Jeremiah - Chapter 20
Holy Bible

1 : ಯೆರೆಮೀಯ ಈ ಪ್ರವಾದನೆ ಮಾಡುವುದನ್ನು ಇಮ್ಮೇರನ ಮಗ ಹಾಗು ಸರ್ವೇಶ್ವರನ ಆಲಯದ ಮುಖ್ಯಾಧಿಕಾರಿಯಾದ ಯಾಜಕ ಷಷ್ಹೂರನು ಕೇಳಿದನು.
2 : ಅವನು ಪ್ರವಾದಿ ಯೆರೆಮೀಯನನ್ನು ಹೊಡೆಯಿಸಿ ಸರ್ವೇಶ್ವರನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲ ಬಳಿಯಲ್ಲಿದ್ದ ಸೆರೆಗೆ ಹಾಕಿಸಿದನು.
3 : ಮರುದಿನ ಆ ಷಷ್ಹೂರನು ಯೆರೆಮೀಯನನ್ನು ಸೆರೆಯಿಂದ ಬಿಡಿಸಿದಾಗ ಯೆರೆಮೀಯ ಅವನಿಗೆ ಹೀಗೆಂದು ಹೇಳಿದನು: “ಸರ್ವೇಶ್ವರ ನಿನ್ನ ಹೆಸರನ್ನು ಷಷ್ಹೂರ್ ಎಂದು ಕರೆಯದೆ ‘ಮಾಗೋರ್ ಮಿಸ್ಸಾಬೀಬ್’ ಎಂದು ಕರೆದಿದ್ದಾರೆ.
4 : ಏಕೆಂದರೆ ಸರ್ವೇಶ್ವರನೆ ಹೇಳಿರುವ ಮಾತಿವು – ‘ಇಗೋ, ನಾನು ನಿನ್ನನ್ನು ನಿನಗೂ ನಿನ್ನ ಎಲ್ಲ ಸ್ನೇಹಿತರಿಗೂ ಭಯಾನಕನನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ಅದನ್ನು ನೀನು ಕಣ್ಣಾರೆ ಕಾಣುವೆ. ನಾನು ಜುದೇಯರನ್ನೆಲ್ಲ ಬಾಬಿಲೋನಿನ ಅರಸನ ಕೈಗೊಪ್ಪಿಸುವೆನು. ಅವನು ಇವರನ್ನು ಬಾಬಿಲೋನಿಗೆ ಸೆರೆಯಾಗಿ ಕೊಂಡೊಯ್ದು ಕತ್ತಿಗೆ ತುತ್ತಾಗಿಸುವನು.
5 : ಅಷ್ಟು ಮಾತ್ರವಲ್ಲ, ಈ ನಗರದ ಎಲ್ಲ ಆಸ್ತಿಯನ್ನೂ ಆದಾಯವನ್ನೂ ಸಂಪತ್ತನ್ನೂ ಹಾಗು ಜುದೇಯದ ಅರಸರ ಸಕಲ ನಿಧಿನಿಕ್ಷೇಪಗಳನ್ನೂ ಇವರ ಶತ್ರುಗಳ ಕೈವಶಮಾಡುವೆನು. ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು.
6 : ಷಷ್ಹೂರನೇ ಕೇಳು, ನೀನು ನಿನ್ನ ಮನೆಯ ಎಲ್ಲರೊಡನೆ ಸೆರೆಗೆ ಹೋಗುವೆ. ನೀನು ಮತ್ತು ನಿನ್ನ ಸುಳ್ಳು ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಗೆಳೆಯರೂ ಬಾಬಿಲೋನಿಗೆ ಸೇರಿ ಅಲ್ಲೆ ಸತ್ತು ಮಣ್ಣಾಗುವಿರಿ’.”
7 : ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.
8 : ನನ್ನ ಮಾತೆಲ್ಲ ಅರಚಾಟ ‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ. ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ.
9 : ‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು, ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆ ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ. ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ.
10 : ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹು ಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.
11 : ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ.
12 : ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ.
13 : ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.
14 : ಶಪಿಸಲ್ಪಡಲಿ ನಾ ಹುಟ್ಟಿದಾ ದಿನವು ! ಶುಭವೆನಿಸಿಕೊಳ್ಳದಿರಲಿ ತಾಯಿ ನನ್ನನ್ನು ಹೆತ್ತಿದಾ ದಿನವು.
15 : ಶಪಿಸಲ್ಪಡಲಿ ‘ನಿನಗೆ ಗಂಡು ಹುಟ್ಟಿದೆ’ ಎಂದು ನನ್ನ ತಂದೆಗೆ ತಿಳಿಸಿದಾತ ! ಕೇವಲ ಸಂತಸವನ್ನು ನನ್ನ ತಂದೆಯಲ್ಲಿ ಉಂಟುಮಾಡಿದಾತ.
16 : ಸರ್ವೇಶ್ವರನು ಕನಿಕರಿಸದೆ ಕೆಡವಿಬಿಟ್ಟ ಪಟ್ಟಣದ ಗತಿ ಅವನಿಗಾಗಲಿ ! ಬೆಳಿಗ್ಗೆ ಕಿರುಚಾಟ, ನಡುಹಗಲಲ್ಲಿ ಕೂಗಾಟ ಅವನ ಕಿವಿಗೆ ಬೀಳಲಿ !
17 : ತಾಯಗರ್ಭದಲ್ಲಿರುವಾಗಲೆ ಅವನೇಕೆ ನನ್ನನ್ನು ಕೊಂದುಹಾಕಲಿಲ್ಲ? ಆಗ ನನ್ನ ತಾಯೇ ನನಗೆ ಗೋರಿಯಾಗುತ್ತಿದ್ದಳಲ್ಲಾ ! ಆಕೆಯ ಗರ್ಭ ಸದಾ ಬಸಿರಾಗಿಯೇ ಇರುತ್ತಿತ್ತಲ್ಲಾ !
18 : ಗರ್ಭಬಿಟ್ಟು ನಾನೇಕೆ ಹೊರಬಂದೆ? ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ? ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ?

Holydivine