Jeremiah - Chapter 13
Holy Bible

1 : ಸರ್ವೇಶ್ವರಸ್ವಾಮಿ ನನಗೆ: “ನೀನು ಹೋಗಿ ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆ ಕೊಟ್ಟರು.
2 : ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
3 : ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,”
4 : ಎಂಬುದಾಗಿ ಸರ್ವೇಶ್ವರಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು.
5 : ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
6 : ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.
7 : ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
8 : ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ:
9 : “ಇದು ಸರ್ವೇಶ್ವರನಾದ ನನ್ನ ನುಡಿ – ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು.
10 : ಈ ದುಷ್ಟ ಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬರುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು.
11 : ಇಸ್ರಯೇಲ್ ವಂಶವೆಲ್ಲವು ಹಾಗು ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕಟ್ಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನಗೆ ಕಿವಿಗೊಡದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.”
12 : “ಯೆರೆಮೀಯನೇ, ನೀನು ಅವರಿಗೆ ಹೀಗೆಂದು ಸಾರು: ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಸಂದೇಶವನ್ನು ಕೇಳಿ - ‘ಪ್ರತಿಯೊಂದು ಕುಡಿಕೆಯು ದ್ರಾಕ್ಷಾರಸದಿಂದ ತುಂಬಿರುವುದು.’ ಆಗ ಅವರು ನಿನಗೆ – ‘ಪ್ರತಿಯೊಂದು ಕುಡಿಕೆ ದ್ರಾಕ್ಷಾರಸದಿಂದ ತುಂಬಿರುವುದು ಎಂಬುದು ನಮಗೆ ಗೊತ್ತಿಲ್ಲವೆ?’ ಎಂದು ಹೇಳುವರು.
13 : ಆಗ ನೀನು ಅವರಿಗೆ - ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಕೇಳಿ: ‘ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಜೆರುಸಲೇಮಿನ ಎಲ್ಲ ನಿವಾಸಿಗಳನ್ನೂ, ಅಂತು ನಾಡಿನ ಜನರೆಲ್ಲರನ್ನೂ ಅಮಲಿನಿಂದ ಮತ್ತರಾಗುವಂತೆ ಮಾಡುವೆನು.
14 : ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ಹಾಗು ನಾಶಮಾಡದೆ ಬಿಡೆನು,’ ಇದು ಸರ್ವೇಶ್ವರನಾದ ನನ್ನ ನುಡಿ.” ಗಡಿಪಾರಿನ ಒಂದು ದೃಶ್ಯ
15 : ಜನರೇ, ಕಿವಿಗೊಡಿ, ಹೆಮ್ಮೆಪಡಬೇಡಿ, ಸರ್ವೇಶ್ವರನೇ ನಿಮಗೆ ಕೊಡುವ ಆದೇಶ ಇದು:
16 : ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೆ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.
17 : ನೀವು ಕಿವಿಗೊಡದಿದ್ದರೆ ನಿಮ್ಮ ಗರ್ವದ ನಿಮಿತ್ತ ನನ್ನ ಮನ ಗೋಳಾಡುವುದು ಗುಟ್ಟಾಗಿ. ನೀವು ಸೆರೆಯಾಗಿ ಹೋಗುವುದರಿಂದ ಅಳುವೆನು ಸರ್ವೇಶ್ವರನ ಮುಂದೆ ಬಹಳವಾಗಿ. ನನ್ನ ಕಣ್ಣುಗಳಿಂದ ಕಂಬನಿ ಹರಿವುದು ಧಾರಾಕಾರವಾಗಿ.
18 : ಸರ್ವೇಶ್ವರ ನನಗೆ ಹೀಗೆಂದರು: “ರಾಜನಿಗೂ ರಾಜಮಾತೆಗೂ ಈ ವರ್ತಮಾನವನ್ನು ತಿಳಿಸು – ‘ನೀವು ಇಳಿದು ಬಂದು ನೆಲದಲ್ಲಿ ಕುಳಿತುಕೊಳ್ಳಿ. ನಿಮ್ಮ ಚೆಲುವಾದ ಕಿರೀಟ ಬಿದ್ದುಹೋಗಿದೆ ತಲೆಯಿಂದ.
19 : ದಕ್ಷಿಣ ನಾಡಿನ ನಗರಗಳು ಮುತ್ತಿಗೆಗೆ ತುತ್ತಾಗಿವೆ. ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಜುದೇಯವೆಲ್ಲ ಸೆರೆಹೋಗಿದೆ; ಸಂಪೂರ್ಣವಾಗಿ ಸೆರೆಯಾಗಿದೆ’.”
20 : “ಜೆರುಸಲೇಮ್, ಕಣ್ಣೆತ್ತಿ ನೋಡು, ಉತ್ತರದಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ಅಂದವಾದ ಆ ನಿನ್ನ ಹಿಂಡು ಎಲ್ಲಿ?
21 : ನಿನ್ನೊಡನೆ ಗೆಳೆಯರಂತೆ ಬಾಳಲು ನೀನೇ ಪಳಗಿಸಿದವರನ್ನು ನಿನಗೆ ಒಡೆಯರನ್ನಾಗಿ ನಾನು ನೇಮಿಸುವಾಗ ಏನು ಹೇಳುವೆ? ಹೆರುವವಳಿಗೆ ಬರುವಂಥ ವೇದನೆ ಆಗ ನಿನಗೆ ಬರದೆ ಇರುವುದೆ?
22 : ಇವು ನನಗೇಕೆ ಸಂಭವಿಸಿದವು ಎಂದು ಮನದೊಳಗೇ ನೀನು ಅಂದುಕೊಳ್ಳುವೆ. ನೀನು ಮಾಡಿದುದು ಮಹಾಪಾಪ! ಆದ್ದರಿಂದ ನಿನ್ನ ಉಡುಗೆಯನ್ನೇ ಕೀಳಲಾಗುವುದು. ನೀನು ಅತ್ಯಾಚಾರಕ್ಕೆ ಈಡಾಗುವೆ.
23 : ಎಥಿಯೋಪಿಯದವನು ತನ್ನ ಚರ್ಮದ ಬಣ್ಣವನ್ನು ಮಾರ್ಪಡಿಸಬಲ್ಲನೆ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸೀತೆ? ಅಂತೆಯೇ ದುಷ್ಟತನದಲ್ಲಿ ಅಷ್ಟಾಗಿ ನುರಿತ ನೀನು ಶಿಷ್ಟತನದಲ್ಲಿ ನಡೆಯಲಾರೆ.
24 : ಆದಕಾರಣ ಬಿರುಗಾಳಿ ಬಡಿದುಕೊಂಡು ಹೋಗುವ ಒಣಹುಲ್ಲೋ ಎಂಬಂತೆ ಸರ್ವೇಶ್ವರನಾದ ನಾನು ನಿನ್ನನ್ನು ಚದರಿಸಿಬಿಡುವೆನು.
25 : ನೀನು ನನ್ನನ್ನು ಮರೆತುಬಿಟ್ಟು ಸುಳ್ಳನ್ನು ನಂಬಿದ್ದರಿಂದ ಇದೇ ನಿನಗೆ ಒದಗಲಿರುವ ಗತಿ. ಇದೇ ನಾನು ನಿನಗೆ ಅಳೆದುಕೊಡುವ ಪ್ರತೀಕಾರ.
26 : ನಿನ್ನ ಉಡುಗೆಯನ್ನು ನಿನ್ನ ಕಣ್ಮುಂದೆಯೇ ಕೀಳಿಸುವೆನು. ನೀನು ಅತ್ಯಾಚಾರಕ್ಕೆ ಈಡಾಗುವೆ.
27 : ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಕಾಮುಕತನವನ್ನು, ಕೀಳಾದ ನಿನ್ನ ಸೂಳೆಗಾರಿಕೆಯನ್ನು, ಗುಡ್ಡೆ, ಕಣಿವೆಗಳಲ್ಲಿ ನೀನು ನಡೆಸಿದ ಅಸಹ್ಯ ಕಾರ್ಯಗಳನ್ನು ನೋಡಿದ್ದೇನೆ. ಜೆರುಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲಬೇಕು?”

Holydivine