Jeremiah - Chapter 52
Holy Bible

1 : ಚಿದ್ಕೀಯನು ಅರಸನಾದಾಗ ಅವನಿಗೆ ಇಪ್ಪತ್ತೊಂದು ವರ್ಷ. ಅವನು ಜೆರುಸಲೇಮನ್ನು ಹನ್ನೊಂದು ವರ್ಷ ಆಳಿದ. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆ.
2 : ಚಿದ್ಕೀಯನು ಯೆಹೋಯಾಕೀಮನಂತೆ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದ.
3 : ಸರ್ವೇಶ್ವರಸ್ವಾಮಿ ಬಹಳ ಕೋಪಗೊಂಡು ಜೆರುಸಲೇಮಿನವರ ಮೇಲೂ ಬೇರೆ ಎಲ್ಲ ಯೆಹೂದ್ಯರ ಮೇಲೂ ಇದನ್ನೆಲ್ಲ ಬರಮಾಡಿ, ಕಡೆಗೆ ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ತಿರುಗಿಬಿದ್ದ.
4 : ಅವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವ ಸೈನ್ಯ ಸಮೇತ ಜೆರುಸಲೇಮಿಗೆ ಬಂದ. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದ.
5 : ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದ.
6 : ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆ ಹಾಗಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು.
7 : ಒಳಗಿದ್ದ ಎಲ್ಲ ಸೈನಿಕರು ಅದೇ ರಾತ್ರಿ ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಪಲಾಯನ ಮಾಡಿದರು.
8 : ಬಾಬಿಲೋನಿಯದ ಸೈನಿಕರು ಅರಸ ಚಿದ್ಕೀಯನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲ ಅವನನ್ನು ಬಿಟ್ಟು ಚದರಿಹೋಗಿದ್ದರು.
9 : ಅನಂತರ ಬಾಬಿಲೋನಿಯರು ಅವನನ್ನು ತಮ್ಮ ಅರಸ ನೆಬೂಕದ್ನೆಚ್ಚರನ ಬಳಿಗೆ ಎಳೆದುತಂದರು.
10 : ಆ ಅರಸನು ಚಿದ್ಕೀಯನಿಗೆ ಶಿಕ್ಷೆ ವಿಧಿಸಿ ಅವನ ಮಕ್ಕಳನ್ನು ಅವನ ಕಣ್ಣೆದುರಿಗೆ ವಧಿಸಿದ. ಜುದೇಯದ ಎಲ್ಲ ಪದಾಧಿಕಾರಿಗಳನ್ನು ರಿಬ್ಲದಲ್ಲಿ ಕೊಲ್ಲಿಸಿದ.
11 : ಇದಲ್ಲದೆ ಬಾಬಿಲೋನಿಯದ ಆ ಅರಸನು ಚಿದ್ಕೀಯನ ಎರಡು ಕಣ್ಣುಗಳನ್ನು ಕಿತ್ತು ಅವನಿಗೆ ಬೇಡಿ ಹಾಕಿ ಬಾಬಿಲೋನಿಗೆ ತೆಗೆದುಕೊಂಡುಹೋಗಿ ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟ.
12 : ಐದನೆಯ ತಿಂಗಳಿನ ಹತ್ತನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬುವನು ಜೆರುಸಲೇಮಿಗೆ ಬಂದನು.
13 : ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.
14 : ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತ ಗೋಡೆಗಳನ್ನೆಲ್ಲ ಕೆಡವಿದರು.
15 : ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ಅನೇಕ ದಟ್ಟ ದರಿದ್ರರನ್ನೂ ನಗರದಲ್ಲೆ ಉಳಿದವರನ್ನೂ ಮೊದಲೇ ಬಾಬಿಲೋನಿನ ಅರಸನಿಗೆ ಮೊರೆ ಹೊಕ್ಕವರನ್ನೂ ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು.
16 : ಹೊಲಗಳನ್ನು ಮತ್ತು ದ್ರಾಕ್ಷಿಯ ತೋಟಗಳನ್ನು ವ್ಯವಸಾಯ ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.
17 : ಬಾಬಿಲೋನಿಯರು ಸರ್ವೇಶ್ವರನ ಆಲಯದಲ್ಲಿದ್ದ ಕಂಚಿನ ಕಂಬಗಳನ್ನೂ ಚಕ್ರದ ಬಂಡಿಗಳನ್ನೂ ಕಂಚಿನ ಕಡಲೆಂಬ ಪಾತ್ರೆಯನ್ನೂ ಒಡೆದು ಅವುಗಳ ಕಂಚನ್ನೆಲ್ಲ ಕೊಂಡೊಯ್ದರು.
18 : ಅದು ಮಾತ್ರವಲ್ಲ, ಸರ್ವೇಶ್ವರನ ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಬಟ್ಟಲು, ಸಾಂಬ್ರಾಣಿಕಳಸ ಮುಂತಾದ ಕಂಚಿನ ಸಾಮಾನುಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು.
19 : ರಕ್ಷಾದಳದ ನಾಯಕನು ಬೆಳ್ಳಿ ಬಂಗಾರದ ಪಂಚಪಾತ್ರೆ, ಅಗ್ಗಿಷ್ಟಿಕೆ, ಬಟ್ಟಲು, ಬೋಗುಣಿ, ದೀಪಸ್ತಂಭ, ಸಾಂಬ್ರಾಣಿ ಕಳಸ, ಪಾನಾರ್ಪಣೆಯ ಪಾತ್ರೆ ಮೊದಲಾದವುಗಳನ್ನು ದೋಚಿಕೊಂಡನು.
20 : ಅರಸ ಸೊಲೊಮೋನನು ಸರ್ವೇಶ್ವರನಾಲಯಕ್ಕಾಗಿ ಮಾಡಿಸಿದ ಎರಡು ಕಂಬಗಳು, ಕಂಚಿನ ಕಡಲೆಂಬ ಪಾತ್ರೆ, ಪೀಠಗಳನ್ನು ಹೊರುವ ಹನ್ನೆರಡು ಕಂಚಿನ ಹೋರಿಗಳು, ಇವುಗಳನ್ನು ಮಾಡುವುದಕ್ಕೆ ಎಷ್ಟೋ ಕಂಚು ಹಿಡಿದಿತ್ತು.
21 : ಕಂಬಗಳಲ್ಲಿ ಮೊದಲನೆಯ ಕಂಬ ಎಂಟು ಮೀಟರ್ ಎತ್ತರವಿತ್ತು. ಅದರ ಸುತ್ತಳತೆ 5.3ಮೀಟರ್. ಅದರ ಒಳಭಾಗ ಹೊಳ್ಳಾಗಿತ್ತು. ಆ ಲೋಹ ನಾಲ್ಕು ಬೆರಳು ದಪ್ಪವಾಗಿತ್ತು.
22 : ಕಂಬದ ಮೇಲೆ 2.2 ಮೀಟರ್ ಎತ್ತರವಾದ ಒಂದು ಕಂಚಿನ ಕುಂಭವಿತ್ತು. ಆ ಕುಂಭದ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗೂ ದಾಳಿಂಬೆ ಹಣ್ಣುಗಳು ಇದ್ದವು. ಎರಡನೆಯ ಕಂಬವು ದಾಳಿಂಬೆ ಹಣ್ಣುಗಳಿಂದ ಹಾಗೆಯೆ ಅಲಂಕಾರವಾಗಿತ್ತು.
23 : ನಾಲ್ಕು ಪಕ್ಕಗಳಲ್ಲಿ ತೊಂಬತ್ತಾರು ದಾಳಿಂಬೆ ಹಣ್ಣುಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಿಗೆ ನೂರು ದಾಳಿಂಬೆ ಹಣ್ಣುಗಳಿದ್ದವು.
24 : ರಕ್ಷಾದಳದ ನಾಯಕ ನೆಬೂಜರದಾನನು ಹಿಡಿದುಕೊಂಡು ಹೋದ ಜನರಲ್ಲಿ ಮಹಾಯಾಜಕ ಸೆರಾಯನು, ಎರಡನೇ ದರ್ಜೆಯ ಯಾಜಕ ಜೆಫನ್ಯನು, ಮೂರು ಮಂದಿ ದ್ವಾರ ಪಾಲಕರು ಸೇರಿದ್ದರು.
25 : ಅವನು ನಗರದಿಂದ ಸೈನ್ಯಸಂಬಂಧವಾದ ಎಲ್ಲ ವ್ಯವಸ್ಥೆಯನ್ನೂ ಮಾಡುವ ಕಂಚುಕಿಯನ್ನು, ಅರಸನಿಗೆ ಆಪ್ತರಾಗಿದ್ದ ಏಳು ಮಂದಿ ಮಂತ್ರಿಗಳನ್ನು, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಮಾಡುವ ಸೇನಾಪತಿಯ ಲೇಖಕನನ್ನು ಹಾಗು ನಗರದಲ್ಲಿದ್ದ ಅರವತ್ತು ಮಂದಿ ರೈತರನ್ನು ಹಿಡಿದುಕೊಂಡು ಹೋದನು.
26 : ನೆಬೂಜರದಾನನು ಇವರನ್ನೆಲ್ಲ ಹಿಡಿದುಕೊಂಡು ಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು.
27 : ಅರಸನು ಅವರನ್ನು ಅಲ್ಲಿಯೇ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ನಾಡನ್ನೆ ಬಿಟ್ಟುಹೋಗಬೇಕಾಯಿತು.
28 : ನೆಬೂಕದ್ನೆಚ್ಚರನು ಸೆರೆಗೆ ಒಯ್ದವರ ಲೆಕ್ಕದ ಪಟ್ಟಿ ಹೀಗಿದೆ; ಅವನು ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಸೆರೆಗೊಯ್ದದ್ದು 3,023 ಮಂದಿ ಯೆಹೂದ್ಯರನ್ನು,
29 : ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ 832 ಮಂದಿಯನ್ನು ಜೆರುಸಲೇಮಿನಿಂದ ಸೆರೆಗೊಯ್ದನು.
30 : ಆಳ್ವಿಕೆಯ ಇಪ್ಪತ್ತು ಮೂರನೆಯ ವರ್ಷದಲ್ಲಿ ರಕ್ಷಾದಳದ ನಾಯಕ ನೆಬೂಜರದಾನನು 745 ಮಂದಿ ಯೆಹೂದ್ಯರನ್ನು ಸೆರೆಗೊಯ್ದನು. ಹೀಗೆ ಸೆರೆಯಾದವರ ಮೊತ್ತ 4,600 ಮಂದಿ.
31 : ಎವೀಲ್ಮೆರೋದಕನು ಪಟ್ಟಕ್ಕೆ ಬಂದ ಮೊದಲನೆಯ ವರ್ಷದಲ್ಲಿ, ಅಂದರೆ ಜುದೇಯದ ಅರಸ ಯೆಹೋಯಾಕೀಮನು ಸೆರೆಗೆ ಸಿಕ್ಕಿದ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೈದನೆಯ ದಿನದಲ್ಲಿ, ಯೆಹೋಯಾಕೀಮನನ್ನು ಕ್ಷಮಿಸಿ ಸೆರೆಯಿಂದ ಬಿಡುಗಡೆ ಮಾಡಿದನು.
32 : ಅದು ಮಾತ್ರವಲ್ಲ, ಅವನೊಡನೆ ಪ್ರೀತಿಯಿಂದ ಮಾತಾಡಿ, ಅವನ ಸಂಗಡ ಬಾಬಿಲೋನಿನಲ್ಲಿದ್ದ ಎಲ್ಲ ಅರಸುಗಳಲ್ಲಿ ಅವನಿಗೆ ಉನ್ನತಸ್ಥಾನವನ್ನು ಕೊಟ್ಟನು.
33 : ಯೆಹೋಯಾಕೀಮನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದ ಇರುವವರೆಗೂ ಅರಸನ ಪಂಕ್ತಿಯಲ್ಲೇ ಊಟಮಾಡುತ್ತಿದ್ದನು.
34 : ಅವನ ಜೀವಿತ ಕಾಲವೆಲ್ಲ, ಸಾಯುವ ತನಕ ಅವನಿಗೆ ಬೇಕಾಗಿದ್ದ ಎಲ್ಲ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.

Holydivine