು ಆ ದಿನದ ಸಂಜೆಯವರೆಗೂ ಮಡಿಗೆಟ್ಟವನಾಗಿರುವನು.
22 : ಮಡಿಗೆಟ್ಟವನಿಗೆ ಸೋಂಕಿದ ಬಟ್ಟೆಬರೆ ಯಾವುದೇ ಆಗಲಿ ಮೈಲಿಗೆಯಾದುದೆಂದು ನೀವು ತಿಳಿದುಕೊಳ್ಳಬೇಕು. ಅದು ಯಾರಿಗೆ ಸೋಂಕಿತೋ ಅವನು ಕೂಡ ಆ ದಿನದ ಸಂಜೆಯವರೆಗೆ ಮಡಿಗೆಟ್ಟವನು.”

Holydivine