Jeremiah - Chapter 7
Holy Bible

1 : ಸರ್ವೇಶ್ವರ ಯೆರೆಮೀಯನಿಗೆ ಹೇಳಿದ ಮಾತು:
2 : “ನೀನು ನನ್ನ ಆಲಯದ ಬಾಗಿಲಲ್ಲಿ ನಿಂತು ಈ ವಾಕ್ಯವನ್ನು ಸಾರು – ‘ಸರ್ವೇಶ್ವರಸ್ವಾಮಿಗೆ ಅಡ್ಡಬೀಳಲು ಈ ದ್ವಾರಗಳನ್ನು ಪ್ರವೇಶಿಸುವ ಎಲ್ಲ ಯೆಹೂದ್ಯರೇ, ಸರ್ವೇಶ್ವರನ ನುಡಿಯನ್ನು ಕೇಳಿ;
3 : ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ನೀವು ನಿಮ್ಮ ನಡತೆಯನ್ನೂ ಕೃತ್ಯಗಳನ್ನೂ ತಿದ್ದುಕೊಳ್ಳಿ. ಹಾಗೆ ಮಾಡಿದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ನೆಲೆಗೊಳಿಸುವೆನು.
4 : ‘ಇದು ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, (ಆದುದರಿಂದ ಎಲ್ಲ ಸುಭದ್ರ)’ ಎಂಬ ಮೋಸಕರ ಮಾತುಗಳಲ್ಲಿ ಭರವಸೆ ಇಡಬೇಡಿ.
5 : “ನೀವು ನಿಮ್ಮ ನಡೆಯನ್ನೂ ಕೃತ್ಯಗಳನ್ನೂ ಪೂರ್ತಿಯಾಗಿ ತಿದ್ದುಕೊಳ್ಳಿ. ಒಬ್ಬರು ಮತ್ತೊಬ್ಬರೊಡನೆ ನ್ಯಾಯನೀತಿಯಿಂದ ವರ್ತಿಸಿರಿ.
6 : ಅನ್ಯರನ್ನಾಗಲಿ, ಅನಾಥರನ್ನಾಗಲಿ, ವಿಧವೆಯರನ್ನೇ ಆಗಲಿ ಶೋಷಣೆಗೆ ಗುರಿಪಡಿಸಬೇಡಿ! ಇಲ್ಲೆಲ್ಲೂ ನಿರ್ದೋಷಿಗಳ ರಕ್ತವನ್ನು ಸುರಿಸಬೇಡಿ. ನಿಮಗೆ ಹಾನಿಕರವಾದ ಅನ್ಯದೇವತಾ ಭಕ್ತಿಯನ್ನು ಬಿಟ್ಟುಬಿಡಿ.
7 : ಆಗ ನಾನು ನಿಮ್ಮನ್ನು ಈ ಸ್ಥಳದಲ್ಲೆ ನೆಲೆಗೊಳಿಸುವೆನು. ನಿಮ್ಮ ಪೂರ್ವಜರಿಗೆ ನಾನು ಶಾಶ್ವತವಾಗಿ ದಯಪಾಲಿಸಿದ ಈ ನಾಡಿನಲ್ಲೆ ನೆಲೆಗೊಳಿಸುವೆನು.”
8 : “ನಿಷ್ಪ್ರಯೋಜಕವಾದ ಹಾಗೂ ಮೋಸದ ಮಾತುಗಳಲ್ಲಿ ನೀವು ಭರವಸೆ ಇಟ್ಟಿದ್ದೀರಿ.
9 : ಕಳವು, ಕೊಲೆ, ವ್ಯಭಿಚಾರಗಳನ್ನು ಮಾಡುತ್ತೀರಿ. ಸುಳ್ಳುಸಾಕ್ಷಿ ಹೇಳುತ್ತೀರಿ. ಬಾಳನಿಗೆ ಧೂಪಾರತಿ ಎತ್ತುತ್ತೀರಿ. ಕಂಡು ಕೇಳದ ಅನ್ಯದೇವತೆಗಳನ್ನು ಆರಾಧಿಸುತ್ತೀರಿ.
10 : ನನ್ನ ಹೆಸರು ಪಡೆದಿರುವ ಈ ದೇವಾಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು – ‘ನಾವು ಸುರಕ್ಷಿತರು’ ಎನ್ನುತ್ತೀರಿ. ಈ ಎಲ್ಲ ಅಸಹ್ಯಕಾರ್ಯಗಳನ್ನು ನಡೆಸುವುದಕ್ಕೋ ಈ ಸುರಕ್ಷತೆ?
11 : ನನ್ನ ಹೆಸರಿನಲ್ಲಿ ಕಟ್ಟಿರುವ ದೇವಾಲಯ ನಿಮ್ಮ ದೃಷ್ಟಿಗೆ ಕಳ್ಳರ ಗುಹೆ ಆಗಿದೆಯೋ? ಹೌದು, ಇದನ್ನೆಲ್ಲ ನಾನೆ ಖುದ್ದಾಗಿ ನೋಡಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
12 : ನಾನು ನನ್ನ ನಾಮವನ್ನು ಮೊದಲು ಪ್ರತಿಷ್ಠಾಪಿಸಿದ ‘ಶಿಲೊ’ ಎಂಬ ಸ್ಥಾನಕ್ಕೆ ಹೋಗಿ ನೋಡಿ. ನನ್ನ ಜನ ಇಸ್ರಯೇಲರ ಅಧರ್ಮದ ನಿಮಿತ್ತ ಆ ಸ್ಥಳಕ್ಕೆ ತಂದ ಗತಿಯನ್ನು ಹೋಗಿ ನೋಡಿ.
13 : ನಾನು ತಡಮಾಡದೆ ನುಡಿದ ಮಾತುಗಳನ್ನು ನೀವು ಕೇಳದೆ, ನಿಮ್ಮನ್ನು ಕರೆದ ನನಗೆ ಓಗೊಡದೆ, ಈ ಕೃತ್ಯಗಳನ್ನೆಲ್ಲ ಮಾಡಿದ್ದೀರಿ.
14 : ಈ ಕಾರಣ ನನ್ನ ನಾಮಕ್ಕೆ ನೆಲೆಯಾದ ಹಾಗು ನಿಮ್ಮ ಭರವಸೆಗೆ ಆಧಾರವಾದ ಈ ದೇವಾಲಯಕ್ಕೆ, ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ಈ ಸ್ಥಳಕ್ಕೆ, ನಾನು ಶಿಲೋಗೆ ಬರಮಾಡಿದ ಗತಿಯನ್ನೇ ಬರಮಾಡುವೆನು.
15 : ನಿಮ್ಮ ಬಂಧು ಬಳಗದವರನ್ನು ಅಂದರೆ, ಇಡಿ ಎಫ್ರಯಿಮ್ ವಂಶದವರನ್ನು ತೊಲಗಿಸಿಬಿಟ್ಟಂತೆ, ನಿಮ್ಮನ್ನೂ ನನ್ನ ಸನ್ನಿಧಿಯಿಂದ ತೊಲಗಿಸುವೆನು.
16 : “ಯೆರೆಮೀಯನೇ, ನೀನಂತು ಈ ಜನರಿಗಾಗಿ ಬೇಡಿಕೊಳ್ಳಬೇಡ. ಇವರ ಪರವಾಗಿ ಮೊರೆ ಇಡಬೇಡ. ಪ್ರಾರ್ಥಿಸಲೂ ಬೇಡ, ನನ್ನ ಬಳಿ ವಿಜ್ಞಾಪಿಸಲೂ ಬೇಡ. ನಾನು ಅದನ್ನು ಕೇಳಲಾರೆ.
17 : ಇವರು ಜುದೇಯ ಪಟ್ಟಣಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಮಾಡುವುದನ್ನು ನೀನೆ ನೋಡಿರುವೆ ಅಲ್ಲವೆ?
18 : ‘ಗಗನದೊಡತಿ’ ಎಂದು ಇವರು ಕರೆವ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ.
19 : ಇವರು ಮಾಡುತ್ತಿರುವ ಕೇಡು ನನಗೋ? ಲಜ್ಜೆಯಿಂದ ಮುಖಮುಚ್ಚಿ ಕೊಳ್ಳುವಷ್ಟು ಕೇಡನ್ನು ತಮಗೆ ತಾವೇ ತಂದು ಕೊಳ್ಳುತ್ತಿದ್ದಾರಲ್ಲವೆ?” ಎನ್ನುತ್ತಾರೆ ಸರ್ವೇಶ್ವರ,
20 : “ಸರ್ವೇಶ್ವರನಾದ ನಾನು ಹೇಳುವುದನ್ನು ಗಮನಿಸಿರಿ: ಇಗೋ, ನನ್ನ ಕೋಪವೆಂಬ ರೋಷಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಕಾಡುಮರಗಳ ಮೇಲೂ ಭೂಮಿಯ ಬೆಳೆಯ ಮೇಲೂ ಅದನ್ನು ಕಾರುವೆನು. ಅದು ಆರದೆ ದಹಿಸುವುದು!”
21 : ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ ಇದು: “ನೀವು ಅರ್ಪಿಸುವ ದಹನಬಲಿಗಳನ್ನು, ಸಾಧಾರಣ ಯಜ್ಞಬಲಿಗಳೆಂದು ಭಾವಿಸಿ ಅವುಗಳ ಮಾಂಸವನ್ನು ಕೂಡ ನೀವೇ ತಿನ್ನಿರಿ.
22 : ನಿಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಬರಮಾಡಿದಾಗ ದಹನಬಲಿಯ ವಿಷಯವಾಗಿಯಾಗಲಿ, ಯಜ್ಞಬಲಿಯ ವಿಷಯವಾಗಿಯಾಗಲಿ ನಾನು ಅವರಿಗೆ ಏನೂ ಹೇಳಲಿಲ್ಲ; ಯಾವ ಕಟ್ಟಳೆಯನ್ನೂ ಕೊಡಲಿಲ್ಲ.
23 : ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ.
24 : ಆದರೆ ಅವರು ಕೇಳಲಿಲ್ಲ. ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು.
25 : ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದು ಇದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ.
26 : ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ. ನನ್ನ ಆಜ್ಞೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು.”
27 : “ಯೆರೆವಿೂಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ.
28 : ಆದಕರಣ ನೀನು ಅವರಿಗೆ – ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ’ ಎಂದು ಹೇಳು.”
29 : “ಎಲೈ ಜೆರುಸಲೇಮೇ! ತಲೆಬೋಳಿಸಿಕೊಂಡು ಕೂದಲನ್ನು ಬಿಸಾಡಿಬಿಡು ಬೋಳುಗುಡ್ಡಗಳಲ್ಲಿ ಶೋಕಗೀತೆಯನ್ನು ಹಾಡು. ಏಕೆಂದರೆ ಸರ್ವೇಶ್ವರನಾದ ನಾನು ಕೋಪಗೊಂಡು, ನಿರಾಕರಿಸಿ, ತ್ಯಜಿಸಿಬಿಟ್ಟಿದ್ದೇನೆ ಈ ವಂಶವನ್ನು,”
30 : ಸರ್ವೇಶ್ವರನ ನುಡಿ: “ಯೆಹೂದ್ಯರು ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೆ ಮಾಡಿದ್ದಾರೆ. ನನ್ನ ಹೆಸರಿನಿಂದ ಪ್ರಖ್ಯಾತಗೊಂಡ ದೇವಾಲಯದಲ್ಲಿ ತಮ್ಮ ಅಸಹ್ಯವಸ್ತುಗಳನ್ನು ಇಟ್ಟು ಅದನ್ನು ಹೊಲೆಮಾಡಿದ್ದಾರೆ.
31 : ತಮ್ಮ ಗಂಡುಹೆಣ್ಣು ಮಕ್ಕಳನ್ನೂ ಆಹುತಿಕೊಡುವುದಕ್ಕೆ ಬೆನ್ ಹಿನ್ನೋಮ್ ಕಣಿವೆಯಲ್ಲಿನ ತೋಫೆತೆಂಬ ಬಲಿಪೀಠವನ್ನು ಕಟ್ಟಿದ್ದಾರೆ. ಇಂಥ ಕಾರ್ಯವನ್ನು ನಾನು ವಿಧಿಸಿಲ್ಲ. ಅದು ನನ್ನ ಮನಸ್ಸಿಗೂ ಸುಳಿದಿಲ್ಲ.
32 : ಆದ್ದರಿಂದ ಇಗೋ, ಆ ಕಣಿವೆಗೆ ತೋಫೆತ್ ಮತ್ತು ಬೆನ್‍ಹಿನ್ನೋಮ್ ಎಂಬ ಹೆಸರುಗಳು ಹೋಗಿ ಸಂಹಾರದ ಕಣಿವೆ ಎಂದು ಕರೆಯಲಾಗುವ ದಿನಗಳು ಬರಲಿವೆ. ಇನ್ನೆಲ್ಲೂ ಸ್ಥಳವಿಲ್ಲವಾಗಿ ಶವಗಳನ್ನು ಆ ತೋಫೆತಿನಲ್ಲಿ ಹೂಣುವರು.
33 : ಈ ಜನರ ಹೆಣಗಳು ಆಕಾಶ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವುವು. ಅವುಗಳನ್ನು ಬೆದರಿಸಿ ಓಡಿಸಲು ಯಾರೂ ಇರುವುದಿಲ್ಲ.
34 : ಜುದೇಯದ ಪಟ್ಟಣಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಹರ್ಷಾಡಂಬರಗಳು ಕೇಳಿಬರುವುದಿಲ್ಲ. ವಧೂವರರ ಸೊಲ್ಲನ್ನು ನಿಲ್ಲಿಸಿಬಿಡುವೆನು, ನಾಡಿಗೆ ನಾಡೇ ಹಾಳಾಗುವುದು. ಇದು ಸರ್ವೇಶ್ವರನಾದ ನನ್ನ ನುಡಿ.”

Holydivine