Jeremiah - Chapter 12
Holy Bible

1 : ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ. ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ: ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?
2 : ಅವರನ್ನು ನಾಟಿ ಮಾಡಿದವರು ನೀವು ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ ಅವರು. ನೀವು ಅವರ ಅಧರಕ್ಕೆ ಹತ್ತಿರ, ಹೃದಯಕ್ಕೆ ದೂರ.
3 : ಸರ್ವೇಶ್ವರಾ, ನನ್ನ ಪರಿಚಯ ನಿಮಗಿದೆ ನಿಮ್ಮ ನೋಟ ನನ್ನ ಮೇಲಿದೆ. ನನ್ನ ಹೃದಯ ನಿಮ್ಮೊಂದಿಗಿದೆ, ಇದರ ಪರೀಕ್ಷೆ ನಿಮ್ಮಿಂದಾಗಿದೆ. ಅವರನ್ನೋ, ಕುರಿಗಳೋ ಎಂಬಂತೆ ಕೊಲೆಗೆ ಕರೆದೊಯ್ಯಿರಿ ವಧ್ಯ ದಿವಸದವರೆಗೂ ಅವರನ್ನು ವಿಂಗಡಿಸಿಡಿ.
4 : ಇನ್ನೆಷ್ಟರವರೆಗೆ ನಾಡು ದುಃಖಿಸುತ್ತಿರಬೇಕು? ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲುಸೊಪ್ಪು ಒಣಗಿರಬೇಕು? ನಾಡಜನರ ನೀಚತನದ ನಿಮಿತ್ತ ಮಾಯವಾಗಿವೆ ಪ್ರಾಣಿಪಕ್ಷಿಗಳು ಕೂಡ. ‘ನಮ್ಮ ನಡತೆಯನ್ನು ಗಮನಿಸರು ದೇವರು’ ಎಂದುಕೊಳ್ಳುತ್ತಿರುವರು ಆ ಜನರು.
5 : (ಆಗ ಸರ್ವೇಶ್ವರ ನನಗೆ): “ಕಾಲಾಳುಗಳ ಸಂಗಡ ಓಡಲು ಆಯಾಸಗೊಂಡೆಯಾದರೆ ಕುದುರೆಗಳೊಂದಿಗೆ ಓಡಿ ಹೇಗೆ ಹೋರಾಡುವೆ? ಪ್ರಶಾಂತ ಪ್ರದೇಶದಲ್ಲಿ ನಿರ್ಭಯನಾಗಿ ನಿಲ್ಲಲಾರೆಯಾದರೆ ಜೋರ್ಡಾನಿನ ದಟ್ಟ ಅಡವಿಯಲ್ಲಿ ಏನು ಮಾಡಬಲ್ಲೆ?
6 : ನಿನ್ನ ಸೋದರರೇ, ನಿನ್ನ ತೌರುಮನೆಯವರೇ ನಿನಗೆ ದ್ರೋಹವೆಸಗಿದ್ದಾರೆ. ಇವರೇ ನಿನ್ನ ಬೆನ್ನಟ್ಟಿಬಂದು ಧಿಕ್ಕಾರ ಕೂಗಿದ್ದಾರೆ. ಇಂತಿರಲು, ಇವರು ಸವಿನುಡಿದರೂ ನಂಬಲೆ ಬೇಡ.”
7 : “ನಾನು ನನ್ನ ಮನೆಯನ್ನೇ ತೊರೆದಿದ್ದೇನೆ ನನ್ನ ಸ್ವಂತ ಸೊತ್ತನ್ನೇ ನಿರಾಕರಿಸಿದ್ದೇನೆ ನನಗೆ ಪ್ರಾಣಪ್ರಿಯರಾದ ಜನರನ್ನು ಅವರ ಶತ್ರುಗಳ ಕೈಗೊಪ್ಪಿಸಿದ್ದೇನೆ.
8 : ನನ್ನ ಸೊತ್ತಾದ ಜನತೆ ನನ್ನ ಪಾಲಿಗೆ ಅರಣ್ಯದ ಸಿಂಹದಂತೆ ನನಗೆದುರಾಗಿ ಅದು ಗರ್ಜಿಸಿದೆ, ಎಂದೇ ಅದನ್ನು ಹಗೆಮಾಡಿರುವೆ.
9 : ನನ್ನ ಸೊತ್ತಾದ ಜನತೆ ನನ್ನ ದೃಷ್ಟಿಗೆ ಚಿತ್ರವರ್ಣದ ಪಕ್ಷಿಯಂತೆ ಅದರ ಸುತ್ತ ರಣಹದ್ದುಗಳ ಕೂಟ ಸೇರಿದೆ ಕಾಡುಮೃಗಗಳನ್ನೆಲ್ಲ ಕರೆದುತನ್ನಿ ಅದನ್ನು ತಿಂದುಬಿಡಲಿಕ್ಕೆ.
10 : ತಿಂದುಬಿಡಲಿಕ್ಕೆ. ಬಹು ಮಂದಿ ಕುರಿಗಾಹಿಗಳು ಬಂದು ಹಾಳುಮಾಡಿದ್ದಾರೆ ನನ್ನ ದ್ರಾಕ್ಷಾತೋಟ ವನ್ನು. ತುಳಿದುಹಾಕಿದ್ದಾರೆ ನನ್ನಾ ಸೊತ್ತನ್ನು ಕಾಡನ್ನಾಗಿಸಿದ್ದಾರೆ ಆ ನನ್ನ ಪ್ರಿಯ ಆಸ್ತಿಯನ್ನು.
11 : ಹೌದು, ಹಾಳು ಮಾಡಿದ್ದಾರೆ ಪಾಳುಬಿದ್ದು ಅದು ನನಗೆ ಗೋಳಿಡುತ್ತಿದೆ ಯಾವನೂ ಗಮನಕ್ಕೆ ತಂದುಕೊಳ್ಳದೆ ನಾಡೆಲ್ಲ ಬಿಕೋ ಎನ್ನುತ್ತಿದೆ.
12 : ನಾಡಿನ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಕೊಳ್ಳೆಗಾರರು ಕಾಡುಗುಡ್ಡೆಗಳ ಮೇಲೆಲ್ಲ ಕಂಡುಬಂದಿದ್ದಾರೆ. ಕಬಳಿಸಿಬಿಡುವುದು ನನ್ನ ಖಡ್ಗ ಯಾರಿಗು ನೆಮ್ಮದಿಯಿಲ್ಲದ ಹಾಗೆ.
13 : ಜನರು ಗೋದಿಯನ್ನು ಬಿತ್ತಿದರು ಆದರೆ ಮುಳ್ಳುಗಿಡವನ್ನು ಕೊಯ್ದರು ! ಕ್ಷೇಮಕೆಡುವಷ್ಟು ಪ್ರಯಾಸಪಟ್ಟರು ಆದರೆ ಯಾವ ಲಾಭವೂ ಗಿಟ್ಟದೆ ಹೋಯಿತು. ತಮ್ಮ ಬೆಳೆಯ ವಿಷಯವಾಗಿ ಹೇಸಬೇಕಾಯಿತು ನನ್ನ ಕೋಪಾಗ್ನಿಯೆ ಇದಕ್ಕೆ ಕಾರಣವಾಯಿತು.”
14 : ಸರ್ವೇಶ್ವರ ಸ್ವಜನರಾದ ಇಸ್ರಯೇಲರಿಗೆ ದಯಪಾಲಿಸಿದ ಸೊತ್ತಿಗೆ ಕೈಹಾಕುವ ಕೆಟ್ಟ ನೆರೆಯವರಿಗೆ ಕೊಟ್ಟ ಎಚ್ಚರಿಕೆ: “ಈ ನಾಡಿನವರನ್ನು ಅವರವರ ನಾಡಿನಿಂದಲೇ ಸಸಿಯಂತೆ ಕಿತ್ತು ಬಿಡುವೆನು. (ಅವರ ಮಧ್ಯೆಯಿಂದ ಕಿತ್ತುಬಿಡುವೆನು ಯೆಹೂದ ವಂಶವನ್ನು).
15 : ಕನಿಕರಿಸುವೆನು. ಪ್ರತಿಯೊಬ್ಬನನ್ನು ಅವನವನ ಆಸ್ತಿಪಾಸ್ತಿಗೆ ಅವನವನ ನಾಡಿಗೆ ಮರಳಿ ಬರಮಾಡುವೆನು.
16 : ನನ್ನ ಜನರಿಗೆ ಬಾಳ್‍ದೇವತೆಯ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ಮೊದಲು ಕಲಿಸಿಕೊಟ್ಟವರು ಇವರೇ. ಈಗ ನನ್ನ ಜನರ ಮಾರ್ಗವನ್ನು ಅವಲಂಬಿಸಿ ನನ್ನ ಹೆಸರೆತ್ತಿ, “ಸರ್ವೇಶ್ವರನ ಜೀವದಾಣೆ” ಎಂದು ಪ್ರಮಾಣ ಮಾಡುವುದನ್ನು ಕಲಿತರೆ ನನ್ನ ಜನರ ನಡುವೆ ನೆಲೆಗೊಂಡು ವೃದ್ಧಿಯಾಗುವರು.
17 : ಆದರೆ ಯಾವ ಜನಾಂಗ ಕೇಳುವುದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು. ಹೌದು, ಬೇರುಸಹಿತ ಕಿತ್ತುಹಾಕಿ ನಾಶಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”

Holydivine