Jeremiah - Chapter 5
Holy Bible

1 : ಜೆರುಸಲೇಮಿನವರ ಪಾಪಾಕ್ರಮಗಳು ಜೆರುಸಲೇಮಿನ ಜನರೇ, ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನೋಡಿ ಅಲ್ಲಿನ ಚೌಕಗಳಲ್ಲಿ ಹುಡುಕಾಡಿ ನೋಡಿ. ನೀತಿಯನ್ನು ಕೈಗೊಂಡು ಸತ್ಯವನ್ನರಸುವವನು ಒಬ್ಬನಾದರೂ ಇದ್ದಾನೆಯೇ? ಅಂಥ ಸತ್ಪುರುಷ ಸಿಕ್ಕುತ್ತಾನೆಯೆ ಎಂಬುದನ್ನು ನೀವೇ ನಿಶ್ಚಯಿಸಿರಿ; ಸಿಕ್ಕಿದ್ದೇ ಆದರೆ ಸರ್ವೇಶ್ವರಸ್ವಾಮಿ ಆ ನಗರವನ್ನು ಕ್ಷಮಿಸುವರು.
2 : ನೀವು ‘ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡಿದರೂ ಆ ಪ್ರಮಾಣ ಸುಳ್ಳೇ ಸುಳ್ಳು ಎನ್ನುತ್ತಾರೆ ಸರ್ವೇಶ್ವರ.
3 : ಸ್ವಾಮಿ ಸರ್ವೇಶ್ವರನ ಕಣ್ಣು ನಾಟಿರುವುದು ಸತ್ಯದ ಮೇಲೆ. ಅವರು ದಂಡಿಸಿದರೂ ನೀವು ಪಶ್ಚಾತ್ತಾಪ ಪಡಲಿಲ್ಲ. ಅವರು ನಸುಕಿದರೂ ನೀವು ತಿದ್ದುಕೊಳ್ಳಲು ಒಪ್ಪಲಿಲ್ಲ. ನಿಮ್ಮ ಮುಖವನ್ನು ಕಲ್ಲಿಗಿಂತ ಕಠಿಣ ಮಾಡಿಕೊಂಡಿರಿ. ಅವರಿಗೆ ಅಭಿಮುಖರಾಗಲು ಸಮ್ಮತಿಸದೆ ಹೋದಿರಿ.
4 : ಹೀಗಿರಲು ನಾನು, “ಈ ಜನರು ಬಡವರು, ಮೂಢರು, ಸರ್ವೇಶ್ವರನ ಮಾರ್ಗವನ್ನೂ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು.
5 : ಆದುದರಿಂದ ಗಣ್ಯವ್ಯಕ್ತಿಗಳ ಬಳಿಗೆ ಹೋಗಿ ಮಾತಾಡುವೆನು; ಅವರು ಸರ್ವೇಶ್ವರನ ಮಾರ್ಗ ಹಾಗೂ ಅವರ ದೇವರ ನ್ಯಾಯವಿಧಿಗಳನ್ನು ಬಲ್ಲವರು,” ಎಂದುಕೊಂಡೆನು. ಆದರೆ ಆ ವ್ಯಕ್ತಿಗಳು ಕೂಡ ನೊಗವನ್ನು ಮುರಿದವರು, ಕಣ್ಣಿಗಳನ್ನು ಕಿತ್ತುಬಿಟ್ಟವರು.
6 : ಆದಕಾರಣ ಅಡವಿಯ ಸಿಂಹ ಅವರನ್ನು ಕೊಲ್ಲುವುದು ಕಾಡಿನ ತೋಳ ಕೊಳ್ಳೆಹೊಡೆಯುವುದು ಚಿರತೆ ಅವರ ಪಟ್ಟಣಗಳಿಗೆ ಹೊಂಚುಹಾಕುವುದು ಅಲ್ಲಿಂದ ಹೊರಬರುವ ಪ್ರತಿಯೊಬ್ಬನನ್ನು ಸೀಳುವುದು. ಅವರ ಅಪರಾಧಗಳೋ ಬಹಳ, ಅವರ ದ್ರೋಹಗಳೋ ಅಪಾರ!
7 : ಸರ್ವೇಶ್ವರಸ್ವಾಮಿ ಹೀಗೆಂದು ಪ್ರಶ್ನಿಸುತ್ತಾರೆ: “ಎಲೈ ಜೆರುಸಲೇಮ್, ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ತೊರೆದುಬಿಟ್ಟಿದ್ದಾರೆ; ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆತುಂಬ ಊಟಕೊಟ್ಟೆ; ಅವರೋ ವ್ಯಭಿಚಾರ ಮಾಡಿದ್ದಾರೆ, ವೇಶ್ಯೆಯರ ಮನೆಗಳಲ್ಲಿ ಗುಂಪು ಸೇರಿದ್ದಾರೆ!
8 : ಅತ್ತಿತ್ತ ಓಡಾಡುವ ಕೊಬ್ಬಿದ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನೂ ಕೆನೆಯುತ್ತಾನೆ ತನ್ನ ನೆರೆಯವನ ಹೆಂಡತಿಯನ್ನು ನೋಡಿ!
9 : ಇವುಗಳ ನಿಮಿತ್ತ ನಾನು ದಂಡಿಸಬಾರದೋ? ಇಂಥ ಜನತೆಯ ನನ್ನ ಕೋಪವನ್ನು ತೀರಿಸದಿರುವೆನೋ?
10 : ಆಕ್ರಮಣಕಾರರಿಗೆ ಕರೆ: ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.
11 : ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ನನಗೆ ಬಹಳವಾಗಿ ದ್ರೋಹವೆಸಗಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.”
12 : ಆ ಜನರು ಸರ್ವೇಶ್ವರಸ್ವಾಮಿಯನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ.
13 : ಪ್ರವಾದಿಗಳು ಆಡುವುದೆಲ್ಲ ಬರೀ ಗಾಳಿಮಾತುಗಳು. ದೈವೋಕ್ತಿಯೆಂಬುದು ಅವುಗಳಲ್ಲಿ ಇಲ್ಲ. ಅವರಿಗೇ ತಗಲಲಿ ಅವರು ಹೇಳುವುದೆಲ್ಲ,” ಎಂದುಕೊಂಡಿದ್ದಾರೆ.
14 : ಆದುದರಿಂದ ಸೇನಾಧೀಶ್ವರ ಸರ್ವೇಶ್ವರ ಆದ ದೇವರು ಯೆರೆಮೀಯನಿಗೆ ಹೀಗೆಂದರು: “ಇಗೋ, ಅವರು ಹೀಗೆ ಮಾತಾಡಿದ್ದರಿಂದ ನಿನ್ನ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಸುವೆನು; ಆ ಜನರನ್ನು ಅದಕ್ಕೆ ಸೌದೆಯನ್ನಾಗಿಸುವೆನು; ಆ ಬೆಂಕಿ ಅವರನ್ನು ಸುಟ್ಟುಹಾಕುವುದು.
15 : ಇಸ್ರಯೇಲ್ ವಂಶವೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಗಮನದಿಂದ ಕೇಳು: “ನಾನು ಒಂದು ರಾಷ್ಟ್ರವನ್ನು ದೂರದಿಂದ ನಿನ್ನ ವಿರುದ್ಧ ಬರಮಾಡುವೆನು. ಅದು ಪ್ರಾಚೀನ ಹಾಗೂ ಪ್ರಬಲ ರಾಷ್ಟ್ರ. ಅದರ ಭಾಷೆ ನಿನಗೆ ತಿಳಿಯದು. ಅದು ಆಡುವ ಮಾತು ನಿನಗೆ ಅರ್ಥವಾಗದು.
16 : ಅದರ ಬತ್ತಳಿಕೆ ಬಾಯ್ದೆರೆದ ಗೋರಿ; ಅದರ ಯೋಧರೆಲ್ಲರು ಶೂರರು.
17 : ಅವರು ನಿನ್ನ ದವಸಧಾನ್ಯಗಳನ್ನು ತಿಂದುಬಿಡುವರು. ನಿನ್ನ ಗಂಡು ಹೆಣ್ಣುಮಕ್ಕಳನ್ನು ಕೊಲ್ಲುವರು. ನಿನ್ನ ದನಕುರಿಗಳನ್ನು ಕಬಳಿಸಿಬಿಡುವರು. ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹಾಳುಮಾಡುವರು. ನೀನು ನಂಬಿಕೊಂಡಿರುವ ಕೋಟೆ ಕೊತ್ತಲಗಳುಳ್ಳ ಪಟ್ಟಣಗಳನ್ನು ಅಸ್ತ್ರಗಳಿಂದ ಹಾಳುಮಾಡುವರು.
18 : “ಆದರೂ ಆ ದಿನಗಳಲ್ಲಿ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.
19 : ‘ನಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ಇವುಗಳನ್ನೆಲ್ಲ ನಮಗೇಕೆ ಮಾಡಿದ್ದಾರೆ?’ ಎಂದು ಕೇಳುವಾಗ ನೀನು ಅವರಿಗೆ, ‘ನೀವು ಸರ್ವೇಶ್ವರನನ್ನೇ ತೊರೆದು, ಸ್ವಂತನಾಡಿನಲ್ಲೆ ಅನ್ಯದೇವತೆಗಳಿಗೆ ಸೇವೆಸಲ್ಲಿಸಿದ್ದೀರಿ. ಅಂತೆಯೇ ಹೊರನಾಡಿನಲ್ಲಿ ಅನ್ಯರಿಗೆ ಸೇವೆಮಾಡುವಿರಿ’ ಎಂದು ಹೇಳು.”
20 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಯಕೋಬ ಮನೆತನಕ್ಕೆ ಇದನ್ನು ಸಾರಿರಿ, ಜುದೇಯದಲ್ಲಿ ಹೀಗೆ ಪ್ರಕಟಿಸಿರಿ;
21 : ಕಣ್ಣಿದ್ದರೂ ಕಾಣದ, ಸರ್ವೇಶ್ವರನ ಈ ಮಾತನ್ನು ಕೇಳಿರಿ:
22 : ನೀವು ನನಗೆ ಅಂಜುವುದಿಲ್ಲವೋ? ನನ್ನೆದುರಿಗೆ ನಡುಗುವುದಿಲ್ಲವೊ? ಕಡಲು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದವನು ನಾನು. ತೆರೆಗಳು ಅಲ್ಲಕಲ್ಲೋಲವಾದರೂ ಅದನ್ನು ಮೀರಲಾರವು. ಭೋರ್ಗರೆದರೂ ಹಾಯಲಾರವು.
23 : ನೀವಾದರೋ ನನ್ನ ಅಧೀನದಿಂದ ತಪ್ಪಿಸಿಕೊಂಡು ಎದುರಿಬೀಳುವ ಹೃದಯವುಳ್ಳವರಾಗಿ ಇದ್ದೀರಿ. ಹದ್ದುಮೀರಿ ನನ್ನನ್ನು ಬಿಟ್ಟುಹೋಗಿ ಇದ್ದೀರಿ.
24 : ಮುಂಗಾರು, ಹಿಂಗಾರು ಹೀಗೆ ಸಕಾಲದ ಮಳೆಯನ್ನು ಬರಮಾಡುವವನು ನಾನು. ಸುಗ್ಗಿಯ ಕ್ಲುಪ್ತವಾರಗಳನ್ನು ಪ್ರತ್ಯೇಕಿಸುವವನು ನಾನು. ಆದರೆ ನೀವು ನನ್ನಲ್ಲಿ ಭಯಭಕ್ತಿ ಇಡಲು ಮನದಲ್ಲಿ ನೆನೆಯದೆ ಇದ್ದೀರಿ.
25 : ನಿಮ್ಮ ಅಪರಾಧಗಳು ಈ ಪ್ರಯೋಜನಗಳನ್ನು ತಡೆಗಟ್ಟಿವೆ. ನಿಮ್ಮ ಪಾಪಗಳು, ಈ ಒಳಿತು ನಿಮಗೆ ಸಿಗದಂತೆ ತಪ್ಪಿಸಿವೆ.
26 : “ನನ್ನ ಜನರ ನಡುವೆ ಕೆಟ್ಟವರು ಕಂಡು ಬಂದಿದ್ದಾರೆ. ಬೇಡರು ಹೊಂಚುಹಾಕುವ ಹಾಗೆ ಅವರು ಹೊಂಚುಹಾಕುತ್ತಾರೆ. ಬೋನೊಡ್ಡಿ ಜನರನ್ನು ಹಿಡಿಯುತ್ತಾರೆ.
27 : ಪಂಜರಗಳಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸ ವಂಚನೆಯಿಂದ ಬಂದ ಆದಾಯಗಳು ತುಂಬಿವೆ. ಇದರಿಂದ ದೊಡ್ಡ ಹಣವಂತರಾಗಿ ಇದ್ದಾರೆ.
28 : ಕೊಬ್ಬಿ ಮೆರೆಯುತ್ತಿದ್ದಾರೆ. ಕೆಟ್ಟಕಾರ್ಯಗಳಲ್ಲಂತೂ ನಿಸ್ಸೀಮರಾಗಿದ್ದಾರೆ. ಅನಾಥರ ಏಳಿಗೆಗಾಗಿ ಅವರ ಪಕ್ಷ ಹಿಡಿದು ವಾದಿಸುವುದಿಲ್ಲ. ದಿಕ್ಕಿಲ್ಲದವರಿಗೆ ನ್ಯಾಯ ದೊರಕಿಸುವುದಿಲ್ಲ.
29 : “ನಾನು ಇವುಗಳಿಗಾಗಿ ಇವರನ್ನು ದಂಡಿಸಬಾರದೋ? ಇಂಥ ಜನತೆಯ ಮೇಲೆ ನನ್ನ ಕೋಪ ತೀರಿಸದೆ ಇರುವೆನೋ? ಇದು ಸರ್ವೇಶ್ವರನಾದ ನನ್ನ ನುಡಿ.
30 : ಭೀಕರವಾದ ಹಾಗೂ ಅಸಹ್ಯವಾದ ಘಟನೆಗಳು ನಾಡಿನಲ್ಲಿ ನಡೆದುಬಂದಿವೆ.
31 : ಪ್ರವಾದಿಗಳೇ ಸುಳ್ಳು ಪ್ರವಾದನೆ ಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”

Holydivine