Jeremiah - Chapter 23
Holy Bible

1 : “ನನ್ನ ಮಂದೆಯ ಕುರಿಗಳನ್ನು ಚದರಿಸಿ ಹಾಳುಮಾಡುವ ಕುರುಬರಿಗೆ ಧಿಕ್ಕಾರ!” ಇದು ಸರ್ವೇಶ್ವರಸ್ವಾಮಿಯ ನುಡಿ.
2 : ಇಸ್ರಯೇಲರ ದೇವರಾದ ಸರ್ವೇಶ್ವರ, ತಮ್ಮ ಜನರೆಂಬ ಕುರಿಗಳನ್ನು ಮೇಯಿಸುವ ಕುರಿಗಾಹಿಗಳ ದ್ರೋಹವನ್ನು ಅರಿತಿದ್ದಾರೆ. ಅಂಥವರನ್ನು ಕುರಿತು ಹೀಗೆನ್ನುತ್ತಾರೆ: “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟಿದ್ದೀರಿ. ಅವುಗಳ ಬಗ್ಗೆ ಎಚ್ಚರಿಕೆವಹಿಸಲೇ ಇಲ್ಲ. ನಿಮ್ಮ ನೀಚ ಕಾರ್ಯಗಳ ನಿಮಿತ್ತ ನಿಮ್ಮನ್ನು ವಿಚಾರಣೆಗೆ ಗುರಿಪಡಿಸುವೆನು.
3 : ನನ್ನ ಮಂದೆಯನ್ನು ಯಾವ ಯಾವ ದೇಶಗಳಿಗೆ ಅಟ್ಟಲಾಗಿದೆಯೋ ಆ ಎಲ್ಲ ದೇಶಗಳಿಂದ ಅಳಿದುಳಿದ ಕುರಿಗಳನ್ನು ಒಟ್ಟುಗೂಡಿಸಿ ತಮ್ಮ ತಮ್ಮ ಹಟ್ಟಿಗಳಿಗೆ ಮರಳಿ ಬರಮಾಡುವೆನು. ಅವು ದೊಡ್ಡ ಪೀಳಿಗೆಯಾಗಿ ಬೆಳೆಯುವುವು.
4 : ನಾನು ಅವುಗಳ ಮೇಲೆ ಕುರಿಗಾಹಿಗಳನ್ನು ನೇಮಿಸುವೆನು. ಅವರು ಅವುಗಳನ್ನು ಪರಿಪಾಲಿಸುವರು. ಅವು ಇನ್ನು ಹೆದರಬೇಕಾಗಿಲ್ಲ, ಬೆದರಬೇಕಾಗಿಲ್ಲ. ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.”
5 : ಸರ್ವೇಶ್ವರ ಹೇಳುವುದನ್ನು ಗಮನಿಸಿರಿ: “ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು ‘ಮೊಳಕೆ’ಯನ್ನು ಚಿಗುರಿಸುವೆನು. ಆಗ ಸತ್ಪುರುಷ; ರಾಜನಾಗಿ ಆಳುವನು. ವಿವೇಕದಿಂದ ಕಾರ್ಯಸಾಧಿಸುವನು. ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.
6 : ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು. ‘ಯೆಹೋವ ಚಿದ್ಕೇನು’ (ಎಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಆತನಿಗಿರುವುದು.
7 : “ಬರಲಿರುವ ಆ ಕಾಲದಲ್ಲಿ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವ ಪದ್ಧತಿಯನ್ನು ಬಿಟ್ಟುಬಿಡುವರು.
8 : ಬದಲಿಗೆ ‘ಇಸ್ರಯೇಲ್ ಮನೆತನವೆಂಬ ಸಂತಾನವನ್ನು ಉತ್ತರನಾಡಿನಿಂದಲೂ ಅವರನ್ನು ತಳ್ಳಲಾಗಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವರು. ಅವರು ಸ್ವಂತ ನಾಡಿನಲ್ಲಿ ಸುಖವಾಗಿ ಬಾಳುವರು. ಇದು ಸರ್ವೇಶ್ವರನಾದ ನನ್ನ ನುಡಿ.”
9 : ಪ್ರವಾದಿಗಳ ವಿಷಯ : ನನ್ನ ಗುಂಡಿಗೆ ಒಡೆದುಹೋಗಿದೆ ನನ್ನೆಲುಬುಗಳು ನಡುನಡುಗುತ್ತಿವೆ ಸರ್ವೇಶ್ವರನಿಗೆ, ಆತನ ಪವಿತ್ರವಾಕ್ಯಕ್ಕೆ ಪರವಶನಾದ ನಾನು ಅಮಲೇರಿದಂತವನಾದೆ. ಹೌದು, ಮದ್ಯಪಾನಕ್ಕೆ ಸೋತ ಮನುಷ್ಯನಂತಾದೆ.
10 : ದೈವಶಾಪದ ನಿಮಿತ್ತ ದೇಶ ದುಃಖಿಸುತ್ತಿದೆ ವ್ಯಭಿಚಾರದಿಂದ ನಾಡು ತುಂಬಿತುಳುಕುತ್ತಿದೆ ಅಡವಿಯ ಹುಲ್ಲುಗಾವಲು ಬಾಡಿದೆ. ನಾಡಿನ ಜನರು ಹಿಡಿದೋಡುತ್ತಿರುವ ಮಾರ್ಗ ದುರ್ಮಾರ್ಗ ಅನ್ಯಾಯ ಸಾಧನೆಗಾಗಿಯೆ ಅವರ ಅಧಿಕಾರ ಪ್ರಯೋಗ.
11 : “ಪ್ರವಾದಿಗಳು ಭ್ರಷ್ಟರು, ಯಾಜಕರೂ ಭ್ರಷ್ಟರು ! ನನ್ನಾಲಯದಲ್ಲೆ ಅವರು ನಡೆಸುವ ಕೆಟ್ಟತನವನ್ನು ನಾನು ಕಂಡಿರುವೆನು.
12 : ಕತ್ತಲೊಳು ಜಾರಿಬೀಳುವ ಇಳುಮೇಡು ಅವರ ಮಾರ್ಗ ತಳ್ಳಲ್ಪಡುವರು, ಅಂಧಕಾರದೊಳು ಬಿದ್ದು ಹೋಗುವರು ಕೇಡನ್ನು ಅವರ ಮೇಲೆ ಬರಮಾಡುವೆನು ವಿಚಾರಣೆ ವರುಷದ ಕೇಡನ್ನು ಬರಮಾಡುವೆನು ಸರ್ವೇಶ್ವರನ ನುಡಿ ಇದು.”
13 : “ಸಮಾರ್ಯದ ಪ್ರವಾದಿಗಳ ಅಸಹ್ಯ ಕಾರ್ಯಗಳನ್ನು ನೋಡಿರುವೆನು ಬಾಳ್‍ದೇವತೆಯ ಆವೇಶದಿಂದ ಪ್ರವಾದಿಸಿದರವರು ಹೀಗೆ ಇಸ್ರಯೇಲೆಂಬ ನನ್ನ ಜನರನ್ನು ಮಾರ್ಗತಪ್ಪಿಸಿದರು.
14 : ಜೆರುಸಲೇಮಿನ ಪ್ರವಾದಿಗಳಲ್ಲೂ ಭೀಕರವಾದುವನ್ನು ನೋಡಿರುವೆನು ವ್ಯಭಿಚಾರ ಮಾಡುತ್ತಾರೆ, ಸುಳ್ಳು ಹಾದಿಯನ್ನು ಹಿಡಿಯುತ್ತಾರೆ ದುರುಳರು ದುರಾಚಾರವನ್ನು ಬಿಡದಂತೆ ದೃಢಪಡಿಸುತ್ತಾರೆ. ನನ್ನ ದೃಷ್ಟಿಗೆ ಅವರೆಲ್ಲರು ಸೊದೋಮಿನಂತೆ, ಆ ಪುರನಿವಾಸಿಗಳು ನನ್ನ ಕಣ್ಣಿಗೆ ಗೊಮೋರದಂತೆ.”
15 : ಆದಕಾರಣ ಸರ್ವಶಕ್ತ ಸರ್ವೇಶ್ವರ ಪ್ರವಾದಿಗಳ ವಿಷಯದಲ್ಲಿ ಹೇಳುವುದನ್ನು ಕೇಳಿ: “ಇವರು ಇಟ್ಟಿಕಾಯನ್ನು ತಿನ್ನುವಂತೆ ಮಾಡುವೆನು. ವಿಷಬೆರೆತ ನೀರನ್ನು ಕುಡಿಯುವಂತೆ ಮಾಡುವೆನು ಜೆರುಸಲೇಮಿನ ಈ ಪ್ರವಾದಿಗಳಿಂದ ಭ್ರಷ್ಟತನ ನಾಡಿನಲ್ಲೆಲ್ಲೂ ಹರಡಿರುವುದು.”
16 : ಸರ್ವಶಕ್ತ ಸರ್ವೇಶ್ವರನ ನುಡಿಯಿದು: “ಪ್ರವಾದಿಗಳು ನಿಮಗೆ ಹೇಳುವ ಮಾತುಗಳನ್ನು ಕೇಳಬೇಡಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಂಬಿಕೆ ನಿರೀಕ್ಷೆಯನ್ನು ಹುಟ್ಟಿಸುತ್ತಾರಷ್ಟೆ. ಸರ್ವೇಶ್ವರನ ಬಾಯಿಂದ ಹೊರಟದ್ದನ್ನು ನುಡಿಯದೆ ತಮ್ಮ ಸ್ವಂತ ಮನಸ್ಸಿಗೆ ತೋಚಿದ್ದನ್ನೇ ಹೇಳುತ್ತಾರೆ.
17 : ನನ್ನನ್ನು ಅಸಡ್ಡೆಮಾಡುವವರಿಗೆ, ‘ನಿಮಗೆ ಶುಭವಾಗುವುದು ಎಂದು ಸರ್ವೇಶ್ವರನೇ ನುಡಿದಿದ್ದಾರೆ’ ಎಂದು ಹೇಳುತ್ತಲೇ ಇದ್ದಾರೆ. ಹಟಮಾರಿ ಹೃದಯಿಗಳೆಲ್ಲರಿಗೆ, ‘ನಿಮಗೆ ಯಾವ ಕೇಡೂ ಸಂಭವಿಸದು’ ಎಂದು ನುಡಿಯುತ್ತಾರೆ.”
18 : ಇವರಲ್ಲಿ ಯಾರು ತಾನೆ ಸರ್ವೇಶ್ವರನ ಆಲೋಚನಾ ಸಭೆಯಲ್ಲಿ ಹಾಜರಿದ್ದರು? ಸರ್ವೇಶ್ವರನ ವಾಕ್ಯವನ್ನು ಕೇಳಿ ತಿಳಿದುಕೊಂಡವನಾರು? ಆ ವಾಕ್ಯಕ್ಕೆ ಲಕ್ಷ್ಯಕೊಟ್ಟು ಗ್ರಹಿಸಿಕೊಂಡವನಾರು?
19 : ಇಗೋ ಕೇಳಿ: ಸರ್ವೇಶ್ವರನ ಕೋಪವೆಂಬ ಬಿರುಗಾಳಿ ಹೊರಟಿದೆ. ಅದು ದುಷ್ಟರ ತಲೆಯ ಮೇಲೆ ಸುಂಟರಗಾಳಿಯಂತೆ ಬಡಿಯುವುದು.
20 : ಸರ್ವೇಶ್ವರ ತಮ್ಮ ಅಂತರಾಳದ ಸಂಕಲ್ಪಗಳನ್ನು ನಡೆಸಿ ನೆರವೇರಿಸುವ ತನಕ ಅವರ ಆ ಕೋಪವು ಹಿಂದಿರುಗದು. ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸಿಕೊಳ್ಳುವಿರಿ.
21 : ಸರ್ವೇಶ್ವರ: “ಈ ಪ್ರವಾದಿಗಳನ್ನು ಕಳುಹಿಸಿದವನು ನಾನಲ್ಲ; ತಾವೇ ಓಡೋಡಿ ಬಂದಿದ್ದಾರೆ. ನಾನು ಇವರಿಗೆ ಏನೂ ಹೇಳಲಿಲ್ಲ; ತಾವೇ ಪ್ರವಾದನೆ ಮಾಡುತ್ತಿದ್ದಾರೆ.
22 : ಇವರು ನನ್ನ ಆಲೋಚನಾ ಸಭೆಯಲ್ಲಿ ಹಾಜರಿದ್ದಿದ್ದರೆ, ನನ್ನ ವಾಕ್ಯಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸುತ್ತಿದ್ದರು; ಅವರನ್ನು ದುರ್ಮಾರ್ಗದಿಂದಲೂ ದುಷ್ಕøತ್ಯಗಳಿಂದಲೂ ತಪ್ಪಿಸುತ್ತಿದ್ದರು.
23 : “ಹತ್ತಿರದಲ್ಲಿ ಇದ್ದರೆ ಮಾತ್ರ ನಾನು ದೇವರೋ? ದೂರದಲ್ಲಿದ್ದರೆ ನಾನು ದೇವರಲ್ಲವೋ?
24 : ನನ್ನ ಕಣ್ಣಿಗೆ ಬೀಳದಂತೆ ಯಾವನಾದರು ಗುಪ್ತಸ್ಥಳಗಳಲ್ಲಿ ಮರೆಮಾಚಿಕೊಳ್ಳಲು ಸಾಧ್ಯವೇ? ನಾನು ಭೂಮ್ಯಾಕಾಶಗಳಲ್ಲಿ ವ್ಯಾಪಿಸಿರುವವನಲ್ಲವೆ?
25 : ‘ನನಗೆ ಕನಸು ಬಿತ್ತು, ಕನಸುಬಿತ್ತು’ ಎಂದು ನನ್ನ ಹೆಸರು ಹೇಳಿ ಸುಳ್ಳು ಪ್ರವಾದನೆ ಮಾಡುವವರ ನುಡಿಯನ್ನು ಕೇಳಿದ್ದೇನೆ.
26 : ಇವರ ಪೂರ್ವಜರು ಬಾಳ್‍ದೇವತೆಯನ್ನು ಸೇರಿಕೊಂಡು ನನ್ನ ಹೆಸರನ್ನು ಮರೆತುಬಿಟ್ಟರು. ಅದೇ ಪ್ರಕಾರ ಈ ಪ್ರವಾದಿಗಳು ಸ್ವಕಲ್ಪಿತ ಸುಳ್ಳು ಕನಸುಗಳನ್ನು ಒಬ್ಬರಿಗೊಬ್ಬರು ತಿಳಿಸುವುದರ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸುತ್ತಿದ್ದಾರೆ.
27 : ಇಂಥ ಯೋಚನೆ ಈ ಕಳ್ಳ ಪ್ರವಾದಿಗಳ ಮನದಲ್ಲಿ ಎಲ್ಲಿಯವರೆಗೆ ಇರುವುದು? ಕನಸು ಕಂಡ ಪ್ರವಾದಿ ತನ್ನ ಕನಸನ್ನು ಬೇಕಾದರೆ ತಿಳಿಸಲಿ.
28 : ಆದರೆ ನನ್ನ ವಾಕ್ಯವನ್ನು ಕೇಳಿದವನು ಅದನ್ನು ಯಥಾರ್ಥವಾಗಿ ನುಡಿಯಲಿ.
29 : ಹೊಟ್ಟನ್ನು ಕಾಳಿನೊಂದಿಗೆ ಹೋಲಿಸಲಾದೀತೆ? ನನ್ನ ವಾಕ್ಯ ಬೆಂಕಿಗೆ ಸಮಾನ; ಬಂಡೆಯನ್ನು ಪುಡಿಪುಡಿ ಮಾಡುವ ಸುತ್ತಿಗೆಗೆ ಸಮಾನ. ಇದು ಸರ್ವೇಶ್ವರನಾದ ನನ್ನ ನುಡಿ.
30 : ನನ್ನ ವಾಕ್ಯಗಳನ್ನು ಒಬ್ಬರಿಂದೊಬ್ಬರು ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧವಾಗಿ ಇದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
31 : ತಮ್ಮ ನಾಲಿಗೆಗಳನ್ನು ಆಡಿಸುತ್ತಾ, ‘ಇದು ಸರ್ವೇಶ್ವರನ ನುಡಿ’ ಎಂದು ಹೇಳುವ ಪ್ರವಾದಿಗಳನ್ನು ನಾನು ಪ್ರತಿಭಟಿಸುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
32 : ಸುಳ್ಳು ಕನಸುಗಳನ್ನು ಪ್ರಕಟಿಸುತ್ತಾ ಹಾಗು ವಿವರಿಸುತ್ತಾ ತಮ್ಮ ಅಬದ್ಧ ಮಾತುಗಳಿಂದಲೂ ಕಚ್ಚಾಟದಿಂದಲೂ ನನ್ನ ಜನರಿಗೆ ದಾರಿ ತಪ್ಪಿಸುವ ಪ್ರವಾದಿಗಳನ್ನು ನಾನು ಖಂಡಿಸುತ್ತೇನೆ. ನಾನು ಅವರನ್ನು ಕಳುಹಿಸಲಿಲ್ಲ, ಅಥವಾ ಅವರಿಗೆ ಆಜ್ಞಾಪಿಸಲಿಲ್ಲ. ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.”
33 : “ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಸರ್ವೇಶ್ವರ ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆಂದು ಹೇಳು: ‘ನೀವೇ ಸರ್ವೇಶ್ವರನ ಹೊರೆ. ನಿಮ್ಮನ್ನು ಅವರು ಎಸೆದುಬಿಡುವರು.’
34 : ಸರ್ವೇಶ್ವರನ ಹೊರೆ” ಎಂದು ಒಬ್ಬ ಪ್ರವಾದಿಯಾಗಲಿ, ಯಾಜಕನಾಗಲಿ ಅಥವಾ ಒಬ್ಬ ಜನಸಾಮಾನ್ಯನೇ ಆಗಲಿ, ಹೇಳಿದ್ದೇ ಆದರೆ ನಾನು ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
35 : “ಸರ್ವೇಶ್ವರ ಕೊಟ್ಟ ಉತ್ತರವೇನು? ಸರ್ವೇಶ್ವರ ನುಡಿದದ್ದು ಏನು?” ಎಂದು ನಿಮ್ಮ ನಿಮ್ಮ ನೆರೆಹೊರೆಯವರನ್ನು ಮತ್ತು ಅಣ್ಣತಮ್ಮಂದಿರನ್ನು ವಿಚಾರಿಸಬೇಕೇ ಹೊರತು
36 ‘ಸರ್ವೇಶ್ವರನ ಹೊರೆ’ ಎಂಬ ಮಾತನ್ನು ಎತ್ತಲೇಕೂಡದು. ಪ್ರತಿಯೊಬ್ಬನ ನುಡಿ ಅವನವನಿಗೊಂದು ಹೊರೆ. ಜೀವಸ್ವರೂಪರಾದ ದೇವರ ನುಡಿಗಳನ್ನು ಹೌದು, ನಮ್ಮ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿಗಳನ್ನು ನೀವು ತಲೆಕೆಳಗಾಗಿಸಿದ್ದೀರಿ.
37 : “ಸರ್ವೇಶ್ವರನಿಂದ ನಿಮಗೆ ಯಾವ ಉತ್ತರ ದೊರಕಿತು? ಸರ್ವೇಶ್ವರ ಏನು ನುಡಿದಿದ್ದಾರೆ?” ಎಂದು ಪ್ರವಾದಿಯನ್ನು ಕೇಳಿರಿ.
38 : “ಸರ್ವೇಶ್ವರನ ಹೊರೆ” ಎಂದು ಹೇಳಬೇಡಿ. ಹೇಳಿದರೆ ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ನಿಮಗೆ ‘ಸರ್ವೇಶ್ವರನ ಹೊರೆ’ ಎಂಬ ಮಾತನ್ನು ಎತ್ತಲೇ ಕೂಡದೆಂದು, ಹೇಳಿಕಳುಹಿಸಿದರೂ ನೀವು ಎತ್ತಿದ್ದೀರಿ.
39 : ಈ ಕಾರಣ ನಿಮ್ಮನ್ನು ಮತ್ತು ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ನಗರವನ್ನು ನನ್ನೆದುರಿನಿಂದ ಎತ್ತಿ ಎಸೆದುಬಿಡುವೆನು.
40 : ನೀವು ನಿಂದೆಗೆ ಗುರಿಯಾಗುವಿರಿ. ಎಂದಿಗೂ ಮರೆಯಲಾಗದ ಶಾಶ್ವತ ಅವಮಾನವನ್ನು ನಿಮಗೆ ಬರ ಮಾಡುವೆನು.”

Holydivine