Jeremiah - Chapter 43
Holy Bible

1 : ಯೆರೆಮೀಯನು ಜನರೆಲ್ಲರನ್ನು ಸಂಬೋಧಿಸಿ ದೇವರಾದ ಸರ್ವೇಶ್ವರ ತನ್ನ ಮುಖಾಂತರ ಅವರಿಗೆ ಹೇಳಿಕಳುಹಿಸಿದ ಮಾತುಗಳನ್ನೆಲ್ಲ ತಿಳಿಸಿದನು.
2 : ಅದಾದ ಮೇಲೆ ಹೋಷಾಯನ ಮಗ ಅಜರ್ಯನು, ಕಾರೇಹನ ಮಗ ಯೊಹಾನಾನನು, ಹಾಗು ಅಹಂಕಾರಿಗಳಾದ ಜನರೆಲ್ಲರು ಅವನಿಗೆ, “ನಿನ್ನ ಮಾತು ಸುಳ್ಳು, ಈಜಿಪ್ಟಿಗೆ ಹೋಗಿ ವಾಸಮಾಡಬಾರದು ಎಂದು ತಿಳಿಸುವಂತೆ ನಮ್ಮ ದೇವರಾದ ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ.
3 : ಬದಲಿಗೆ ಬಾಬಿಲೋನಿಯರು ನಮ್ಮನ್ನು ಕೊಲ್ಲಲಿ ಅಥವಾ ಸೆರೆಗೊಯ್ಯಲಿ ಎಂದು ನಮ್ಮನ್ನು ಅವರ ಕೈಗೆ ಸಿಕ್ಕಿಸುವುದಕ್ಕಾಗಿ ನೇರೀಯನ ಮಗ ಬಾರೂಕನೇ ನಿನ್ನನ್ನು ನಮ್ಮ ಮೇಲೆ ದೊಬ್ಬಿದ್ದಾನೆ,” ಎಂದರು.
4 : ಹೀಗೆ ಜುದೇಯ ನಾಡಿನಲ್ಲೇ ವಾಸಮಾಡಿರೆಂಬ ಸರ್ವೇಶ್ವರನ ಮಾತನ್ನು ಕಾರೇಹನ ಮಗ ಯೋಹಾನಾನನು, ಸಮಸ್ತ ಸೇನಾಪತಿಗಳು, ಹಾಗು ಸಕಲ ಜನರು ಕೇಳದೆಹೋದರು.
5 : ಆಗ ರಕ್ಷಾದಳದ ನಾಯಕನಾದ ನೆಬೂಜರದಾನನನ್ನು, ಆಹೀಕಾಮನ ಮಗ ಹಾಗು ಶಾಫಾನನ ಮೊಮ್ಮಗ ಆದ ಗೆದಲ್ಯನ ವಶಕ್ಕೆ ಒಪ್ಪಿಸಿದ್ದ ಜನರನ್ನು, ಅನ್ಯ ದೇಶಗಳಿಗೆ ಅಟ್ಟಲ್ಪಟ್ಟು ಜುದೇಯದಲ್ಲಿ ವಾಸಿಸುವುದಕ್ಕೆ ಹಿಂದಿರುಗಿ ಬಂದಿದ್ದ ಅಳಿದುಳಿದ ಯೆಹೂದ ಜನರನ್ನು, ಪ್ರವಾದಿ ಯೆರೆಮೀಯನನ್ನು,
6 : ನೇರೀಯನ ಮಗ ಬಾರೂಕನನ್ನು, ರಾಜಕುವರಿಯರನ್ನು, ಅಂತು ಗಂಡಸರು, ಹೆಂಗಸರು, ಮಕ್ಕಳು,
7 : ಇವರೆಲ್ಲರನ್ನು ಕಾರೇಹನ ಮಗ ಯೋಹಾನಾನನೂ ಸಕಲ ಸೇನಾಪತಿಗಳೂ ಕರೆದುಕೊಂಡು ಈಜಿಪ್ಟಿಗೆ ಹೋಗಿ ತಹಪನೇಸ್ ಎಂಬ ಊರಿಗೆ ಸೇರಿಸಿದರು. ಸರ್ವೇಶ್ವರನ ಮಾತನ್ನು ಅವರು ಕೇಳಲೇ ಇಲ್ಲ.
8 : ಯೆರೆಮೀಯನು ತಹಪನೇಸಿನಲ್ಲಿರುವಾಗ ಸರ್ವೇಶ್ವರನ ಈ ವಾಣಿ ಕೇಳಿ ಬಂದಿತು:
9 : “ನೀನು ದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಮುಂದೆ, ಯೆಹೂದ್ಯರ ಕಣ್ಣೆದುರಿಗೆ, ನೆಲಗಟ್ಟಿನ ಕೆಳಗೆ ಇಟ್ಟು, ಗಾರೆಯಿಂದ ಮುಚ್ಚಿಬಿಟ್ಟು, ಆ ಜನರಿಗೆ ಹೀಗೆಂದು ಹೇಳು:
10 : ‘ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೇಳುವುದನ್ನು ಕೇಳಿ: ನಾನು ಬಾಬಿಲೋನಿನ ಅರಸನು ಹಾಗು ನನ್ನ ಸೇವಕನು ಆದ ನೆಬೂಕದ್ನೆಚ್ಚರನನ್ನು ನಾನು ಕರೆಯಿಸುವೆನು. ನಾನು ಮರೆಮಾಡಿಟ್ಟಿರುವ ಈ ಕಲ್ಲುಗಳ ಮೇಲೆಯೆ ಅವನು ತನ್ನ ಸಿಂಹಾಸನವನ್ನು ಹಾಕಿಸುವೆನು. ಈ ಕಲ್ಲುಗಳ ಮೇಲೆಯೆ ತನ್ನ ರತ್ನಗಂಬಳಿಯನ್ನು ಹಾಸಿಸುವನು.
11 : ಅವನು ಬಂದು ಈಜಿಪ್ಟ್ ದೇಶದ ಮೇಲೆ ಧಾಳಿಮಾಡುವನು. ಮರಣಕ್ಕೆ ಗೊತ್ತಾದವರು ಮರಣಕ್ಕೆ, ಸೆರೆಮನೆಗೆ ಗೊತ್ತಾದವರು ಸೆರೆಮನೆಗೆ, ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ ಗುರಿಯಾಗುವರು.
12 : ಅವನು ಈಜಿಪ್ಟಿನ ದೇವತೆಗಳ ಆಲಯಗಳಿಗೆ ಬೆಂಕಿ ಹೊತ್ತಿಸುವನು. ಅವುಗಳನ್ನು ಸುಟ್ಟು ಆ ದೇವತೆಗಳನ್ನು ಸೆರೆಗೊಯ್ಯುವನು. ಕುರುಬನು ತನ್ನ ಕಂಬಳಿಯನ್ನು ಸೋಸುವಂತೆ ಅವನು ಈಜಿಪ್ಟನ್ನು ಸೋಸುವನು.
13 : ಬಳಿಕ ಹಾಯಾಗಿ ಅಲ್ಲಿಂದ ಹೊರಟುಹೋಗುವನು. ಅವನು ಈಜಿಪ್ಟ್ ದೇಶದಲ್ಲಿರುವ ಸೂರ್ಯ ದೇವಾಲಯದ ಸ್ತಂಭಗಳನ್ನು ಒಡೆದುಹಾಕುವನು, ಅಲ್ಲಿನ ದೇವತೆಗಳ ಆಲಯಗಳನ್ನು ಸುಟ್ಟು ಹಾಕುವನು.”

Holydivine