Jeremiah - Chapter 33
Holy Bible

1 : ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಅವನಿಗೆ ಸರ್ವೇಶ್ವರ ಎರಡನೆಯ ವಾಕ್ಯವನ್ನು ಅನುಗ್ರಹಿಸಿದರು.
2 : ಲೋಕವನ್ನು ಸೃಷ್ಟಿಸಿ,ರೂಪಿಸಿ, ಸ್ಥಾಪಿಸಿದವರು ಹಾಗೂ ‘ಸರ್ವೇಶ್ವರ’ ಎಂದು ನಾಮಾಂಕಿತಗೊಂಡ ಅವರು ನನಗೆ ಹೀಗೆಂದರು:
3 : “ನನ್ನನ್ನು ಬೇಡಿಕೊ, ನಾನು ನಿನಗೆ ಸದುತ್ತರವನ್ನು ದಯಪಾಲಿಸುವೆನು. ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು.
4 : ಮುತ್ತಿಗೆಗೂ ಕತ್ತಿಗೂ ತುತ್ತಾಗಲಿರುವ ಈ ಊರಿನವರ ಮನೆಗಳ ವಿಷಯವಾಗಿ ಮತ್ತು ಜುದೇಯದ ಅರಸರ ಉಪ್ಪರಿಗೆಗಳ ವಿಷಯವಾಗಿ ಇಸ್ರಯೇಲರ ದೇವರಾದ ಸರ್ವೇಶ್ವರ ಆದ ನನ್ನ ನುಡಿ ಇದು:
5 : ಈ ಊರಿನವರು ಬಾಬಿಲೋನಿಯರ ವಿರುದ್ಧ ಕದನಕ್ಕೆ ಹೊರಟರೆ ಏನು ಪ್ರಯೋಜನ? ತಮ್ಮ ಹೆಣಗಳಿಂದ ಅವರನ್ನು ತೃಪ್ತಿ ಪಡಿಸುವರಷ್ಟೆ. ಇವರ ಅಧರ್ಮದ ನಿಮಿತ್ತ ಈ ನಗರಕ್ಕೆ ವಿಮುಖವಾಗಿ, ಕಡು ಕೋಪಾವೇಶನಾಗಿ ನಾನೇ ಇವರನ್ನು ಸದೆ ಬಡೆಯುವೆನು.
6 : ಆದರೂ ಈ ನಗರವನ್ನು ಉದ್ಧಾರಮಾಡಿ, ಸುಧಾರಿಸಿ, ಇದರ ನಿವಾಸಿಗಳನ್ನು ಗುಣಪಡಿಸುವೆನು. ಸಮೃದ್ಧಿಯಾದ ಸೌಭಾಗ್ಯವನ್ನು ಹಾಗೂ ಶಾಂತಿಸಮಾಧಾನವನ್ನು ಇವರಿಗೆ ಅನುಗ್ರಹಿಸುವೆನು.
7 : ಜುದೇಯದ ಹಾಗೂ ಇಸ್ರಯೇಲಿನ ಗುಲಾಮಗಿರಿಯನ್ನು ಬಿಡಿಸಿ ಮೊದಲಿನಂತೆಯೆ ಅವುಗಳನ್ನು ಪುನರ್ ನಿರ್ಮಿಸುವೆನು.
8 : ಅವರು ನನಗೆ ವಿರುದ್ಧವಾಗಿ ಮಾಡಿದ ಅಧರ್ಮವನ್ನೆಲ್ಲ ತೊಲಗಿಸಿ ಅವರನ್ನು ಶುದ್ಧೀಕರಿಸುವೆನು; ನನಗೆ ವಿರುದ್ಧ ಮಾಡಿರುವ ಪಾಪದ್ರೋಹಗಳನ್ನೆಸಗಿ ಕಟ್ಟಿಕೊಂಡಿರುವ ಅಪರಾಧಗಳನ್ನೆಲ್ಲ ಕ್ಷಮಿಸುವೆನು.
9 : ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.”
10 : ಸರ್ವೇಶ್ವರ ಹೀಗೆನ್ನುತ್ತಾರೆ: “ಜನರಾಗಲಿ ಜಾನುವಾರುಗಳಾಗಲಿ ಇಲ್ಲದೆ ಪಾಳುಬಿದ್ದ ಸ್ಥಳವೆಂದು ನೀವು ಕರೆಯುವ ಈ ಸ್ಥಳದಲ್ಲೇ, ಅಂದರೆ ಜನಪಶುರಹಿತವಾಗಿ ನಿವಾಸಿಗಳಿಲ್ಲದೆ ಹಾಳುಬಿದ್ದಿರುವ ಜುದೇಯದ ಊರುಗಳಲ್ಲೇ, ಜೆರುಸಲೇಮಿನ ಬೀದಿಗಳಲ್ಲೇ
11 : ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ, ಇವು ಮತ್ತೆ ಕೇಳಿಬರುವುವು. ‘ಸೇನಾಧೀಶ್ವರ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರ ಮಾಡಿ; ಆತ ಒಳ್ಳೆಯವನು, ಆತನ ಪ್ರೀತಿ ಶಾಶ್ವತ’ ಎಂದು ಹಾಡುತ್ತಾ ಕೃತಜ್ಞತಾಬಲಿಯನ್ನು ದೇವಾಲಯಕ್ಕೆ ತರುವರು. ಅವರ ಗಾನ ನಿಮ್ಮ ಕಿವಿಗೆ ಬೀಳುವುದು. ನಾಡನ್ನು ಬಿಡುಗಡೆಮಾಡಿ ಹಿಂದಿನ ಸುಸ್ಥಿತಿಗೆ ಏರಿಸುವೆನು.
12 : ಸರ್ವಶಕ್ತ ಸರ್ವೇಶ್ವರನ ಮಾತುಗಳಿವು: “ಜನರಾಗಲಿ ಜಾನುವಾರುಗಳಾಗಲಿ ಇಲ್ಲದೆ ಹಾಳುಬಿದ್ದಿರುವ ಈ ಪ್ರಾಂತ್ಯ ಹಾಗು ಇಲ್ಲಿನ ಊರುಕೇರಿಗಳು ಮತ್ತೆ ಕುರುಬರು ತಮ್ಮ ಹಿಂಡುಗಳನ್ನು ಇಲ್ಲಿ ತಂಗಿಸಲು ಆಸರೆಯಾಗುವುವು.
13 : ಮಲೆನಾಡಿನ, ಕೆಳನಾಡಿನ ಹಾಗೂ ದಕ್ಷಿಣ ಪ್ರಾಂತ್ಯದ ಊರುಗಳು, ಬೆನ್ಯಾಮಿನ್ ನಾಡು, ಜೆರುಸಲೇಮಿನ ಸುತ್ತಮುತ್ತಲ ಪ್ರದೇಶಗಳು, ಜುದೇಯದ ಊರುಗಳು, ಈ ಎಲ್ಲ ಸ್ಥಳಗಳಲ್ಲಿ ಮಂದೆಗಳು ಲೆಕ್ಕಿಸುವವನ ಕಣ್ಮುಂದೆ ಮತ್ತೆ ಹಾದುಹೋಗುವುವು. ಇದು ಸರ್ವೇಶ್ವರನಾದ ನನ್ನ ನುಡಿ.”
14 : ಸರ್ವೇಶ್ವರ ಹೀಗೆನ್ನುತ್ತಾರೆ: “ಗಮನಿಸಿರಿ! ದಿನಗಳು ಬರಲಿವೆ. ಇಸ್ರಯೇಲ್, ಯೆಹೂದ ವಂಶಗಳ ವಿಷಯವಾಗಿ ನಾನು ನುಡಿದಿರುವ ಶುಭವಾಕ್ಯವನ್ನು ನೆರವೇರಿಸುವ ದಿನಗಳು ಬರಲಿವೆ.
15 : ಆ ಕಾಲದಲ್ಲಿ, ಆ ದಿನಗಳಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯೊಂದನ್ನು ಚಿಗುರಿಸುವೆನು. ಆತನು ನಾಡಿನಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.
16 : ಆಗ ಯೆಹೂದ್ಯರು ಸುರಕ್ಷಿತವಾಗಿರುವರು. ಜೆರುಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ‘ಯೆಹೋವಚಿದ್ಕೇನು’ (ಅಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.
17 : ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ದಾವೀದ ವಂಶವು ನಿಂತು ಹೋಗದು. ಇಸ್ರಯೇಲರ ವಂಶದವರು ಆ ಸಿಂಹಾಸನದಲ್ಲಿ ಆಸೀನರಾಗುತ್ತಾ ಬರುವರು.
18 : ಅದಕ್ಕೆ ಆ ಸಂತಾನದವರಲ್ಲಿ ಒಬ್ಬ ಗಂಡಸು ಇಲ್ಲದೆ ಇರನು. ಅಂತೆಯೇ ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ದಹನಬಲಿಯನ್ನು, ನೈವೇದ್ಯವನ್ನು ಹಾಗೂ ಕಾಣಿಕೆಯನ್ನು ಒಪ್ಪಿಸತಕ್ಕ ಒಬ್ಬನು ಲೇವಿಕುಲದಲ್ಲಿ ಇದ್ದೇ ಇರುವನು.”
19 : ಸರ್ವೇಶ್ವರ, ಯೆರೆಮೀಯನಿಗೆ ಈ ಮಾತನ್ನೂ ದಯಪಾಲಿಸಿದರು:
20 : “ಸರ್ವೇಶ್ವರನಾದ ನನ್ನ ನುಡಿ ಇದು: ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ, ಹಗಲನ್ನು ಮತ್ತು ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಲು ನಿಮ್ಮಿಂದಾದೀತೆ?
21 : ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೂ ನನ್ನ ಪರಿಚಾರಕರಾದ ಲೇವಿಕುಲದ ಯಾಜಕರೊಂದಿಗೂ ನಾನು ಮಾಡಿದ ಒಡಂಬಡಿಕೆ ನಿಂತು ಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು.
22 : ಆದರೆ, ನನ್ನ ದಾಸ ದಾವೀದನ ಸಂತಾನವನ್ನು ಅಸಂಖ್ಯಾತ ನಕ್ಷತ್ರಗಣದಷ್ಟು ಹೆಚ್ಚಿಸುವೆನು. ನನ್ನ ಪರಿಚಾರಕರಾದ ಲೇವಿಯ ಸಂಖ್ಯೆಯನ್ನು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕರಿಸುವೆನು.”
23 : ಇದಲ್ಲದೆ ಸರ್ವೇಶ್ವರ ಯೆರೆಮೀಯನಿಗೆ ಈ ವಾಕ್ಯವನ್ನು ಅನುಗ್ರಹಿಸಿದರು:
24 : “ಸರ್ವೇಶ್ವರನಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರೆ ಅಲ್ಲವೆ?
25 : ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳು: ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆ ಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆ ಹೋಗಿದ್ದರೆ, ಆಗ ಮಾತ್ರ ನಾನು ಯಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ.
26 ಅಬ್ರಹಾಮ, ಇಸಾಕ, ಯಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆ ಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.”

Holydivine