Jeremiah - Chapter 30
Holy Bible

1 : ಸರ್ವೇಶ್ವರಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು:
2 : “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ – ‘ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲ ಗ್ರಂಥ ರೂಪವಾಗಿ ಬರೆ.
3 : ಇಗೋ, ನಾನು ನನ್ನ ಪ್ರಜೆಯಾದ ಇಸ್ರಯೇಲರನ್ನೂ ಯೆಹೂದ್ಯರನ್ನೂ ಅವರ ದುರವಸ್ಥೆಯಿಂದ ಬಿಡುಗಡೆಮಾಡುವ ದಿನಗಳು ಬರುವುವು. ಆಗ ನಾನು ಅವರನ್ನು ಅವರ ಪೂರ್ವಜರಿಗೆ ಅನುಗ್ರಹಿಸಿದ ನಾಡಿಗೆ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಸರ್ವೇಶ್ವರನಾದ ನನ್ನ ನುಡಿ’.”
4 : ಸರ್ವೇಶ್ವರ ಇಸ್ರಯೇಲಿನ ಮತ್ತು ಜುದೇಯದ ವಿಷಯವಾಗಿ ಈ ಮಾತುಗಳನ್ನು ಹೇಳಿದರು:
5 : “ಸರ್ವೇಶ್ವರ ಹೀಗೆನ್ನುತ್ತಾರೆ: ಕೇಳಿಸಿದೆ ಭಯದಿಂದ ಕೂಡಿದ ಶಬ್ಧ ಹೌದು, ಅದು ಕೂಡಿದೆ ಭೀತಿಯಿಂದ, ಶಾಂತಿಯಿಂದಲ್ಲ.
6 : ಗಂಡಸು ಪ್ರಸವವೇದನೆ ಪಡುವುದುಂಟೆ, ಹೇಳು? ಆದರೂ ಪ್ರತಿಯೊಬ್ಬನು ಹೆರುವ ಮಹಿಳೆಯಂತೆ ಸೊಂಟ ಹಿಸಿಕಿಕೊಳ್ಳುವುದು ನನ್ನ ಕಣ್ಣಿಗೆ ಬೀಳುತ್ತಿದೆ ಏಕೆ? ಅವರ ಮುಖಗಳು ಬಿಳಿಚಿಕೊಂಡಿವೆ ಏಕೆ?
7 : ಹೌದು, ಭಯಂಕರವಾದ ದಿನ ಬರಲಿದೆ, ಅದಕ್ಕಿರದು ಎಣೆ ! ಅದು ಇಕ್ಕಟ್ಟಿನ ದಿನ, ಆದರೂ ಅದರಿಂದ ಯಕೋಬ್ಯರಿಗಿದೆ ಬಿಡುಗಡೆ.”
8 : (ಸೇನಾಧೀಶ್ವರರಾದ ಸರ್ವೇಶ್ವರ ಹೇಳುವುದನ್ನು ಕೇಳು: “ಅವರ ಮೇಲೆ ಹೇರಲಾಗಿರುವ ನೊಗವನ್ನು ನಾನು ಆ ದಿನದಂದು ಮುರಿದು ಬಿಡುವೆನು. ಕಣ್ಣುಗಳನ್ನು ಕಿತ್ತುಹಾಕುವೆನು. ಅನ್ಯ ಕುಲದವರು ಇನ್ನು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು.
9 : ಅವರು ತಮ್ಮ ದೇವರಾದ ಸರ್ವೇಶ್ವರನೆಂಬ ನನಗೆ ಮತ್ತು ಅವರಿಗಾಗಿ ನಾನು ಏರ್ಪಡಿಸಲಿರುವ ರಾಜ ದಾವೀದನಿಗೆ ಸೇವೆಸಲ್ಲಿಸುವರು.)
10 : “ನನ್ನ ದಾಸ ಯಕೋಬನೇ, ಅಂಜಬೇಡ ! ಇಸ್ರಯೇಲೇ, ಭಯಪಡಬೇಡ” ಎನ್ನುತ್ತಾರೆ ಸರ್ವೇಶ್ವರ. “ದೂರ ನಾಡಿನಿಂದ ನಿನ್ನನ್ನು ಮುಕ್ತನನ್ನಾಗಿಸುವೆನು ನಿನ್ನ ಸಂತಾನ ಸೆರೆಹೋದ ಸೀಮೆಯಿಂದ ನಿನ್ನನ್ನು ಉದ್ಧರಿಸುವೆನು. ಹಿಂದಿರುಗಿ, ಹಾಯಾಗಿ ನೆಮ್ಮದಿಯಿಂದಿರುವುದು ಯಕೋಬು ಯಾರಿಂದಲೂ ಅದನ್ನು ಹೆದರಿಸಲಾಗದು.
11 : ನಿನ್ನನ್ನು ರಕ್ಷಿಸಲು ನಿನ್ನೊಂದಿಗೆ ನಾನಿರುವೆನು ನಿನ್ನನ್ನು ಯಾವ ರಾಷ್ಟ್ರಗಳಿಗೆ ಅಟ್ಟಿ ಚದರಿಸಿದೆನೋ ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು. ನಿನ್ನನ್ನು ನಿರ್ಮೂಲ ಮಾಡೆನು, ಮಿತಿಮೀರಿ ಶಿಕ್ಷೆಸೆನು; ಆದರೆ ಶಿಕ್ಷಿಸದೆ ಮಾತ್ರ ಬಿಡೆನು – ಇದು ಸರ್ವೇಶ್ವರನಾದ ನನ್ನ ನುಡಿ.”
12 : ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು.
13 : ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ.
14 : ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.
15 : ‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ.
16 : ಕಬಳಿಸಲಾಗುವುದು ನಿನ್ನ ಶತ್ರುಗಳೆಲ್ಲ ತಪ್ಪದೆ ಸೆರೆಹೋಗುವರು ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು ನಿನ್ನನ್ನು ಕೊಳ್ಳೆಹೊಡೆಯುವವರು ಕೊಳ್ಳೆಗೆ ಈಡಾಗುವರು.
17 : ‘ಇಗೋ, ಸಿಯೋನ್ ಯಾರಿಗೂ ಬೇಡವಾದವಳು, ಭ್ರಷ್ಟಳಾದಳು’ ಎಂದು ಜನರು ನಿನ್ನನ್ನು ಜರೆವುದು ನನಗೆ ಹಿಡಿಸದು. ನಿನ್ನನ್ನು ಗುಣಪಡಿಸುವೆನು ನಿನ್ನ ಗಾಯಗಳನ್ನು ವಾಸಿಮಾಡುವೆನು - ಇದು ಸರ್ವೇಶ್ವರನಾದ ನನ್ನ ನುಡಿ.
18 : ಯಕೋಬನ ಮನೆಗಳ ದುರವಸ್ಥೆಯನ್ನು ತಪ್ಪಿಸುವೆನು ಜೆರುಸಲೇಮಿನ ನಿವಾಸಗಳನ್ನು ನಿಶ್ಚಯವಾಗಿ ಕರುಣಿಸುವೆನು. ಅದರ ಹಾಳುದಿಬ್ಬಗಳ ಮೇಲೆ ಹೊಸನಗರ ಕಟ್ಟುವೆನು ಅದರ ಅರಮನೆ ಮೊದಲಿದ್ದ ಸ್ಥಳದಲ್ಲೆ ನೆಲೆಯಾಗಿ ನಿಲ್ಲುವುದು.
19 : ಅವುಗಳಿಂದ ಸ್ತುತಿಸ್ತೋತ್ರ ಕೇಳಿಬರುವುದು ಅಲ್ಲಿಂದ ನಲಿವುನಾದ ಕೇಳಿಸುವುದು. ಆ ಜನರನ್ನು ಹೆಚ್ಚಿಸುವೆನು, ಅವರು ಕೊಂಚವಾಗಿರರು. ಅವರನ್ನು ಘನಪಡಿಸುವೆನು, ಅವರು ಹೀನರಾಗಿರರು.
20 : ಅವನ ಸಂತಾನ ಹಿಂದಿನ ಸುಸ್ಥಿತಿಯನ್ನು ಹೊಂದುವುದು ಅವರ ಸಮಾಜ ನನ್ನ ಮುಂದೆ ನೆಲೆಯಾಗಿ ನಿಲ್ಲುವುದು ಅವರನ್ನು ಬಾಧಿಸುವವರನ್ನೆಲ್ಲ ನಾನು ದಂಡಿಸುವೆನು.
21 : ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗುವನು ಅವರ ವಂಶದವನೇ ಅವರನ್ನು ಆಳುವನು. ಅವನನ್ನು ನಾನು ನನ್ನ ಹತ್ತಿರ ಬರಗೊಡಿಸುವೆನು ಅವನು ನನ್ನ ಸನ್ನಿಧಾನಕ್ಕೆ ಸೇರುವನು. ಇಲ್ಲದಿದ್ದಲ್ಲಿ, ನನ್ನನು ಸಮೀಪಿಸಲು ಧೈರ್ಯಗೊಳ್ಳುವವನಾರು? - ಇದು ಸರ್ವೇಶ್ವರನಾದ ನನ್ನ ನುಡಿ.
22 : ನೀವು ನನಗೆ ಪ್ರಜೆಯಾಗಿರುವಿರಿ ನಾನು ನಿಮಗೆ ದೇವರಾಗಿರುವೆನು.
23 : ಇಗೋ, ಹೊರಟಿದೆ ಬಡಿದುಕೊಂಡು ಹೋಗುವ ಗಾಳಿ ಸರ್ವೇಶ್ವರನ ರೋಷವೆಂಬ ಬಿರುಗಾಳಿ ದುರುಳರ ತಲೆಯ ಮೇಲೆ ಬಡಿದೋಡುವ ಸುಂಟರ ಗಾಳಿ
24 : ಆತನ ಮನದಾಲೋಚನೆಗಳನ್ನು ನಡೆಸಿ ನೆರವೇರಿಸುವ ತನಕ ಹಿಂದಿರುಗದು ಆತನ ರೋಷವೆಂಬಾ ಬಿರುಗಾಳಿ, ಇದನ್ನು ನೀವು ಗ್ರಹಿಸುವಿರಿ ಕಟ್ಟಕಡೆಯ ದಿನಗಳಲ್ಲಿ.

Holydivine